ಬೆಂಗಳೂರು[ಮಾ.10]: ಬಿ.ಎಸ್‌. ಯಡಿಯೂರಪ್ಪ ಅವರು ಇಲ್ಲದ ಬಿಜೆಪಿ ಬಿಗ್‌ ಝೀರೋ ಎಂದು ಪ್ರತಿಪಕ್ಷದ ನಾಯಕ ಎಸ್‌.ಆರ್‌. ಪಾಟೀಲ್‌ ಹೇಳಿದ ಮಾತು ಮೇಲ್ಮನೆಯಲ್ಲಿ ಕೆಲವು ಕಾಲ ಸ್ವಾರಸ್ಯಕರ ಚರ್ಚೆಗೆ ಒಳಗಾಯಿತು.

ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯ ಮೇಲೆ ಮಾತನಾಡುವ ಸಂದರ್ಭದಲ್ಲಿ ಎಸ್‌.ಆರ್‌. ಪಾಟೀಲ್‌, ಲೋಕಸಭೆ ಚುನಾವಣೆಯಲ್ಲಿ 25 ಸ್ಥಾನಗಳಲ್ಲಿ ಗೆದ್ದಿದ್ದೀರಿ. ವಿಧಾನಸಭೆ ಚುನಾವಣೆಯಲ್ಲಿ 105 ಕಡೆ ಗೆದ್ದ ಬಿಜೆಪಿ ನಂತರ ಮ್ಯಾಜಿಕ್‌ ಮಾಡಿ 117 ಸ್ಥಾನ ಹೊಂದಿದ್ದರೂ ಸರ್ಕಾರ ಯಾವುದೇ ಅಭಿವೃದ್ಧಿ ಮಾಡುತ್ತಿಲ್ಲ. ಮೂರು ವರ್ಷ ನಾವಂತೂ ಯಾವ ತೊಂದರೆ ಕೊಡುವುದಿಲ್ಲ. ಯಡಿಯೂರಪ್ಪ ಅವರ ಅಕ್ಕಪಕ್ಕ ಇದ್ದವರೇ ತೊಂದರೆ ಕೊಡಬಹುದು ಎಂದರು.

'ನಾಮ್‌ಕೇವಾಸ್ತೆ ಬಜೆಟ್, ಕಲ್ಯಾಣ ಕರ್ನಾಟಕಕ್ಕೆ ಬಿಜೆಪಿ ಸರ್ಕಾರದಿಂದ ಅನ್ಯಾಯ'

ಜತೆಗೆ, ಯಾರು ಏನೇ ಹೇಳಲಿ ಯಡಿಯೂರಪ್ಪ ಅವರು ಇಲ್ಲದ ಬಿಜೆಪಿ ದೊಡ್ಡ ಶೂನ್ಯ. ಹಿಂದೆ ಬಿಜೆಪಿ ತೊರೆದು ಕೆಜಿಪಿ ಕಟ್ಟಿದಾಗ ಬಿಜೆಪಿಗೆ ಪ್ರತಿಪಕ್ಷ ಸ್ಥಾನ ಸಿಗದಂತಹ ಸ್ಥಿತಿ ಬಂದಿತು ಎಂದು ಚುಚ್ಚಿದರು. ಆಗ ಮಧ್ಯಪ್ರವೇಶಿಸಿದ ಬಿಜೆಪಿಯ ತೇಜಸ್ವಿನಿ ಗೌಡ, ಸಿದ್ದರಾಮಯ್ಯ ಇಲ್ಲದ ಕಾಂಗ್ರೆಸ್‌ ಕೂಡ ಶೂನ್ಯ ಎಂದು ಹೇಳಬಹುದೇ ಎಂದು ಪ್ರಶ್ನಿಸಿದರು. ಆಗ ಜೆಡಿಎಸ್‌ ಸದಸ್ಯ ಬಸವರಾಜ ಹೊರಟ್ಟಿ, ಯಡಿಯೂರಪ್ಪ ಅವರು ಇಲ್ಲದ ಬಿಜೆಪಿ ಶೂನ್ಯ ಎಂಬುದು ಹೌದು ಅಥವಾ ಇಲ್ಲ ಎಂದಷ್ಟೇ ಹೇಳಿ ಎಂದರು.

ತೇಜಸ್ವಿನಿ ತಿರುಗೇಟು:

ಇದಕ್ಕೆ ತೇಜಸ್ವಿನಿಗೌಡ ಅವರು, ನಾಯಕರು ಒಂದು ಸಂಖ್ಯೆ ಇದ್ದಂತೆ. ಪಕ್ಷ ಆ ಸಂಖ್ಯೆಯ ಮುಂದೆ ಬರುವ ಶೂನ್ಯದಂತೆ. ನಾಯಕರು ಇದ್ದಾಗ ಮಾತ್ರ ಪಕ್ಷ ಇರುತ್ತದೆ. ಯಡಿಯೂರಪ್ಪ ಅವರು ಒಂದು ಸಂಖ್ಯೆ ಇದ್ದ ಹಾಗೆ. ಆ ಸಂಖ್ಯೆಯ ಮುಂದೆ ಶೂನ್ಯಗಳು ಬರುತ್ತವೆ ಎಂದರು.

ಬಿಜೆಪಿಯ ಪ್ರಾಣೇಶ್‌ ಮಾತನಾಡಿ, ನಿಮ್ಮ ಖುಷಿಗೆ ನೀವು ಏನು ಬೇಕಾದರೂ ಹೇಳಿಕೊಳ್ಳಿ, ನಮ್ಮದೇನೂ ತಕರಾರಿಲ್ಲ. ಹಿಂದೆ ಬಿಜೆಪಿಯಲ್ಲಿ ವಾಜಪೇಯಿ ಇದ್ದರು. ಈಗ ಮೋದಿ ಅವರು ಬಲಿಷ್ಠ ನಾಯಕರಿದ್ದಾರೆ. ಆದರೆ ನಿಮ್ಮಲ್ಲಿ ಕುಟುಂಬ ರಾಜಕಾರಣದಿಂದಾಗಿ ಬೇರೆಯವರು ಬೆಳೆಯಲಿಲ್ಲ. ಪ್ರಧಾನ ಮಂತ್ರಿಯನ್ನು ರಬ್ಬರ್‌ ಸ್ಟಾಂಪ್‌ ಮಾಡಿದಿರಿ. ಜೆಡಿಎಸ್‌ನಲ್ಲಿ ಅತ್ಯಂತ ಹಿರಿಯರಾದ ಬಸವರಾಜ ಹೊರಟ್ಟಿಅವರಿಗೆ ಸೂಕ್ತ ಸ್ಥಾನ ನೀಡಲಿಲ್ಲ. ಕಾಂಗ್ರೆಸ್‌ನಲ್ಲಿ ಎಸ್‌.ಆರ್‌. ಪಾಟೀಲ್‌ ಅವರನ್ನು ಮಂತ್ರಿ ಮಾಡಲಿಲ್ಲ ಎಂದು ತಿರುಗೇಟು ನೀಡಿದರು.