Asianet Suvarna News Asianet Suvarna News

Assembly election: ಬೆಳಗಾವಿಯಲ್ಲಿ ಬಿಜೆಪಿಗೆ ಈಗ ಪಕ್ಷ ಸಂಘಟನೆಯ ತಲೆಬಿಸಿ!

ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿಯೇ ಅತಿದೊಡ್ಡ ಜಿಲ್ಲೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಬೆಳಗಾವಿಯಲ್ಲಿ ಪಕ್ಷ ಸಂಘಟನೆ ಬಲಪಡಿಸುವುದು ಹೇಗೆ ಎಂಬ ತಲೆಬಿಸಿ ರಾಜ್ಯ ಬಿಜೆಪಿ ನಾಯಕರನ್ನು ಬಲವಾಗಿ ಕಾಡುತ್ತಿದೆ.

karnataka assembly election  now another tension to Belgavi bjp  party organization rav
Author
First Published Dec 5, 2022, 12:00 PM IST

ವಿಜಯ್‌ ಮಲಗಿಹಾಳ

 ಬೆಂಗಳೂರು (ಡಿ.5) :

ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿಯೇ ಅತಿದೊಡ್ಡ ಜಿಲ್ಲೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಬೆಳಗಾವಿಯಲ್ಲಿ ಪಕ್ಷ ಸಂಘಟನೆ ಬಲಪಡಿಸುವುದು ಹೇಗೆ ಎಂಬ ತಲೆಬಿಸಿ ರಾಜ್ಯ ಬಿಜೆಪಿ ನಾಯಕರನ್ನು ಬಲವಾಗಿ ಕಾಡುತ್ತಿದೆ.

ಒಟ್ಟು 18 ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿರುವ ಬೆಳಗಾವಿ ಜಿಲ್ಲೆಯಲ್ಲಿ ಸದ್ಯ ಆಡಳಿತಾರೂಢ ಬಿಜೆಪಿ ಇತ್ತೀಚೆಗೆ ತೆರವಾಗಿರುವ ಹುಕ್ಕೇರಿ ಮತ್ತು ಸವದತ್ತಿ ಯಲ್ಲಮ್ಮ ಕ್ಷೇತ್ರಗಳನ್ನೂ ಒಳಗೊಂಡಂತೆ 13 ಕ್ಷೇತ್ರಗಳು ಹಾಗೂ ಕಾಂಗ್ರೆಸ್‌ ಐದು ಕ್ಷೇತ್ರಗಳನ್ನು ತಮ್ಮ ಪಾಲಿಗೆ ಉಳಿಸಿಕೊಂಡಿವೆ. ಅಂದರೆ, ಮೇಲ್ನೋಟಕ್ಕೆ ಸಂಖ್ಯಾಬಲದ ಆಧಾರದ ಮೇಲೆ ಬಿಜೆಪಿ ಹೆಚ್ಚು ಸಾಮರ್ಥ್ಯ ಹೊಂದಿದ್ದರೂ ಅದಕ್ಕೆ ಕಾರಣರಾದ ಪ್ರಮುಖ ಮುಖಂಡರ ಕೊರತೆ ಈಗ ಎದ್ದು ಕಾಣುತ್ತಿದೆ.

Border Dispute: ಮಹಾರಾಷ್ಟ್ರ ಸಚಿವರು ಕರ್ನಾಟಕಕ್ಕೆ ಬಂದರೆ ಸೂಕ್ತ ಕ್ರಮ : ಸಿಎಂ ಬೊಮ್ಮಾಯಿ

ಒಂದೆಡೆ ಪ್ರತಿಪಕ್ಷ ಕಾಂಗ್ರೆಸ್‌ ದಿನೇದಿನೇ ಹೆಚ್ಚು ಕ್ರಿಯಾಶೀಲವಾಗುತ್ತಿದ್ದರೆ, ಬಿಜೆಪಿ ಪಾಳೆಯದಲ್ಲಿ ಕೇಂದ್ರ ಮತ್ತು ರಾಜ್ಯದಲ್ಲಿ ತಮ್ಮ ಪಕ್ಷದ ಸರ್ಕಾರ ಇದೆ ಎಂಬ ಸಮಾಧಾನ ಬಿಟ್ಟರೆ ಸಂಘಟನೆ ಮಾತ್ರ ಎಚ್ಚರಿಕೆ ಗಂಟೆ ಮೊಳಗಿಸುತ್ತಿದೆ. ಹೀಗಾಗಿ, ಈ ಜಿಲ್ಲೆಯಲ್ಲಿನ ಪಾರುಪತ್ಯ ಕೈತಪ್ಪಿ ಹೋಗದಂತೆ ಏನಾದರೂ ಹೊಸ ಸೂತ್ರ ಕಂಡು ಹಿಡಿಯಬೇಕು ಎಂಬ ಜಿಜ್ಞಾಸೆಯಲ್ಲಿ ಬಿಜೆಪಿ ನಾಯಕರಿದ್ದಾರೆ.

ಬಹುಶಃ ಇದೇ ತಿಂಗಳ 19ರಿಂದ ಬೆಳಗಾವಿಯಲ್ಲಿ ಆರಂಭವಾಗಲಿರುವ ವಿಧಾನಮಂಡಲದ ಚಳಿಗಾಲದ ಅಧಿವೇಶನದ ಹೊತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಪಕ್ಷದ ನಾಯಕರು ಸ್ಥಳೀಯ ಮುಖಂಡರ ಜತೆ ಈ ಬಗ್ಗೆ ಗಂಭೀರ ಚರ್ಚೆ ನಡೆಸಿ ಪರಿಹಾರೋಪಾಯ ಕಂಡು ಹಿಡಿಯಬಹುದು ಎಂಬ ಮಾತು ಕೇಳಿಬಂದಿದೆ.

ಕಳೆದ 2018ರ ವಿಧಾನಸಭಾ ಚುನಾವಣೆ ವೇಳೆ ಪಕ್ಷದ ಗೆಲುವಿಗೆ ಕಾರಣಕರ್ತರಾಗಿದ್ದವರ ಪೈಕಿ ಸುರೇಶ್‌ ಅಂಗಡಿ ಹಾಗೂ ಉಮೇಶ್‌ ಕತ್ತಿ ಅವರ ಅಕಾಲಿಕ ನಿಧನ ಸಂಘಟನೆಯಲ್ಲಿ ನಿರ್ವಾತ ಸೃಷ್ಟಿಸಿದೆ. ಇದಕ್ಕೆ ಪೂರಕವಾಗಿ ಎಂಬಂತೆ ಮಾಜಿ ಸಂಸದ ಪ್ರಭಾಕರ್‌ ಕೋರೆ ಇತ್ತೀಚೆಗೆ ಪಕ್ಷದ ಸಂಘಟನೆಯಿಂದ ಅಷ್ಟಕಷ್ಟೆಎಂಬಂತೆ ದೂರ ಉಳಿದಿದ್ದಾರೆ. ಇನ್ನು ತಮಗೆ ಮತ್ತೆ ಸಚಿವ ಸ್ಥಾನ ನೀಡದೇ ಇರುವುದಕ್ಕೆ ರಮೇಶ್‌ ಜಾರಕಿಹೊಳಿ ತಟಸ್ಥ ಧೋರಣೆ ತಳೆದಿದ್ದಾರೆ.

ರಾಜಧಾನಿ ಬೆಂಗಳೂರು ಬಿಟ್ಟರೆ ಅತಿಹೆಚ್ಚು ಸಚಿವ ಸ್ಥಾನ ಹೊಂದಿದ್ದ ಬೆಳಗಾವಿಯಲ್ಲಿ ಈಗ ಒಬ್ಬರು ಮಾತ್ರ ಸಚಿವರಾಗಿದ್ದಾರೆ. ಅದು ಶಶಿಕಲಾ ಜೊಲ್ಲೆ. ಅವರು ಕೂಡ ದೂರದ ವಿಜಯನಗರ ಜಿಲ್ಲೆಯ ಉಸ್ತುವಾರಿ ಹೊತ್ತಿದ್ದಾರೆ. ಬೆಳಗಾವಿ ಜಿಲ್ಲೆಯವರಾದರೂ ಅವರು ತಮ್ಮ ಚಿಕ್ಕೋಡಿ ಕ್ಷೇತ್ರ ಹೊರತುಪಡಿಸಿ ಇನ್ನುಳಿದ ಕ್ಷೇತ್ರಗಳ ಬೆಳವಣಿಗೆಗಳಲ್ಲಿ ಹೆಚ್ಚು ಆಸಕ್ತಿ ತೋರುವುದಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ. ಪಕ್ಕದ ಬಾಗಲಕೋಟೆ ಜಿಲ್ಲೆಯವರಾದ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಅವರಿಗೆ ಬೆಳಗಾವಿ ಜಿಲ್ಲೆಯ ಉಸ್ತುವಾರಿ ಜವಾಬ್ದಾರಿ ನೀಡಿದ್ದರೂ ಅವರು ಪಕ್ಷದ ರಾಜಕೀಯ ಚಟುವಟಿಕೆಗಳಲ್ಲಿ ಅಷ್ಟಾಗಿ ಒಳಗೊಳ್ಳುವುದಿಲ್ಲ ಎಂಬ ವಾದಗಳಿವೆ. ಇನ್ನು ಇಬ್ಬರು ಸಂಸದರು ಬಿಜೆಪಿಯವರೇ ಆಗಿದ್ದರೂ ಅವರು ಜನರ ಮೇಲೆ ಪ್ರಭಾವ ಬೀರುವಂಥವರಲ್ಲ ಎಂಬ ಅಭಿಪ್ರಾಯ ಸ್ವಪಕ್ಷೀಯರಿಂದಲೇ ವ್ಯಕ್ತವಾಗುತ್ತಿದೆ.

ಇದೆಲ್ಲದರ ಜತೆಗೆ ಬಿ.ಎಸ್‌.ಯಡಿಯೂರಪ್ಪ ಸಂಪುಟದಲ್ಲಿ ಉಪಮುಖ್ಯಮಂತ್ರಿ ಸ್ಥಾನ ಹೊಂದಿದ್ದ ಮತ್ತು ಸಂಘ ಪರಿವಾರದ ಒಲವು ಗಳಿಸಿದ್ದ ಲಕ್ಷ್ಮಣ್‌ ಸವದಿ ಇಡೀ ಜಿಲ್ಲೆಯ ಸಮಗ್ರ ನಾಯಕನಾಗಿ ಹೊರಹೊಮ್ಮುತ್ತಿಲ್ಲ. ಅವರಿಗೆ ಉಪಮುಖ್ಯಮಂತ್ರಿ ಹುದ್ದೆಯಂಥ ಪ್ರಮುಖ ಸ್ಥಾನ ನೀಡಿದ ವೇಳೆಯೂ ಅವರು ಅದನ್ನು ಬಳಸಿಕೊಳ್ಳದೆ ತಮ್ಮ ಇಲಾಖೆಯ ಕಾರ್ಯಕ್ಕಷ್ಟೇ ಸೀಮಿತವಾದರು ಎಂಬ ಅಸಮಾಧಾನವೂ ಪಕ್ಷದಲ್ಲಿದೆ.

 

Border dispute: ಮಹಾಸಚಿವರ ತಡೆಯಲು ಕರವೇ ಸಾವಿರಾರು ಕಾರ್ಯಕರ್ತರು ಬೆಳಗಾವಿಗೆ!

ಉತ್ತರ ಕರ್ನಾಟಕ ಅದರಲ್ಲೂ ಕಿತ್ತೂರು ಕರ್ನಾಟಕ ಪ್ರದೇಶದಲ್ಲಿ ಪ್ರಭಾವ ಹೊಂದಿರುವ ಬೆಳಗಾವಿ ಜಿಲ್ಲೆಯಲ್ಲಿ ಪಕ್ಷದ ಬಲವನ್ನು ಯಾವುದೇ ಕಾರಣಕ್ಕೂ ಬಿಟ್ಟುಕೊಡಬಾರದು. ಅಲ್ಲಿ ಬಿಟ್ಟುಕೊಟ್ಟಿದ್ದೇ ಆದಲ್ಲಿ ರಾಜ್ಯದಲ್ಲಿ ಅಧಿಕಾರ ಹಿಡಿಯುವುದೂ ಕಷ್ಟವಾಗಬಹುದು ಎಂಬ ಆತಂಕ ಪಕ್ಷದ ನಾಯಕರನ್ನು ಕಾಡುತ್ತಿದೆ.

Follow Us:
Download App:
  • android
  • ios