Karnataka election 2023: ಕದನ ಕುತೂಹಲ ಹೆಚ್ಚಿಸಿದ ಹು-ಧಾ ಮೀಸಲು ಕ್ಷೇತ್ರ!
ರಾಜ್ಯದಲ್ಲೇ ಜನಸಂಘದ ಮೊದಲ ಶಾಸಕ ಆಯ್ಕೆಯಾಗಿದ್ದ ಕ್ಷೇತ್ರ ಹುಬ್ಬಳ್ಳಿ-ಧಾರವಾಡ ಪೂರ್ವ ಕ್ಷೇತ್ರ. ಈ ಕ್ಷೇತ್ರ ಇದೀಗ ಕಾಂಗ್ರೆಸ್ ಭದ್ರಕೋಟೆ. ನಿಧಾನವಾಗಿ ಬಿಜೆಪಿಯೂ ಅಷ್ಟೇ ಹಿಡಿತ ಹೊಂದಿದೆ. ಹಾಗಾಗಿ ಈ ಬಾರಿ ಈ ಕೋಟೆಯ ಕಾವಲುಗಾರ ಯಾರು? ಎನ್ನುವ ಕುತೂಹಲ ಹೆಚ್ಚಿಸಿದೆ.
ಶಿವಾನಂದ ಗೊಂಬಿ
ಹುಬ್ಬಳ್ಳಿ (ಏ.2) : ರಾಜ್ಯದಲ್ಲೇ ಜನಸಂಘದ ಮೊದಲ ಶಾಸಕ ಆಯ್ಕೆಯಾಗಿದ್ದ ಕ್ಷೇತ್ರ ಹುಬ್ಬಳ್ಳಿ-ಧಾರವಾಡ ಪೂರ್ವ ಕ್ಷೇತ್ರ. ಈ ಕ್ಷೇತ್ರ ಇದೀಗ ಕಾಂಗ್ರೆಸ್ ಭದ್ರಕೋಟೆ. ನಿಧಾನವಾಗಿ ಬಿಜೆಪಿಯೂ ಅಷ್ಟೇ ಹಿಡಿತ ಹೊಂದಿದೆ. ಹಾಗಾಗಿ ಈ ಬಾರಿ ಈ ಕೋಟೆಯ ಕಾವಲುಗಾರ ಯಾರು? ಎನ್ನುವ ಕುತೂಹಲ ಹೆಚ್ಚಿಸಿದೆ.
ಪೂರ್ವ ಕ್ಷೇತ್ರ (ಈ ಮೊದಲು ಹುಬ್ಬಳ್ಳಿ ಶಹರ)ದಲ್ಲಿ ಈ ವರೆಗೆ ಬರೋಬ್ಬರಿ 15 ಚುನಾವಣೆಗಳು ನಡೆದಿದ್ದು, ಈ ಪೈಕಿ 10 ಬಾರಿ ಕಾಂಗ್ರೆಸ್ ಗೆದ್ದಿದೆ. ಜನಸಂಘಕ್ಕೆ ಅಸ್ತಿತ್ವ ತಂದುಕೊಟ್ಟಕ್ಷೇತ್ರದಲ್ಲಿ ಕಾಂಗ್ರೆಸ್ ಬಾವುಟ ಹಾರಿದ್ದು ಅಚ್ಚರಿಯೇ ಸರಿ.
ಮೊಳಕಾಲ್ಮುರು ಟಿಕೆಟ್ ಕೈತಪ್ಪಿದ್ರೆ ಸೂಕ್ತ ನಿರ್ಧಾರ: ಪರೋಕ್ಷವಾಗಿ ಹೈಕಮಾಂಡ್‌ಗೆ ಎಚ್ಚರಿಕೆ ಕೊಟ್ಟ ಡಾ.ಯೋಗೀಶ್ ಬಾಬು
ಹೆಚ್ಚು ಕೊಳಚೆ ಪ್ರದೇಶ:
ಈ ಕ್ಷೇತ್ರದಲ್ಲಿ ಹೆಚ್ಚಾಗಿ ಬಡವರು, ಕೂಲಿಕಾರ್ಮಿಕರೇ ಇದ್ದಾರೆ. ಸಮೀಕ್ಷೆ ಪ್ರಕಾರ 42ಕ್ಕೂ ಅಧಿಕ ಕೊಳಚೆ ಪ್ರದೇಶಗಳು ಇಲ್ಲಿವೆ. ಇದರಲ್ಲಿ 30ಕ್ಕೂ ಹೆಚ್ಚು ಕೊಳಚೆ ಪ್ರದೇಶಗಳನ್ನು ಕೊಳಚೆ ನಿರ್ಮೂಲನಾ ಮಂಡಳಿಯೇ ಅಧಿಕೃತ ಎಂದು ಘೋಷಿಸಿದೆ.
ನಕಲಿ ಮದ್ಯ ತಯಾರಿಕೆ ಸೇರಿದಂತೆ ಹತ್ತು ಹಲವು ಅಕ್ರಮ ಚಟುವಟಿಕೆಗಳು ಹಿಂದೆ ಇಲ್ಲಿ ಸಾಮಾನ್ಯವಾಗಿದ್ದವು. ಈದ್ಗಾ ಮೈದಾನದಲ್ಲಿ ರಾಷ್ಟ್ರಧ್ವಜ ಹಾರಾಟ, ನೈರುತ್ಯ ರೈಲ್ವೆ ವಲಯಕ್ಕಾಗಿ ನಡೆದ ಹೋರಾಟದಿಂದಾಗಿ ಈ ಕ್ಷೇತ್ರ ರಾಷ್ಟ್ರ ಮಟ್ಟದ ಗಮನ ಸೆಳೆದಿದೆ.
ಹಿನ್ನೋಟ:
1952ರಿಂದ ಈ ವರೆಗೆ ನಡೆದ 15 ಚುನಾವಣೆಯಲ್ಲಿ 10 ಬಾರಿ ಕಾಂಗ್ರೆಸ್, 4 ಬಾರಿ ಬಿಜೆಪಿ, 1 ಬಾರಿ ಭಾರತೀಯ ಜನಸಂಘ ಗೆಲುವು ಕಂಡಿವೆ.
2013ರಲ್ಲಿ ಬಿಜೆಪಿ- ಕೆಜೆಪಿ ಜಗಳದಲ್ಲಿ ಕಾಂಗ್ರೆಸ್ಸಿನ ಪ್ರಸಾದ ಅಬ್ಬಯ್ಯ ಸಲೀಸಾಗಿ ಆರಿಸಿ ಬಂದರು. ಶಾಸಕರಾಗಿ ಆಯ್ಕೆಯಾದ ಅಬ್ಬಯ್ಯ, ಕ್ಷೇತ್ರದಲ್ಲಿ ಹಿಡಿತ ಸಾಧಿಸಿದ್ದು, ಇದೀಗ ಹ್ಯಾಟ್ರಿಕ್ ಗೆಲುವಿನತ್ತ ದಾಪುಗಾಲು ಹಾಕುತ್ತಿದ್ದಾರೆ.
ಮೀಸಲು ಕ್ಷೇತ್ರವಾಗಿರುವ ಇಲ್ಲಿ ಮುಸ್ಲಿಂ ಮತದಾರರೇ ನಿರ್ಣಾಯಕ. ಒಟ್ಟು 2.04 ಲಕ್ಷಕ್ಕೂ ಅಧಿಕ ಮತದಾರರಲ್ಲಿ 90 ಸಾವಿರದಷ್ಟುಮುಸ್ಲಿಂರಿದ್ದಾರೆ. ಇನ್ನು ಎಸ್ಸಿ-ಎಸ್ಟಿ30-40 ಸಾವಿರ, ಲಿಂಗಾಯತ 40 ಸಾವಿರ ಮತದಾರರಿದ್ದರೆ, ಮರಾಠಾ, ಬ್ರಾಹ್ಮಣ, ಎಸ್‌ಎಸ್‌ಕೆ ಸೇರಿದಂತೆ ಇತರೆ ಜನಾಂಗದವರು ಇಲ್ಲಿದ್ದಾರೆ.
ಈಗ ಯಾರಾರಯರು:
ಸದ್ಯ ಕಾಂಗ್ರೆಸ್ಸಿನಿಂದ ಹಾಲಿ ಶಾಸಕ ಪ್ರಸಾದ ಅಬ್ಬಯ್ಯ ಅವರೇ ಕಣಕ್ಕಿಳಿಯಲಿದ್ದಾರೆ. ಬಿಜೆಪಿಯಿಂದ ಡಾ.ಕ್ರಾಂತಿಕಿರಣ, ಚಂದ್ರಶೇಖರ ಗೋಕಾಕ, ಶಂಕ್ರಣ್ಣ ಬಿಜವಾಡ, ಬಸವರಾಜ ಅಮ್ಮಿನಬಾವಿ ರೇಸ್‌ನಲ್ಲಿದ್ದಾರೆ. ಇವರಲ್ಲಿ ಕ್ರಾಂತಿಕಿರಣ ಹೆಸರು ಮುಂಚೂಣಿಯಲ್ಲಿದೆ. ಇನ್ನು ಈ ಮೊದಲು ಬಿಜೆಪಿಯಿಂದ ಆಯ್ಕೆಯಾಗಿದ್ದ ವೀರಭದ್ರಪ್ಪ ಹಾಲಹರವಿ ಬಿಜೆಪಿಯಲ್ಲಿದ್ದರೆ ಟಿಕೆಟ್ ಸಿಗುವುದಿಲ್ಲ ಎಂದುಕೊಂಡು ಜೆಡಿಎಸ್ ಸೇರ್ಪಡೆಯಾಗಿದ್ದಾರೆ. ಹೀಗಾಗಿ ಜೆಡಿಎಸ್‌ನಿಂದ ಹಾಲಹರವಿ ಸ್ಪರ್ಧಿಸುವುದು ಬಹುತೇಕ ಖಚಿತ.
ಒಂದು ಕಾಲದಲ್ಲಿ ಅಬ್ಬಯ್ಯ ಆಪ್ತರಾಗಿದ್ದ ವಿಜಯ ಗುಂಟ್ರಾಳ ಎಸ್‌ಡಿಪಿಐ ಅಭ್ಯರ್ಥಿಯಾಗಿದ್ದರೆ, ದುರ್ಗಪ್ಪ ಬಿಜವಾಡ ಎಐಎಂಐಎಂ ಪಕ್ಷದಿಂದ ಕಣಕ್ಕಿಳಿಯಲಿದ್ದಾರೆ. ಈ ಎರಡೂ ಪಕ್ಷಗಳು ಇದೇ ಮೊದಲ ಬಾರಿಗೆ ಪ್ರಯತ್ನ ನಡೆಸಿವೆ. ಆಮ್ ಆದ್ಮಿ ಪಕ್ಷದಿಂದ ಬಸವರಾಜ ತೇರದಾಳ ಕಣಕ್ಕಿಳಿಯಲಿದ್ದಾರೆ.
ಮುಸ್ಲಿಂ ಸಮುದಾಯದವರೇ ಹೆಚ್ಚಿರುವ ಕಾರಣದಿಂದಾಗಿ ಎಸ್‌ಡಿಪಿಐ, ಎಐಎಂಐಎಂ ಪಕ್ಷಗಳು ಅಭ್ಯರ್ಥಿಗಳನ್ನು ಕಣಕ್ಕಿಳಿಸಿವೆ. ಜತೆಗೆ ಬಿಜೆಪಿಯಲ್ಲಿದ್ದ ಹಾಲಹರವಿ ಕೂಡ ಪೈಪೋಟಿ ನೀಡುತ್ತಿರುವುದರಿಂದ ಪ್ರಸಾದ ಅಬ್ಬಯ್ಯಗೆ ಕೊಂಚ ಕಷ್ಟವಾಗಬಹುದು. ಜತೆಗೆ ಬಿಜೆಪಿ ಕೂಡ ಈ ಕ್ಷೇತ್ರವನ್ನು ಯಾವುದೇ ಕಾರಣಕ್ಕೂ ಕೈ ತಪ್ಪದಂತೆ ನೋಡಿಕೊಳ್ಳುವ ಹುಮ್ಮಸ್ಸಿನಲ್ಲಿ ಸಂಘಟನೆ ಮಾಡಿರುವುದರಿಂದ ಇಲ್ಲಿನ ಕದನ ಕುತೂಹಲ ಕೆರಳಿಸಿದೆ.
ಮಾಜಿ ಮೇಯರ್, ಕಾರ್ಪೊರೇಟರ್ ಚುನಾವಣಾ ಕಣಕ್ಕೆ: ಬಿಬಿಎಂಪಿಯಿಂದ ವಿಧಾನಸೌಧಕ್ಕೆ ಸಿಗುತ್ತಾ ಪ್ರಮೋಷನ್?!
ವರ್ಷ ಗೆದ್ದ ಅಭ್ಯರ್ಥಿ ಪಕ್ಷ ಪಡೆದ ಮತ
- 1952- ದುಂದೂರು ವಕೀಲರು ಕಾಂಗ್ರೆಸ್ -
- 1957- ಎಫ್.ಎಚ್.ಮೊಹಸೀನ ಕಾಂಗ್ರೆಸ್ 17609
- 1962- ಆರ್.ಎ.ಕೊಪ್ಪಳ ಕಾಂಗ್ರೆಸ್ 21169
- 1967 ಸದಾಶಿವ ಎಸ್.ಶೆಟ್ಟರ್ ಭಾರತೀಯ ಜನಸಂಘ 14898
- 1970 ಆರ್.ಜಿ.ವಾಲಿ (ಉಪಚುನಾವಣೆ) ಕಾಂಗ್ರೆಸ್ 14942
- 1972 ಐ.ಜಿ.ಸನದಿ ಕಾಂಗ್ರೆಸ್ 24741
- 1978 ಎಂ.ಜಿ.ಜರತಾರಘರ ಜೆಎನ್‌ಪಿ 27694
- 1983 ಎಂ.ಜಿ.ಜರತಾರಘರ ಬಿಜೆಪಿ 22938
- 1985 ಎ.ಎಂ.ಹಿಂಡಸಗೇರಿ ಕಾಂಗ್ರೆಸ್ 35856
- 1989 ಎ.ಎಂ.ಹಿಂಡಸಗೇರಿ ಕಾಂಗ್ರೆಸ್ 37832
- 1994 ಅಶೋಕ ಕಾಟವೆ ಬಿಜೆಪಿ 42244
- 1999 ಜಬ್ಬಾರಖಾನ ಹೊನ್ನಳ್ಳಿ ಕಾಂಗ್ರೆಸ್ 34019
- 2004 ಜಬ್ಬಾರಖಾನ ಹೊನ್ನಳ್ಳಿ ಕಾಂಗ್ರೆಸ್ 41971
ಹುಬ್ಬಳ್ಳಿ-ಧಾರವಾಡ ಪೂರ್ವ ಕ್ಷೇತ್ರ
- 2008 ವೀರಭದ್ರಪ್ಪ ಹಾಲಹರವಿ ಬಿಜೆಪಿ 41029
- 2013 ಪ್ರಸಾದ ಅಬ್ಬಯ್ಯ ಕಾಂಗ್ರೆಸ್ 42353
- 2018 ಪ್ರಸಾದ ಅಬ್ಬಯ್ಯ ಕಾಂಗ್ರೆಸ್ 77080