ಬಿಜೆಪಿ ಮತ್ತು ಆರೆಸ್ಸೆಸ್ ವಿರುದ್ಧ ಆಕ್ಷೇಪಾರ್ಹ ಹೇಳಿಕೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಬಂಧನಕ್ಕೆ ಆಗ್ರಹಿಸಿ ಬಿಜೆಪಿ ನಾಯಕರು ಡಿಜಿ-ಐಜಿಪಿಗೆ ದೂರು ನೀಡಿದ್ದಾರೆ. ಜೊತೆಗೆ, ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಜಾಹೀರಾತು ವೆಚ್ಚ ಅಭ್ಯರ್ಥಿಗಳ ಖಾತೆಗೆ ಸೇರಿಸುವಂತೆ ಚುನಾವಣಾ ಆಯೋಗಕ್ಕೂ ದೂರು

ಬೆಂಗಳೂರು (ಏ.8): ಬಿಜೆಪಿ ಮತ್ತು ಆರೆಸ್ಸೆಸ್ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ವಿರುದ್ಧ ಪ್ರಕರಣ ದಾಖಲಿಸಿ ಬಂಧಿಸುವಂತೆ ಒತ್ತಾಯಿಸಿ ರಾಜ್ಯ ಬಿಜೆಪಿ ನಾಯಕರು ರಾಜ್ಯ ಪೊಲೀಸ್‌ ಮಹಾನಿರ್ದೇಶಕ ಡಾ.ಎಂ.ಎ.ಸಲೀಂ ಅವರಿಗೆ ಮಂಗಳವಾರ ದೂರು ನೀಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಎಸ್‌.ಮುನಿರಾಜು, ಅಸ್ಸಾಂನಲ್ಲಿ ನಿನ್ನೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಚುನಾವಣಾ ಭಾಷಣದ ವೇಳೆ ನಮಾಜ್‌ ಮಾಡುವಾಗ ವಿಷ ಸರ್ಪ ಬಂದರೆ ನೀವು ನಮಾಜ್‌ ನಿಲ್ಲಿಸಿ ಅದನ್ನು ಕೊಲ್ಲಿ. ನಮಾಜ್‌ ಮಾಡುವಾಗ ಬಿಜೆಪಿ, ಆರ್‌ಎಸ್‌ಎಸ್‌ನವರು ಬಂದರೂ ನಮಾಜ್‌ ನಿಲ್ಲಿಸಿ ಅವರನ್ನೂ ಕೊಲ್ಲಿ. ಇದು ಕುರಾನ್‌ನಲ್ಲಿ ಉಲ್ಲೇಖವಾಗಿದೆ ಎಂದಿದ್ದಾರೆ. ಇದು ಬೆಂಕಿ ಹೆಚ್ಚುವ ಕೆಲಸ ಎಂದು ಟೀಕಿಸಿದರು.

ಕೋಮುಗಲಭೆ ಹರಡುವ ಸಂದರ್ಭಗಳು ಬರಬಹುದು. ದೇಶದ್ರೋಹಿಗಳು, ಮೂಲಭೂತವಾದಿಗಳಿಗೆ ಬೆಂಬಲ ಸೂಚಿಸುವ ಮಾತುಗಳಿವು. ಇದರ ವಿರುದ್ಧ ಹೋರಾಟ ಮಾಡಲಾಗುತ್ತಿದೆ. ಈ ಸಂಬಂಧ ಮಲ್ಲಿಕಾರ್ಜುನ ಖರ್ಗೆ ಬಂಧನಕ್ಕೆ ಆಗ್ರಹಿಸಿ ರಾಜ್ಯ ಪೊಲೀಸ್‌ ಮಹಾನಿರ್ದೇಶಕರಿಗೆ ದೂರು ನೀಡಲಾಗಿದೆ ಎಂದರು.

ಚುನಾವಣಾ ಆಯೋಗಕ್ಕೆ ದೂರು:

ಬಾಗಲಕೋಟೆ ಮತ್ತು ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಕಳೆದ ಮೂರು ದಿನಗಳಿಂದ ನೀಡುತ್ತಿರುವ ಪತ್ರಿಕಾ ಜಾಹೀರಾತುಗಳನ್ನು ಈ ಎರಡು ಕ್ಷೇತ್ರಗಳ ಅಭ್ಯರ್ಥಿಗಳ ಚುನಾವಣಾ ಖರ್ಚು ಲೆಕ್ಕಕ್ಕೆ ಸೇರಿಸುವಂತೆ ಬಿಜೆಪಿ ನಾಯಕರು ಮಂಗಳವಾರ ರಾಜ್ಯ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದಾರೆ.