ನಾಳೆ ಸಿದ್ದರಾಮಯ್ಯ ಮತ್ತೆ ಕೋಲಾರಕ್ಕೆ: ಸ್ಪರ್ಧೆ ಬಗ್ಗೆ ಘೋಷಣೆ?
ಕೋಲಾರ ಕಣ ಪರೀಕ್ಷೆ ಮಾಡಿಯೂ ತಮ್ಮ ನಿಲುವನ್ನು ಇನ್ನೂ ಪ್ರಕಟಿಸದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಸೋಮವಾರ ಮತ್ತೆ ಕೋಲಾರಕ್ಕೆ ಭೇಟಿ ನೀಡಲು ಮುಂದಾಗಿದ್ದು, ಸಾಕಷ್ಟು ಕುತೂಹಲ ಕೆರಳಿಸಿದೆ.
ಬೆಂಗಳೂರು (ಜ.08): ಕೋಲಾರ ಕಣ ಪರೀಕ್ಷೆ ಮಾಡಿಯೂ ತಮ್ಮ ನಿಲುವನ್ನು ಇನ್ನೂ ಪ್ರಕಟಿಸದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಸೋಮವಾರ ಮತ್ತೆ ಕೋಲಾರಕ್ಕೆ ಭೇಟಿ ನೀಡಲು ಮುಂದಾಗಿದ್ದು, ಸಾಕಷ್ಟು ಕುತೂಹಲ ಕೆರಳಿಸಿದೆ. ಮುಂದಿನ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಮಿಲಿಯನ್ ಡಾಲರ್ ಪ್ರಶ್ನೆ ಎಂದೆನಿಸಿರುವ ಸಿದ್ದರಾಮಯ್ಯ ಅವರು ಯಾವ ಕ್ಷೇತ್ರದಿಂದ ಸ್ಪರ್ಧಿಸುವರು ಎಂಬುದಕ್ಕೆ ಈ ಬಾರಿಯ ಕೋಲಾರದ ಭೇಟಿಯ ವೇಳೆ ಉತ್ತರ ದೊರಕುವುದೇ ಎಂಬ ತೀವ್ರ ಕುತೂಹಲವನ್ನು ಈ ಭೇಟಿ ಹುಟ್ಟುಹಾಕಿದೆ.
ಕೋಲಾರದ ಕಾಂಗ್ರೆಸ್ ನಾಯಕರ ತೀವ್ರ ಒತ್ತಡದ ಹಿನ್ನೆಲೆಯಲ್ಲಿ ಎರಡನೇ ಬಾರಿಗೆ ಕೋಲಾರಕ್ಕೆ ಭೇಟಿ ನೀಡಲಿರುವ ಅವರು ನಗರದ ಮಿನಿ ಕ್ರೀಡಾಂಗಣದಲ್ಲಿ ನಡೆಯಲಿರುವ ಕಾರ್ಯಕರ್ತರ ಸಮಾವೇಶದಲ್ಲಿ ತಮ್ಮ ನಿಲುವು ಪ್ರಕಟಿಸುವರು ಎಂಬ ನಿರೀಕ್ಷೆಯಿದೆ. ಸೋಮವಾರ ಬೆಳಗ್ಗೆ ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ನಡೆಯುವ ದಂತೂರು ವಿಶ್ವನಾಥ್ ಕಾಂಗ್ರೆಸ್ ಸೇರ್ಪಡೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿರುವ ಸಿದ್ದರಾಮಯ್ಯ ಅವರು ಬಳಿಕ ನೇರ ಕೋಲಾರಕ್ಕೆ ರಸ್ತೆ ಮಾರ್ಗದಲ್ಲಿ ಪ್ರಯಾಣ ಬೆಳೆಸಲಿದ್ದಾರೆ. ಅಲ್ಲಿ ಮಧ್ಯಾಹ್ನ 12.30ಕ್ಕೆ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಭೇಟಿ ನೀಡಲಿದ್ದಾರೆ. ಬಳಿಕ ಜಿಲ್ಲೆಯ ನಿಮಿ ಕ್ರೀಡಾಂಗಣದಲ್ಲಿ ಪಕ್ಷದ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಆರ್‌ಎಸ್‌ಎಸ್ ಬಗ್ಗೆ ಸಿದ್ದರಾಮಯ್ಯ ಕಪಿಚೇಷ್ಟೆ: ಕೆ.ಎಸ್.ಈಶ್ವರಪ್ಪ ಟೀಕೆ
‘ನಾ ನಾಯಕಿ’ ಸಮಾವೇಶಕ್ಕೆ ಜ.16ಕ್ಕೆ ಮುಂದೂಡಿಕೆ: ಮುಂಬರುವ ವಿಧಾನಸಭಾ ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸಲು ಸಾಲು ಯಾತ್ರೆ, ಸಮಾವೇಶ ನಡೆಸುತ್ತಿರುವ ಕಾಂಗ್ರೆಸ್ ಬೆಂಗಳೂರಿನಲ್ಲಿ ನಡೆಸಲುದ್ದೇಶಿಸಿರುವ ‘ನಾ ನಾಯಕಿ’ ಸಮಾವೇಶಕ್ಕೆ ಜ.16ಕ್ಕೆ ಮುಂದೂಡಿಕೆಯಾಗಿದೆ. ನಗರದ ಅರಮನೆ ಮೈದಾನದಲ್ಲಿ ಜ.6ರಂದು ‘ನಾ ನಾಯಕಿ’ ಹೆಸರಲ್ಲಿ ಮಹಿಳಾ ಕಾಂಗ್ರೆಸ್‌ನಿಂದ ಬೃಹತ್ ಸಮಾವೇಶಕ್ಕೆ ನಿರ್ಧರಿಸಲಾಗಿತ್ತಾದರೂ ಪ್ರಿಯಾಂಕಾ ಗಾಂಧಿ ಅವರು ಆ ದಿನದಂದು ರಾಜ್ಯಕ್ಕೆ ಬರಲು ಸಾಧ್ಯವಾಗದ ಕಾರಣ ಸಮಾವೇಶವನ್ನು ಮುಂದೂಡಲಾಗಿದೆ. ಇದೀಗ ಜ.16ಕ್ಕೆ ಈ ಸಮಾವೇಶ ನಡೆಸಲು ಹೊಸ ದಿನಾಂಕ ನಿಗದಿಪಡಿಸಿದೆ. ಸಮಾವೇಶಕ್ಕೆ ಪ್ರಿಯಾಂಕಾ ಗಾಂಧಿ ಅವರನ್ನು ಆಹ್ವಾನಿಸಲಾಗಿದೆ. ಸಮಾವೇಶದ ಮೂಲಕ ಮಹಿಳಾ ಕಾಂಗ್ರೆಸ್‌ನ ಶಕ್ತಿ ಪ್ರದರ್ಶನದ ಜತೆಗೆ ಮುಂದಿನ ಚುನಾವಣೆಯಲ್ಲಿ ಮಹಿಳೆಯರಿಗೆ ಹೆಚ್ಚಿನ ಟಿಕೆಟ್‌ಗೆ ಬೇಡಿಕೆ ಇಡಲು ರಾಜ್ಯ ಮಹಿಳಾ ಕಾಂಗ್ರೆಸ್ ನಾಯಕಿಯರು ಮುಂದಾಗಿದ್ದಾರೆ.
ಎಚ್‌ಡಿಕೆ ಪರಮಾಪ್ತ ನಾಳೆ ಕಾಂಗ್ರೆಸ್‌ಗೆ: ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಪರಮಾಪ್ತ ಎಂದೇ ಗುರುತಿಸಿಕೊಂಡಿದ್ದ ಕನಕಪುರ ಜೆಡಿಎಸ್ ಮುಖಂಡ ದಂತೂರು ವಿಶ್ವನಾಥ್ ಸೋಮವಾರ ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ. ಕಳೆದ ಎರಡು ಬಾರಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿರುದ್ಧ ಕನಕಪುರ ಕ್ಷೇತ್ರದಿಂದ ಸ್ಪರ್ಧಿಸಿ ಸೋಲನುಭವಿಸಿದ್ದ ವಿಶ್ವನಾಥ್. ಇದೀಗ ಜೆಡಿಎಸ್ ತೊರೆದು ಶಿವಕುಮಾರ್ ಅವರ ಸಮ್ಮುಖದಲ್ಲಿ ಕಾಂಗ್ರೆಸ್ ಪಾಳಯ ಸೇರಲಿದ್ದಾರೆ. ಇದರಿಂದ ಡಿ.ಕೆ.ಶಿವಕುಮಾರ್ ಅವರಿಗೆ ಕ್ಷೇತ್ರದಲ್ಲಿ ಇನ್ನಷ್ಟುಬಲಬಂದಂತಾಗಿದೆ.
ಸೋನಿಯಾ ಮನೆ ಬಳಿ ಕಾದು ನಿಲ್ಲುತ್ತಿದ್ದ ಸಿದ್ದರಾಮಯ್ಯ: ಸಿಎಂ ಬೊಮ್ಮಾಯಿ
ಬಸ್ ಯಾತ್ರೆ ಕುರಿತ ಸಮನ್ವಯ ಸಮಿತಿ ಸಭೆ: ಕಾಂಗ್ರೆಸ್‌ನ ಹಿರಿಯ ನಾಯಕರು ಉತ್ತರ ಮತ್ತು ದಕ್ಷಿಣ ಕರ್ನಾಟಕ ಭಾಗಗಳಲ್ಲಿ ನಡೆಸಲಿರುವ ಪ್ರತ್ಯೇಕ ಪ್ರವಾಸದ ಸಿದ್ಧತೆಗಳ ಕುರಿತು ಶನಿವಾರ ಕೆಪಿಸಿಸಿ ಕಚೇರಿಯಲ್ಲಿ ಸಮನ್ವಯ ಸಮಿತಿಗಳ ಸಭೆ ನಡೆಯಿತು. ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಡೆಯುವ ಉತ್ತರ ಕರ್ನಾಟಕ ಭಾಗದ ಪ್ರವಾಸದ ಸಮನ್ವಯ ಸಮಿತಿ ಅಧ್ಯಕ್ಷ ಬಸವರಾಜ ರಾಯರೆಡ್ಡಿ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ತಮ್ಮ ಭಾಗದ ಯಾತ್ರೆ ಯಶಸ್ವಿಗೊಳಿಸಲು ಪ್ರತಿ ಜಿಲ್ಲೆಗಳಿಗೂ ಭೇಟಿ ನೀಡಿ ಸ್ಥಳೀಯ ಮುಖಂಡರು ಮತ್ತು ಕಾರ್ಯಕರ್ತರೊಂದಿಗೆ ಚರ್ಚೆ ನಡೆಸಲು ನಿರ್ಧರಿಸಲಾಗಿದೆ.