Karnataka Assembly Election 2023: ಗ್ಯಾರಂಟಿಯಲ್ಲ ನಾವು ಅಡ್ವಾನ್ಸನ್ನೇ ಕೊಟ್ಟಿದ್ದೇವೆ!
ಕಾಂಗ್ರೆಸ್‌ನ .2000 ಇಟ್ಕೊಂಡು ಏನು ಮಾಡಲು ಸಾಧ್ಯ? ನಾವು ಈಗಾಗಲೇ ಅಭಿವೃದ್ಧಿಯ ಆಡಳಿತ ನೀಡಿದ್ದೇವೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಏಷ್ಯಾನೆಟ್ ಸುವರ್ಣ ನ್ಯೂಸ್‌ನ ಸಂಪಾದಕರಾದ ಅಜಿತ್ ಹನುಮಕ್ಕನವರ್‌ಗೆ ನೀಡಿದ ಎಕ್ಸ್‌ಕ್ಲೂಸಿವ್ ಸಂದರ್ಶನದಲ್ಲಿ ಹೇಳಿದ್ದಾರೆ.
ಬೆಂಗಳೂರು (ಏ.1): ಕೇಂದ್ರ ಗೃಹ ಸಚಿವ ಅಮಿತ್ ಶಾ ಏಷ್ಯಾನೆಟ್ ಸುವರ್ಣ ನ್ಯೂಸ್‌ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ರಾಜ್ಯ ರಾಜಕೀಯ, ಚುನಾವಣೆ, ಮೀಸಲಾತಿ, ಲಿಂಗಾಯತ ಮತ ಬ್ಯಾಂಕ್, ಬೆಂಗಳೂರು ಅಭಿವೃದ್ಧಿ ಎಲ್ಲಾ ವಿಚಾರಗಳ ಬಗ್ಗೆ ಅಮೂಲಾಗ್ರವಾಗಿ ಮಾತನಾಡಿದರು. ಕೇಂದ್ರ ಸರ್ಕಾರದಿಂದ ಘೋಷಣೆಯಾದ ಕಾರ್ಯಕ್ರಮದ ಮೂಲಕ ಆಗಿರುವ ಫಲಾನುಭವಿಗಳ ಸಮುದಾಯವೇ ಚುನಾವಣೆಯಲ್ಲಿ ತಮ್ಮ ಆಸ್ತಿ ಎಂದು ಅಮಿತ್ ಶಾ ಹೇಳಿದ್ದಾರೆ. ಅವರ ಸಂದರ್ಶನದ ಪೂರ್ಣಪಾಠ ಇಲ್ಲಿದೆ.
ಈ ಬಾರಿ ಕರ್ನಾಟಕದಲ್ಲಿ ಯಾವುದೇ ವಿಷಯವಿಲ್ಲದೆ ಚುನಾವಣೆ ನಡೆಯುತ್ತಿದೆ ಎಂಬ ವಿಶ್ಲೇಷಣೆಗಳಿವೆ. ನಿಮಗೇನನ್ನಿಸುತ್ತದೆ? ರಾಜ್ಯದಲ್ಲಿ ಈ ಸಲದ ಚುನಾವಣೆಯ ವಿಷಯ ಯಾವುದು?
- ಒಂದು ಸಣ್ಣ ವಿಶ್ಲೇಷಣೆಯ ಮೂಲಕ ಇದಕ್ಕೆ ಉತ್ತರ ನೀಡುತ್ತೇನೆ. ಕಳೆದ ಒಂಭತ್ತು ವರ್ಷಗಳ ಮೋದಿ ಆಡಳಿತದಲ್ಲಿ ದೇಶದಲ್ಲಿ ಹೊಸ ಸಮುದಾಯವೊಂದು ಹುಟ್ಟಿಕೊಂಡಿದೆ. ಅದರ ಹೆಸರು ‘ಫಲಾನುಭವಿಗಳ ಸಮುದಾಯ.’ ಕರ್ನಾಟಕದಲ್ಲಿ ಸುಮಾರು 4.10 ಲಕ್ಷ ಜನರಿಗೆ ಮನೆ ಸಿಕ್ಕಿದೆ. ಸುಮಾರು 43 ಲಕ್ಷ ಜನರಿಗೆ ಜಲಜೀವನ ಮಿಷನ್‌ನಿಂದ ಜೀವನದಲ್ಲಿ ಮೊದಲ ಬಾರಿಗೆ ನಲ್ಲಿ ನೀರು ಸಿಕ್ಕಿದೆ. 48 ಲಕ್ಷ ಕುಟುಂಬಗಳಿಗೆ 70 ವರ್ಷಗಳ ಬಳಿಕ ಮೊದಲ ಬಾರಿ ಶೌಚಾಲಯ ಸಿಕ್ಕಿದೆ. ರಾಜ್ಯದಲ್ಲಿ ಕಿಸಾನ್ ಸಮ್ಮಾನ್ ನಿಧಿಯಿಂದ 54 ಲಕ್ಷ ರೈತರಿಗೆ ಪ್ರತಿ ವರ್ಷ 10000 ರು. ಬ್ಯಾಂಕ್ ಖಾತೆಗೆ ಜಮೆಯಾಗುತ್ತಿದೆ, ಯಾವುದೇ ಕಮಿಷನ್ ಇಲ್ಲದೆ. 37 ಲಕ್ಷ ಮಹಿಳೆಯರಿಗೆ ಗ್ಯಾಸ್ ಸಿಲಿಂಡರ್ ನೀಡಲಾಗಿದೆ. ಆಯುಷ್ಮಾನ್ ಭಾರತ್ ಯೋಜನೆಯಡಿ 1 ಕೋಟಿ 38 ಲಕ್ಷ ಜನರಿಗೆ 5 ಲಕ್ಷ ರು.ವರೆಗಿನ ಆರೋಗ್ಯ ವಿಮೆ ನೀಡಲಾಗಿದೆ. 3 ಕೋಟಿ ಜನರಿಗೆ ಪ್ರತಿ ತಿಂಗಳು 5 ಕೆ.ಜಿ. ಅಕ್ಕಿ ಉಚಿತವಾಗಿ ನೀಡಲಾಗುತ್ತಿದೆ. ಇವರೆಲ್ಲರೂ ಸೇರಿ ಬಿಜೆಪಿಯನ್ನು ಗೆಲ್ಲಿಸುತ್ತಾರೆ.
ಹಾಗಿದ್ದರೆ ನಿಮ್ಮ ಪ್ರಕಾರ ಕರ್ನಾಟಕದಲ್ಲಿ ಅಭಿವೃದ್ಧಿಯೇ ಚುನಾವಣೆಯ ವಿಷಯವೇ?
- ತುಂಬಾ ವಿಷಯಗಳಿವೆ. ಸರ್ಜಿಕಲ್ ಸ್ಟ್ರೈಕ್‌ನಿಂದ ಜನರು ಖುಷಿಯಾಗಿದ್ದಾರೆ. ವಿಶ್ವದಲ್ಲಿ ಭಾರತದ ಸ್ಥಾನಮಾನದ ಬಗ್ಗೆ ಖುಷಿಯಾಗಿದ್ದಾರೆ. ಅಂತರಿಕ್ಷದಲ್ಲಿ ಭಾರತದ ಸಾಧನೆ ಬಗ್ಗೆಯೂ ಖುಷಿಯಾಗಿದ್ದಾರೆ. ಆದರೆ ಕಾಂಗ್ರೆಸ್‌ಗೆ ಮತ ಹಾಕಲು ಏನು ಕಾರಣವಿದೆ, ನೀವೇ ನನಗೆ ಹೇಳಿ.
ಕರ್ನಾಟಕದ ಮತದಾರ ಪ್ರತಿ 5 ವರ್ಷಕ್ಕೊಮ್ಮೆ ಸರ್ಕಾರ ಬದಲಿಸುತ್ತಾನೆ ಎಂಬುದನ್ನು ನೀವು ಗಮನಿಸಿದ್ದೀರಾ?
- ಹಾಗೇನಿಲ್ಲ. ಒಮ್ಮೆ ಜನತಾದಳ ಸರ್ಕಾರ ಮೂರು ಸಲ ಸತತವಾಗಿ ಆಯ್ಕೆಯಾಗಿದೆ. ಕಾಂಗ್ರೆಸ್ ಸರ್ಕಾರ ಸತತ ನಾಲ್ಕು ಬಾರಿ ಆಯ್ಕೆಯಾಗಿದೆ.
ಈ ಬಾರಿ ನಿಮಗೆ ಲಿಂಗಾಯತ ವೋಟ್ ಬ್ಯಾಂಕಿನ ಟೆನ್ಷನ್ ಇದೆ ಅನ್ನಿಸುತ್ತದೆ.
- ಸ್ವಲ್ಪವೂ ಟೆನ್ಷನ್ ಇಲ್ಲ. ಕಾಂಗ್ರೆಸ್ ಏನು ಮಾಡಿದೆ ಅಂತ ಲಿಂಗಾಯತರು ಅವರಿಗೆ ವೋಟ್ ಹಾಕ್ತಾರೆ? ಕಾಂಗ್ರೆಸ್ 70 ವರ್ಷಗಳಲ್ಲಿ ಇಬ್ಬರು ಲಿಂಗಾಯತ ಮುಖ್ಯಮಂತ್ರಿಗಳನ್ನು ನೀಡಿದೆ. ಇಬ್ಬರನ್ನೂ ಅವಮಾನಿಸಿ ತೆಗೆದುಹಾಕಿದೆ. ಒಬ್ಬರನ್ನು ಇಂದಿರಾ ಗಾಂಧಿ ತೆಗೆದುಹಾಕಿದರು. ವೀರೇಂದ್ರ ಪಾಟೀಲ್ ಅವರನ್ನು ರಾಜೀವ್ ಗಾಂಧಿ ಏರ್‌ಪೋರ್ಟ್‌ನಲ್ಲೇ ತೆಗೆದುಹಾಕಿದರು. ನಮ್ಮ ಮುಖ್ಯಮಂತ್ರಿ ಲಿಂಗಾಯತರು. ಯಡಿಯೂರಪ್ಪ ಅವರಂತಹ ಮಹಾನ್ ನಾಯಕರು ನಮ್ಮೊಂದಿಗೆ ಇದ್ದಾರೆ. ಲಿಂಗಾಯತ ಟೆನ್ಷನ್ ಎಂಬ ಪ್ರಶ್ನೆಯೇ ಉದ್ಭವಿಸೋದಿಲ್ಲ.
ಯಡಿಯೂರಪ್ಪ ಅವರನ್ನು ತೆಗೆದಿದ್ದು ತಪ್ಪು ನಿರ್ಧಾರ ಎಂದು ನಿಮಗೆ ಅನ್ನಿಸುತ್ತಿದೆಯೇ?
- ಸ್ವಲ್ಪವೂ ಇಲ್ಲ, ಯಡಿಯೂರಪ್ಪ ಅವರೇ ಸ್ವತಃ ನನಗೆ ‘ಪಾರ್ಟಿಯಲ್ಲಿ 75 ವರ್ಷದ ನಿಯಮವಿದೆ. ಪಾರ್ಟಿ ಯಾವಾಗ ಹೇಳುತ್ತೋ ಆಗ ನಾನು ಹುದ್ದೆ ಬಿಡುತ್ತೇನೆ’ ಎಂದು ಹೇಳಿದ್ದರು. ಆಗ ನಾವೇನೂ ನಿರ್ಧಾರ ಮಾಡಿರಲಿಲ್ಲ. ಹೀಗಾಗಿ ಅದು ಸ್ವಲ್ಪ ಮುಂದೆ ಹೋಗಿತ್ತು.
ಲಕ್ಷ್ಮಣ ಸವದಿ, ಜಗದೀಶ್ ಶೆಟ್ಟರ್ ರೀತಿಯ ಲಿಂಗಾಯತ ನಾಯಕರೇ ಪಕ್ಷ ಬಿಟ್ಟು ಹೋಗಿದ್ದಾರಲ್ಲ?
- ಇಬ್ಬರೂ ಕೂಡ 30 ಸಾವಿರ ಅಂತರದಲ್ಲಿ ಸೋಲ್ತಾರೆ. ಕೌಂಟಿಂಗ್ ಆದ್ಮೇಲೆ ನನಗೆ ಕಾಲ್ ಮಾಡಿ. ನನಗೆ ಹುಬ್ಬಳ್ಳಿಯ ಸಂಘಟನೆ 1990ರಿಂದಲೂ ಗೊತ್ತು. ಹುಬ್ಬಳ್ಳಿಯಲ್ಲಿ ವ್ಯಕ್ತಿಗೆ ವೋಟ್ ಕೊಡೋದಿಲ್ಲ, ಪಾರ್ಟಿಗೆ ವೋಟ್ ಕೊಡ್ತಾರೆ. ಶೆಟ್ಟರ್ ಅವರನ್ನು ಜನರು ಶಾಸಕ, ಉಪಮುಖ್ಯಮಂತ್ರಿ, ಮುಖ್ಯಮಂತ್ರಿ, ವಿಪಕ್ಷ ನಾಯಕ ಹೀಗೆ ಎಲ್ಲವನ್ನೂ ಮಾಡಿದರು. ಆದರೆ ಒಂದು ಸಲ ಟಿಕೆಟ್ ಕೊಡಲ್ಲ ಅಂದಿದ್ದಕ್ಕೆ ಅವರು ಸಿದ್ಧಾಂತವನ್ನೇ ಮರೆತು ಕಾಂಗ್ರೆಸ್‌ಗೆ ಹೋದರು. ಬಿಜೆಪಿ ಕಾರ್ಯಕರ್ತ ಯಾವತ್ತಾದರೂ ಕಾಂಗ್ರೆಸ್ ಜೊತೆ ಹೋಗುವುದು ಸಾಧ್ಯವೇ? ಸ್ವಾರ್ಥ ಇಲ್ಲ ಅಂದರೆ ಅವರು ಪಕ್ಷ ಬಿಡುತ್ತಿದ್ದರೇ? ಜನರು ಇದನ್ನೆಲ್ಲ ನೋಡುತ್ತಾರೆ. ಅವರು ಪತ್ರಕರ್ತರ ರೀತಿಯಲ್ಲಿ ಅಭ್ಯರ್ಥಿಯನ್ನು ನೋಡುವುದಿಲ್ಲ. ವ್ಯಕ್ತಿಯ ನಡತೆಯನ್ನು ನೋಡುತ್ತಾರೆ.
ಸಮಸ್ಯೆಯಾಗಿದ್ದು ಎಲ್ಲಿ? ನೀವು ಶೆಟ್ಟರ್ ಜೊತೆ ಮಾತನಾಡಲಿಲ್ಲವಾ?
- ಎಲ್ಲಿಯೂ ಸಮಸ್ಯೆಯಾಗಿಲ್ಲ. ಈ ಬಾರಿ ಸ್ಪರ್ಧಿಸಬೇಡಿ ಎಂದು ಮೊದಲು ಪಾರ್ಟಿಯಿಂದ ಹೇಳಲಾಗಿತ್ತು. ನಂತರ ನಾನೇ ಸ್ವತಃ, ‘ಈ ಬಾರಿ ಸ್ಪರ್ಧೆ ಬೇಡ, ಯಡಿಯೂರಪ್ಪ ರೀತಿ ಪಾರ್ಟಿಯ ಕೆಲಸ ಮಾಡಿ’ ಎಂದು ಹೇಳಿದೆ. ಈಗಲೂ ಸಮಸ್ಯೆ ಏನಿಲ್ಲ. ಪಕ್ಷದಲ್ಲಿ ತುಂಬಾ ಜನಕ್ಕೆ ಟಿಕೆಟ್ ಕೊಟ್ಟಿಲ್ಲ. ಎಲ್ಲೂ ಸಮಸ್ಯೆಯಾಗಿಲ್ಲ.
ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಕೋಮುಗಲಭೆ ಆಗುತ್ತದೆ ಎಂದು ಹೇಳಿದಿರಿ. ನೀವು ಜನರನ್ನು ಹೆದರಿಸುತ್ತಿದ್ದೀರಿ ಎಂದು ಕಾಂಗ್ರೆಸ್ ದೂರು ನೀಡಿದೆ. ಹಾಗೆ ಹೇಳುವ ಅಗತ್ಯವೇನಿತ್ತು?
- ಜನರನ್ನು ನಾನು ಹೆದರಿಸುತ್ತಿಲ್ಲ, ಅದೇ ವಾಸ್ತವಿಕ ಸ್ಥಿತಿ. ಈ ದೇಶದ ಕೋಮು ಗಲಭೆಯ ಇತಿಹಾಸ ತೆಗೆದು ನೋಡಿ. ಶೇ.90ರಷ್ಟುಗಲಭೆ ಕಾಂಗ್ರೆಸ್ ಅವಧಿಯಲ್ಲೇ ಆಗಿದೆ. ಆ ಇತಿಹಾಸವನ್ನೇ ನಾನು ಹೇಳಿದ್ದೇನೆ. ಇದರಲ್ಲಿ ಹೆದರಿಸುವುದು ಏನಿದೆ? ಇದಕ್ಕೆಲ್ಲ ಯಾರೂ ಹೆದರುವುದಿಲ್ಲ.
ಕಾಂಗ್ರೆಸ್‌ನವರು ಗ್ಯಾರಂಟಿಗಳ ಮೇಲೆ ಗ್ಯಾರಂಟಿ ನೀಡುತ್ತಿದ್ದಾರೆ. ನಿಮಗೇನೂ ಆತಂಕವಿಲ್ಲವೇ?
- ಗುಜರಾತ್‌ನಲ್ಲಿ ಗ್ಯಾರಂಟಿ ಕಾರ್ಡ್ ಹಂಚಿದ್ದರು. ಯುಪಿಯಲ್ಲಿ ಹಂಚಿದರು, ಉತ್ತರಾಖಂಡದಲ್ಲಿ ಹಂಚಿದರು, ಅಸ್ಸಾಂನಲ್ಲಿ, ಮಣಿಪುರದಲ್ಲಿ, ತ್ರಿಪುರಾದಲ್ಲೂ ಹಂಚಿದರು. ಇಲ್ಲಿಗಿಂತ ಒಳ್ಳೆ ಒಳ್ಳೆ ಗ್ಯಾರಂಟಿ ಕೊಟ್ಟಿದ್ದರು. ಕೊನೆಗೆ ಏನಾಯಿತು? ಯಾವ ಪಾರ್ಟಿಗೆ ಇಮೇಜೇ ಇಲ್ಲವೋ ಅವರ ಗ್ಯಾರಂಟಿಯನ್ನು ಯಾರು ನಂಬುತ್ತಾರೆ?
ಪ್ರತಿ ಮನೆಗೆ ಪ್ರತಿ ತಿಂಗಳು 2000 ರುಪಾಯಿ ಕೊಡ್ತಾರೆ, 200 ಯುನಿಟ್ ವಿದ್ಯುತ್ ಫ್ರೀ ಕೊಡ್ತಾರೆ ಅಂದರೆ ಆಸೆಯಾಗೋದಿಲ್ಲವೇ?
- ಸ್ವಲ್ಪವೂ ಇಲ್ಲ. ಯಾಕಂದ್ರೆ ಅವರಿಗೆ ಈಗಾಗಲೇ ಉಚಿತವಾಗಿ 1 ಲಕ್ಷ ರುಪಾಯಿಯ ಶೌಚಾಲಯ ಸಿಕ್ಕಿದೆ. ಮನೆಗೆ ಉಚಿತವಾಗಿ ಗ್ಯಾಸ್ ಸಿಲಿಂಡರ್ ಬಂದಿದೆ. ಯಾವುದೇ ಶುಲ್ಕವಿಲ್ಲದೇ ಮನೆಗೆ ಕರೆಂಟ್ ಸಂಪರ್ಕ ನೀಡಲಾಗಿದೆ. ಮನೆಗೆ ಉಚಿತವಾಗಿ ಅಕ್ಕಿ ಬರುತ್ತಿದೆ. ವರ್ಷ ರೈತರಿಗೆ 10 ಸಾವಿರ ರುಪಾಯಿ ಬರ್ತಿದೆ. ಗ್ಯಾರಂಟಿ ನೀಡುವ ಅವಶ್ಯಕತೆಯೇ ಇಲ್ಲ, ನಾವು ಮೊದಲೇ ಅಡ್ವಾನ್ಸ್ ಆಗಿ ನೀಡಿದ್ದೇವೆ. ಜನರಿಗೂ ಇಂತಹ ಉಚಿತ ಕೊಡುಗೆಗಳ ಹಣೆಬರಹ ಗೊತ್ತಿದೆ. 2000 ರು. ಇಟ್ಟುಕೊಂಡು ಏನು ಮಾಡುವುದಕ್ಕಾಗುತ್ತದೆ? ಫಲಾನುಭವಿಗಳಿಗೆ ಇದು ಬೇಗ ಅರ್ಥವಾಗುತ್ತದೆ.
ನಾನೂ ತಿನ್ನಲ್ಲ, ಬೇರೆಯವರಿಗೂ ತಿನ್ನಲು ಬಿಡಲ್ಲ ಎಂದು ಮೋದಿ ಹೇಳುತ್ತಾರೆ. ಆದರೆ ನಿಮ್ಮ ರಾಜ್ಯ ಸರ್ಕಾರದ ಮೇಲೆ 40% ಲಂಚದ ಆರೋಪವಿದೆ? ಅದರ ವಿರುದ್ಧ ಕಾಂಗ್ರೆಸ್‌ನವರು ಪೇಸಿಎಂ ಕ್ಯಾಂಪೇನ್ ಮಾಡಿದರು. ಚನ್ನಗಿರಿಯ ನಿಮ್ಮ ಶಾಸಕರ ಮಗ 40 ಲಕ್ಷ ಲಂಚ ಪಡೆಯುವಾಗ ಸಿಕ್ಕಿಬಿದ್ದರಲ್ಲ?
- ನಿಮಗೊಂದು ಮನವಿ ಮಾಡುತ್ತೇನೆ. 40% ಭ್ರಷ್ಟಾಚಾರದ ಆರೋಪವಿರುವ ಒಂದೇ ಒಂದು ಕೇಸ್ ಯಾವುದಾದರೂ ಕೋರ್ಚ್‌ನಲ್ಲಿ ಇದ್ದರೆ ನನಗೆ ತೋರಿಸಿ. ಚನ್ನಗಿರಿಯ ಶಾಸಕ ಹಾಗೂ ಮಗನನ್ನು ಜೈಲಿಗೆ ಕಳಿಸಿದ್ದೇವಲ್ಲ. ಅವರಿಗೆ ಟಿಕೆಟ್ ಸಹ ನೀಡಿಲ್ಲ. ನಮ್ಮ ಸರ್ಕಾರದ ಮೇಲೆ ಯಾವ ಭ್ರಷ್ಟಾಚಾರದ ಆರೋಪವೂ ಇಲ್ಲ. ಕಾಂಗ್ರೆಸ್ ಅಧ್ಯಕ್ಷರು ಮತ್ತು ಇತರರ ಮೇಲೆ ಅಂತಹ ಆರೋಪಗಳಿವೆ.
ಹಾಗಿದ್ದರೆ ಅಭಿವೃದ್ಧಿಯ ಮೇಲೆ ಅಷ್ಟೊಂದು ನಂಬಿಕೆಯಿದ್ದರೆ ಮೀಸಲಾತಿ ಬಗ್ಗೆ ಆತುರದ ನಿರ್ಧಾರವನ್ನು ಏಕೆ ತೆಗೆದುಕೊಂಡಿರಿ?
- ಆತುರದ ನಿರ್ಧಾರವಲ್ಲ. ಇನ್ನೂ ಬೇಗ ಆ ನಿರ್ಧಾರ ತೆಗೆದುಕೊಳ್ಳಬೇಕಿತ್ತು. ನಾವು ನಿರ್ಧರಿಸಿದ್ದು ತಡವಾಯಿತು. ಈ ದೇಶದ ಸಂವಿಧಾನದ ಪ್ರಕಾರ ಧರ್ಮದ ಆಧಾರದಲ್ಲಿ ಮೀಸಲಾತಿ ನೀಡುವಂತಿಲ್ಲ. ಆದರೆ ಧರ್ಮದ ಆಧಾರದಲ್ಲಿ ಅಲ್ಪಸಂಖ್ಯಾತರಿಗೆ 4 ಪರ್ಸೆಂಟ್ ಮೀಸಲಾತಿ ನೀಡಿದ್ದರು. ಅದನ್ನು ರದ್ದು ಮಾಡಬೇಕಿತ್ತು, ಮಾಡಿದ್ದೇವೆ ಅಷ್ಟೆ. ಮುಸ್ಲಿಂ ಮೀಸಲಾತಿ ಅನ್ನೋದು ಸಂವಿಧಾನ ವಿರೋಧಿಯಾಗಿದೆ. ಮುಸ್ಲಿಮರಲ್ಲಿರುವ ಒಬಿಸಿಯವರಿಗೆ ಮೀಸಲಾತಿ ಸಿಗಬೇಕು. ಮುಸ್ಲಿಂ ಎಂಬ ಕಾರಣಕ್ಕೆ, ಹಿಂದೂ ಎಂಬ ಕಾರಣಕ್ಕೆ, ಕ್ರಿಶ್ಚಿಯನ್ ಎಂಬ ಕಾರಣಕ್ಕೆ ಯಾರಿಗೂ ಮೀಸಲಾತಿ ಸಿಗಬಾರದು. ಹಿಂದುಳಿದ ಸಮುದಾಯಗಳಿಗೆ ಮೀಸಲಾತಿ ಸಿಗಬೇಕು.
ನೀವು ಮುಸ್ಲಿಮರ 4 ಪರ್ಸೆಂಟ್ ಮೀಸಲಾತಿ ತೆಗೆದು ಲಿಂಗಾಯತರಿಗೆ 2%, ಒಕ್ಕಲಿಗರಿಗೆ 2% ಕೊಟ್ಟಿರಿ. ಅದೂ ಓಲೈಕೆಯೇ ಅಲ್ಲವೇ?
- ಅಲ್ಲ. ನಿಮಗೆ ಪೂರ್ತಿ ವಿಷಯ ಅರ್ಥ ಆಗಿಲ್ಲ. ಮೂವರು ಒಂದು ಬ್ಲಾಕ್‌ನಲ್ಲಿದ್ದರು. ಒಬ್ಬರ ಮೀಸಲಾತಿ ತೆಗೆದರೆ ಇನ್ನಿಬ್ಬರ ಮೀಸಲಾತಿ ನಾವು ಹೆಚ್ಚು ಮಾಡದಿದ್ದರೂ ತಾನಾಗೇ ಆಗುತ್ತದೆ. ಅದರಂತೆ ಲಿಂಗಾಯತರಿಗೆ 2%, ಒಕ್ಕಲಿಗರಿಗೆ 2% ಹೆಚ್ಚು ಮಾಡಲಾಗಿದೆ.
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮೀಸಲಾತಿಯನ್ನು 70%ಗೆ ಏರಿಸುತ್ತೇವೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
- ನನಗೂ ಗೊತ್ತು, ನಿಮಗೂ ಗೊತ್ತು. ಸುಪ್ರೀಂಕೋರ್ಚ್‌ನ 9 ಜಡ್ಜ್‌ಗಳ ಪೀಠ ನೀಡಿರುವ ತೀರ್ಪಿನ ಪ್ರಕಾರ ಹಾಗೆ ಮಾಡಲು ಆಗುವುದಿಲ್ಲ. ಸಿದ್ದರಾಮಯ್ಯ ಅವರ ಮಾತುಗಳನ್ನು ಯಾರು ನಂಬುತ್ತಾರೆ? ಅವರು ಸೋಲಿನ ಅಸಹನೆಯಲ್ಲಿ ಇಂತಹ ಮಾತುಗಳನ್ನು ಹೇಳುತ್ತಿರುತ್ತಾರೆ.
ಖರ್ಗೆ ಅವರ ವಿಷ ಸರ್ಪದ ಹೇಳಿಕೆಯನ್ನು ಯಾವ ರೀತಿ ನೋಡುತ್ತೀರಿ?
ಖರ್ಗೆ ಅವರಷ್ಟೇ ಅಲ್ಲ, ಕಾಂಗ್ರೆಸ್‌ನ ಹಲವು ನಾಯಕರು ಮೋದಿ ವಿರುದ್ಧ ಕೀಳು ಮಟ್ಟದ ಪದ ಬಳಕೆ ಮಾಡಿದ್ದಾರೆ. ಸೋನಿಯಾ ಒಮ್ಮೆ ಮೋದಿಯವರನ್ನು ಸಾವಿನ ದಲ್ಲಾಳಿ ಎಂದು ಹೇಳಿದ್ದರು. ಪ್ರಿಯಾಂಕಾ ಒಮ್ಮೆ ಅವರನ್ನು ನೀಚ ಜಾತಿಯ ವ್ಯಕ್ತಿ ಎಂದು ಹೇಳಿದ್ದರು. ಬಿ.ಕೆ.ಹರಿಪ್ರಸಾದ್, ಮಣಿಶಂಕರ್ ಅಯ್ಯರ್ ಕೂಡ ಏನೇನೋ ಹೇಳಿದ್ದರು. ಅವರ ಹೇಳಿಕೆಗಳು ಬಂದಾಗಲೆಲ್ಲ ಬಿಜೆಪಿ ನಿಶ್ಚಿತವಾಗಿ ಗೆದ್ದಿದೆ. ನನಗೆ ಇದು ಶುಭ ಸಂಕೇತದಂತೆ ಕಾಣುತ್ತಿದೆ.
ನೀವು, ಮೋದಿಯವರು ಸಾಕಷ್ಟುರೋಡ್‌ಶೋ ಮಾಡಿದ್ದೀರಿ. ಅದಕ್ಕೆ ಭರ್ಜರಿ ಜನಸಾಗರ ಬಂದಿದೆ. ರಾಜಕಾರಣಿಗಳಿಗೆ ಜನರ ರಿಯಾಕ್ಷನ್ ನೋಡುತ್ತಿದ್ದಂತೆ ವಾತಾವರಣ ಹೇಗಿದೆ ಎಂದು ಗೊತ್ತಾಗುತ್ತಾ?
- ಖಂಡಿತ. ಹಾಸನದ ಸಕಲೇಶಪುರದಲ್ಲಿ ನಾನು ಯೋಚನೆ ಕೂಡ ಮಾಡಿರಲಿಲ್ಲ. ನನ್ನ ಬಳಿ ಅಲ್ಲಿನ ಲೆಕ್ಕಾಚಾರಗಳಿವೆ. ಆ ಕ್ಷೇತ್ರದ ಹಿನ್ನೆಲೆ ಕೂಡ ಗೊತ್ತು. ಯಾದಗಿರಿ, ಸಕಲೇಶಪುರದಲ್ಲಿ ನಾನು ಈ ಮೊದಲೂ ಕಾರ್ಯಕ್ರಮ ಮಾಡಿದ್ದೆ, ಈಗಲೂ ಮಾಡಿ ಬಂದಿದ್ದೇನೆ. ಎಲ್ಲ ಕಡೆ ಬಿಜೆಪಿ ಪರ ಒಲವಿದೆ.
ಹಲವು ಕ್ಷೇತ್ರಗಳಲ್ಲಿ ಬಿಜೆಪಿಗೆ ಕುಟುಂಬ ರಾಜಕಾರಣದ ತಲೆನೋವು ಇದೆಯೇ?
- ಎಲ್ಲಾ ಪಾರ್ಟಿಗಳಿಗೂ ಆ ತಲೆನೋವು ಇದ್ದಿದ್ದೇ. ಆದರೆ ಬಿಜೆಪಿ ವೋಟ್‌ಬ್ಯಾಂಕ್ ಇರುವುದು ಐಡಿಯಾಲಜಿ ಮೇಲೆ ಹಾಗೂ ಮೋದಿ ಮೇಲೆ. ಹೀಗಾಗಿ ನಮಗೆ ಹೆಚ್ಚು ಸಮಸ್ಯೆಯಿಲ್ಲ. ಇನ್ನು, ಟಿಕೆಟ್ ಸಿಗಲಿಲ್ಲ ಎಂದು ಅಸಮಾಧಾನ ಕೂಡ ಸಹಜ ಪ್ರಕ್ರಿಯೆ. ಅದನ್ನು ಎಲ್ಲಾ ಪಾರ್ಟಿಯವರೂ ಎದುರಿಸಬೇಕಾಗುತ್ತದೆ.
ರಾಜ್ಯದ ಅಭಿವೃದ್ಧಿಯಾಗಬೇಕು ಅಂದರೆ ಪ್ರಾದೇಶಿಕ ಪಕ್ಷಕ್ಕೆ ಅಧಿಕಾರ ಸಿಗಬೇಕು ಎಂದು ಜೆಡಿಎಸ್‌ನವರು ಹೇಳುತ್ತಿದ್ದಾರೆ. ನಿಮ್ಮ ಪಕ್ಷದ ಶಾಸಕರೇ ಒಬ್ಬರು ಜೆಡಿಎಸ್‌ಗೆ ಮತ ಹಾಕಿದರೆ ಬಿಜೆಪಿಗೆ ಹಾಕಿದಂತೆ ಎಂದು ಹೇಳಿದ್ದಾರೆ. ದೇವೇಗೌಡರು ಮೋದಿಯವರ ಜೊತೆ ಈಗಾಗಲೇ ಮಾತನಾಡಿದ್ದಾರಂತೆ, ನಿಜವೇ?
- ಇಲ್ಲ, ಮಾತುಕತೆ ಆಗಿಲ್ಲ. ಆದರೆ ಅವರಿಬ್ಬರ ನಡುವೆ ಉತ್ತಮ ಸಂಬಂಧ ಇದೆ. ನೀವು ಹೋದರೆ ನಿಮ್ಮ ಜೊತೆಯೂ ಮೋದಿ ಟೀ ಕುಡೀತಾರೆ.
ಹಳೆ ಮೈಸೂರಿನಲ್ಲಿ ಬಿಜೆಪಿ ಸಾಧನೆ ಏಕಿಷ್ಟುಕಡಮೆ ಇದೆ? ಈ ಸಲವೂ ಅಲ್ಲಿ ಬಿಜೆಪಿ ತುಂಬಾ ಕಷ್ಟಪಡುತ್ತಿದೆ ಅಲ್ಲವೇ?
ನಾವು ಕಷ್ಟಪಡ್ತಿಲ್ಲ, ಪ್ರಯತ್ನಪಡುತ್ತಾ ಇದ್ದೇವೆ. ಸ್ವಾಭಾವಿಕವಾಗಿ ಈ ಭಾಗದಲ್ಲಿ ಕಾಂಗ್ರೆಸ್-ಜೆಡಿಎಸ್ ಮಧ್ಯೆ ಹೋರಾಟ ನಡೀತಾ ಇತ್ತು. ನಾವು ಪ್ರಯತ್ನಪಟ್ಟು 4 ವರ್ಷದಲ್ಲಿ ಸಂಘಟನೆ ಬಲಪಡಿಸಿದ್ದೇವೆ. ಚುನಾವಣೆ ಘೋಷಣೆಯಾಗುವ 2 ತಿಂಗಳು ಮುಂಚೆ ಮಂಡ್ಯದಲ್ಲಿ ನಾನು ಒಂದು ರಾರಯಲಿ ಮಾಡಿದೆ. ಮೋದಿ ಕೂಡ ಒಂದು ರಾರಯಲಿ ಮಾಡಿದ್ದಾರೆ. ನಾವು ಈ ಬಾರಿ ಅಲ್ಲಿ ತುಂಬಾ ಏಕಾಗ್ರತೆಯಿಂದ ಪ್ರಯತ್ನ ಮಾಡಿದ್ದೇವೆ. ಅಶೋಕ್, ಸೋಮಣ್ಣ ಅವರನ್ನು ಅಲ್ಲಿ ಕಣಕ್ಕಿಳಿಸಿದ್ದೇವೆ.
ಇದು ಯಾವ ತರಹದ ರಾಜಕಾರಣ? ಅಶೋಕ್ ಹಾಗೂ ಸೋಮಣ್ಣ ಅವರನ್ನು ಯಾವ ನಿರೀಕ್ಷೆಯಿಂದ ಅಲ್ಲಿ ಕಣಕ್ಕಿಳಿಸಿದ್ದೀರಿ?
ನಮ್ಮ ಪಾರ್ಟಿಯನ್ನು ವಿಸ್ತರಣೆ ಮಾಡುತ್ತಿದ್ದೇವೆ. ಅಶೋಕ್ ಅವರು ನಮ್ಮ ಅತಿದೊಡ್ಡ ಒಕ್ಕಲಿಗ ನಾಯಕ, ಅವರು ಅಲ್ಲಿ ಸ್ಪರ್ಧಿಸಿದರೆ ಜನರಿಂದ ಪ್ರತಿಕ್ರಿಯೆ ಸಿಗಲಿದೆ. ಸೋಮಣ್ಣ ದೊಡ್ಡ ಲಿಂಗಾಯತ ನಾಯಕ. ಅವರು ಸ್ಪರ್ಧೆ ಮಾಡೋದ್ರಿಂದ ಅಲ್ಲಿ ನಮಗೆ ಉತ್ತಮ ರೆಸ್ಪಾನ್ಸ್ ಸಿಗಲಿದೆ.
ಪಿಎಫ್‌ಐ ಬ್ಯಾನ್ ಮಾಡಿದಿರಿ. ಅದರಿಂದ ರಾಷ್ಟ್ರೀಯ ಭದ್ರತೆ ವಿಷಯದಲ್ಲಿ ಪರಿಣಾಮ ಕಾಣಿಸುತ್ತಿದೆಯಾ? ನಿಮ್ಮ ಪ್ರಕಾರ ಅದು ಎಷ್ಟುದೊಡ್ಡ ನಿರ್ಣಯ?
ನನ್ನ ಪ್ರಕಾರ ದೇಶದ ಆಂತರಿಕ ಭದ್ರತೆಯ ವಿಚಾರದಲ್ಲಿ ತುಂಬಾ ದೊಡ್ಡ ನಿರ್ಣಯ. ತುಂಬಾ ಯೋಚಿಸಿ ಈ ನಿರ್ಧಾರ ಕೈಗೊಂಡಿದ್ದೇವೆ. ಕರ್ನಾಟಕ ಮಾತ್ರವಲ್ಲ ಇಡೀ ದೇಶಕ್ಕೆ ಇದರ ಲಾಭವಾಗಲಿದೆ. ನಾವೇನಾದರೂ ನಿಷೇಧ ಮಾಡದೇ ಹೋಗಿದ್ದರೆ ನೀವು ಚುನಾವಣೆಯ ಕಾರಣ ಕೊಟ್ಟುಬಿಡುತ್ತಿದ್ದಿರಿ. ಇಂತಹ ವಿಚಾರದಲ್ಲಿ ಚುನಾವಣೆಯನ್ನೆಲ್ಲ ನೋಡೋದಿಲ್ಲ. ಚುನಾವಣೆ ಬರುತ್ತೆ, ಹೋಗುತ್ತೆ. ಸರ್ಕಾರ ಅನ್ನೋದು ಒಂದು ನಿರಂತರ ಪ್ರಕ್ರಿಯೆ. ನನಗೆ ವಿಶ್ವಾಸವಿದೆ, ಪಿಎಫ್‌ಐ ಬ್ಯಾನ್‌ನಿಂದ ಕರ್ನಾಟಕಕ್ಕೆ ಹೆಚ್ಚಿನ ಲಾಭವಾಗಿದೆ.
ದಕ್ಷಿಣ ಭಾರತದ ರಾಜ್ಯಗಳಲ್ಲಿ ಹಿಂದಿ ಹೇರಿಕೆ ಭಾವನಾತ್ಮಕ ವಿಷಯ. ಎನ್‌ಇಪಿನಲ್ಲಿ ಮಾತೃಭಾಷೆ ಶಿಕ್ಷಣಕ್ಕೆ ಮಹತ್ವ ನೀಡಲಾಗಿದೆ ಎಂದು ನೀವು ಹೇಳುತ್ತೀರಿ, ಆದರೆ ನೀವು ಬಂದಮೇಲೆ ಹಿಂದಿ ಹೇರಿಕೆ ಜಾಸ್ತಿಯಾಗಿದೆ ಎಂದು ಇಲ್ಲಿ ಕೂಗೆದ್ದಿದೆಯಲ್ಲ?
- ಯಾರು ಏನೇ ಹೇಳಲಿ, ಕನ್ನಡ ಭಾಷೆಗೆ ರಾಜ್ಯದಲ್ಲಿ ಹೆಚ್ಚು ಮಹತ್ವ ನೀಡಿದ್ದು ಭಾರತೀಯ ಜನತಾ ಪಾರ್ಟಿ. ಐಎಎಸ್, ಐಪಿಎಸ್ ಪರೀಕ್ಷೆಗಳನ್ನು ಕನ್ನಡದಲ್ಲಿ ಶುರು ಮಾಡಿದ್ದು ಮೋದಿ ಬಂದ ಮೇಲೆಯೇ. ಕನ್ನಡ ಮಾತ್ರವಲ್ಲ ತುಂಬಾ ಭಾಷೆಗಳಲ್ಲಿ ಅವಕಾಶ ನೀಡಿದ್ದೇವೆ. ಈಗ ಸಿಆರ್‌ಪಿಎಫ್ ಪರೀಕ್ಷೆಯಲ್ಲೂ ಕನ್ನಡಕ್ಕೆ ಅವಕಾಶ ನೀಡಿದ್ದೇವೆ. ನಾವು ಕನ್ನಡದ ವ್ಯಾಪ್ತಿಯನ್ನು ಹೆಚ್ಚಿಗೆ ಮಾಡಿದ್ದೇವೆ. ನಮ್ಮ ಉದ್ದೇಶವೇ ಪ್ರಾದೇಶಿಕ ಭಾಷೆಯಲ್ಲಿ ಶಿಕ್ಷಣ ಮತ್ತು ಅಭಿಪ್ರಾಯ ವ್ಯಕ್ತವಾಗಬೇಕು ಎಂಬುದು.
Amit Shah Interview: ಕಾಂಗ್ರೆಸ್ ಏನ್ ಮಾಡಿದೆ ಅಂತಾ ಲಿಂಗಾಯತರು ಅವರಿಗೆ ವೋಟ್ ಹಾಕ್ತಾರೆ?
ಪೂರ್ಣ ಬಹುಮತದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೆ ಈ ಸಿಎಂ ಮುಂದುವರೆಯುತ್ತಾರಾ ಅಥವಾ ಬದಲಾವಣೆ ಆಗ್ತಾರಾ?
ಈಗ ಚುನಾವಣೆ ನಡೀತಿದೆ. ಮುಖ್ಯಮಂತ್ರಿ ನಮ್ಮವರೇ ಇದ್ದಾರೆ. ಈ ಮಾತನ್ನು ನಾನು ಸ್ಪಷ್ಟವಾಗಿ ಹೇಳುತ್ತಿದ್ದೇನೆ, ಈಗಿನ ಸಿಎಂ ನೇತೃತ್ವದಲ್ಲೇ ಚುನಾವಣೆ ನಡೀತಿದೆ. ಚುನಾವಣೆ ಬಳಿಕ ಯಾವ ಪರಿಸ್ಥಿತಿ ಬರುತ್ತೋ ಗೊತ್ತಿಲ್ಲ. ಮೆಜಾರಿಟಿ ಇದ್ದಾಗ ಪಾರ್ಟಿ ನಿರ್ಣಯ ಮಾಡುತ್ತದೆ.
Amit Shah Interview: ನಾಳೆ ಯಾವುದೋ ಸರ್ಕಾರ ಬಂದು ಹಿಂದುಗಳಿಗೆ ಮೀಸಲಾತಿ ಕೊಡ್ತೀವಿ ಅಂದ್ರೆ ನಡೆಯುತ್ತಾ?
ನೀವು ತುಂಬಾ ಸರ್ವೇ ಮಾಡಿಸುತ್ತೀರಿ. ಈ ಬಾರಿ ನಿಮಗೆ ಎಷ್ಟುಸ್ಥಾನ ಬರಬಹುದು?
ನಾನು ಸರ್ವೇಗಿಂತ ಕಾರ್ಯಕರ್ತರ ಮೇಲೆ ಹೆಚ್ಚು ವಿಶ್ವಾಸ ಇಡುತ್ತೇನೆ. ತುಂಬಾ ಚಾನಲ್‌ಗಳಲ್ಲಿ ಬಿಜೆಪಿ ಹಿಂದಿದೆ ಎಂದಿದ್ದರು. ಚುನಾವಣೆ ಘೋಷಣೆ ಆದ್ಮೇಲೆ ಸ್ವಲ್ಪ ಮುಂದಿದ್ದಾರೆ ಅಂದರು. ಚುನಾವಣೆ ದಿನ ಸಮ ಮಾಡಿ ತೋರಿಸ್ತಾರೆ. ಎಕ್ಸಿಟ್ ಪೋಲ್‌ನಲ್ಲಿ ಬಿಜೆಪಿ ಗೆಲ್ಲುತ್ತದೆ ಎಂದು ತೋರಿಸುತ್ತಾರೆ. ಕೊನೆಗೆ ನಾವು ಗೆಲ್ಲುತ್ತೇವೆ. ನನ್ನ ಪ್ರಕಾರ ಮೆಜಾರಿಟಿಗಿಂತ ಕನಿಷ್ಠ 15 ಸ್ಥಾನಗಳನ್ನು ನಾವು ಹೆಚ್ಚು ಗೆಲ್ಲುತ್ತೇವೆ.