ಬೆಂಗಳೂರು [ನ.17]: ಅನರ್ಹಗೊಂಡ ಶಾಸಕರಿಗೆ ಟಿಕೆಟ್‌ ಹಂಚಿಕೆಯಾದ ಬಳಿಕ ತಲೆದೋರಿದ ಭಿನ್ನಮತ ಶಮನಗೊಳಿಸುವಲ್ಲಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಯಶಸ್ವಿಯಾಗಿದ್ದು, ಮಹಾಲಕ್ಷ್ಮೀ ಲೇಔಟ್‌ ವಿಧಾನಸಭಾ ಕ್ಷೇತ್ರದ ಅಸಮಾಧಾನವನ್ನು ಶಮನಗೊಳಿಸಿದ್ದಾರೆ. ಅಭ್ಯರ್ಥಿ ಗೋಪಾಲಯ್ಯ ಪರ ಕೆಲಸ ಮಾಡಲು ಕ್ಷೇತ್ರದ ಮುಖಂಡರು ಸಮ್ಮತಿಸಿದ್ದಾರೆ.

ಮಹಾಲಕ್ಷ್ಮೀ ಲೇಔಟ್‌ ಕ್ಷೇತ್ರದಿಂದ ಮಾಜಿ ಉಪಮೇಯರ್‌ ಹರೀಶ್‌ ಮತ್ತು ಮಾಜಿ ಶಾಸಕ ನೆ.ಲ.ನರೇಂದ್ರಬಾಬು ಟಿಕೆಟ್‌ ಆಕಾಂಕ್ಷಿಯಾಗಿದ್ದರು. ಅನರ್ಹಗೊಂಡ ಶಾಸಕ ಗೋಪಾಲಯ್ಯ ಟಿಕೆಟ್‌ ನೀಡಿರುವುದರಿಂದ ಇಬ್ಬರು ಬೇಸರಗೊಂಡಿದ್ದರು. ಶುಕ್ರವಾರ ಹರೀಶ್‌ ಅವರ ಮನವೊಲಿಕೆಗೆ ಮುಖ್ಯಮಂತ್ರಿ ಯಡಿಯೂರಪ್ಪ ಪ್ರಯತ್ನ ನಡೆಸಿದರು. ವಸತಿ ಸಚಿವ ವಿ.ಸೋಮಣ್ಣ ಸೇರಿದಂತೆ ಇತರರು ಸಭೆಯಲ್ಲಿ ಭಾಗವಹಿಸಿದ್ದರು.

ಮುಖ್ಯಮಂತ್ರಿ ಯಡಿಯೂರಪ್ಪ ಭೇಟಿ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ನೆ.ಲ.ನರೇಂದ್ರ ಬಾಬು, ಪಕ್ಷದ ಸಂದಿಗ್ಧ ಪರಿಸ್ಥಿತಿಯಲ್ಲಿದೆ. ಅದಕ್ಕಾಗಿ ನಾನು ಪಕ್ಷದ ಆದೇಶದಂತೆ ಕೆಲಸ ಮಾಡುತ್ತೇನೆ. ಬರುವ ಚುನಾವಣೆಯಲ್ಲಿ ಸನ್ನೇಶ ಹೇಗೆ ಇರುತ್ತದೆಯೋ ಗೊತ್ತಿಲ್ಲ. ಸದ್ಯದ ಸಂದಿಗ್ಧ ಪರಿಸ್ಥಿತಿಯಲ್ಲಿ ನಾನು ಪಕ್ಷದ ಆದೇಶವನ್ನು ಪಾಲನೆ ಮಾಡಲೇಬೇಕು. ಕ್ಷೇತ್ರದ ಜನರ ಹಿತ ಕಾಪಾಡುವುದು ಮುಖ್ಯವಾಗಿದೆ. ಇಲ್ಲಿ ವ್ಯಕ್ತಿ ಮುಖ್ಯವಲ್ಲ, ಪಕ್ಷ ಮುಖ್ಯವಾಗಿದೆ ಎಂದು ತಿಳಿಸಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಯಡಿಯೂರಪ್ಪ ಅವರು ಮೂರುವರೆ ವರ್ಷ ಮುಖ್ಯಮಂತ್ರಿಯಾಗಿ ಮುಂದುವರಿಯಬೇಕು. ಅದಕ್ಕಾಗಿ ಅವರು ಹೇಳಿದಂತೆ ಕೇಳುತ್ತೇನೆ. ಪಕ್ಷದ ಅಭ್ಯರ್ಥಿಯ ಗೆಲುವಿಗೆ ಪ್ರಯತ್ನಿಸುತ್ತೇನೆ. ಕ್ಷೇತ್ರದ ಜನತೆ ನನ್ನ ಜತೆ ಕೈ ಜೋಡಿಸುವಂತೆ ಮನವಿ ಮಾಡುತ್ತೇನೆ. ಇಂತಹ ಪರಿಸ್ಥಿತಿ ಬರಲಿದೆ ಎಂದು ನಿರೀಕ್ಷಿರಲಿಲ್ಲ. ಪರಿಸ್ಥಿತಿ ತಕ್ಕಂತೆ ರಾಜಕಾರಣ ಬದಲಾಗಲಿದ್ದು, ಅದಕ್ಕೆ ಎಲ್ಲರೂ ಹೊಂದಿಕೊಂಡು ಹೋಗಲೇಬೇಕು ಎಂದರು.

ಸಚಿವ ವಿ.ಸೋಮಣ್ಣ ಮಾತನಾಡಿ, ಎಲ್ಲವೂ ಸುಖಾಂತ್ಯ ಕಂಡಿದೆ. ಚುನಾವಣೆ ಪ್ರಚಾರದಲ್ಲಿ ಎಲ್ಲರೂ ಸಕ್ರಿಯವಾಗಿ ಪಾಲ್ಗೊಳ್ಳಲಿದ್ದಾರೆ. ನೆ.ಲ.ನರೇಂದ್ರ ಬಾಬು ಅವರು ಅವರದೇ ಆದ ವ್ಯವಸ್ಥೆಯಲ್ಲಿ ಬೆಳೆದು ಬಂದವರಾಗಿದ್ದಾರೆ. ಕಳೆದ ಬಾರಿ ಕ್ಷೇತ್ರದಿಂದ ಸ್ಪರ್ಧಿಸಿ ಸೋಲನುಭಿಸಿದ್ದರು. ಮಹಾಲಕ್ಷ್ಮೀ ಲೇಔಟ್‌ ಕ್ಷೇತ್ರ ಉಸ್ತುವಾರಿಯಾಗಿದ್ದರಿಂದ ಅವರನ್ನು ಕರೆದು ಮುಖ್ಯಮಂತ್ರಿಗಳ ಜತೆ ಮಾತುಕತೆ ನಡೆಸಲಾಗಿದೆ. ಯಾರಿಗೂ ಅಸಮಾಧಾನ ಇಲ್ಲ. ಜೆಡಿಎಸ್‌-ಕಾಂಗ್ರೆಸ್‌ನ 17 ಮಂದಿ ತ್ಯಾಗ ಮಾಡಿಲ್ಲದಿದ್ದರೆ ನಮ್ಮ ಸರ್ಕಾರ ಬರುತ್ತಿರಲಿಲ್ಲ. ಪಕ್ಷದ ಕಾರ್ಯಕರ್ತರು ಬುದ್ಧಿವಂತರಿದ್ದಾರೆ. ಅವರಿಗೆ ಇವೆಲ್ಲವೂ ಗೊತ್ತಿದೆ. ಎಲ್ಲರೂ ಪಕ್ಷ ಮತ್ತು ಸರ್ಕಾರ ಪರ ಕೆಲಸ ಮಾಡಲಿದ್ದಾರೆ ಎಂದು ತಿಳಿಸಿದರು.

ಡಿಸೆಂಬರ್  5 ರಂದು ರಾಜ್ಯದಲ್ಲಿ  ಉಪ ಚುನಾವಣೆ ನಡೆಯಲಿದ್ದು ಡಿಸೆಂಬರ್ 9ಕ್ಕೆ ಫಲಿತಾಂಶ ಪ್ರಕಟವಾಗಲಿದೆ.