ಶಿವಮೊಗ್ಗ ಗ್ರಾಮಾಂತರದಲ್ಲಿ ಚುನಾವಣಾ ಕಾವು: ರಾರಾಜಿಸುತ್ತಿವೆ ಆಕಾಂಕ್ಷಿಗಳ ಫ್ಲೆಕ್ಸ್‌ಗಳು
ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಕಾವು ಹೆಚ್ಚಾಗುತ್ತಲಿದ್ದು, ಶಿವಮೊಗ್ಗ ಗ್ರಾಮಾಂತರ ಭಾಗದ ಆಕಾಂಕ್ಷಿಗಳ ಬ್ಯಾನರ್, ಫ್ಲೆಕ್ಸ್‌ಗಳು ಭರಾಟೆ ಜೋರಾಗಿಯೇ ನಡೆದಿದೆ.
ಅರಹತೊಳಲು ಕೆ.ರಂಗನಾಥ್
ಹೊಳೆಹೊನ್ನೂರು (ಡಿ.28): ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಕಾವು ಹೆಚ್ಚಾಗುತ್ತಲಿದ್ದು, ಶಿವಮೊಗ್ಗ ಗ್ರಾಮಾಂತರ ಭಾಗದ ಆಕಾಂಕ್ಷಿಗಳ ಬ್ಯಾನರ್, ಫ್ಲೆಕ್ಸ್‌ಗಳು ಭರಾಟೆ ಜೋರಾಗಿಯೇ ನಡೆದಿದೆ. ಪಕ್ಷದ ವರಿಷ್ಠರ ಮತ್ತು ಮತದಾರರ ಗಮನ ಸೆಳೆಯುವ ತಂತ್ರಕ್ಕೆ ಮೊರೆ ಹೋಗಿರುವ ಆಕಾಂಕ್ಷಿಗಳು ಬೆಂಬಲಿಗರಿಂದ ತಮ್ಮ ಪೋಟೋ ಇರುವ ಬ್ಯಾನರ್‌ಗಳನ್ನು ಪ್ರತೀ ಹಳ್ಳಿ ಹಳ್ಳಿಗೂ ಹಾಕಿಸಿಕೊಂಡು, ಅದರಲ್ಲಿ ಹೊಸ ವರ್ಷ, ಸಂಕ್ರಾಂತಿ ಹಬ್ಬದ ಶುಭಾಶಯಗಳನ್ನು ಜನತೆಗೆ ತಿಳಿಸುತ್ತ, ‘ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ನಿಮ್ಮ ಆಶಿರ್ವಾದ ನಮ್ಮ ಮೇಲಿರಲಿ ಎಂಬ ತಲೆಬರಹ’ವನ್ನು ಬರೆಸಿಕೊಂಡಿದ್ದಾರೆ.
ವಿಧಾನಸಭಾ ಚುನಾವಣೆ ನಡೆದು ಐದು ವರ್ಷಗಳವರೆಗೆ ಯಾರಿಗೂ ಮುಖವನ್ನು ತೋರಿಸದ ಕೆಲ ಸ್ವಘೋಷಿತ ರಾಜಕೀಯ ನಾಯಕರು ಚುನಾವಣೆ ಸಮೀಪಿಸುತ್ತದ್ದಂತೆ ಪ್ರತ್ಯಕ್ಷವಾಗುತ್ತಿದ್ದಾರೆ. ಕ್ಷೇತ್ರದ ಜನರ ಬೆಂಬಲ ಪಡೆಯಲು ಗ್ರಾಮಗಳಲ್ಲಿ ನಡೆಯುವ ಕಾರ್ಯಕ್ರಮ, ಶವ ಸಂಸ್ಕಾರಗಳಲ್ಲಿ ಭಾಗಿಯಾಗಿ ಮತ ಸೆಳೆಯಲು ಪ್ರಯತ್ನಿಸುತ್ತಿದ್ದಾರೆ.
ರಾಷ್ಟ್ರಕವಿ ಕುವೆಂಪು ಹುಟ್ಟುಹಬ್ಬ: ಕವಿಶೈಲಕ್ಕೆ ರಾಜ್ಯ ಸರ್ಕಾರದಿಂದ 1 ಕೋಟಿ ಬಿಡುಗಡೆ
ಕಾಂಗ್ರೆಸ್‌ನಲ್ಲಿ ಸುಮಾರು 14 ಜನ ಟಿಕೆಟ್‌ಗೆ ಅರ್ಜಿ ಸಲ್ಲಿಸಿದ್ದು, ಇದರಲ್ಲಿ ಮುಖ್ಯವಾಗಿ ಡಾ.ಶ್ರೀನಿವಾಸ್ ಕರಿಯಣ್ಣ, ಜಿ.ಪಲ್ಲವಿ, ವಿ.ನಾರಾಯಣಸ್ವಾಮಿ, ಬಲದೇವ ಕೃಷ್ಣ, ಮಲ್ಲಪ್ಪ, ಭೀಮಪ್ಪ, ಮಧುಸೂದನ್, ರವಿಕುಮಾರ್ ಪ್ರಬಲ ಆಕಾಂಕ್ಷಿಗಳಾಗಿದ್ದು, ಕಳೆದ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಿ ಪರಾಜಯಗೊಂಡಿರುವ ಶ್ರೀನಿವಾಸ್ ಕರಿಯಣ್ಣ ಈ ಬಾರಿಯೂ ಟಿಕೆಟ್ ನಿರೀಕ್ಷೆಯಲಿದ್ದಾರೆ. ಇತ್ತ ಈಗಾಗಲೇ ಕ್ಷೇತ್ರದ ಸುತ್ತಾಟದಲ್ಲಿ ತೊಡಗಿರುವ ಕಳೆದ ಬಾರಿ ಟಿಕೆಟ್ ಸಿಗದೆ ನೀರಾಸೆಹೊಂದಿದ್ದ ಜಿ.ಪಲ್ಲವಿ ಅವರು ಈ ಬಾರಿ ಟಿಕೆಟ್ ಸಿಕ್ಕೆ ಸಿಗುತ್ತದೆ ಎಂಬ ವಿಶ್ವಾಸದಲ್ಲಿದ್ದಾರೆ. ಉಳಿದವರು ತಮ್ಮದೆ ಪ್ರಭಾವದ ಮೂಲಕ ಟಿಕೆಟ್‌ಗಾಗಿ ಲಾಬಿ ಮಾಡುತ್ತಿರುವುದನ್ನು ಅಲ್ಲಗಳೆಯುವಂತಿಲ್ಲ.
ಇನ್ನೂ ಬಿಜೆಪಿಯಲ್ಲಿ ಹಾಲಿ ಶಾಸಕ ಕೆ.ಬಿ.ಅಶೋಕನಾಯ್ಕ ಅವರಿಗೆ ಈ ಬಾರಿಯೂ ಟಿಕೆಟ್ ಫಿಕ್ಸ್ ಎಂಬುದು ಮೂಲಗಳ ಮಾಹಿತಿ. ಇದರಾಚೆಗೂ ಮಾಜಿ ಶಾಸಕ ಕೆ.ಜಿ. ಕುಮಾರಸ್ವಾಮಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ವೀರಭದ್ರಪ್ಪ ಪೂಜಾರ್ ಹಾಗೂ ಬಿಜೆಪಿ ಮುಖಂಡ ಧೀರಜ್ ಹೊನ್ನವಿಲೆ ಈ ಬಾರಿ ಚುನಾವಣೆ ಸ್ಪರ್ಧಿಸೋದಕ್ಕೆ ಸಿದ್ಧರಾದಂತೆ ಕಾಣುತ್ತಿದೆ. ಆಕಾಂಕ್ಷಿಗಳು ಪಕ್ಷದ ವರಿಷ್ಠರ ಗಮನ ಸೆಳೆಯುವ ಪ್ರಯತ್ನದಲ್ಲಿದ್ದು, ಇತ್ತ ಮತದಾರರ ಮನವೊಲಿಸುವ ಕಾರ್ಯದಲ್ಲೂ ಮಗ್ನರಾಗಿದ್ದಾರೆ. ಗ್ರಾಮಾಂತರ ಕ್ಷೇತ್ರದ ಹೊಳಹೊನ್ನೂರು, ಆನವೇರಿ, ಅಹರತೊಳಲು ಕೈಮರ, ಕಲ್ಲಿಹಾಳ್ ಸರ್ಕಲ್, ಅಗರದಹಳ್ಳಿ, ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಬ್ಯಾನರ್‌ಗಳು ರಾರಾಜಿಸುತ್ತಿವೆ.
ಚುನಾವಣೆ ಸಂದರ್ಭದಲ್ಲಿ ಇವೆಲ್ಲ ಮಾಮೂಲಾಗಿದ್ದು, ಪಕ್ಷದ ಚಿಹ್ನೆ ಯಾರಿಗೆ ಒಲಿಯುತ್ತೆದೆಯೋ ಅವರು ಈ ಕೇತ್ರದ ಅಭ್ಯರ್ಥಿಯಾಗಲಿದ್ದಾರೆ.
- ಕೆ.ಬಿ. ಅಶೋಕನಾಯ್ಕ, ಶಾಸಕ, ಶಿವಮೊಗ್ಗ ಗ್ರಾಮಾಂತರ ಕ್ಷೇತ್ರ.
ಕಳೆದ ಐದು ವರ್ಷಗಳಿಂದ ಕ್ಷೇತ್ರದ ಜನರೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇನೆ. ಈ ವಿಚಾರ ವರಿಷ್ಠರಿಗೂ ಹಾಗೂ ಜಿಲ್ಲಾ ಮುಖಂಡರಿಗೂ ಗೊತ್ತಿದೆ. ಪಕ್ಷ ಇನ್ನೊಂದು ಬಾರಿ ಅವಕಾಶ ನೀಡುತ್ತದೆ ಎಂದು ನಂಬಿಕೆ ಇದೆ.
-ಕಾಂಗ್ರೆಸ್ ಮುಖಂಡ ಡಾ.ಶ್ರೀನಿವಾಸ್ ಕರಿಯಣ್ಣ
Shivamogga: ರೋಹಿತ್ ಚಕ್ರತೀರ್ಥ ವಿರುದ್ಧ ಗೋ ಬ್ಯಾಕ್ ಚಳವಳಿಗೆ ಸಜ್ಜು
ಚುನಾವಣೆ ಸಂದರ್ಭದ ಎಲ್ಲಾ ಮುಖಂಡರು ಗ್ರಾಮಗಳಿಗೆ ಭೇಟಿ ನೀಡುತ್ತಾರೆ. ಪ್ರಚಾರ ತೆಗೆದುಕೊಳ್ಳಲು ಬರುತ್ತಾರೆ. ಯಾರಿಗೆ ಪಕ್ಷಗಳ ಚಿಹ್ನೆ ಅಡಿಯಲ್ಲಿ ಚುನಾವಣೆಗೆ ಅವಕಾಶ ದೊರಕುವುದೋ ಅಂತವರಿಗೆ ಮತ ನೀಡುತ್ತೇವೆ.
- ಕೆ.ಆರ್. ಹಾಲೇಶ್ ಅರಹತೊಳಲು.