ಬಿಜೆಪಿ ಬೂತ್ ವಿಜಯಕ್ಕೆ ಇಂದು ಚಾಲನೆ: 10 ದಿನಗಳ ಕಾಲ ರಾಜ್ಯವ್ಯಾಪಿ ಅಭಿಯಾನ
ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ‘ಮಿಷನ್ 150’ರ ಗುರಿ ತಲುಪುವ ಉದ್ದೇಶದಿಂದ ಬಿಜೆಪಿಯು ಸೋಮವಾರದಿಂದ ಹತ್ತು ದಿನಗಳ ಕಾಲ ‘ಬೂತ್ ವಿಜಯ ಅಭಿಯಾನ’ ಹಮ್ಮಿಕೊಂಡಿದೆ.
ಬೆಂಗಳೂರು (ಜ.02): ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ‘ಮಿಷನ್ 150’ರ ಗುರಿ ತಲುಪುವ ಉದ್ದೇಶದಿಂದ ಬಿಜೆಪಿಯು ಸೋಮವಾರದಿಂದ ಹತ್ತು ದಿನಗಳ ಕಾಲ ‘ಬೂತ್ ವಿಜಯ ಅಭಿಯಾನ’ ಹಮ್ಮಿಕೊಂಡಿದೆ. ಪಕ್ಷದ ಎಲ್ಲ 39 ಸಂಘಟನಾತ್ಮಕ ಜಿಲ್ಲೆ, 312 ಮಂಡಲದಲ್ಲಿ 1,445 ಮಹಾಶಕ್ತಿ ಕೇಂದ್ರ, 11,642 ಶಕ್ತಿ ಕೇಂದ್ರಗಳು ಹಾಗೂ 58,186 ಬೂತ್‌ಗಳಲ್ಲಿ ವಿದ್ಯುಕ್ತವಾಗಿ ಅಭಿಯಾನ ನಡೆಯಲಿದೆ. ಮಂಗಳೂರಿನಿಂದ ಪಕ್ಷದ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲ್ ಚಾಲನೆ ನೀಡುತ್ತಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬೆಂಗಳೂರಿನ ಶಿವಾಜಿನಗರದಲ್ಲಿ ಅಭಿಯಾನದ ತಂಡಕ್ಕೆ ಚಾಲನೆ ನೀಡುತ್ತಾರೆ.
ಕೇಂದ್ರ ಸಚಿವರು, ರಾಜ್ಯ ಸಚಿವರು, ಪಕ್ಷದ ಶಾಸಕರು, ಜನಪ್ರತಿನಿಧಿಗಳು ಮತ್ತು ಪದಾಧಿಕಾರಿಗಳು ಈ ವಿಶೇಷ ಅಭಿಯಾನದಲ್ಲಿ ಭಾಗವಹಿಸಲಿದ್ದಾರೆ. ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ ಗದಗ ಜಿಲ್ಲೆಯಲ್ಲಿ, ಶೋಭಾ ಕರಂದ್ಲಾಜೆ ಉಡುಪಿ ಜಿಲ್ಲೆಯಲ್ಲಿ ಚಾಲನೆ ನೀಡಲಿದ್ದಾರೆ. ಭಗವಂತ ಖೂಬಾ- ಬೀದರ್, ಎ.ಎನ್.ನಾರಾಯಣಸ್ವಾಮಿ ಚಿತ್ರದುರ್ಗದಲ್ಲಿ ಉದ್ಘಾಟಿಸಲಿದ್ದಾರೆ. ಮಾಜಿ ಮುಖ್ಯಮಂತ್ರಿಗಳಾದ ಜಗದೀಶ್ ಶೆಟ್ಟರ್ ಹಾವೇರಿಯಲ್ಲಿ, ಡಿ.ವಿ.ಸದಾನಂದಗೌಡ-ಬೆಂಗಳೂರು ಉತ್ತರ, ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಅವರು ಶಿವಮೊಗ್ಗದಲ್ಲಿ, ಮಾಜಿ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ-ಚಿಕ್ಕೋಡಿ, ಕಂದಾಯ ಸಚಿವ ಆರ್.ಅಶೋಕ್ ಬೆಂಗಳೂರು ದಕ್ಷಿಣದಲ್ಲಿ ಅಭಿಯಾನಕ್ಕೆ ಚಾಲನೆ ನೀಡಲಿದ್ದಾರೆ.
ಕೋಲಾರದಲ್ಲಿ ರಾಹುಲ್ ಸ್ಪರ್ಧಿಸಿದರೂ ಗೆಲ್ಲುವುದು ವರ್ತೂರು: ಸಂಸದ ಮುನಿಸ್ವಾಮಿ
ಉಸ್ತುವಾರಿ ಸಚಿವರು ತಮ್ಮ ಜಿಲ್ಲೆಗಳಲ್ಲಿ ಚಾಲನೆ ನೀಡಲಿದ್ದು, ಎಲ್ಲ ಶಾಸಕರು ವಿಧಾನಸಭಾ ಕ್ಷೇತ್ರದಲ್ಲಿ ಉದ್ಘಾಟನೆ ಮಾಡುತ್ತಾರೆ. ನಮ್ಮ ಶಾಸಕರಿಲ್ಲದ ಕ್ಷೇತ್ರದಲ್ಲಿ ಲೋಕಸಭಾ ಸದಸ್ಯರು ಮತ್ತು ವಿಧಾನಸಭಾ ಸದಸ್ಯರನ್ನು ನಿಯೋಜಿಸಲಾಗಿದೆ ಎಂದು ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ್ ಟೆಂಗಿನಕಾಯಿ ತಿಳಿಸಿದ್ದಾರೆ. 20 ಲಕ್ಷ ಕಾರ್ಯಕರ್ತರು ಅಭಿಯಾನದಲ್ಲಿ ತೊಡಗಿಕೊಳ್ಳುತ್ತಾರೆ. ಮಿಷನ್ 150 ಸಾಧಿಸುವ ದೃಷ್ಟಿಯಿಂದ ಇದೊಂದು ಮಹತ್ವದ ಹೆಜ್ಜೆಯಾಗಿದೆ. ಬೂತ್ ಸಮಿತಿ ಪರಿಶೀಲನೆ, ಪೇಜ್ ಪ್ರಮುಖರ ನಿಯುಕ್ತಿ, ಬೂತ್ ವಾಟ್ಸ್ ಅಪ್ ಗ್ರೂಪ್ ರಚನೆ, ಮನ್ ಕೀ ಬಾತ್ ವೀಕ್ಷಣೆ ಮಾಡಲು ಸುಮಾರು 60 ಸಾವಿರ ಗುಂಪು ರಚನೆ, 50 ಲಕ್ಷ ಮನೆಗಳ ಮೇಲೆ ಬಿಜೆಪಿ ಧ್ವಜ ಹಾರಿಸುವ ಕಾರ್ಯ ನಡೆಯಲಿದೆ ಎಂದು ವಿವರಿಸಿದ್ದಾರೆ.