ಬಿಎಸ್‌ವೈ ನಾಯಕತ್ವ ಬದಲಾವಣೆ ಸುದ್ದಿಗೆ ಸ್ಪಷ್ಟನೆ ಕೊಟ್ಟ ಬಿಜೆಪಿ: ಎಲ್ಲಾ ಊಹಾಪೋಹಗಳಿಗೆ ತೆರೆ
ಕೆಲ ದಿನಗಳಿಂದ ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಆಗುತ್ತೆ, ಸಿಎಂ ಬಿಎಸ್ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿ ಬೇರೆಯವರಿಗೆ ಸಿಎಂ ಸ್ಥಾನ ನೀಡಲಾಗುತ್ತೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಇದೀಗ ಇದಕ್ಕೆ ರಾಜ್ಯ ಬಿಜೆಪಿಯೇ ಸ್ಪಷ್ಟನೆ ಕೊಟ್ಟಿದೆ.
ಬೆಂಗಳೂರು, (ಸೆ.22): ಯಡಿಯೂರಪ್ಪ ನಾಯಕತ್ವ ಬದಲಾವಣೆ ಎನ್ನುವ ಸುದ್ದಿಗೆ ಇದೀಗ ಈ ಎಲ್ಲಾ ಊಹಾಪೋಹಗಳಿಗೆ ಬಿಜೆಪಿ ವಕ್ತಾರ ಕ್ಯಾ.ಗಣೇಶ್ ಕಾರ್ಣಿಕ್ ತೆರೆ ಎಳೆದಿದ್ದಾರೆ.
ಈ ಕುರಿತು ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಅವರು, ನಾಯಕತ್ವ ಬದಲಾವಣೆ ಸುದ್ದಿ ಸತ್ಯಕ್ಕೆ ದೂರವಾಗಿದೆ. ಇಂತಹ ಯಾವುದೇ ಬೆಳವಣಿಗೆ ಪಕ್ಷದಲ್ಲಿ ನಡೆದಿಲ್ಲ. ಹೀಗಿದ್ದರೂ ಕೆಲವು ಮಾಧ್ಯಮಗಳಲ್ಲಿ ಪದೇ ಪದೇ ಸುದ್ದಿ ಪ್ರಸಾರ ಆಗುತ್ತಿದೆ. ಬಿಜೆಪಿ ಈ ವರದಿಗಳನ್ನು ಖಡಾಖಂಡಿತವಾಗಿ ಅಲ್ಲಗಳೆಯುತ್ತದೆ. ಈ ವರದಿಗಳು ನಿರಾಧಾರವಾಗಿದ್ದು, ಜನರನ್ನು ದಾರಿ ತಪ್ಪಿಸುವಂತಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ನಾಯಕತ್ವ ಬದಲಾವಣೆ: ಇದುವರೆಗೆ ನಾನು ನುಡಿದ ಭವಿಷ್ಯ ಎಂದಿಗೂ ಸುಳ್ಳಾಗಿಲ್ಲ ಎಂದ ಬಿಜೆಪಿ ನಾಯಕ
ವಯಸ್ಸಿನ ಕಾರಣ ನೀಡಿ ಸಿಎಂ ಬಿಎಸ್ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿ ಬೇರೆಯವರಿಗೆ ಸಿಎಂ ಸ್ಥಾನ ನೀಡಲಾಗುತ್ತೆ ಅನ್ನೋ ಸುದ್ದಿಗಳು ಹರಿದಾಡಿದ್ದವು. ಈ ಸುದ್ದಿ ರಾಜ್ಯ ಮತ್ತು ರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿ ಕೂಡ ಪ್ರಸಾರವಾಗಿತ್ತು.
ಇನ್ನು ನಾಯಕತ್ವದ ಬದಲಾವಣೆ ಸುದ್ದಿಗೆ ಹಬ್ಬುತ್ತಿದ್ದಂತೆಯೇ ಹಲವು ಬಿಜೆಪಿ ನಾಯರು ಸಿಎಂ ಬಿಎಸ್ ಯಡಿಯೂರಪ್ಪ ಪರ ಬ್ಯಾಟಿಂಗ್ ಮಾಡಿದ್ದು, ಬಿಎಸ್‌ವೈ ಅವರೇ ಮುಖ್ಯಮಂತ್ರಿ ಆಗಿರುತ್ತಾರೆ. ಯಾವುದೇ ಕಾರಣಕ್ಕೂ ಸಿಎಂ ಸ್ಥಾನ ಬದಲಾವಣೆ ಮಾಡಲು ಸಾಧ್ಯವಿಲ್ಲ ಎಂದು ಹೇಳಿದ್ದನ್ನು ಇಲ್ಲಿ ಸ್ಮರಿಸಹುದು.
ಒಟ್ಟಿನಲ್ಲಿ ಯಡಿಯೂರಪ್ಪ ನಾಯಕತ್ವ ಬದಲಾವಣೆ ಗೊಂದಲಗಳಿಗೆ ರಾಜ್ಯ ಬಿಜೆಪಿ ತೆರೆ ಎಳೆದಿದ್ದು, ಬಿಎಸ್‌ವೈ ಆಪ್ತರು ಮತ್ತು ಅಭಿಮಾನಿಗಳು ನಿಟ್ಟುಸಿರು ಬಿಡುವಂತಾಗಿದೆ.