ಸಿದ್ರಾಮುಲ್ಲಾಖಾನ್ ಎನ್ನಲು ರವಿ ಯಾರು?: ಸಿದ್ದರಾಮಯ್ಯ
ತಮ್ಮನ್ನು ಸಿದ್ರಾಮುಲ್ಲಾ ಖಾನ್ ಎಂದು ಕರೆದು ವ್ಯಂಗ್ಯವಾಡುತ್ತಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ವಿರುದ್ಧ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ತೀವ್ರ ಕಿಡಿಕಾರಿದರು.
ಕಲಬುರಗಿ (ಡಿ.19): ತಮ್ಮನ್ನು ಸಿದ್ರಾಮುಲ್ಲಾ ಖಾನ್ ಎಂದು ಕರೆದು ವ್ಯಂಗ್ಯವಾಡುತ್ತಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ವಿರುದ್ಧ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ತೀವ್ರ ಕಿಡಿಕಾರಿದರು. ನನ್ನ ತಂದೆ-ತಾಯಿ ಕುರುಬರು. ನಾನೂ ಒಬ್ಬ ಕುರುಬ. ನನಗೆ ನನ್ನ ಧರ್ಮದ ಮೇಲೆ ಅಪಾರ ಗೌರವ ಇದೆ. ಆದರೆ ಅದನ್ನು ತೋರಿಕೆಗಾಗಿ ಹೇಳಿಕೊಳ್ಳುವ ಅಗತ್ಯ ಇಲ್ಲ. ಆದರೆ, ಸಿ.ಟಿ.ರವಿ ನನಗೆ ಸಿದ್ರಾಮುಲ್ಲಾ ಖಾನ್ ಎಂದು ಹೊಸ ನಾಮಕರಣ ಮಾಡುತ್ತಿದ್ದಾನೆ. ಇವನ್ಯಾರು ನನಗೆ ಹೀಗೆಲ್ಲಾ ಕರೆಯೋಕೆ? ಅವನೊಬ್ಬ ಮತಾಂಧ ಎಂದು ಕಿಡಿಕಾರಿದ್ದಾರೆ.
ಭಾನುವಾರ ಸುದ್ದಿಗಾರರ ಜತೆಗೆ ಮಾತನಾಡಿದ ಅವರು ನಾನು ಹಿಂದೂ ಧರ್ಮ, ಕುರುಬರ ಜಾತಿಯಲ್ಲಿ ಹುಟ್ಟಬೇಕು ಅಂತ ಅರ್ಜಿ ಹಾಕಿದ್ದೆನಾ? ನಮ್ಮ ಅಪ್ಪ ಕುರುಬ, ಹೀಗಾಗಿ ಕುರುಬರ ಜಾತಿಯಲ್ಲಿ ಹುಟ್ಟಿದ್ದೇನೆ. ಧರ್ಮಕ್ಕಾಗಿ ನಾವಿಲ್ಲ, ನಮಗಾಗಿ ಧರ್ಮ ಇದೆ. ನಾವೆಲ್ಲ ಸರ್ವಧರ್ಮ ಸಮನ್ವಯದಲ್ಲಿ ನಂಬಿಕೆ ಇಟ್ಟುಕೊಂಡಿದ್ದೇವೆ. ಹೀಗಾಗಿ ಕಾಂಗ್ರೆಸ್‌ನಲ್ಲಿದ್ದೇವೆ, ನಾನು ಸಂವಿಧಾನದ ಪರವಾಗಿ ಮಾತನಾಡಿದರೆ ಸಿದ್ರಾಮುಲ್ಲಾ ಖಾನ್ ಅಂತಿದ್ದಾರೆ ಎಂದು ಆಕ್ರೋಶ ಹೊರಹಾಕಿದರು. ನಾನು ಹಿಂದೂ ಧರ್ಮಕ್ಕೆ ಗೌರವ ಕೊಡುತ್ತೇನೆ. ಹಾಗಂತ ಇನ್ನೊಂದು ಧರ್ಮವನ್ನು ದ್ವೇಷಿಸುವುದು ಸರಿಯೇ? ನಮಗೆ ಕಾಯಿಲೆ ಬಂದರೆ ವೈದ್ಯರ ಬಳಿ ಹೋಗಿ ನನಗೆ ಕುರುಬರ ರಕ್ತವೇ ನೀಡಿ, ಬೇರೆ ಜಾತಿಯವರ ರಕ್ತ ಕೊಡಬೇಡಿ ಅಂತ ಹೇಳುತ್ತೇವಾ?
ಒಳ ಮೀಸಲಾತಿ ಸಮಿತಿ ಕಣ್ಣೊರೆಸುವ ತಂತ್ರ: ಸಿದ್ದರಾಮಯ್ಯ
ಮೊದಲು ನನ್ನ ಕಾಯಿಲೆ ವಾಸಿಯಾಗಲಿ ಅಂತ ಹೇಳುತ್ತೇವೆ. ಎಲ್ಲರ ಮೈಯಲ್ಲೂ ಹರಿಯುವುದು ಒಂದೇ ರಕ್ತ ಎಂದರು. ನಾನು ಬಿಜೆಪಿಗರ ಆರೋಪಗಳಿಗೆ ಉತ್ತರ ಕೊಡುವ ಅವಶ್ಯಕತೆ ಇಲ್ಲ. ಜನರೇ ಅವರಿಗೆ ಈ ಬಾರಿ ಪಾಠ ಕಲಿಸುತ್ತಾರೆ. ನಮ್ಮ ಸಂವಿಧಾನದಲ್ಲಿ ಸರ್ವಧರ್ಮ ಸಮಾನತೆ ಇದೆ. ಅದನ್ನೇ ನಮ್ಮ ಕಾಂಗ್ರೆಸ್ ಪಕ್ಷದವರು ಅಳವಡಿಸಿಕೊಂಡಿದ್ದೇವೆ. ಸರ್ವಜನಾಂಗದ ಶಾಂತಿಯ ತೋಟ ಎಂಬುದನ್ನು ಸಾಬೀತುಪಡಿಸಲು ಕಾಂಗ್ರೆಸ್‌ನಿಂದ ಮಾತ್ರ ಸಾಧ್ಯ ಎಂದರು. ಬಿಜೆಪಿಗರು ರಾಜ್ಯವನ್ನು 10 ವರ್ಷ ಹಿಂದಕ್ಕೆ ತಳ್ಳಿದ್ದಾರೆ. ಬಿಜೆಪಿಯವರು ಬಂದ ಮೇಲೆ ಕೇವಲ ಮೂರೇ ವರ್ಷದಲ್ಲಿ 2.70 ಲಕ್ಷ ಕೋಟಿ ರುಪಾಯಿ ಸಾಲ ಮಾಡಿದ್ದಾರೆ. ಹಾಗಾಗಿ ಈ ರಾಜ್ಯ ಉಳಿಸಬೇಕು ಅಂದರೆ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು ಎಂದರು.
ಒಬಿಸಿ ಮೀಸಲಿಗೆ ಸರ್ಕಾರ ಮೀನಮೇಷ: ಸ್ಥಳೀಯ ಸಂಸ್ಥೆಗಳಲ್ಲಿ ಹಿಂದುಳಿದ ವರ್ಗಗಳ (ಓಬಿಸಿ) ರಾಜಕೀಯ ಮೀಸಲಾತಿ ಅಂತಿಮಗೊಳಿಸಲು ಸರ್ಕಾರ ಉದ್ದೇಶಪೂರ್ವಕ ವಿಳಂಬ ನೀತಿ ಅನುಸರಿಸುತ್ತಿದೆ. ಸರ್ಕಾರದ ನಡೆ-ನುಡಿ ಗಮನಿಸಿದರೆ ಓಬಿಸಿಗಳಿಗೆ ಮೀಸಲಾತಿ ಕಲ್ಪಿಸುವ ಉದ್ದೇಶವೇ ಸರ್ಕಾರಕ್ಕೆ ಇಲ್ಲ ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ‘ರಾಜಕೀಯ ಮೀಸಲಾತಿ ಬಗೆಗಿನ ರಾಜ್ಯ ಸರ್ಕಾರದ ನಿರ್ಲಕ್ಷ್ಯದಿಂದ ಓಬಿಸಿ ಸಮುದಾಯಕ್ಕೆ ಅನ್ಯಾಯವಾಗಿರುವುದು ಮಾತ್ರವಲ್ಲ ಸ್ಥಳೀಯ ಸಂಸ್ಥೆಗಳ ಚುನಾವಣೆಯೂ ನಿಗದಿತ ಕಾಲಕ್ಕೆ ನಡೆಯದಂತಾಗಿದೆ.
ಸಿದ್ದರಾಮಯ್ಯ, ನನ್ನ ಮಧ್ಯೆ ಜಗಳ ಶುದ್ಧ ಸುಳ್ಳು: ಡಿ.ಕೆ.ಶಿವಕುಮಾರ್
ಇದಕ್ಕೆ ಪೂರಕ ಎಂಬಂತೆ ಸುಪ್ರೀಂ ಕೋರ್ಟ್ ಉದಾರವಾಗಿ ಮತ್ತೆ ಮಾರ್ಚ್ 31ರವರೆಗೆ ಗಡುವು ನೀಡಿದೆ. ಸ್ಥಳೀಯ ಸಂಸ್ಥೆಗಳಲ್ಲಿ ಒಬಿಸಿಗಳಿಗೆ ಮೀಸಲಾತಿ ನೀಡುವಾಗ ಮೂರು ಹಂತದ ಪರಿಶೀಲನೆ ನಡೆಸಬೇಕು ಎಂದು ಕಳೆದ ಮೇ ತಿಂಗಳಲ್ಲಿಯೇ ಸುಪ್ರೀಂ ಕೋರ್ಟ್ ಸ್ಪಷ್ಟಆದೇಶ ನೀಡಿತ್ತು. ಇದನ್ನು ರಾಜ್ಯ ಸರ್ಕಾರ ಗಂಭೀರವಾಗಿ ಸ್ವೀಕರಿಸಿದೆ ಇದ್ದಿದ್ದರಿಂದ ಈಗ ಬಿಕ್ಕಟ್ಟು ಉಂಟಾಗಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ವಿಶ್ವಾಸಾರ್ಹ ಅಂಕಿ ಅಂಶಗಳಿಂದ ಕೂಡಿದ ಮಾಹಿತಿಯನ್ನು ಆಧರಿಸಿ ಮೀಸಲಾತಿ ನೀತಿಯನ್ನು ರೂಪಿಸಬೇಕೆಂದು ಸುಪ್ರೀಂಕೋರ್ಚ್ ಸ್ಪಷ್ಟವಾಗಿ ಹೇಳಿದ್ದರೂ ರಾಜ್ಯ ಸರ್ಕಾರ ಮಾತ್ರ ಅವಸರದಲ್ಲಿ ನಿವೃತ್ತ ನ್ಯಾಯಮೂರ್ತಿ ಎಂ.ಕೆ. ಭಕ್ತವತ್ಸಲ ಸಮಿತಿ ನೇಮಿಸಿ ಅಷ್ಟೇ ಅವಸರದಲ್ಲಿ ಶಿಫಾರಸುಗಳನ್ನು ಪಡೆದು ಮೀಸಲಾತಿಯನ್ನು ರೂಪಿಸಿದೆ.