ಮುಂದಿನ ವರ್ಷ ನಡೆಯುವ ಕರ್ನಾಟಕ ವಿಧಾನಸಭಾ ಚುನಾವಣೆಗೆ ಎಲ್ಲ ಪಕ್ಷಗಳು ಸಿದ್ಧಗೊಳ್ಳುತ್ತಿದ್ದು, ಈ ಸಲ ಕಾಂಗ್ರೆಸ್ ತನ್ನ ಅಭ್ಯರ್ಥಿಗಳನ್ನು ಡಿಸೆಂಬರ್ ಅಂತ್ಯದೊಳಗೆ ಅಂತಿಮಗೊಳಿಸಲು ನಿರ್ಧರಿಸಿದೆ.
ಬೆಂಗಳೂರು (ನ.11): ಕರ್ನಾಟಕದಲ್ಲಿ ಎಲ್ಲಾ ರಾಜಕೀಯ ಪಕ್ಷಗಳು ವಿವಿಧ ಯಾತ್ರೆ, ಪಾದಯಾತ್ರೆ ಮಾಡುವ ಮೂಲಕ ಈಗಾಗಲೇ ಮುಂದಿನ ವರ್ಷ ಏಪ್ರಿಲ್-ಮೇನಲ್ಲಿ ನಡೆಯುವ ವಿಧಾನಸಭಾ ಚುನಾವಣೆಗೆ ರಣ ಕಹಳೆ ಊದಿಯಾಗಿದೆ. ಪಕ್ಷ ಮುಖಂಡರ ಆರೋಪ, ಪ್ರತ್ಯಾರೋಪಗಳು ಜೋರಾಗುತ್ತಿವೆ. ಅಲ್ಲದೇ, ತೆರೆಮರೆಯಲ್ಲಿ ಟಿಕೆಟ್ ಪಡೆಯುವ ಕಸರತ್ತೂ ಜೋರಾಗುತ್ತಿದೆ.
News Hour: ಕಾಂಗ್ರೆಸ್‌ನಲ್ಲಿ ಸೃಷ್ಟಿಯಾಯ್ತಾ 3ನೇ ಪವರ್ ಸೆಂಟರ್!
ಈ ಬೆನ್ನಲ್ಲೇ ರಾಜ್ಯದ ಮಲ್ಲಿಕಾರ್ಜುನ ಖರ್ಗೆ, ಎಐಸಿಸಿ ಅಧ್ಯಕ್ಷರಾಗಿದ್ದು ಪಕ್ಷಕ್ಕೆ ಬಲ ಬಂದಂತಾಗಿದೆ. ಪಕ್ಷದಲ್ಲಿ ಸಣ್ಣ ಪುಟ್ಟ ಬದಲಾವಣೆಗಳಾಗುತ್ತಿದ್ದು, ಟಿಕೆಟ್ ಹಂಚಿಕೆಗೆ ಸಂಬಂಧಿಸಿದಂತೆ ಕೆಲವು ಚರ್ಚೆಗಳು ನಡೆಯುತ್ತಿದೆ. ಕಡೇ ಕ್ಷಣದವರೆಗೂ ಟಿಕೆಟ್‌ಗೆ ಸಂಬಂಧಿಸಿದಂತೆ ಹಗ್ಗ ಜಗ್ಗಾಟ ಮಾಡುವ ಕಾಂಗ್ರೆಸ್, ಈ ಸಲ ಮಾತ್ರ ಡಿಸೆಂಬರ್ ಅಂತ್ಯದೊಳಗೆ ಪಕ್ಷದ ಅಭ್ಯರ್ಥಿಗಳನ್ನು ಫೈನಲ್ ಮಾಡಲಿದೆ, ಎಂದು ಹೇಳಲಾಗುತ್ತಿದೆ. ಆ ಮೂಲಕ ಕೈ ಹೊಸ ಪದ್ಧತಿಗೆ ನಾಂದಿ ಹಾಡುವ ಸೂಚನೆ ನೀಡಿದೆ.
ಡಿಸೆಂಬರ್ ಅಂತ್ಯದೊಳಗೆ ಯಾವ ಕ್ಷೇತ್ರಗಳಲ್ಲಿ ಯಾವ ಅಭ್ಯರ್ಥಿ ಅನ್ನೋದನ್ನು ಪಕ್ಷ ಫೈನಲ್ ಮಾಡುತ್ತಂತೆ. 150 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳು ಫೈನಲ್ ಮಾಡಲು ಕಾಂಗ್ರೆಸ್ ಕಸರತ್ತು ನಡೆಸುತ್ತಿದ್ದು, ಇದೇ ಉದ್ದೇಶದಿಂದಲೇ ಅಭ್ಯರ್ಥಿಗಳಿಂದ ಅರ್ಜಿಯನ್ನೂ ಆಹ್ವಾನಿಸಿದೆ. ಯಾವ ಕ್ಷೇತ್ರದಲ್ಲಿ ಎಷ್ಟು ಆಕಾಂಕ್ಷಿಗಳು ಇದ್ದಾರೆ? ಅವರ ಸಾಮರ್ಥ್ಯ ಏನೆಂಬುದನ್ನು ಅರ್ಜಿ ಮೂಲಕ ಕಾಂಗ್ರೆಸ್ ಪತ್ತೆ ಹಚ್ಚಲಿದೆ. ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿಯೂ ಇಬ್ಬರು ಅಥವಾ ಮೂವರು ಅಭ್ಯರ್ಥಿಗಳನ್ನು ಗುರುತಿಸಿ ಸರ್ವೇ ಮಾಡುತ್ತಂತೆ ಪಕ್ಷ.
ಗೆಲುವು ಕುದುರೆಗೆ ಟಿಕೆಟ್ ನೀಡಲು ಕಸರತ್ತು:
ಅಭ್ಯರ್ಥಿಗಳು ಕೊರತೆ ಇರುವ ಸುಮಾರು 70 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಆಸಕ್ತಿ ಏನೆಂಬುವುದು ಅರ್ಜಿಯಲ್ಲಿ ತಿಳಿಯಲಿದೆ. ಡಿಸೆಂಬರ್ ಅಂತ್ಯದೊಳಗೆ ಅಭ್ಯರ್ಥಿಗಳು ಯಾರು ಅನ್ನೋ ಮಾಹಿತಿ ಅವರಿಗೇ ತಿಳಿಸಲಾಗುತ್ತೆ. ಪೈಪೋಟಿ ಹೆಚ್ಚಿರುವ ಕಡೆ ಅಭ್ಯರ್ಥಿಗಳ ನಡುವೆ ಸಂಧಾನ ನಡೆಸುವ ಯೋಚನೆ ಕಾಂಗ್ರೆಸ್ ಗೆ ಇದೆ. ಆ ಮೂಲಕ ಕಡೇ ಕ್ಷಣದಲ್ಲಿ ಮುಖಂಡರ ನಡುವೆ ವೈಮನಸ್ಸು, ಪಕ್ಷಾಂತರ ಪರ್ವ ನಡೆಯದಂತೆ ಎಚ್ಚರಿಕೆಯ ಹೆಜ್ಜೆಯನ್ನಿಡಲು ಪಕ್ಷ ಯೋಚಿಸುತ್ತಿದೆ, ಎಂದು ಬಲ್ಲ ಮೂಲಗಳು ತಿಳಿಸಿವೆ.
ಚುನಾವಣೆಗೆ ಆರು ತಿಂಗಳ ಮೊದಲೇ ಅಭ್ಯರ್ಥಿಗಳಿಗೆ ಪ್ರಚಾರ ನಡೆಸಲು, ಕ್ಷೇತ್ರ ಪರ್ಯಟನೆ ನಡೆಸಲು ಅನುಕೂಲವಾಗುತ್ತಂತೆ. ಡಿಸೆಂಬರ್‌ಗೆ ಅಭ್ಯರ್ಥಿಗಳ ಪಟ್ಟಿ ಫೈನಲ್ ಮಾಡಿ ಅನ್ನೋದು ಕೆಪಿಸಿಸಿ (KPCC) ಒತ್ತಾಯವೂ ಹೌದು. ಇದೇ ರೀತಿ ಸಿದ್ದತೆ ನಡೆಸಲು ಹೈಕಮಾಂಡ್ ನಾಯಕರು ಕೂಡ ಸೂಚಿಸಿದ್ದಾರೆಂದು ಹೇಳಲಾಗುತ್ತಿದೆ.
ಸರ್ವೋದಯ ಸಮಾವೇಶಕ್ಕೆ ಸಾಕ್ಷಿಯಾದ ಬೆಂಗಳೂರು:
ಇದೇ ಮೊದಲ ಬಾರಿಗೆ ಎಐಸಿಸಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ನಂತ ಕರ್ನಾಟಕಕ್ಕೆ ಆಗಮಿಸಿದ ಮಲ್ಲಿಕಾರ್ಜುನ ಖರ್ಗೆಯವರಿಗೆ ಭಾರೀ ಸ್ವಾಗತ ನೀಡಲಾಗಿದ್ದು, ಸರ್ವೋದಯ ಸಮಾವೇಶವನ್ನು ನಡೆಸಲಾಗಿತ್ತು. ಈ ಸಮಾರಂಭವು ಹಲವು ವಿಶೇಷತೆಗಳಿಗೆ ಸಾಕ್ಷಿಯಾಯಿತು. ಈ ಸಂದರ್ಭಧಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಬೆಂಬಲಿಗರು ಮುಂದಿನ ಸಿಎಂ ಎಂದು ಕೂಗಿದ್ದು ಮಾರ್ದನಿಸಿತು.
Karnataka Election 2023: ಸಿದ್ದರಾಮಯ್ಯಗೆ ಕ್ಷೇತ್ರ ಯಾವುದಯ್ಯ ಅನ್ನೋದೆ ಟೆನ್ಷನ್?
ಈ ಸಮಾವೇಶದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ವಿರೋಧ ಪಕ್ಷದ ನಾಯಕ (Opposition Leader) ಸಿದ್ದರಾಮಯ್ಯ ಅವರ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದರು. ಶಿವಕುಮಾರ್ ಭಾಷಣ ಮಾಡುವಾಗ, ‘ಮುಂದಿನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್’ ಎಂದು ಕೆಲ ಕಾರ್ಯಕರ್ತ ಕೂಗುತ್ತಿದ್ದರು. ಮತ್ತೊಂದೆಡೆ ಸಿದ್ದರಾಮಯ್ಯ ಬೆಂಬಲಿಗರೂ ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ’ ಎಂದು ಜೈಕಾರ ಹಾಕಿದರು. ಹಿರಿಯ ಮುಖಂಡರ ಸೂಚನೆ ಮೇರೆಗೆ ಸ್ಥಳದಲ್ಲಿದ್ದ ಕಾರ್ಯಕರ್ತರು ಮತ್ತೊಮ್ಮೆ ಮುಖ್ಯಮಂತ್ರಿ ಘೋಷಣೆ ಕೂಗದಂತೆ ಬೆಂಗಲಿಗರಿಗೆ ಸೂಚಿಸಿದ್ದರಿಂದ, ಕಾರ್ಯಕರ್ತರು ಮೌನದ ಮೊರೆ ಹೋದರು.
