Asianet Suvarna News Asianet Suvarna News

ವರ್ಗಾವಣೆಯಲ್ಲಿ ಸರ್ಕಾರದ ಕುತಂತ್ರ: ಪೃಥ್ವಿ ರೆಡ್ಡಿ

ರಾಜ್ಯ ಸರ್ಕಾರ ಕುತಂತ್ರ ಮಾರ್ಗ ಅನುಸರಿಸಿ, ವರ್ಗಾವಣೆ ನೀತಿಯ ಆಶಯವನ್ನೇ ಬುಡಮೇಲು ಮಾಡುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಪೃಥ್ವಿ ರೆಡ್ಡಿ 

Karnataka BJP Government Trickery in Transfers Says AAP State President Prithvi Reddy grg
Author
First Published Dec 14, 2022, 11:00 AM IST

ಬೆಂಗಳೂರು(ಡಿ.14):  ಕೇಂದ್ರ ಚುನಾವಣಾ ಆಯೋಗ ಹೊರಡಿಸಿರುವ ವರ್ಗಾವಣೆ ನೀತಿಗೆ ವಿರುದ್ಧವಾಗಿ ರಾಜ್ಯ ಸರ್ಕಾರ ನಡೆಸುತ್ತಿರುವ ಅಧಿಕಾರಿಗಳ ತಾತ್ಕಾಲಿಕ ವರ್ಗಾವಣೆ, ಮರು ವರ್ಗಾವಣೆಯ ಕುತಂತ್ರಕ್ಕೆ ಬ್ರೇಕ್‌ ಹಾಕುವಂತೆ ಆಮ್‌ ಆದ್ಮಿ ಪಕ್ಷದ ನಿಯೋಗ ರಾಜ್ಯ ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸಿದೆ. ಪಕ್ಷದ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ನೇತೃತ್ವದಲ್ಲಿ ಮಂಗಳವಾರ ಮುಖಂಡರ ನಿಯೋಗ ರಾಜ್ಯ ಚುನಾವಣಾ ಅಯೋಗಕ್ಕೆ ಮನವಿ ಸಲ್ಲಿಸಿತು.

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ರೆಡ್ಡಿ, ಅಕ್ರಮಗಳನ್ನು ತಡಯುವ ಉದ್ದೇಶದಿಂದ ಕೇಂದ್ರ ಚುನಾವಣಾ ಆಯೋಗವು ಇತ್ತೀಚೆಗಷ್ಟೇ ವರ್ಗಾವಣೆ ನೀತಿಯನ್ನು ಪ್ರಕಟಿಸಿದೆ. ಇದರ ಅನ್ವಯ ಒಂದೇ ಜಿಲ್ಲೆಯಲ್ಲಿ ಮೂರು ವರ್ಷಗಳಿಗಿಂತ ಹೆಚ್ಚು ಕಾಲದಿಂದ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳು ಹಾಗೂ ಚುನಾವಣೆಯೊಂದಿಗೆ ನೇರ ಸಂಪರ್ಕ ಹೊಂದಿರುವ ಅಧಿಕಾರಿಗಳು ಬೇರೆ ಜಿಲ್ಲೆಗೆ ವರ್ಗಾವಣೆಯಾಗಬೇಕು. ಆದರೆ ರಾಜ್ಯ ಸರ್ಕಾರವು ಕುತಂತ್ರ ಮಾರ್ಗ ಅನುಸರಿಸಿ, ವರ್ಗಾವಣೆ ನೀತಿಯ ಆಶಯವನ್ನೇ ಬುಡಮೇಲು ಮಾಡುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅಗತ್ಯ ಬಿದ್ದಾಗ ಸರ್ಕಾರದ ಲೋಪ ಬಯಲಿಗೆ, ನಿವೃತ್ತ ಪೊಲೀಸ್ ಅಧಿಕಾರಿ ಭಾಸ್ಕರರಾವ್

ರಾಜ್ಯ ಬಿಜೆಪಿ ಸರ್ಕಾರವು ಅಧಿಕಾರಿಗಳನ್ನು ಬೇರೆ ಜಿಲ್ಲೆಗೆ ತಾತ್ಕಾಲಿಕವಾಗಿ ವರ್ಗಾಯಿಸಿ, ಮತ್ತೆ ಮೊದಲಿದ್ದ ಜಿಲ್ಲೆಗೆ ಮರುವರ್ಗಾವಣೆ ಮಾಡುತ್ತಿರುವುದು ಕಂಡುಬರುತ್ತಿದೆ. ಈ ಮೂಲಕ ಅವರು ಮೂರು ವರ್ಷದಿಂದ ಒಂದೇ ಕಡೆ ಇಲ್ಲವೆಂದು ಸಾಬೀತುಪಡಿಸಿ, ಅವರನ್ನು ಮೊದಲಿದ್ದ ಜಿಲ್ಲೆಯಲ್ಲೇ ಉಳಿಸಿಕೊಳ್ಳಲು ಸರ್ಕಾರ ಮುಂದಾಗುತ್ತಿದೆ. ಸರ್ಕಾರದ ಇಂತಹ ಕುತಂತ್ರ ಮಾರ್ಗದ ಬಗ್ಗೆ ಸೂಕ್ತ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಬೇಕೆಂದು ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸಲಾಗಿದೆ ಎಂದರು.

ಪಕ್ಷದ ರಾಜ್ಯ ಉಪಾಧ್ಯಕ್ಷ ಭಾಸ್ಕರ್‌ ರಾವ್‌ ಮಾತನಾಡಿ, ಚಿಲುಮೆ ಸಂಸ್ಥೆಯ ಮೂಲಕ ಮತದಾರರ ಪಟ್ಟಿಗೆ ಸಂಬಂಧಿಸಿ ಬಿಜೆಪಿಯು ಅಕ್ರಮ ನಡೆಸಿರುವುದು ತನಿಖೆಯಿಂದ ಸಾಬೀತಾಗುವ ಹಂತದಲ್ಲಿದೆ. ಹಣಬಲ, ತೋಳ್ಬಲ, ಅಧಿಕಾರಬಲ ಬಳಸಿಕೊಂಡು ಬಿಜೆಪಿ ಹಲವು ರೀತಿಯ ಅಕ್ರಮ ನಡೆಸುತ್ತಿದೆ. ಇಷ್ಟೆಲ್ಲ ಮಾಡಿಯೂ ಚುನಾವಣೆಯಲ್ಲಿ ಸೋತರೆ, ಆಪರೇಷನ್‌ ಕಮಲವೆಂದು ಮತ್ತೊಂದು ಅಕ್ರಮವನ್ನು ಬಿಜೆಪಿ ಮಾಡುತ್ತದೆ. ಈಗ ಇವುಗಳಿಗೆ ಮತ್ತೊಂದು ಸೇರ್ಪಡೆ ಎಂಬಂತೆ, ಬಿಜೆಪಿ ಸರ್ಕಾರವು ವರ್ಗಾವಣೆಯಲ್ಲಿ ಅಕ್ರಮ ಮಾಡುತ್ತಿದೆ ಎಂದು ಆರೋಪಿಸಿದರು. ಪಕ್ಷದ ಮುಖಂಡರಾದ ಬ್ರಿಜೇಶ್‌ ಕಾಳಪ್ಪ, ಜಗದೀಶ್‌ ಸದಂ, ಬಿ.ಟಿ.ನಾಗಣ್ಣ, ಚನ್ನಪ್ಪಗೌಡ ನೆಲ್ಲೂರು, ಸುರೇಶ್‌ ರಾಥೋಡ್‌ ಮತ್ತಿತರರಿದ್ದರು.
 

Follow Us:
Download App:
  • android
  • ios