Bus Yatra: ಜ.11ಕ್ಕೆ ಸಿದ್ದರಾಮಯ್ಯ-ಡಿ.ಕೆ.ಶಿವಕುಮಾರ್ ಬಸ್ ಯಾತ್ರೆ
2023ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ತರುವ ಉದ್ದೇಶದಿಂದ ಹಮ್ಮಿಕೊಳ್ಳಲಾಗಿರುವ ರಾಜ್ಯವ್ಯಾಪಿ ಬಸ್ ಯಾತ್ರೆಗೆ ಜ.11ರಂದು ಬೆಳಗಾವಿಯಲ್ಲಿ ಚಾಲನೆ ನೀಡಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಘೋಷಿಸಿದರು.
ಬೆಳಗಾವಿ (ಡಿ.20): 2023ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ತರುವ ಉದ್ದೇಶದಿಂದ ಹಮ್ಮಿಕೊಳ್ಳಲಾಗಿರುವ ರಾಜ್ಯವ್ಯಾಪಿ ಬಸ್ ಯಾತ್ರೆಗೆ ಜ.11ರಂದು ಬೆಳಗಾವಿಯಲ್ಲಿ ಚಾಲನೆ ನೀಡಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಘೋಷಿಸಿದರು.
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ಬಸ್‌ಯಾತ್ರೆ ಜೊತೆಗೆ, ಕೃಷ್ಣಾ, ಮಹದಾಯಿ ಯೋಜನೆಯಲ್ಲಿ ರಾಜ್ಯ ಸರ್ಕಾರದ ವೈಫಲ್ಯ ಬಗ್ಗೆ ಡಿ.30ರಂದು ವಿಜಯಪುರ, ಜ.2 ರಂದು ಹುಬ್ಬಳ್ಳಿ-ಧಾರವಾಡದಲ್ಲಿ ಪ್ರತಿಭಟನೆ ನಡೆಸಲಾಗುವುದು. ಜ.8ರಂದು ಚಿತ್ರದುರ್ಗದಲ್ಲಿ ಕಾಂಗ್ರೆಸ್ ಎಸ್ಸಿ, ಎಸ್ಟಿಸಮಾವೇಶ ಹಮ್ಮಿಕೊಳ್ಳಲಾಗುವುದು ಎಂದರು. ಮಹಾತ್ಮ ಗಾಂಧೀಜಿ ಅಧ್ಯಕ್ಷತೆಯಲ್ಲಿ ಬೆಳಗಾವಿಯಲ್ಲಿ ಮಾತ್ರ ಕಾಂಗ್ರೆಸ್ ಅಧಿವೇಶನ ನಡೆದಿದೆ. ಸ್ವಾತಂತ್ರ್ಯ ಬಂದ ಇತಿಹಾಸವಿದೆ. ರಾಜ್ಯದಲ್ಲಿ ಮತ್ತೆ ಜನಪರವಾದ ಕಾಂಗ್ರೆಸ್ ಸರ್ಕಾರ ಬರಬೇಕಿದೆ ಎಂದು ಹೇಳಿದರು.
ಯಾರೂ ಅಭ್ಯರ್ಥಿ ಘೋಷಣೆ ಮಾಡುವಂತಿಲ್ಲ: ಡಿಕೆಶಿ ಎಚ್ಚರಿಕೆ
ಬಸ್ ಯಾತ್ರೆ: ಜ.10 ರಂದು ಬೆಳಗಾವಿಗೆ ಪಕ್ಷದ ಎಲ್ಲ ನಾಯಕರು ಆಗಮಿಸಲಿದ್ದು, ಜ.11ರಂದು ಬಸ್ ಯಾತ್ರೆಗೆ ಚಾಲನೆ ನೀಡಲಾಗುವುದು. ಅಂದೇ ಬೆಳಗಾವಿ, ಚಿಕ್ಕೋಡಿಗಳಲ್ಲಿ ಸಭೆ ನಡೆಸಲಾಗುವುದು ಎಂದರು. ಜೊತೆಗೆ ಜ.1 ರಿಂದ 31 ರೊಳಗೆ ಪ್ರತಿಯೊಂದು ಬೂತ್‌ನಲ್ಲಿ ಕಾರ್ಯಕರ್ತರು, ಮುಖಂಡರು ಪಕ್ಷದ ಧ್ವಜ ಹಾರಿಸಿ, ಸಭೆ ನಡೆಸಬೇಕು. ಕೇಂದ್ರ, ರಾಜ್ಯ ಸರ್ಕಾರದ ದುರಾಡಳಿತ, ಅನ್ಯಾಯದ ಕುರಿತು ಜನತೆಗೆ ಅರಿವು ಮೂಡಿಸಬೇಕು. ಬಳಿಕ ಜಿಲ್ಲಾಮಟ್ಟದಲ್ಲಿಯೂ ಪದಾಧಿಕಾರಿಗಳು, ರಾಜ್ಯಮಟ್ಟದ ನಾಯಕರು, ಕಾರ್ಯಕರ್ತರ ಸಭೆ ನಡೆಸಲಾಗುವುದು ಎಂದು ತಿಳಿಸಿದರು.
ಎಲ್ಲೆಲ್ಲಿಗೆ ಯಾತ್ರೆ?: ಜ.16ರಂದು ಹೊಸಪೇಟೆ, ಜ.17 ರಂದು ಹೊಸಪೇಟೆ , ಕೊಪ್ಪಳ, ಜ.18 ರಂದು ಬಾಗಲಕೋಟೆ ಮತ್ತು ಗದಗ, ಜ.19 ರಂದು ಹಾವೇರಿ ಮತ್ತು ದಾವಣಗೆರೆ, ಬೆಂಗಳೂರಿಗೆ ತೆರಳಲಾಗುವುದು. ಜ.21ರಂದು ಹಾಸನ, ಚಿಕ್ಕಮಗಳೂರು, ಜ.22 ರಂದು ಉಡುಪಿ, ದಕ್ಷಿಣ ಕನ್ನಡ, ಜ.23 ರಂದು ಕೋಲಾರ, ಚಿಕ್ಕಬಳ್ಳಾಪುರ, ಜ.24ರಂದು ತುಮಕೂರು, ಬೆಂಗಳೂರು ಗ್ರಾಮೀಣ, ಜ.25ರಂದು ಮೈಸೂರು, ಜ.26 ರಂದು ಚಾಮರಾಜನಗರ, ಮೈಸೂರು, ಜ.27ರಂದು ಮಂಡ್ಯ ಮತ್ತು ರಾಮನಗರ, ಜ.28ರಂದು ಕಲಬುರಗಿಗೆ ತೆರಳಿ, ಯಾದಗಿರಿ, ಬೀದರನಲ್ಲಿ ಸಭೆ ಮಾಡಲಾಗುವುದು. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ಭಾರತ ಜೋಡೋ ಯಾತ್ರೆ ಉತ್ತರ ಕನ್ನಡ, ರಾಯಚೂರು, ಕೊಡಗು, ಬಳ್ಳಾರಿ, ರಾಯಚೂರು, ಕುಮಟಾಗಳಲ್ಲಿ ಆಗಿತ್ತು. ಹಾಗಾಗಿ, ಇಲ್ಲಿ ಬೇರೆ ದಿನಾಂಕ ನಂತರ ನಿಗದಿ ಮಾಡಲಾಗುವುದು ಎಂದು ವಿವರಿಸಿದರು.
ಸಿದ್ರಾಮುಲ್ಲಾಖಾನ್ ಎನ್ನಲು ರವಿ ಯಾರು?: ಸಿದ್ದರಾಮಯ್ಯ
ಬಸ್ ಯಾತ್ರೆ, ಕೃಷ್ಣಾ, ಮಹದಾಯಿ ಯೋಜನೆಯಲ್ಲಿ ರಾಜ್ಯ ಸರ್ಕಾರದ ವೈಫಲ್ಯದ ಬಗ್ಗೆ ಹಮ್ಮಿಕೊಂಡಿರುವ ಸಮಾವೇಶದ ಕುರಿತು ಬೆಳಗಾವಿ ಕಾಂಗ್ರೆಸ್ ಭವನದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ ಸಿಂಗ್ ಸುರ್ಜೆವಾಲಾ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ, ಕಾರ್ಯಾಧ್ಯಕ್ಷ ಸಲೀಂ ಅಹ್ಮದ್, ಸತೀಶ ಜಾರಕಿಹೊಳಿ, ಮಾಜಿ ಸಚಿವ, ಹಿರಿಯ ಮುಖಂಡ ಎಚ್.ಕೆ. ಪಾಟೀಲ್ ಮತ್ತಿತರರು ಭಾಗವಹಿಸಿದ್ದರು.