ಕಂಗನಾ - ಉದ್ಧವ್ ಠಾಕ್ರೆ ನಡುವಿನ ಜಟಾಪಟಿ ಬೀದಿಗೆ ಬಂದಿದೆ. ಮುಂಬೈನ ಬಾಂದ್ರಾದಲ್ಲಿರುವ ತಮ್ಮ ನಿವಾಸವನ್ನು ಅಕ್ರಮವಾಗಿ ಮಾರ್ಪಡಿಸಿದ್ದಾರೆ ಎಂದು ಆರೋಪಿಸಿ ಶಿವಸೇನೆ ಆಡಳಿತದ ಬೃಹನ್ಮುಂಬೈ ಪಾಲಿಕೆ ಅಧಿಕಾರಿಗಳು ಕಂಗನಾ ಮನೆಯ ಕೆಲವು ಭಾಗಗಳನ್ನು ಧ್ವಂಸಗೊಳಿಸಿದ್ದಾರೆ. 

ನವದೆಹಲಿ (ಸೆ. 11): ನಟ ಸುಶಾಂತ್‌ ಸಿಂಗ್‌ ರಜಪೂತ್‌ ಸಾವು ಹಾಗೂ ಬಾಲಿವುಡ್‌ ಡ್ರಗ್‌ ಮಾಫಿಯಾ ಬಗ್ಗೆ ದೊಡ್ಡದಾಗಿ ದನಿಯೆತ್ತಿ ಮಹಾರಾಷ್ಟ್ರ ಸರ್ಕಾರದ ವಿರುದ್ಧ ತಿರುಗಿಬಿದ್ದಿದ್ದ ಖ್ಯಾತ ನಟಿ ಕಂಗನಾ ರಾಣಾವತ್‌ ಹಾಗೂ ಆಡಳಿತಾರೂಢ ಶಿವಸೇನೆ ನಡುವಣ ಘೋರ ಸಂಘರ್ಷ ಬುಧವಾರ ತಾರಕಕ್ಕೇರಿದೆ.

ಮುಂಬೈನ ಬಾಂದ್ರಾದಲ್ಲಿರುವ ತಮ್ಮ ನಿವಾಸವನ್ನು ಅಕ್ರಮವಾಗಿ ಮಾರ್ಪಡಿಸಿದ್ದಾರೆ ಎಂದು ಆರೋಪಿಸಿರುವ ಶಿವಸೇನೆ ಆಡಳಿತದ ಬೃಹನ್ಮುಂಬೈ ಪಾಲಿಕೆ ಅಧಿಕಾರಿಗಳು, ಕಂಗನಾ ಅವರ ಮನೆಯ ಕೆಲವು ಭಾಗಗಳನ್ನು ಬುಧವಾರ ಬೆಳ್ಳಂಬೆಳಗ್ಗೆ ಧ್ವಂಸಗೊಳಿಸಿದ್ದು, ಇದರ ವಿರುದ್ಧ ಕಂಗನಾ ಹೈಕೋರ್ಟ್‌ ಮೆಟ್ಟಿಲೇರಿ ತಡೆಯನ್ನೂ ತಂದಿದ್ದಾರೆ.

ಪ್ರಕರಣ ಯಾವುದೇ ಇರಲಿ, ಟಿವಿ ಸ್ಟುಡಿಯೋಗಳೇ ನ್ಯಾಯಾಲಯಗಳಾದರೆ?

ಈ ವೇಳೆ, ಪಾಲಿಕೆ ಅಧಿಕಾರಿಗಳ ದುಡುಕುತನದ ಬಗ್ಗೆ ನ್ಯಾಯಾಲಯ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದೂ ಆಗಿದೆ.ಅಧಿಕಾರದಲ್ಲಿರುವವರು ಎಂದೂ ವಿವೇಚನೆ ಕಳೆದುಕೊಳ್ಳಬಾರದು. ಇದರಿಂದ ಲಾಭ ಏನಿಲ್ಲ, ನಷ್ಟವೇ ಹೆಚ್ಚು. ತನ್ನ ಹೊಸ ಚಿತ್ರ ‘ತೇಜಸ್‌’ ತೆರೆಗೆ ಬರುತ್ತಿರುವಾಗ ಕಂಗನಾಗೆ ಏನಕೇನ ಪ್ರಚಾರ ಬೇಕು. ಹೀಗಾಗಿ ಕಂಗನಾ ನೇರವಾಗಿ ಎದುರು ಹಾಕಿಕೊಂಡಿದ್ದು ಬಾಳ್‌ಠಾಕ್ರೆ ಇಲ್ಲದ ಶಿವಸೇನೆಯನ್ನು. ತಾನು ಈಗ ಅಧಿ​ಕಾರ ನಡೆಸುತ್ತಿದ್ದೇನೆ ಎನ್ನುವುದನ್ನೂ ಮರೆತ ಶಿವಸೇನೆ, ಕಂಗನಾರ ಮನೆ ಕೆಡವಿದೆ.

ಕೂಡಲೇ ಶರದ್‌ ಪವಾರ್‌ ‘ಇದು ಸರಿಯಲ್ಲ’ ಎಂದು ಹೇಳಿಕೆ ಕೊಟ್ಟಿದ್ದಾರೆ. ಇದರಿಂದ ಲಾಭ ಆಗಿದ್ದು ಯಾರಿಗೆ? ಕೇವಲ ಮತ್ತು ಕೇವಲ ಬಿಜೆಪಿಗೆ. ಬಹಳ ವರ್ಷ ಬೀದಿ ಕಾಳಗ ಮಾಡಿಯೇ ಮೇಲೆ ಬಂದ ಶಿವಸೇನೆಗೆ ತಾನು ಈಗ ಆಡಳಿತ ಪಕ್ಷ ಎಂದು ಅನ್ನಿಸದೇ ಇರುವುದೇ ಸಮಸ್ಯೆ. ಸುಶಾಂತ್‌ ಪ್ರಕರಣವನ್ನು ಜನ ಕೂಗೆಬ್ಬಿಸಿದಾಗ ಸಿಬಿಐಗೆ ಕೊಟ್ಟು ಕಂಗನಾಗೆ ತಾನೇ ಮುಂದಾಗಿ ರಕ್ಷಣೆ ಕೊಟ್ಟುಬಿಟ್ಟಿದ್ದರೆ ವಿವಾದವೇ ಇರುತ್ತಿರಲಿಲ್ಲ. ಗೊತ್ತಿದ್ದೂ ಗೊತ್ತಿದ್ದೂ ಉದ್ಧವ್‌ ಠಾಕ್ರೆ ಖೆಡ್ಡಾದಲ್ಲಿ ಬೀಳುತ್ತಿದ್ದಾರೆ.

- ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ 

ಇಂಡಿಯಾ ಗೇಟ್, ದೆಹಲಿಯಿಂದ ಕಂಡ ರಾಜಕಾರಣ