Asianet Suvarna News Asianet Suvarna News

ಬೆಂಗಳೂರು: ಮತ ಎಣಿಕೆ ಕೇಂದ್ರಗಳಿಗೆ ಖಾಕಿ ಕಾವಲು: ಎಲ್ಲಿ ಯಾವ ಕ್ಷೇತ್ರದ ಮತ ಎಣಿಕೆ?

ಬೆಂಗಳೂರಿನ ನಾಲ್ಕು ಕಡೆ 28 ವಿಧಾನಸಭಾ ಕ್ಷೇತ್ರ ಮತ ಎಣಿಕೆ ಕಾರ್ಯ ನಡೆಸುವುದಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ತಲಾ ಒಂದು ಕೇಂದ್ರದಲ್ಲಿ ಏಳು ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ ಕಾರ್ಯ ನಡೆಲಿದೆ. ಒಂದೊಂದು ಕೇಂದ್ರಕ್ಕೆ ತಲಾ 1 ಸಾವಿರ ಅಧಿಕಾರಿ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ.

Karnataka Assembly Elections result police strictly guarding counting centers: Where will the votes of which constituencies be counted details here akb
Author
First Published May 13, 2023, 6:55 AM IST

ಬೆಂಗಳೂರು: ನಗರ ಜಿಲ್ಲಾ ವ್ಯಾಪ್ತಿಯ 28 ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ ಕಾರ್ಯಕ್ಕೆ ನಾಲ್ಕು ಸಾವಿರ ಮಂದಿ ಸಿಬ್ಬಂದಿ ಬಳಕೆ ಮಾಡಲಾಗುತ್ತಿದೆ ಎಂದು ಬೆಂಗಳೂರು ನಗರ ಜಿಲ್ಲಾ ಚುನಾವಣಾಧಿಕಾರಿ ತುಷಾರ್‌ ಗಿರಿನಾಥ್‌ ತಿಳಿಸಿದ್ದಾರೆ. ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರಿನ ನಾಲ್ಕು ಕಡೆ 28 ವಿಧಾನಸಭಾ ಕ್ಷೇತ್ರ ಮತ ಎಣಿಕೆ ಕಾರ್ಯ ನಡೆಸುವುದಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ತಲಾ ಒಂದು ಕೇಂದ್ರದಲ್ಲಿ ಏಳು ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ ಕಾರ್ಯ ನಡೆಲಿದೆ. ಒಂದೊಂದು ಕೇಂದ್ರಕ್ಕೆ ತಲಾ 1 ಸಾವಿರ ಅಧಿಕಾರಿ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ ಎಂದು ತಿಳಿಸಿದರು.

28 ವಿಧಾನಸಭಾ ಕ್ಷೇತ್ರದ ಮತ ಎಣಿಕೆಗೆ ಒಟ್ಟು 481 ಟೇಬಲ್‌ ವ್ಯವಸ್ಥೆ ಮಾಡಲಾಗಿದೆ. ಅಂಚೆ ಮತದಾನದ ಎಣಿಕೆಗೆ ಎರಡರಿಂದ ಮೂರು ಟೇಬಲ್‌ಗಳನ್ನು ಮೀಸಲಿಡಲಾಗುವುದು. ಈಗಾಗಲೇ 14 ಮಂದಿ ವೀಕ್ಷಕರು ಇದ್ದಾರೆ. ಹೊಸದಾಗಿ 14 ವೀಕ್ಷಕರು ದೆಹಲಿಯಿಂದ ಆಗಮಿಸಿದ್ದಾರೆ. ಹೀಗಾಗಿ, ತಲಾ ಒಂದು ವಿಧಾನಸಭಾ ಕ್ಷೇತ್ರಕ್ಕೆ ಒಬ್ಬ ವೀಕ್ಷಕರಂತೆ 28 ವೀಕ್ಷಕರನ್ನು ನಿಯೋಜನೆ ಮಾಡಲಾಗುತ್ತದೆ ಎಂದರು. 28 ವಿಧಾನಸಭಾ ಕ್ಷೇತ್ರಕ್ಕೆ 18ರಿಂದ 20 ಸಾವಿರ ಅಂಚೆ ಮತ ಬಂದಿವೆ. ಮತ ಎಣಿಕೆ ಆರಂಭಗೊಳ್ಳುತ್ತಿದ್ದಂತೆ ಮೊದಲು ಅಂಚೆ ಮತ ಎಣಿಕೆ ಮಾಡಲಾಗುವುದು. ತದ ನಂತರ ಇವಿಎಂ ಮತ ಎಣಿಕೆ ಮಾಡಲಾಗುವುದು. ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ತಲಾ ಒಂದೊಂದು ರಾಜಕೀಯ ಪಕ್ಷದ ಒಬ್ಬೊಬ್ಬ ಏಜೆಂಟ್‌ ನಿಯೋಜನೆ ಮಾಡುವುದಕ್ಕೆ ಅವಕಾಶವಿದೆ. ಅಂಚೆ ಮತ ಎಣಿಕೆಗೆ ಪ್ರತ್ಯೇಕ ಏಜೆಂಟ್‌ ನಿಯೋಜನೆ ಮಾಡುವುದಕ್ಕೂ ಅವಕಾಶವಿದೆ ಎಂದು ವಿವರಿಸಿದರು.

ಮತ್ತೊಂದು ಹಂತದ ತರಬೇತಿ:

ಮತ ಎಣಿಕಾ ಸಂದರ್ಭದಲ್ಲಿ ಇವಿಎಂ ಮತ್ತು ಕಂಟ್ರೋಲ್‌ ಯುನಿಟ್‌ ನಿರ್ವಹಿಸುವುದು ಅತ್ಯಂತ ಮುಖ್ಯವಾಗಿದೆ. ಹೀಗಾಗಿ, ಎಣಿಕಾ ಮೇಲ್ವಿಚಾರಕರು ಹಾಗೂ ಎಣಿಕಾ ಸಹಾಯಕರಿಗೆ ಈಗಾಗಲೇ ಒಂದು ಹಂತದ ತರಬೇತಿ ನೀಡಲಾಗಿತ್ತು. ಶುಕ್ರವಾರ ಮತ್ತೊಂದು ಹಂತದಲ್ಲಿ ಮೈಕ್ರೋ ಅಬ್ಸರ್ವರ್ಸ್‌, ಎಣಿಕಾ ಮೇಲ್ವಿಚಾರಕರು ಹಾಗೂ ಎಣಿಕಾ ಸಹಾಯಕರಿಗೆ ತರಬೇತಿಯನ್ನು ನೀಡಲಾಗಿದೆ ಎಂದು ತಿಳಿಸಿದರು.

ಸಾರ್ವಜನಿಕರು ವೀಕ್ಷಣೆಗೆ ಲಭ್ಯ

ಮತ ಎಣಿಕೆ ಕಾರ್ಯವನ್ನು ಲೈವ್‌ ವೆಬ್‌ ಕಾಸ್ಟಿಂಗ್‌ ಮಾಡಲಾಗುತ್ತದೆ. ಸಾರ್ವಜನಿಕರು ಲೈವ್‌ ಆಗಿ ವೀಕ್ಷಣೆ ಮಾಡಬಹುದಾಗಿದೆ.  https://results.eci.gov.in/ವೆಬ್‌ಸೈಟ್‌ಗೆ ಭೇಟಿ ನೀಡಿ ವೀಕ್ಷಿಸಬಹುದು.

ಬೆಳಗ್ಗೆ 8 ರಿಂದ ಮತ ಎಣಿಕೆ

ನಗರದ ನಾಲ್ಕು ಮತ ಎಣಿಕಾ ಕೇಂದ್ರದಲ್ಲಿ ಬೆಳಗ್ಗೆ 8 ಗಂಟೆಯಿಂದ ಮತ ಎಣಿಕಾ ಕಾರ್ಯ ಆರಂಭಗೊಳ್ಳಲಿದೆ. ಮೊದಲು ಅಂಚೆ ಮತ ಎಣಿಕೆ, ನಂತರ ಇವಿಎಂನಲ್ಲಿರುವ ಮತಗಳ ಎಣಿಕೆಯನ್ನು ಎಣಿಕೆ ಮಾಡಲಾಗುತ್ತದೆ. ಅದಕ್ಕೆ ಮೂರು ಹಂತದಲ್ಲಿ ಅಧಿಕಾರಿ ಸಿಬ್ಬಂದಿ ನಿಯೋಜನೆ ಮಾಡಲಾಗುತ್ತದೆ. ಪ್ರತಿ ಟೇಬಲ್‌ಗೆ ಮೈಕ್ರೋ ಅಬ್ಸರ್ವರ್‌, ಮತ ಎಣಿಕೆ ಮೇಲ್ವಿಚಾರಕರು ಮತ್ತು ಮತ ಎಣಿಕೆ ಸಹಾಯಕರು ಇರಲಿದ್ದಾರೆ.

ಒಟ್ಟು 42 ಎಣಿಕಾ ಕೊಠಡಿ

ನಗರದ 28 ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ 42 ಕೊಠಡಿಗಳಲ್ಲಿ ನಡೆಯಲಿದೆ. ಬೆಂಗಳೂರು ನಗರ ಹಾಗೂ ಬಿಬಿಎಂಪಿ ಉತ್ತರ ಚುನಾವಣಾ ಜಿಲ್ಲಾ ವ್ಯಾಪ್ತಿಯ ತಲಾ 7 ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆಗೆ ತಲಾ 2ರಂತೆ 28 ಕೊಠಡಿಯಲ್ಲಿ ನಡೆಯಲಿದೆ. ಬಿಬಿಎಂಪಿ ದಕ್ಷಿಣ ಹಾಗೂ ಬಿಬಿಎಂಪಿ ಕೇಂದ್ರ ಚುನಾವಣಾ ಜಿಲ್ಲಾ ವ್ಯಾಪ್ತಿಯ ತಲಾ 7 ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆಗೆ ತಲಾ ಒಂದರಂತೆ 14 ಕೊಠಡಿಯಲ್ಲಿ ನಡೆಯಲಿದೆ.

389 ಮಂದಿಯ ಭವಿಷ್ಯ ನಿರ್ಧಾರ

ನಗರದ 28 ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 389 ಅಭ್ಯರ್ಥಿಗಳು ಕಣದಲ್ಲಿದ್ದು, ಅವರ ರಾಜಕೀಯ ಭವಿಷ್ಯ ಶನಿವಾರ ನಿರ್ಧಾರವಾಗಲಿದೆ. 137 ಮಂದಿ ಪಕ್ಷೇತರರಾಗಿ, 115 ಅಭ್ಯರ್ಥಿಗಳು ಸಣ್ಣ ಮಟ್ಟದ ರಾಜಕೀಯ ಪಕ್ಷಗಳಿಂದ ಸ್ಪರ್ಧಿಸಿದ್ದಾರೆ. ಕಾಂಗ್ರೆಸ್‌, ಬಿಜೆಪಿ ಮತ್ತು ಆಮ್‌ ಆದ್ಮಿ ಪಕ್ಷಗಳು ಎಲ್ಲ 28 ಕ್ಷೇತ್ರಗಳಲ್ಲೂ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಿವೆ. ಜೆಡಿಎಸ್‌ 24 ಕ್ಷೇತ್ರ, ಎಡಿಯು 4, ಎನ್‌ಪಿಪಿಯ ಇಬ್ಬರು, ಸಿಪಿಐಎಂನಿಂದ ಒಬ್ಬರು ಕಣದಲ್ಲಿದ್ದಾರೆ.


ಎಲ್ಲಿ ಯಾವ ಕ್ಷೇತ್ರದ ಮತ ಎಣಿಕೆ?

  • *ಬಸವನಗುಡಿಯ ಬಿಎಂಎಸ್‌ ಕಾಲೇಜು: ಚಾಮರಾಜಪೇಟೆ, ಚಿಕ್ಕಪೇಟೆ, ಗಾಂಧಿನಗರ, ರಾಜಾಜಿನಗರ, ರಾಜರಾಜೇಶ್ವರಿನಗರ, ಶಾಂತಿನಗರ, ಶಿವಾಜಿನಗರ
  • *ವಿಠಲ್‌ ಮಲ್ಯರಸ್ತೆಯ ಸೆಂಟ್‌ ಜೋಸೆಫ್‌ ಇಂಡಿಯನ್‌ ಹೈಸ್ಕೂಲ್‌: ಆನೇಕಲ್‌, ಬೆಂಗಳೂರು ದಕ್ಷಿಣ, ಬ್ಯಾಟರಾಯನಪುರ, ದಾಸರಹಳ್ಳಿ, ಮಹಾದೇವಪುರ, ಯಲಹಂಕ ಯಶವಂತಪುರ
  • *ವಸಂತ ನಗರದ ಮೌಂಟ್‌ ಕಾರ್ಮೆಲ್‌ ಕಾಲೇಜು: ಸಿ.ವಿ.ರಾಮನ್‌ನಗರ, ಹೆಬ್ಬಾಳ, ಕೆ.ಆರ್‌. ಪುರ, ಮಹಾಲಕ್ಷ್ಮಿ ಲೇಟ್‌, ಮಲ್ಲೇಶ್ವರ, ಪುಲಕೇಶಿನಗರ, ಸರ್ವಜ್ಞನಗರ
  • *ಜಯನಗರ 4ನೇ ಬ್ಯಾಕ್‌ನ ಎಸ್‌ಎಸ್‌ಎಂಆರ್‌ವಿ ಕಾಲೇಜು: ಬಿಟಿಎಂ ಲೇಔಟ್‌, ಬಸವನಗುಡಿ, ಬೊಮ್ಮನಹಳ್ಳಿ, ಗೋವಿಂದರಾಜನಗರ, ಜಯನಗರ, ಪದ್ಮನಾಭ ನಗರ, ವಿಜಯನಗರ
  • ಬಂದೋಬಸ್ತ್‌ಗೆ  10 ಡಿಸಿಪಿ, 15 ಎಸಿಪಿ, 38 ಇನ್‌ಸ್ಪೆಕ್ಟರ್‌, 250 ಪಿಎಸ್‌ಐ, 1200 ಪೊಲೀಸ್‌ ಭದ್ರತೆ

ವಿಧಾನ ಸಭಾ ಚುನಾವಣಾ ಸಮರವನ್ನು ಬಹುತೇಕ ಶಾಂತಿಯುತವಾಗಿ ಮುಗಿಸಿ ಹೆಮ್ಮೆಪಟ್ಟನಗರ ಪೊಲೀಸರು, ಈಗ ಅಂತಿಮ ಘಟ್ಟಫಲಿತಾಂಶ ಪ್ರಕಟ ದಿನ ಶನಿವಾರ ಯಾವುದೇ ಅಹಿತಕರ ಘಟನೆಗಳಿಗೆ ಅಸ್ಪದ ನೀಡದಂತೆ ಮಣಿ ಎಣಿಕೆ ಕೇಂದ್ರಗಳಿಗೆ ಬಿಗಿ ಬಂದೋಬಸ್ತ್ ಕಲ್ಪಿಸಿದ್ದಾರೆ. ನಗರದ ಐದು ಕೇಂದ್ರಗಳಲ್ಲಿ 32 ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ ನಡೆಯಲಿದೆ. ಈ ಮತ ಎಣಿಕೆ ಕೇಂದ್ರಗಳ ಬಳಿ ಸಾವಿರಾರು ಸಂಖ್ಯೆಯಲ್ಲಿ ರಾಜಕೀಯ ಪಕ್ಷಗಳ ಕಾರ್ಯಕರ್ತರು ಜಮಾವಣೆಗೊಳ್ಳುವ ಸಾಧ್ಯತೆ ಹಿನ್ನಲೆಯಲ್ಲಿ ಬಿಗಿ ಭದ್ರತೆ ವ್ಯವಸ್ಥೆ ಮಾಡಿದ್ದಾರೆ.

ಪ್ರತಿ ಮತ ಎಣಿಕೆ ಕೇಂದ್ರಗಳಿಗೆ ಇಬ್ಬರು ಡಿಸಿಪಿಗಳ ಸಾರಥ್ಯದಲ್ಲಿ ಭದ್ರತೆ ಕಲ್ಪಿಸಲಾಗಿದ್ದು, ಈ ಬಂದೋಬಸ್ತ್‌ಗೆ 10 ಡಿಸಿಪಿ, 15 ಎಸಿಪಿ, 38 ಇನ್‌ಸ್ಪೆಕ್ಟರ್‌, 250 ಪಿಎಸ್‌ಐ, 1200 ಪೊಲೀಸರು ನಿಯೋಜನೆಗೊಂಡಿದ್ದಾರೆ. ಅಲ್ಲದೆ 12 ಕೇಂದ್ರ ಭದ್ರತಾ ಪಡೆಗಳು, 36 ರಾಜ್ಯ ಸಶಸ್ತ್ರ ಮೀಸಲು ಹಾಗೂ ನಗರ ಸಶಸ್ತ್ರ ಮೀಸಲು ತುಕಡಿಗಳು ಸಹ ಬಳಕೆಯಾಗಲಿವೆ. ಇನ್ನು ಪ್ರತಿಯೊದು ವಿಭಾಗದಲ್ಲಿ ಓರ್ವ ಎಸಿಪಿ ನೇತೃತ್ವದಲ್ಲಿ ಪ್ರತ್ಯೇಕ ವಿಶೇಷ ಗಸ್ತು ತಂಡವನ್ನು ಸಹ ರಚಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ನಗರದಲ್ಲಿ ಇಂದು ನಿಷೇಧಾಜ್ಞೆ ಜಾರಿ

ವಿಧಾನಸಭಾ ಚುನಾವಣಾ ಫಲಿತಾಂಶ ಪ್ರಕಟ ಹಿನ್ನಲೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆ ಉಂಟಾಗದಂತೆ ಮುಂಜಾಗ್ರತಾ ಕ್ರಮವಾಗಿ ನಗರ ವ್ಯಾಪ್ತಿ ಶನಿವಾರ ಬೆಳಗ್ಗೆ ರಿಂದ ರಾತ್ರಿ 12 ಗಂಟವೆರೆಗೆ ನಿಷೇಧಾಜ್ಞೆ ಜಾರಿಗೊಳಿಸಿ ಪೊಲೀಸ್‌ ಆಯುಕ್ತ ಸಿ.ಎಚ್‌.ಪ್ರತಾಪ್‌ ರೆಡ್ಡಿ ಆದೇಶಿಸಿದ್ದಾರೆ. ನಿಷೇಧಾಜ್ಞೆ ಹಿನ್ನೆಲೆಯಲ್ಲಿ ಐದಕ್ಕಿಂತ ಹೆಚ್ಚಿನ ಜನರು ಗುಂಪುಗೂಡುವಂತಿಲ್ಲ, ಮೆರವಣಿಗೆ ನಡೆಸುವಂತಿಲ್ಲ ಹಾಗೂ ಮಾರಕಾಸ್ತ್ರಗಳನ್ನು ಸಾಗಿಸುವಂತಿಲ್ಲ ಎಂದು ಹೇಳಿದ್ದಾರೆ.

ಮದ್ಯ ಮಾರಾಟ ನಿಷೇಧ:

ಇನ್ನು ವಿಧಾನಸಭಾ ಚುನಾವಣೆ ಫಲಿತಾಂಶ ಪ್ರಕಟ ಹಿನ್ನಲೆಯಲ್ಲಿ ಶನಿವಾರ ನಗರ ವ್ಯಾಪ್ತಿಯಲ್ಲಿ ಮದ್ಯ ಮಾರಾಟವನ್ನು ಸಹ ನಗರ ಪೊಲೀಸ್‌ ಆಯುಕ್ತ ನಿಷೇಧಿಸಿದ್ದಾರೆ.

Follow Us:
Download App:
  • android
  • ios