ಬೆಂಗಳೂರು (ಡಿ.07):  ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರದ ಆಡಳಿತ ವೈಖರಿ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಸ್ವಪಕ್ಷೀಯ ಮುಖಂಡರು ಪಕ್ಷದ ರಾಜ್ಯ ಉಸ್ತುವಾರಿ ಅರುಣ್‌ ಸಿಂಗ್‌ ಅವರಿಗೆ ದೂರುಗಳ ಸುರಿಮಳೆಯನ್ನೇ ಗೈದಿದ್ದಾರೆ.

ಭಾನುವಾರ ಬೆಳಗ್ಗೆಯಿಂದ ಸಂಜೆವರೆಗೆ ಪಕ್ಷದ ಕಚೇರಿಯಲ್ಲಿ ಅರುಣ್‌ ಸಿಂಗ್‌ ಅವರನ್ನು ಭೇಟಿಯಾದ ಹಲವು ಮುಖಂಡರು ಸರ್ಕಾರ ಮತ್ತು ಮುಖ್ಯಮಂತ್ರಿಗಳ ಕಾರ್ಯವೈಖರಿ ಬಗ್ಗೆ ನೇರವಾಗಿಯೇ ಆಕ್ಷೇಪ ವ್ಯಕ್ತಪಡಿಸಿದರು ಎಂದು ತಿಳಿದುಬಂದಿದೆ.

ಎಲ್ಲರ ಅಹವಾಲುಗಳನ್ನು ಆಲಿಸಿರುವ ಸಿಂಗ್‌ ಅವರು ಈ ಬಗ್ಗೆ ತಾವು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರೊಂದಿಗೆ ಮಾತುಕತೆ ನಡೆಸಿ ಆಗಿರುವ ಲೋಪದೋಷಗಳನ್ನು ಸರಿಪಡಿಸುವ ಭರವಸೆ ನೀಡಿದರು ಎನ್ನಲಾಗಿದೆ.

ಬಿಗ್ ಟ್ವಿಸ್ಟ್; ಒಂದಿಷ್ಟು ಶಾಸಕರಿಗೆ ದೆಹಲಿಗೆ ಬರಲು ತಿಳಿಸಿದ ಅರುಣ್ ಸಿಂಗ್! ...

ಒಬ್ಬೊಬ್ಬ ಮುಖಂಡರು ಸುಮಾರು 10ರಿಂದ 15 ನಿಮಿಷಗಳ ಕಾಲ ಪ್ರತ್ಯೇಕವಾಗಿ ಅರುಣ್‌ ಸಿಂಗ್‌ ಅವರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಿದರು. ಮುಖ್ಯವಾಗಿ ಇತ್ತೀಚಿನ ನಿಗಮ ಮಂಡಳಿಗಳ ನೇಮಕದ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಮುಖಂಡರು, ಯಾವುದೇ ಪ್ರಮುಖ ನಿರ್ಧಾರ ಕೈಗೊಳ್ಳುವ ಮೊದಲು ಮುಖ್ಯಮಂತ್ರಿಗಳು ಪಕ್ಷದ ಮುಖಂಡರೊಂದಿಗಾಗಲಿ ಅಥವಾ ಸಚಿವರೊಂದಿಗಾಗಲಿ ಚರ್ಚೆ ನಡೆಸುವುದಿಲ್ಲ. ತೀರ್ಮಾನಗಳನ್ನು ಕೈಗೊಂಡು ಆದೇಶ ಹೊರಬಿದ್ದ ಬಳಿಕ ಮಾಹಿತಿ ಸಿಗುತ್ತದೆ ಎಂದು ಬೇಸರ ಹೊರಹಾಕಿದರು.

ಅಲ್ಲದೆ, ಸರ್ಕಾರದ ಮಟ್ಟದಲ್ಲಿ ಕೆಲವೇ ಕೆಲವರನ್ನು ಹೊರತುಪಡಿಸಿ ಇನ್ನುಳಿದವರ ಮಾತುಗಳಿಗೆ ಬೆಲೆ ಇಲ್ಲದಂತಾಗಿದೆ. ಪಕ್ಷ ನಮ್ಮದಾಗಿದ್ದರೂ ಸರ್ಕಾರ ನಮ್ಮದಲ್ಲ ಎಂಬಂಥ ಸ್ಥಿತಿ ನಿರ್ಮಾಣವಾಗಿದೆ. ಶಾಸಕರ ಕ್ಷೇತ್ರಗಳಿಗೆ ಸೂಕ್ತ ಅನುದಾನ ಲಭ್ಯವಾಗುತ್ತಿಲ್ಲ. ಈ ಬಗ್ಗೆ ಚರ್ಚಿಸಬೇಕು ಎಂದರೆ ಶಾಸಕಾಂಗ ಪಕ್ಷದ ಸಭೆಯನ್ನೇ ಕರೆಯುವುದಿಲ್ಲ ಎಂದು ಅಲವತ್ತುಕೊಂಡರು. ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಆಡಳಿತದ ವರ್ಚಸ್ಸನ್ನು ಹೆಚ್ಚಿಸುವಂಥ ಕ್ರಮಗಳು ಆಗುತ್ತಿವೆ. ಆದರೆ, ರಾಜ್ಯದಲ್ಲಿ ಯಡಿಯೂರಪ್ಪ ನೇತೃತ್ವದ ಸರ್ಕಾರದ ವರ್ಚಸ್ಸು ಹೆಚ್ಚಿಸುವಂಥ ಯಾವುದೇ ಕೆಲಸವೂ ಆಗುತ್ತಿಲ್ಲ. ಗೊಂದಲದ ಗೂಡಾಗಿದೆ. ಇದನ್ನು ಸರಿಪಡಿಸದಿದ್ದರೆ ಮುಂದಿನ ಚುನಾವಣೆಯಲ್ಲಿ ಪಕ್ಷ ನಿರೀಕ್ಷಿತ ಮಟ್ಟದ ಸಾಧನೆ ಮಾಡುವುದಕ್ಕೆ ಸಾಧ್ಯವಿಲ್ಲ ಎಂಬ ಮಾತನ್ನು ಕೆಲವು ಮುಖಂಡರು ನೇರವಾಗಿಯೇ ಹೇಳಿದರು ಎನ್ನಲಾಗಿದೆ.

ಸಚಿವರಾದ ಆರ್‌.ಅಶೋಕ್‌, ವಿ.ಸೋಮಣ್ಣ, ಕೆ.ಗೋಪಾಲಯ್ಯ, ಎಸ್‌.ಟಿ.ಸೋಮಶೇಖರ್‌, ಬೈರತಿ ಬಸವರಾಜ, ಸಂಸದ ತೇಜಸ್ವಿ ಸೂರ್ಯ, ಶಾಸಕರಾದ ಅರವಿಂದ್‌ ಲಿಂಬಾವಳಿ, ವಿ.ಸುನೀಲ್‌ಕುಮಾರ್‌, ಎನ್‌.ರವಿಕುಮಾರ್‌, ಮುಖಂಡರಾದ ಸಿದ್ದರಾಜು, ಛಲವಾದಿ ನಾರಾಯಣಸ್ವಾಮಿ ಮೊದಲಾದವರು ಅರುಣ್‌ ಸಿಂಗ್‌ ಅವರನ್ನು ಭೇಟಿ ಮಾಡಿದರು.