ಪತ್ರಕರ್ತ, ಬ್ಲಾಗರ್ ಬೇಳೂರು ಸುದರ್ಶನಗೆ ಸಂಪುಟ ದರ್ಜೆ ಸ್ಥಾನ, ಯಾವ ಹುದ್ದೆ?
ಪತ್ರಕರ್ತ, ಬ್ಲಾಗರ್ ಬೇಳೂರು ಸುದರ್ಶನ ಅವರಿಗೆ ಸಚಿವ ಸಂಪುಟ ಸ್ಥಾನದ ಹುದ್ದೆ/ ಸಿಎಂ ಯಡಿಯೂರಪ್ಪ ಇ-ಆಡಳಿತ ವಿಭಾಗದ ನೂತನ ಸಲಹೆಗಾರ/ ಕನ್ನಡ ಸಾಹಿತ್ಯ ಲೋಕದಲ್ಲಿ ಚಿರಪರಿಚಿತ ಹೆಸರು.
ಬೆಂಗಳೂರು[ಅ.25] ಪತ್ರಕರ್ತ, ಬ್ಲಾಗರ್ ಬೇಳೂರು ಸುದರ್ಶನ ಅವರಿಗೆ ಸಚಿವ ಸಂಪುಟ ಸ್ಥಾನಮಾನದ ಹುದ್ದೆಯನ್ನು ರಾಜ್ಯ ಸರ್ಕಾರದ ನೀಡಿದೆ. ಇ- ಆಡಳಿತ ವಿಭಾಗದ ಮುಖ್ಯಮಂತ್ರಿ ಸಲಹೆಗಾರ ಹುದ್ದೆ ನೀಡಲಾಗಿದೆ.
ರಾಜ್ಯಪಾಲರ ಆದೇಶದ ಅನ್ವಯ ಸರ್ಕಾರದ ಅಧೀನ ಕಾರ್ಯದರ್ಶಿ ಎಸ್.ಆರ್.ಶಿವಕುಮಾರ್ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.
ಶಿವಮೊಗ್ಗ ಜಿಲ್ಲೆ ಬೇಳೂರಿನ ಸುದರ್ಶನ ಕನ್ನಡ ಸಾಹಿತ್ಯ ಲೋಕದಲ್ಲಿ ಗುರುತಿಸಿಕೊಂಡವರು. ವಿದ್ಯುನ್ಮಾನ ಮಾಧ್ಯಮದಲ್ಲಿಯೂ ಅಪಾರ ಜ್ಞಾನ ಹೊಂದಿದ್ದಾರೆ.
ಮಹಾ ರಿಸಲ್ಟ್: ಬಿಜೆಪಿಗೆ ಹಿನ್ನಡೆಯಾದರೂ ಬಿಎಸ್ವೈ ಮುಖದಲ್ಲಿ ಮಂದಹಾಸ
ಹೊಸದಿಗಂತ ಪತ್ರಿಕೆಯ ಸಂಪಾದಕರಾಗಿಯೂ ಸುದರ್ಶನ ಕಾರ್ಯ ನಿರ್ವಹಿಸಿದ್ದರು. ಮುದ್ರಣ, ಟಿವಿ ಮತ್ತು ಆನ್ ಲೈನ್ ಮೂರು ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಸುದರ್ಶನ ಅವರಿಗೆ ಇದೆ.
ಪತ್ರಕರ್ತರಾಗಿ:
ವಿಕ್ರಮ ವಾರಪತ್ರಿಕೆ ಸಂಪಾದಕರಾಗಿ, ಹೊಸದಿಂತ ದಿನಪತ್ರಿಕೆ ಸಂಪಾದಕರಾಗಿ, ರಾಷ್ಟ್ರೀಯ ವಿಚಾರಗಳ ಆಧಾರಿತ ಅಸೀಮಾ ಇ-ಮ್ಯಾಗಜಿನ್ ಸಂಸ್ಥಾಪಕರಾಗಿ, ಟಿಎಂಜಿ ಟಿವಿ ಕನ್ನಡ ಬ್ಯಾಂಡ್ ಸಂಪಾದಕರಾಗಿ, ವಿಜಯ ಕರ್ನಾಟಕ ದಿನಪತ್ರಿಕೆ ಪುರವಣಿ ವಿಭಾಗದ ಸಂಪಾದಕರಾಗಿ, ತೋರಣಗಲ್ಲು JSW ಕಾರ್ಪೋರೇಟ್ ಕಮ್ಯೂನಿಕೇಶನ್ ಮ್ಯಾನೇಜರ್ ಆಗಿ, 2008ರ ವಿಧಾನಸಭೆ ಚುನಾವಣೆ ಸಂದರ್ಭ ಬಿಎಸ್ ಯಡಿಯೂರಪ್ಪ ಅವರ ಸಲಹೆಗಾರರಾಗಿ, ಅಮೃತಾ ಇಸ್ಟಿಟ್ಯೂಟ್ ಆಫ್ ಎಂಜಿನಿಯರಿಂಗ್ ಆ್ಯಂಡ್ ಮ್ಯಾನೇಜ್ ಮೆಂಟ್ ಆಡಳಿತ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ ಜ್ಞಾನ ಬೇಳೂರು ಅವರಿಗಿದೆ.
ಇಂಟರ್‌ನೆಟ್ ಯುಗದಲ್ಲಿ:
ಕನ್ನಡದ ಅಂತರ್ಜಾಲ ಜ್ಞಾನಕೋಶ ‘ಕಣಜ’ದ ಅಭಿವೃದ್ಧಿಯಲ್ಲಿ ಬೇಳೂರು ಸುದರ್ಶನ ಪಾತ್ರ ಪ್ರಮುಖವಾದದ್ದು. ಕನ್ನಡದಲ್ಲಿ ಬ್ಲಾಗಿಂಗ್ ಆರಂಭಿಸಿದ ಪ್ರಥಮ ಪೀಳಿಗೆಯ ಪತ್ರಕರ್ತರಲ್ಲೊಬ್ಬರು. ಹಂಪಿ ಕನ್ನಡ ವಿಶ್ವವಿದ್ಯಾಲಯಕ್ಕಾಗಿ ಕಂಪ್ಯೂಟರ್ ವಿಷಯಗಳ ಪುಸ್ತಕ ರಚನೆ, ತಾಂತ್ರಿಕ ಬರವಣಿಗೆ ಪುಸ್ತಕ ರಚನೆ, ಕನ್ನಡ ಪತ್ರಿಕೋದ್ಯಮಕ್ಕಾಗಿ 500ಕ್ಕೂ ಹೆಚ್ಚು ಯುವ ಪತ್ರಿಕೋದ್ಯಮಿಗಳಿಗೆ ತರಬೇತಿ, ಸಾಮಾಜಿಕ ಶೈಕ್ಷಣಿಕ ಸಂಸ್ಥೆಗಳು, ವಿಶ್ವವಿದ್ಯಾಲಯಗಳಲ್ಲಿ ಮಾಧ್ಯಮ ಮತ್ತು ತಂತ್ರಜ್ಞಾನಗಳ ಸಲಹೆಗಾರ ಆಗಿ ಕೆಲಸ ಮಾಡಿದ್ದಾರೆ. ಭಾರತದ ಸಕಲ ಭಾರತೀಯ ಭಾಷೆಗಳ ಬೃಹತ್ ಮುಕ್ತಜ್ಞಾನ ತಾಣವಾದ ‘ಭಾರತವಾಣಿ’ಯ ಪ್ರಮುಖ ಸಲಹೆಗಾರರಲ್ಲೊಬ್ಬರಾಗಿದ್ದು ಮಿತ್ರ ಮಾಧ್ಯಮ ಟ್ರಸ್ಟ್ ಮೂಲಕ ಜನಪರ ಕೆಲಸಗಳನ್ನು ಮಾಡಿದ್ದಾರೆ.
ನಿರ್ವಹಿಸಿದ ಜವಾಬ್ದಾರಿ: ಪ್ರಾದೇಶಿಕ ಸೆನ್ಸಾರ್ ಬೋರ್ಡ್ ಸದಸ್ಯರಾಗಿ, ಚರಕ ಫೌಂಡೇಶನ್ ನ ಮೀಡಿಯಾ ಅಡ್ವಸರಿ ಕೌನ್ಸಿಲ್ ಸದಸ್ಯರಾಗಿ, ಹಂಪಿ ಯುನಿವರ್ಸಿಟಿಯ ದೂರ ಶಿಕ್ಷಣ ವಿಭಾಗದ ಅಧ್ಯಕ್ಷರಾಗಿಯೂ ಸುದರ್ಶನ ವಿವಿಧ ಜವಾಬ್ದಾರಿ ನಿರ್ವಹಿಸಿದ್ದಾರೆ. ಉತ್ತರ ಪ್ರದೇಶದ 2005ರ ನ್ಯಾಶನಲ್ ಯುತ್ ವ್ರೈಟರ್ ಅವಾರ್ಡ್ ಗೌರವ ಸಹ ಸುದರ್ಶನ ಅವರಿಗೆ ಸಂದಿದೆ.
ಬಿಎಸ್ ವೈ-ಸಿದ್ದು ಜಂಗೀಕುಸ್ತಿಯಲ್ಲಿ ಗೆದ್ದು ಬೀಗಿದವರು ಯಾರು?
ವರ್ತಮಾನದ ಬಿಸಿಲು[ಕವನ ಸಂಕಲನ] , ಸರಸ್ವತಿ ನದಿಯಿಂದ ಸಿಂಧೂ ಲಿಪಿವರೆಗೆ[ಇತಿಹಾಸ] ಪುಸ್ತಕಗಳು ಇವರ ಸಾಹಿತ್ಯ ಸಾಧನೆಗೆ ಹಿಡಿದ ಕನ್ನಡಿ. ಇಂಗ್ಲಿಷ್ ನಿಂದ ಅನೇಕ ಪುಸ್ತಕಗಳನ್ನು ಕನ್ನಡಕ್ಕೆ ಭಾಷಾಂತರ ಮಾಡಿ ಫ್ರೌಢಿಮೆ ಮೆರೆದಿದ್ದಾರೆ. ಭಾಷಾಂತರ ಮಾಡಿದ ಕೆಲ ಪುಸ್ತಕಗಳು
* ನಾವೇಕೆ ವಿಷಮಯವಾಗಬೇಕು?
* ಜಿ.ಡಿ.ದೇಶ್ ಮುಖ್ ಅವರ ಭಾಷಣಗಳು
* ಹುಲ್ಲಿನ ಸಾರು
* ಹಿಮದೊಡಲ ತಲ್ಲಣ
*ಕನ್ನಡದಲ್ಲಿ ಸುಮಾರು 15ಕ್ಕೂ ಅಧಿಕ ಪುಸ್ತಕ ಪ್ರಕಟ ಮಾಡಿದ್ದಾರೆ.
* ತಮ್ಮ https://beluru.com/ ಮೂಲಕವೂ ಅನೇಕ ಬರಹಗಳನ್ನು ಜನಮಾನಸಕ್ಕೆ ತಲುಪಿಸುವ ಕೆಲಸ ಮಾಡುತ್ತಿದ್ದಾರೆ.