ನವದೆಹಲಿ (ಸೆ. 11): ಟಿವಿ ಸ್ಟುಡಿಯೋಗಳೇ ನ್ಯಾಯಾಲಯಗಳಾದರೆ?-ಹೀಗೊಂದು ಚರ್ಚೆ ಕಳೆದ 20 ವರ್ಷಗಳಿಂದ ನಡೆಯುತ್ತಲೇ ಇದೆ. 2002ರಲ್ಲಿ ಗುಜರಾತ್‌ ದಂಗೆಗಳು ನಡೆದ ನಂತರ ಕೆಲ ಎಡಪಂಥೀಯ ಮಾಧ್ಯಮಗಳು ಮೋದಿ ತಪ್ಪಿತಸ್ಥ ಎಂದು ಷರಾ ಬರೆದಿದ್ದರಿಂದಲೇ ನರೇಂದ್ರ ಭಾಯಿ ದೊಡ್ಡ ನಾಯಕರಾದರು. ಪತ್ರಿಕೋದ್ಯಮದಲ್ಲಿ ಇನ್ನೊಂದು ಬದಿಯಾದ ಬಲಪಂಥೀಯತೆಗೆ ಜಾಗ ಸಿಕ್ಕಿದ್ದೇ ಈ ಅತಿರೇಕದಿಂದ.

ಮುಂದೆ 2011ರಲ್ಲಿ ಜಾಣ ಅರವಿಂದ್‌ ಕೇಜ್ರಿವಾಲ್‌ ಸ್ಟುಡಿಯೋಗಳನ್ನು ಬಳಸಿಕೊಂಡು ಸಬ್‌ ಚೋರ್‌ ಹೈ ಎಂದು ಹೇಳುತ್ತಾ ತಾವೇ ಸ್ವಯಂ ನಾಯಕರಾದರು. ನನಗೆ ಇನ್ನೂ ಚೆನ್ನಾಗಿ ನೆನಪಿದೆ; ಮನಮೋಹನ್‌ ಸಿಂಗ್‌ ಸರ್ಕಾರ ಕೇಜ್ರಿವಾಲ್‌ರ ಷರತ್ತುಗಳಿಗೆ ಒಪ್ಪಿದಾಗ ಜಂತರ್‌ ಮಂತರ್‌ನಲ್ಲಿ ಅತಿ ಹೆಚ್ಚು ಕುಣಿದಾಡಿದವರು, ಗುಲಾಲು ಎರಚಿದವರು ಟೀವಿ ಪತ್ರಕರ್ತರು. ಈಗ ಸುಶಾಂತ್‌ ಸಿಂಗ್‌ ಆತ್ಮಹತ್ಯೆ ಪ್ರಕರಣ. ಬಹುತೇಕ ದೇಶದ ಖ್ಯಾತ ಟೀವಿ ಪತ್ರಕರ್ತರು ಸುಶಾಂತ್‌ರದ್ದು ಆತ್ಮಹತ್ಯೆಯಲ್ಲ, ಕೊಲೆ ಎಂದು ತೀರ್ಪು ಬರೆದುಬಿಟ್ಟಿರುವುದರಿಂದ ಕಾರ್ಯಕರ್ತ ಮತ್ತು ಪತ್ರಕರ್ತರ ನಡುವಿನ ಅಂತರ ಮತ್ತೊಮ್ಮೆ ಅಳಿಸಿಹೋಗಿದೆ.

ಕೋವಿಡ್‌ನಿಂದ ಬಿದ್ದಿರುವ ಆರ್ಥಿಕತೆ ಪುನಶ್ಚೇತನಗೊಳಿಸಲು ಮೋದಿ ಮುಂದಿನ ದಾರಿ?

ದೇಶದ ಜನರು ಕುತೂಹಲಿಗಳಾಗಿರುವಾಗ ಸ್ಟುಡಿಯೋಗಳು ನ್ಯಾಯಾಲಯಗಳಾಗಿ ಬಿಡಬೇಕಾ ಎಂಬ ಚರ್ಚೆಗೆ ಇದು ನಾಂದಿ ಹಾಡಿದೆ. ಸುಶಾಂತ್‌ ಸಿಂಗ್‌ ಪ್ರಕರಣ ಆತ್ಮಹತ್ಯೆಯೋ, ಹತ್ಯೆಯೋ ಎನ್ನಲು ತಥ್ಯಗಳಿಲ್ಲ. ಸಿಬಿಐ ತನಿಖೆಗೆ ಕೇಳುವುದು ಸರಿ, ಆದರೆ ಬಿಜೆಪಿ ಮತ್ತು ಶಿವಸೇನೆಯ ಹಗ್ಗಜಗ್ಗಾಟದಲ್ಲಿ ನೇರವಾಗಿ ಒಂದು ಬದಿಗೆ ನಿಲ್ಲುವುದು ಸರಿಯೇ? ಬಿಜೆಪಿ ಮತ್ತು ನಿತೀಶ್‌ಗೆ ಸುಶಾಂತ್‌ ಪ್ರಕರಣದಿಂದ ಬಿಹಾರದಲ್ಲಿ ಲಾಭ ಪಡೆಯಬಹುದು ಅನ್ನಿಸಿದೆ. ಕಂಗನಾ ಯಾವುದೋ ಹಳೆಯ ಸಿನಿಮಾ ಪಾಲಿಟಿಕ್ಸ್‌ ಕೆದಕಿ ಪ್ರಚಾರ ಪಡೆಯುತ್ತಿದ್ದಾರೆ.

ಶಿವಸೇನೆ ಮರಾಠಿ ಅಸ್ಮಿತೆ ಎಂದು ಕಟ್ಟಡ ಒಡೆದು ಹಾಕುತ್ತಿದೆ. ಹೀಗಿರುವಾಗ ಮಾಧ್ಯಮಗಳು ಹೇಗೆ ಕೆಲಸ ನಿರ್ವಹಿಸಬೇಕು ಎಂಬ ಬಗ್ಗೆ ಘನಘೋರ ಚರ್ಚೆ ನಡೆಯುತ್ತಿದೆ. ನಮ್ಮ ಸಂವಿಧಾನ ಶಾಸಕಾಂಗದಲ್ಲಿ ಆರಿಸಿ ಬರುವವರಿಗೆ ಮಾತ್ರ ರಾಜಕೀಯ ಆ್ಯಕ್ಟಿವಿಸಂ ಮಾಡುವ ಅಧಿಕಾರ ಕೊಟ್ಟಿದೆ. ಕಾರ್ಯಾಂಗ ಮತ್ತು ನ್ಯಾಯಾಂಗಕ್ಕೆ ಆ ಅಧಿಕಾರಗಳು ಇಲ್ಲ. ನಾಲ್ಕನೇ ಸ್ತಂಭ ಎನಿಸಿಕೊಳ್ಳುವ ಮಾಧ್ಯಮಗಳ ಕೆಲಸದ ವಿಧಾನದ ಬಗ್ಗೆ ಯಾವುದೇ ಲಿಖಿತ ಕಾನೂನು ಇಲ್ಲವಾದರೂ ತಟಸ್ಥ ಮತ್ತು ನಿಷ್ಪಕ್ಷಪಾತವಾಗಿ ಮಾಧ್ಯಮ ಕೆಲಸ ನಿರ್ವಹಿಸಬೇಕು ಎನ್ನುವುದು ಪ್ರಜಾತಂತ್ರದ ತಿರುಳು. ಸಂವಿಧಾನದ ಎಲ್ಲ ಅಂಗಗಳಿಗೂ ಕೆಲವೊಮ್ಮೆ ಗೆರೆ ದಾಟಿ ಹೋಗಿ ಕೆಲಸ ಮಾಡಬೇಕು ಎನ್ನಿಸುವುದು ಸಹಜ. ಆದರೆ ಗೆರೆ ಅಳಿಸಿದರೆ ಆಗುವ ಅನಾಹುತಗಳನ್ನು ಗಮನದಲ್ಲಿ ಇಟ್ಟುಕೊಳ್ಳಬೇಕಾಗುತ್ತದೆ. ನಾಳೆ ಯಾವತ್ತಾದರೂ ರಾಜಕಾರಣಿಗಳು, ಅಧಿಕಾರಿಗಳು, ನ್ಯಾಯಮೂರ್ತಿಗಳು ಗೆರೆ ದಾಟಿದರೆ ಏನಾಗಬಹುದು, ಊಹಿಸೋದು ಕಷ್ಟ.

- ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ

ಇಂಡಿಯಾ ಗೇಟ್, ದೆಹಲಿಯಿಂದ ಕಂಡ ರಾಜಕಾರಣ