Asianet Suvarna News Asianet Suvarna News

Karnataka election results: ಕೆಲಸಗಾರರಿಗೆ ಇದು ಕಾಲವಲ್ಲ: ಸೋಮಣ್ಣ ಬೇಸರ

ಕಡೆ ಕ್ಷಣದಲ್ಲಿ ಪಕ್ಷದ ಹೈಕಮಾಂಡ್‌ ಸೂಚನೆಯನ್ನು ಸವಾಲಾಗಿ ಸ್ವೀಕರಿಸಿ ಎರಡೂ ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದೆ. ಈಗ ಎರಡೂ ಕಡೆ ಸೋತಿದ್ದೇನೆ. ಸೋಲಿನ ಬಗ್ಗೆ ಈಗ ವಿಶ್ಲೇಷಣೆ ಮಾಡುವುದರಲ್ಲಿ ಅರ್ಥವಿಲ್ಲ. ಒಬ್ಬ ಕೆಲಸಗಾರನನ್ನು ಯಾರೂ ತಡೆದುಕೊಳ್ಳುವುದಿಲ್ಲ ಎಂಬುದಕ್ಕೆ ಈ ಚುನಾವಣೆ ಉದಾಹರಣೆ’ ಎಂದು ಮಾಜಿ ಸಚಿವ ವಿ.ಸೋಮಣ್ಣ ಮಾರ್ಮಿಕವಾಗಿ ಹೇಳಿದ್ದಾರೆ.

Karnataka assembly election A bad defeat in assembly  elections V. Somanna is sad rav
Author
First Published May 15, 2023, 3:26 AM IST | Last Updated May 15, 2023, 3:41 AM IST

ಬೆಂಗಳೂರು (ಮೇ.15) : ಕಡೆ ಕ್ಷಣದಲ್ಲಿ ಪಕ್ಷದ ಹೈಕಮಾಂಡ್‌ ಸೂಚನೆಯನ್ನು ಸವಾಲಾಗಿ ಸ್ವೀಕರಿಸಿ ಎರಡೂ ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದೆ. ಈಗ ಎರಡೂ ಕಡೆ ಸೋತಿದ್ದೇನೆ. ಸೋಲಿನ ಬಗ್ಗೆ ಈಗ ವಿಶ್ಲೇಷಣೆ ಮಾಡುವುದರಲ್ಲಿ ಅರ್ಥವಿಲ್ಲ. ಒಬ್ಬ ಕೆಲಸಗಾರನನ್ನು ಯಾರೂ ತಡೆದುಕೊಳ್ಳುವುದಿಲ್ಲ ಎಂಬುದಕ್ಕೆ ಈ ಚುನಾವಣೆ ಉದಾಹರಣೆ’ ಎಂದು ಮಾಜಿ ಸಚಿವ ವಿ.ಸೋಮಣ್ಣ ಮಾರ್ಮಿಕವಾಗಿ ಹೇಳಿದ್ದಾರೆ.

‘ಚಿನ್ನದಂಥ ಗೋವಿಂದರಾಜನಗರ ಕ್ಷೇತ್ರ ಬಿಟ್ಟು ಹೋಗಿದ್ದೆ. ಜನರು ಈಗ ಒಬ್ಬ ಕೆಲಸಗಾರನನ್ನು ನಿರುದ್ಯೋಗಿಯನ್ನಾಗಿ ಮಾಡಿದ್ದಾರೆ’ ಎಂದೂ ಅವರು ನೋವು ಹೊರಹಾಕಿದ್ದಾರೆ.

Karnataka Election Result 2023: ನಾನಾಗಲಿ ಯಡಿಯೂರಪ್ಪರಾಗಲಿ ಪಕ್ಷಕ್ಕೆ ಅನಿವಾರ್ಯ ಅಲ್ಲ: ವಿ.ಸೋಮಣ್ಣ‌

ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನನ್ನ ಸೋಲಿಗೆ ಕಾರಣ ನಿಧಾನಕ್ಕೆ ಹೊರಗೆ ಬರುತ್ತದೆ. ಪ್ರತಿಯೊಂದಕ್ಕೂ ಕಾಲವೇ ಉತ್ತರ ನೀಡಲಿದೆ. ಇದನ್ನು ನಾನು ನಿರೀಕ್ಷೆ ಮಾಡಿರಲಿಲ್ಲ. ನನ್ನ ಕ್ಷೇತ್ರ ಚಿನ್ನದ ಹಾಗೆ ಇತ್ತು. ಈಗ ಒಬ್ಬೊಬ್ಬರು ಒಂದೊಂದು ಮಾತನಾಡುತ್ತಾರೆ. ನಮ್ಮದೇ ತಪ್ಪು ಅಲ್ವಾ? ಪಕ್ಷದ ಟಾಸ್‌್ಕ ತಲೆಯ ಮೇಲೆ ಹೊತ್ತು ನನ್ನತನ ಮರೆತು ಕೆಲಸ ಮಾಡಿದ್ದೆ. ಜನ ತೀರ್ಮಾನ ಮಾಡಿದ್ದಾರೆ. ಒಂದೊಂದು ಸಾರಿ ಹೀಗೆ ಆಗಲಿದೆ. ಕ್ಷೇತ್ರಕ್ಕಿಂತ ಪಕ್ಷ ದೊಡ್ಡದು. ಪಕ್ಷದ ಮಾತು ಕೇಳಿದೆ’ ಎಂದರು.

‘ಅಮಿತ್‌ ಶಾ ಮತ್ತು ಮೋದಿ ಪ್ರಚಾರ ಮಾಡಿದರೂ ಪಕ್ಷಕ್ಕೆ ಈ ಮಟ್ಟಕ್ಕೆ ಸೋಲಾಯಿತಲ್ಲಾ?’ ಎಂಬ ಪ್ರಶ್ನೆಗೆ, ‘ಪ್ರಧಾನಿ ಮೋದಿ ಈ ದೇಶದ ಪ್ರಶ್ನಾತೀತ ನಾಯಕ. ಕಳೆದ 9 ವರ್ಷಗಳಿಂದ ದೇಶವನ್ನು ಸರ್ವಾಂಗೀಣ ಅಭಿವೃದ್ಧಿ ಮಾಡಿದ್ದಾರೆ. ಲೋಕಸಭಾ ಚುನಾವಣೆ, ವಿಧಾನಸಭಾ ಚುನಾವಣೆ, ಜಿಲ್ಲಾ ಪಂಚಾಯಿತಿ ಚುನಾವಣೆ ಭಿನ್ನವಾಗಿರುತ್ತದೆ. ಕಾಂಗ್ರೆಸ್‌ನ ಚುನಾವಣಾ ಪ್ರಣಾಳಿಕೆಯ ಗ್ಯಾರಂಟಿಗಳು ಈ ಚುನಾವಣೆಯಲ್ಲಿ ಕೆಲಸ ಮಾಡಿವೆ. ಇವನ್ನು ಕಾರ್ಯ ರೂಪಕ್ಕೆ ತರಲು ಸಾಧ್ಯವೇ ಎಂದು ಜನ ಯೋಚಿಸಿಲ್ಲ. ಏಕೆಂದರೆ, ಜನರು ಮುಗ್ಧರು. ಈ ವಿಚಾರದಲ್ಲಿ ನಾನು ಇನ್ನೂ ಗೊಂದಲದಲ್ಲಿ ಇದ್ದೇನೆ. ಆದರೆ, ಈ ಫಲಿತಾಂಶ ಪಕ್ಷಕ್ಕೆ ಎಚ್ಚರಿಕೆ ಗಂಟೆಯಾಗಿದೆ. ತಿದ್ದಿಕೊಳ್ಳಲು ಅವಕಾಶವಿದೆ’ ಎಂದರು.

ಪಕ್ಷ ಹೇಗೆ ನಡೆಸಿಕೊಳ್ಳುತ್ತದೆ ನೋಡೋಣ:

‘ಪಕ್ಷದ ಸಂದೇಶವನ್ನು ತಲೆಯ ಮೇಲೆ ಹೊತ್ತಿ ಮರೆಸುವವರು ಹಾಗೂ ಮತ್ತೊಬ್ಬರನ್ನು ಹೇಗೆ ನಡೆಸಿಕೊಳ್ಳಲಿದ್ದಾರೆ ಎಂಬುದರ ಬಗ್ಗೆ ಸಮಯ ಬಂದಾಗ ಮಾತನಾಡುತ್ತೇನೆ. ಈಗ ಸೋತಿದ್ದೇನೆ. ಸೋತಿದ್ದೇನೆ ಅಷ್ಟೇ. ಚಾಮರಾಜನಗರ ಮತ್ತು ವರುಣಾ ಎರಡೂ ಕ್ಷೇತ್ರಗಳಲ್ಲಿ ಸೋಲು ಒಪ್ಪಿಕೊಂಡಿದ್ದೇನೆ. ಮುಂದೆ ಪಕ್ಷ ಹೇಗೆ ನಡೆಸಿಕೊಳ್ಳಲಿದೆಯೋ ನೋಡೋಣ. ಮುಂದೆ ಉಳಿದ ವಿಚಾರ ಮಾತಾಡೋಣ’ ಎಂದು ಸೋಮಣ್ಣ ಹೇಳಿದರು.

‘ಸ್ವಪಕ್ಷೀಯರೇ ನಿಮ್ಮ ಸೋಲಿಗೆ ಕಾರಣವೇ?’ ಎಂಬ ಪ್ರಶ್ನೆಗೆ, ‘ಈ ಬಗ್ಗೆ ಮುಂದೆ ಮಾತಾಡೋಣ. ನನಗೀಗ 72 ವರ್ಷ ವಯಸ್ಸು. ಸಿದ್ದರಾಮಯ್ಯ ಅವರ ರೀತಿ ನನಗೆ ಇದು ಕೊನೆಯ ಚುನಾವಣೆ ಎಂದು ಪದೇ ಪದೇ ಹೇಳಲ್ಲ. ನಾವು ಯಾರು? ರಾಜಕೀಯಕ್ಕೆ ನಮ್ಮಂಥವರು ಎಷ್ಟುಜನ ಬಂದು ಹೋಗಿದ್ದಾರೆ. ನಾನು ರಾಜಕೀಯದಲ್ಲಿ ಎಲ್ಲವನ್ನೂ ಅನುಭವಿಸಿದ್ದೇನೆ. ಈಗ ಸೋತಿದ್ದೇನೆ. ಆ ಸೋಲನ್ನು ಸ್ವೀಕರಿಸುತ್ತೇನೆ. ಜನ ಕೆಲಸಗಾರನನ್ನು ನಿರುದ್ಯೋಗಿ ಮಾಡಿದ್ದಾರೆ’ ಎಂದು ಪ್ರತಿಕ್ರಿಯಿಸಿದರು.

 

Varuna V Somanna election results 2023 LIVE: ಎರಡೂ ಕ್ಷೇತ್ರದಲ್ಲಿ ವಿ ಸೋಮಣ್ಣಗೆ ಸೋಲು, ರಾಜಕೀಯ ಭವಿಷ್ಯವೇ ಅತಂತ್ರ!

ಚುನಾವಣೆಯಲ್ಲಿ ಸೋಲು-ಗೆಲುವು ಸಾಮಾನ್ಯ. ನಾನು ಏಕೆ ಸೋತೆ ಎಂಬುದರ ಬಗ್ಗೆ ಪುಸ್ತಕವನ್ನೇ ಬರೆಯಬಹುದು. ದಿನದ 24 ತಾಸು ದುಡಿಯುವ ನನ್ನಂತವನೇ ಸೋತಿದ್ದೇನೆ. ಅಭಿವೃದ್ಧಿಯ ದುಡಿಮೆಯೇ ಗೆಲುವಿಗೆ ಮಂತ್ರವಲ್ಲ ಎಂಬುದನ್ನು ಈ ಚುನಾವಣೆ ಹೇಳಿದೆ.

- ವಿ.ಸೋಮಣ್ಣ, ಮಾಜಿ ಸಚಿವ

ಸೋಮಣ್ಣಗೆ ಕರೆ ಮಾಡಿ ಧೈರ್ಯ ಹೇಳಿದ ಶಾ, ಸಂತೋಷ್‌

ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಎರಡೂ ಕ್ಷೇತ್ರಗಳಲ್ಲಿ ಸ್ಪರ್ಧಿಸಿ ಸೋಲುಂಡಿರುವ ವಿ.ಸೋಮಣ್ಣ ಅವರಿಗೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಮತ್ತು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್‌.ಸಂತೋಷ್‌ ದೂರವಾಣಿ ಕರೆ ಮಾಡಿ ಧೈರ್ಯ ತುಂಬಿದ್ದಾರೆ.

ಶನಿವಾರ ಚುನಾವಣಾ ಫಲಿತಾಂಶ ಹೊರಬಿದ್ದ ಬೆನ್ನಲ್ಲೇ ಅಮಿತ್‌ ಶಾ ಮತ್ತು ಸಂತೋಷ್‌ ಅವರ ಸೋಮಣ್ಣಗೆ ದೂರವಾಣಿ ಕರೆ ಮಾಡಿ ‘ಈ ರೀತಿಯ ಫಲಿತಾಂಶ ಬರಲಿದೆ ಎಂದು ನಿರೀಕ್ಷಿಸಿರಲಿಲ್ಲ. ನಮ್ಮ ಎಣಿಕೆ ತಪ್ಪಾಗಿದೆ. ನಿಮ್ಮ ಬೆಂಬಲಕ್ಕೆ ಪಕ್ಷ ಹಾಗೂ ನಾವು ಸದಾ ಇರುತ್ತೇವೆ’ ಎಂದು ಧೈರ್ಯದ ಮಾತುಗಳನ್ನಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಹೈಕಮಾಂಡ್‌ ಸೂಚನೆ ಮೇರೆಗೆ ಸೋಮಣ್ಣ ಚುನಾವಣೆಯ ಕಡೆ ಕ್ಷಣದಲ್ಲಿ ವರುಣಾ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಮತ್ತು ಚಾಮರಾಜನಗರ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಮಾಜಿ ಸಚಿವ ಪುಟ್ಟರಂಗಶೆಟ್ಟಿವಿರುದ್ಧ ಸ್ಪರ್ಧಿಸಿದ್ದರು. ಆದರೆ, ಎರಡೂ ಕ್ಷೇತ್ರಗಳಲ್ಲಿ ಪರಾಭವಗೊಂಡಿದ್ದಾರೆ.

Latest Videos
Follow Us:
Download App:
  • android
  • ios