ಯಾಕ್ ಚಿಂತಿ ಮಾಡ್ತೀರಿ ಸರ್ಕಾರ ನಮ್ದ ಐತಿ: ಸೋಲಿನ ಬಳಿಕ ಅಭಿಮಾನಿಗಳಿಗೆ ಶೆಟ್ಟರ್ ಮಾತು
ನಾ ಸೋತಿನಿ ಅಂತಾ ಯಾಕ್ ಚಿಂತಿ ಮಾಡ್ತೀರಿ, ಈ ಸಲ ಸರ್ಕಾರ ನಮ್ದ ಐತಿ, ಬಿಜೆಪಿ ಸೋತಿದೆ ಅಲಾ ಅಷ್ಟಸಾಕ್’ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಭಾವುಕ ನುಡಿಗಳನ್ನಾಡಿದರು.
ಹುಬ್ಬಳ್ಳಿ: ‘ನಾ ಸೋತಿನಿ ಅಂತಾ ಯಾಕ್ ಚಿಂತಿ ಮಾಡ್ತೀರಿ, ಈ ಸಲ ಸರ್ಕಾರ ನಮ್ದ ಐತಿ, ಬಿಜೆಪಿ ಸೋತಿದೆ ಅಲಾ ಅಷ್ಟಸಾಕ್’ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಭಾವುಕ ನುಡಿಗಳನ್ನಾಡಿದರು. ಶನಿವಾರ ವಿಧಾನಸಭಾ ಚುನಾವಣೆಯಲ್ಲಿ ಶೆಟ್ಟರ್ ಸೋಲಿನ ಕುರಿತು ಸುದ್ದಿ ಹೊರಬೀಳುತ್ತಿದ್ದಂತೆ ಅವರ ನಿವಾಸಕ್ಕೆ ಬಂದ ಬೆಂಬಲಿಗರು, ಕಾರ್ಯಕರ್ತರನ್ನು ಅವರೇ ಸಮಾಧಾನ ಪಡಿಸುತ್ತಾ ಈ ರೀತಿ ಮಾತಗಳನ್ನಾಡುತ್ತಿದ್ದರು.
ನನ್ನೆಲ್ಲ ಕಾರ್ಯಕರ್ತರು ಹಗಲು, ರಾತ್ರಿ ಶ್ರಮ ವಹಿಸಿದ್ದೀರಿ. ಆದ್ರ ಏನ್ ಮಾಡೋದು ಎಲ್ಲ ನಮ್ಮ ಕೈಯಲ್ಲಿಲ್ಲ. ಜನಾ ತೀರ್ಪು ಕೊಡ್ತಾರ. ಅವರ ತೀರ್ಪಿಗೆ ನಾನು ತಲಿ ಬಾಗಬೇಕ್ ಯಾರು ಹತಾಶರಾಗಬ್ಯಾಡ್ರಿ, ನಾನು ಸೋತ್ರ ಏನಾತ್ ರಾಜ್ಯದಾಗ ನಮ್ಮ ಸರ್ಕಾರ ಅಧಿಕಾರಕ್ಕ ಬಂದೈತಿ. ಅದನ್ನೆಲ್ಲ ಸ್ವಾಗತಿಸೋಣ. ನಾವು ಎಲ್ಲಿ ಎಡವಿದೀವಿ ಅನ್ನೋದನ್ನ ಕುಳಿತು ಪರಿಮರ್ಶಿಸಿಕೊಳ್ಳೋಣ. ಯಾರೂ ಧೃತಿಗೆಡಬೇಡಿ ಎಂದು ಕಾರ್ಯಕರ್ತರಿಗೆ ಶೆಟ್ಟರ್ ಧೈರ್ಯದ ನುಡಿಗಳನ್ನಾಡಿದರು.
Dharwad Election Result 2023: ಶೆಟ್ಟರ್ ಸೋತರೂ ಧಾರವಾಡದಲ್ಲಿ 'ಕೈ' ಹಿಡಿದ ಮತದಾರ!
ಮುಂದ ಹ್ಯಾಂಗ್ ಇರತ್ತ ನೋಡ್ತಿರಿ:
ಏನೋ ತಂತ್ರಾ ಮಾಡಿ ಬಿಜೆಪಿ ಇಲ್ಲಿ ಗೆದ್ದಿರಬಹುದು. ಇದನ್ನ ಕ್ಷೇತ್ರದ ಜನರು ನೋಡ್ತಾ ಇರ್ತಾರ. ಇದಕ್ಕೆ ಮುಂದಿನ ದಿನದೊಳಗ ತಕ್ಕ ಪಾಠ ಕಲಿಸ್ತಾರ ನೋಡ್ತಾ ಇರಿ. ನಾನು ಈ ಬಾರಿ ಸೋತಿರಬಹುದು. ಆದರ, ರಾಜಕಾರಣ ಮಾಡೋದನ್ನ ಬಿಟ್ಟಿಲ್ಲ. ನೋಡ್ತಾ ಇರಿ ಮುಂದೆ ಹ್ಯಾಂಗಿರತ್ತಂತ ಎಂದು ಬಿಜೆಪಿಗೆ ಮತ್ತೆ ಪೆಟ್ಟು ಕೊಡುವ ಮಾತು ಆಡಿದರು.
ಎಲ್ಲ ಕಡೆನೂ ಹಗಲು, ರಾತ್ರಿ ಅನ್ನದೇ ಪ್ರಚಾರ ಮಾಡಿದ್ವಿ, ಹಿಂಗ್ಯಾಕ ಆತ್ ಅನ್ನೋದ ಅರ್ಥ ಆಗವಲ್ದು ಸಾರ್... ಏನ್ ಮಾಡೋದು ನೀವ್ ಹೇಳಿ ಎಂದು ಕಾರ್ಯಕರ್ತನೋರ್ವ ಶೆಟ್ಟರ್‌ಗೆ ಪ್ರಶ್ನಿಸಿದ. ಆಗ ಶೆಟ್ಟರ್ ಇನ್ನೂ ಕಾಲ ಮಿಂಚಿಲ್ಲ. ಈಗ ಎಲ್ಲರೂ ಮನೆಗೆ ಹೋಗಿ ಆರಾಮಾಗಿರಿ. 2-3 ದಿನಗಳಲ್ಲಿ ಎಲ್ಲರೂ ಸೇರಿ ಯಾಕ್ ಹಿಂಗಾತ್ ಅನ್ನೋದನ್ನ ವಿಚಾರ ಮಾಡೋಣ. ನನಗಾಗಿ ಹಗಲು- ರಾತ್ರಿ ದುಡಿದ ನಿಮ್ಮೆಲ್ಲರಿಗೂ ನಾನು ಆಭಾರಿ ಎನ್ನುತ್ತ ಭಾರದ ಮನಸ್ಸಿನಿಂದಲೇ ಅಲ್ಲಿಂದ ಮನೆಯೊಳಗೆ ಹೊರಟು ಹೋದರು.
Karnataka Election Results 2023: ಶೆಟ್ಟರ್‌ನ 'ಕೈ' ಬಿಟ್ಟು ವಿನಯ್‌ಗೆ ಜೈ ಎಂದ ಮತದಾರ!
ಮೋಸ ಮಾಡ್ಯಾರಿ!:
ನಮ್ಮ ನಮ್ಮೊಳಗೆ ಶೆಟ್ಟರ್ ಸಾಹೇಬ್ರಿಗೆ ಮೋಸ ಮಾಡ್ಯಾರಿ... ಎಲ್ಲ ಸತ್ಯಾ ಹೊರಹಾಕಿಸ್ತೀನಿ ನಾನು ಅವರನ್ನ ಬಿಡಲ್ಲ ಎಂದು ಕಾರ್ಯಕರ್ತ ಖಲಂದರ್ ಎಂಬುವವರು ಶೆಟ್ಟರ್ ಮುಂದೇನೆ ಆಕ್ರೋಶ ವ್ಯಕ್ತಪಡಿಸಿದ ಘಟನೆ ಜರುಗಿತು. ಸೇರಿದ್ದ ನೂರಾರು ಮಹಿಳೆಯರು ಶೆಟ್ಟರ್ ಅವರನ್ನ ಈ ಬಾರಿ ಕಾಂಗ್ರೆಸ್ ಸ್ಪಷ್ಟಬಹುಮತದೊಂದಿಗೆ ಅಧಿಕಾರಕ್ಕೆ ಬರುತ್ತಿದೆ. ಈ ವೇಳೆ ನಿಮ್ಮ ಗೆಲುವನ್ನ ನಾವು ನೋಡುವ ಕಾತುರದಲ್ಲಿದ್ದೆವು. ಆದರೆ, ಹೀಗೇಕಾಯ್ತು ಅನ್ನೋದು ತಿಳಿವಲ್ದು ಎಂದು ಶೆಟ್ಟರ್ ಅವರಿಗೆ ಅಭಿಮಾನದ ನುಡಿಗಳನ್ನಾಡಿದರು. ಎಲ್ಲರನ್ನೂ ಭೇಟಿಯಾದ ಶೆಟ್ಟರ್ ನಂತರ ಮನೆಯೊಳಗೆ ನಡೆದರು.