ಬೆಂಗಳೂರು(ಡಿ.07): ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳ ವಿರುದ್ಧ ರೈತರು ಮಂಗಳವಾರ ‘ಭಾರತ್‌ ಬಂದ್‌ಗೆ’ ಕರೆ ನೀಡಿರುವ ಹೊತ್ತಿನಲ್ಲೇ ರಾಜ್ಯ ಸರ್ಕಾರವು ಎಪಿಎಂಸಿ ತಿದ್ದುಪಡಿ ವಿಧೇಯಕ, ಕರ್ನಾಟಕ ಭೂ ಸುಧಾರಣೆ ತಿದ್ದುಪಡಿ ವಿಧೇಯಕಗಳನ್ನು ವಿಧಾನ ಪರಿಷತ್‌ನಲ್ಲಿ ಮರು ಮಂಡನೆ ಮಾಡಿ ಅಂಗೀಕಾರ ಪಡೆಯಲು ಮುಂದಾಗಿದೆ. ಜೊತೆಗೆ, ಸಭಾಪತಿಗಳ ವಿರುದ್ಧ ಅವಿಶ್ವಾಸ ನಿರ್ಣಯ ಹಾಗೂ ಗೋಹತ್ಯೆ ನಿಷೇಧ ಸೇರಿದಂತೆ ಮಹತ್ವದ ಮಸೂದೆಗಳನ್ನು ಮಂಡಿಸಲು ಸಜ್ಜಾಗಿದ್ದು, ಸೋಮವಾರದಿಂದ ಆರಂಭವಾಗಲಿರುವ ವಿಧಾನಮಂಡಲ ಅಧಿವೇಶನ ತೀವ್ರ ಕುತೂಹಲ ಕೆರಳಿಸಿದೆ.

"

ಗೋಹತ್ಯೆ ನಿಷೇಧ ಮಸೂದೆ ಮಂಡನೆ, ವಿಧಾನಪರಿಷತ್‌ ಸಭಾಪತಿಗಳ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ, ‘ಒಂದು ದೇಶ, ಒಂದು ಚುನಾವಣೆ’ ಚರ್ಚೆ, ಎಲ್ಲಕ್ಕಿಂತ ಮಿಗಿಲಾಗಿ ವಿಧಾನ ಪರಿಷತ್‌ನಲ್ಲಿ ಸೋಲಾಗಿದ್ದ ಕರ್ನಾಟಕ ಭೂ ಸುಧಾರಣೆ ವಿಧೇಯಕಕ್ಕೆ ಅಂಗೀಕಾರ ಪಡೆಯಲು ಸರ್ಕಾರ ಸಿದ್ಧತೆ ನಡೆಸಿದೆ. ಇದರ ವಿರುದ್ಧ ಹೋರಾಡುವ ಜೊತೆಗೆ ನೆರೆ ನಿರ್ವಹಣೆ ವೈಫಲ್ಯ, ರಾಜ್ಯದ ಆರ್ಥಿಕ ಸ್ಥಿತಿ ಸೇರಿ ಹಲವು ವಿಷಯಗಳನ್ನು ಮುಂದಿಟ್ಟುಕೊಂಡು ಸರ್ಕಾರದ ವಿರುದ್ಧ ಹರಿಹಾಯಲು ಕಾಂಗ್ರೆಸ್‌ ಪಕ್ಷ ಸಿದ್ಧತೆ ನಡೆಸಿದೆ. ಹೀಗಾಗಿ ಚಳಿಗಾಲದ ಅಧಿವೇಶನ ಸಾಕಷ್ಟುಬಿಸಿಬಿಸಿ ಚರ್ಚೆಗೆ ಕಾರಣವಾಗಲಿದೆ.

ಚುನಾವಣಾ ನೀತಿ ಸಂಹಿತೆಯ ನಡುವೆಯೂ ಗೋಹತ್ಯೆ ನಿಷೇಧ ಮಸೂದೆ ಮಂಡನೆ ಮಾಡಿದರೆ ಉಭಯ ಸದನಗಳಲ್ಲೂ ದೊಡ್ಡಮಟ್ಟದ ಕೋಲಾಹಲ ಸೃಷ್ಟಿಸಲು ಕಾಂಗ್ರೆಸ್‌ ಅಣಿಯಾಗಿದೆ. ಒಂದು ವೇಳೆ ಲವ್‌ ಜಿಹಾದ್‌ ನಿಷೇಧ ಮಸೂದೆಯೂ ಮಂಡನೆಯಾದರೆ ಮತ್ತಷ್ಟುಕೋಲಾಹಲ ಉಂಟಾಗುವ ನಿರೀಕ್ಷೆ ಇದೆ.

ಬಿಜೆಪಿ ಸದ್ಯಕ್ಕೆ ಆಂತರಿಕ ಸಮಸ್ಯೆಗಳನ್ನು ಬಗೆಹರಿಸಿಕೊಂಡಿದೆ. ಆದರೆ ವಿವಿಧ ಮಸೂದೆಗಳಿಗೆ ಅಂಗೀಕಾರ ಪಡೆಯುವ ಸವಾಲು ಸರ್ಕಾರದ ಮುಂದಿದೆ. ಆರ್ಥಿಕ ಸ್ಥಿತಿ ಸರಿಯಿಲ್ಲದ ಹೊತ್ತಿನಲ್ಲಿ ನಿಗಮ-ಮಂಡಳಿಗಳಿಗೆ ನೇಮಕ ಮಾಡಿರುವುದು ಹಾಗೂ ಹೊಸ ನಿಗಮಗಳನ್ನು ರಚಿಸಿರುವುದನ್ನು ಸಮರ್ಥಿಸಿಕೊಳ್ಳಬೇಕಿದೆ. ಹೀಗಾಗಿ ಕಾಂಗ್ರೆಸ್‌-ಬಿಜೆಪಿ ನಡುವೆ ತೀವ್ರ ವಾಕ್ಸಮರ ನಿರೀಕ್ಷಿಸಲಾಗಿದೆ.

ಇದೇ ವೇಳೆ, ಹಿಂದಿನ ಸಮ್ಮಿಶ್ರ ಸರ್ಕಾರ ರಚನೆ ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಕಾಂಗ್ರೆಸ್‌ ಪಕ್ಷ ಮತ್ತು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರ ಬಗ್ಗೆ ಆಡಿರುವ ಮಾತುಗಳು ಕೂಡ ಅಧಿವೇಶನದಲ್ಲಿ ಪ್ರತಿಧ್ವನಿಸುವ ಸಾಧ್ಯತೆ ಹೆಚ್ಚಾಗಿದೆ.

ಉಳಿದಂತೆ ಪ್ರಶ್ನೋತ್ತರ ಸೇರಿದಂತೆ ಎಲ್ಲ ಕಲಾಪಗಳು ನಡೆಯಲಿವೆ. ಕಳೆದ ಅಧಿವೇಶನದಲ್ಲಿ ವಿಧಾನಸಭೆಯಲ್ಲಿ ಅಂಗೀಕಾರವಾಗಿರುವ ಕೆಲವು ವಿಧೇಯಕಗಳು ಸೇರಿದಂತೆ 10ಕ್ಕೂ ಹೆಚ್ಚು ವಿಧೇಯಕಗಳು ಸದನದ ಒಪ್ಪಿಗೆಗಾಗಿ ಮಂಡನೆಯಾಗಲಿವೆ.

ಮಂಡನೆಯಾಗುವ ವಿಧೇಯಕಗಳು

- ಗೋಹತ್ಯೆ ನಿಷೇಧ ತಿದ್ದುಪಡಿ ವಿಧೇಯಕ

- ಕರ್ನಾಟಕ ಅನುಸೂಚಿತ ಜಾತಿಗಳು, ಅನುಸೂಚಿತ ಬುಡಕಟ್ಟುಗಳ ಮತ್ತು ಇತರ ಹಿಂದುಳಿದ ವರ್ಗಗಳ ವಿಧೇಯಕ

- ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ವಿಧೇಯಕ

- ಕರ್ನಾಟಕ ರಾಜ್ಯ ವಿಶ್ವ ವಿದ್ಯಾನಿಲಯಗಳ ಮತ್ತು ಕೆಲವು ಇತರೆ ಕಾನೂನು (ಎರಡನೇ ತಿದ್ದುಪಡಿ) ವಿಧೇಯಕ

- ಜಗದ್ಗುರು ಮುರುಘಾರಾಜೇಂದ್ರ ವಿಶ್ವವಿದ್ಯಾಲಯ ವಿಧೇಯಕ

- ವಿದ್ಯಾಶಿಲ್ಪ ವಿಶ್ವವಿದ್ಯಾಲಯ ವಿಧೇಯಕ

- ಏಟ್ರಿಯಾ ವಿಶ್ವವಿದ್ಯಾಲಯ ವಿಧೇಯಕ

- ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆವ್ಯವಹಾರ ಅಧ್ಯಾದೇಶ

- ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳು ಮತ್ತು ಇತರ ಕಾನೂನು ಅಧ್ಯಾದೇಶ

- ಕರ್ನಾಟಕ ಭೂ ಸುಧಾರಣೆಗಳ (ಎರಡನೇ ತಿದ್ದುಪಡಿ) ಅಧ್ಯಾದೇಶ

- ಕರ್ನಾಟಕ ಸ್ಟಾಂಪು (ತಿದ್ದುಪಡಿ) ಅಧ್ಯಾದೇಶ