ಬೆಂಗಳೂರು/ಹಾವೇರಿ, [ನ.18]: 15 ಕ್ಷೇತ್ರಗಳ ಉಪಚುನಾವಣೆಯಲ್ಲಿ ಗೆಲ್ಲಲು ಸಮರ ಸೇನಾನಿಗಳು ತಯಾರಾಗಿದ್ದಾರೆ. ಇಂದು [ಸೋಮವಾರ]  ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದ್ದ  ಹಿನ್ನೆಲೆಯಲ್ಲಿ ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ನ ಘಟಾನುಘಟಿ ನಾಯಕರು ತಮ್ಮ-ತಮ್ಮ ಕ್ಷೇತ್ರಗಳ ಉಮೇದುವಾರಿಕೆ ಸಲ್ಲಿಸಿದರು. 

ಬೆಂಗಳೂರಿನಿಂದ ಮಹಾಲಕ್ಷ್ಮೀ ಲೇಔಟ್ ವಿಧಾನಸಭ ಕ್ಷೇತ್ರ ಉಪಚುನಾವಣೆಯ ಬಿಜೆಪಿ ಅಭ್ಯರ್ಥಿಯಾಗಿ ಗೋಪಾಲಯ್ಯ ನಾಮಪತ್ರ ಸಲ್ಲಿಸಿದರು. ಈ ವೇಳೆ ಪತ್ನಿ ಹೇಮಲತಾ ಗೋಪಾಲಯ ಕೂಡ ಅದೇ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದರು. ಅರೇ ಇದೇನಿದು ಗಂಡನ ವಿರುದ್ಧವೇ ಹೆಂಡತಿ ಸ್ಪರ್ಧೆ ಮಾಡುತ್ತಿದ್ದಾರಾ? ಎನ್ನುವ ಪ್ರಶ್ನೆ ಎಲ್ಲರಲ್ಲೂ ಮೂಡುವುದು ಸಹಜ. ಇದರ ಹಿಂದಿನ ಲೆಕ್ಕಾಚಾರವೇ ಬೇರೆ ಇದೆ.

ಗೋಪಾಲಯ್ಯ ಪರ ಕೆಲಸಕ್ಕೆ ಒಪ್ಪಿದ ಬಿಜೆಪಿ ಮುಖಂಡ ನರೇಂದ್ರಬಾಬು!

ಚುನಾವಣೆ ಸಂದರ್ಭದಲ್ಲಿ ಹಾಗೂ ನಾಮಪತ್ರ ಸಲ್ಲಿಕೆಯಲ್ಲಿ ಯಾವುದಾದ್ರು ಕಾನೂನು ತೊಡಕುಗಳು ಉಂಟಾಗಬಹುದು. ಇಲ್ಲ ನಾಮಪತ್ರದಲ್ಲಿ ಏನಾದರೂ ತಪ್ಪುಗಳಾದರೇ ಉಮೇದುವಾರಿಕೆ ಕ್ಯಾನ್ಸಲ್ ಆಗುತ್ತೆ. ಈ ಹಿನ್ನೆಯಲ್ಲಿ ಮುಂಜಾಗ್ರತಾವಾಗಿ ಪತಿ ಜತೆ ಹೇಮಲತಾ ಗೋಪಾಲಯ್ಯ ಸಹ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು. 

ಪತಿ ಗೋಪಾಲನವರ ನಾಮಪತ್ರ ಸ್ವೀಕೃತವಾದ ಬಳಿಕ ಹೇಮಲತಾ ಅವರು ತಮ್ಮ ಉಮೇದುವಾರಿಕೆಯನ್ನು ವಾಪಸ್ ಪಡೆದುಕೊಳ್ಳಲಿದ್ದಾರೆ. ಈ ರೀತಿ ಮಾಡುವುದು ಇದೇ ಮೊದಲಲ್ಲ. ಗೋಪಾಲ ಸ್ಪರ್ಧೆ ಮಾಡಿದಾಗೊಮ್ಮೆ ಪಕ್ಷೇತರ ಅಭ್ಯರ್ಥಿಯಾಗಿ ಪತಿ ಜತೆ ಹೇಮಲತಾ ಸಹ ನಾಮೀನೇಷನ್ ಮಾಡುತ್ತಾ ಬಂದಿದ್ದಾರೆ.

ಪಕ್ಷೇತರ ಅಭ್ಯರ್ಥಿಗೆ ಬಿ.ಸಿ. ಪಾಟೀಲ್ ಪುತ್ರಿಯೂ ನಾಮಪತ್ರ
ಹೌದು...ಹೇಮಲತಾ ಗೋಪಾಲಯ್ಯ ಮಾದರಿಯಲ್ಲಿಯೇ ಹಿರೇಕೆರೂರು ಬಿಜೆಪಿ ಅಭ್ಯರ್ಥಿ ಬಿ.ಸಿ. ಪಾಟೀಲ್ ಪುತ್ರಿ ಶೃತಿ ಪಾಟೀಲ್ ಸಹ ತಂದೆಯ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ನಾಮಿನೇಷನ್ ಸಲ್ಲಿದ್ದಾರೆ. 

ಇಂದು [ಸೋಮವಾರ] ಶೃತಿ ಪಾಟೀಲ್ ತಂದೆಯೊಂದಿಗೆ ಹಿರೇಕೆರೂರು ತಹಶೀಲ್ದಾರ್ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಿದರು. ಮೇಲೆ ತಿಳಿಸಿದಂತೆ ಬಿ.ಸಿ. ಪಾಟೀಲ್ ನಾಮಪತ್ರದಲ್ಲಿ ಏನಾದರೂ ತಪ್ಪುಗಳಾಗಿ ನಾಮೀನೇಷನ್ ತಿರಸ್ಕೃತವಾಗುವ ಮುನ್ನೆಚ್ಚರಿಕೆ ಕ್ರಮವಾಗಿ ಶ್ರುತಿ ಪಾಟೀಲ್ ಉಮೇದುವಾರಿಕೆ ಸಲ್ಲಿಸಿದ್ದಾರೆ.

ಒಟ್ಟಿನಲ್ಲಿ ಇದೊಂದು ತರ ಸೇಫ್ಟಿ ಟ್ರಿಕ್ಸ್ ಎನ್ನಬಹುದು. ಯಾಕಂದ್ರೆ ಒಮ್ಮೆ ಸಲ್ಲಿಸಿದ ನಾಮಪತ್ರ ರಿಜೆಕ್ಟ್ ಆದ್ರೆ, ಮತ್ತೊಮ್ಮೆ ನಾಮಿನೇಷನ್ ಮಾಡಲು ಬರುವುದಿಲ್ಲ. ಹೀಗಾಗಿ ತಂತ್ರ ರೂಪಸಿದ್ದಾರೆ ಅಷ್ಟೇ. 

ನಾಮಪತ್ರ ಸಲ್ಲಿಸಲು ನ.18ರಂದು ಕಡೆಯ ದಿನ. 19ರಂದು ನಾಮಪತ್ರ ಪರಿಶೀಲನೆ ನಡೆಯಲಿದ್ದು, ನ.21 ನಾಮಪತ್ರ ಹಿಂಪಡೆಯಲು ಕಡೆಯ ದಿನವಾಗಿದೆ. ಡಿ.5ಕ್ಕೆ ಮತದಾನ ನಡೆಯಲಿದ್ದು, ಡಿ.9ರಂದು ಮತ ಎಣಿಕೆ ನಡೆಯಲಿದೆ.