ಬೆಂಗಳೂರು, (ಫೆ.18): ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆರೋಪಗಳಿಗೆ ಆಧಾರ ಇಲ್ಲ ಎಂದು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಸ್ಪಷ್ಟಪಡಿಸಿದ್ದಾರೆ.

ಇಂದು (ಗುರುವಾರ) ಬೆಂಗಳೂರಿನ ಕುಮಾರ ಕೃಪಾ ಅತಿಥಿ ಗೃಹದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,  ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತು ಪುತ್ರ ಬಿ.ವೈ. ರಾಘವೇಂದ್ರ ವಿರುದ್ಧ ಮಾಡಿರುವ ಟೀಕೆಗಳು ಆಧಾರ ರಹಿತ. ಇವುಗಳನ್ನು ತಿರಸ್ಕರಿಸುತ್ತೇವೆ ಎಂದರು.

ಯತ್ನಾಳ್ ವಿರುದ್ಧ ಅರುಣ್ ಸಿಂಗ್‌ಗೆ ದೂರು; ವಿವಾದಾತ್ಮಕ ಹೇಳಿಕೆ ಬೇಕಿತ್ತಾ.?

ಯತ್ನಾಳ್ ಪಕ್ಷದ ಶಿಸ್ತು ಉಲ್ಲಂಘಿಸಿದ್ದು, ಬಿಜೆಪಿ ರಾಷ್ಟ್ರೀಯ ಶಿಸ್ತು ಸಮಿತಿ ಇದನ್ನು ಪರಿಶೀಲಿಸುತ್ತಿದೆ. ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆಯನ್ನು ತಿರಸ್ಕರಿತ್ತೇವೆ. ಅವರು ಏನೇ ಮಾತಾಡಿದರೂ ಅದು ತಪ್ಪು. ಅವರನ್ನು ಬಹಳ ವರ್ಷಗಳಿಂದ ಎಲ್ಲರೂ ನೋಡಿದ್ದಾರೆ. ಅವರು ಸುಳ್ಳು ಹೇಳಿಕೆಗಳನ್ನು ಮಾಧ್ಯಮಗಳ‌ ಮುಂದೆ ಕೊಡುತ್ತಿದ್ದಾರೆ ಎಂದು ಗಂಭೀರವಾಗಿ ಆರೋಪಿಸಿದರು.

ವಿಜಯೇಂದ್ರ ನಮ್ಮ ಪಕ್ಷದ ರಾಜ್ಯ ಉಪಾಧ್ಯಕ್ಷ. ಯತ್ನಾಳ್ ಹೇಳಿಕೆ ಸರಿಯಲ್ಲ.ಒಬ್ಬ ಎಂಎಲ್ ಎ ಹೇಳಿಕೆಗೆ ಏಕೆ ಇಷ್ಟು ಪ್ರಾಮುಖ್ಯತೆ ಕೊಡಬೇಕೇ? ಪದೇ ಪದೇ ಯತ್ನಾಳ್ ಬಗ್ಗೆ ಪ್ರಶ್ನೆ ಕೇಳುತ್ತೀರಾ ಎಂದು ಮಾಧ್ಯಮದವರನ್ನೇ ಅರುಣ್ ಸಿಂಗ್ ಪ್ರಶ್ನಿಸಿದರು.

ಯತ್ನಾಳ್ ಹೇಳಿಕೆ ನಮ್ಮ ಪಕ್ಷಕ್ಕೆ ಪ್ರಸ್ತುತ ಅಲ್ಲ. ಯತ್ನಾಳ್ ಹೇಳಿಕೆಯನ್ನು ನಂಬಬೇಡಿ ಎನ್ನುವ ಮೂಲಕ ಯಡಿಯೂರಪ್ಪ ಬೆಂಬಲಕ್ಕೆ ನಿಂತ ಅರುಣ್ ಸಿಂಗ್, ಬಸನಗೌಡ ಪಾಟೀಲ್ ಯತ್ನಾಳ್ ಮಾಡಿರುವ ಆರೋಪಗಳೆಲ್ಲಾ ಸತ್ಯಕ್ಕೆ ದೂರವಾದವು. ಅವನ್ನು ತಳ್ಳಿಹಾಕುವುದು ಸೂಕ್ತ.ಇಂತಹ ಗಂಭೀರ ಆರೋಪ ಮಾಡಿರುವ ಕಾರಣದಿಂದಲೇ ಈಗಾಗಲೆ ಅವರಿಗೆ ಯತ್ನಾಳ್ ಅವರಿಗೆ ನೊಟೀಸ್ ಜಾರಿ ಮಾಡಲಾಗಿದೆ. ಸೂಕ್ತ ಸಮಯದಲ್ಲಿ ಶಿಸ್ತು ಸಮಿತಿ ಕ್ರಮಕೈಗೊಳ್ಳುತ್ತದೆ ಎಂದು ಹೇಳಿದರು.