ಬೆಂಗಳೂರು(ಫೆ.22) ಜೆಡಿಎಸ್‌ ಮತ್ತು ಕಾಂಗ್ರೆಸ್ ನಡುವೆ ಟಿಕೆಟ್ ಹಂಚಿಕೆ ಬಗ್ಗೆ ಚರ್ಚೆ ಆಗಿಲ್ಲ ಎನ್ನುವುದನ್ನು ನಾಯಕರು ಮೇಲ್ನೋಟಕ್ಕೆ ಹೇಳುತ್ತಿದ್ದರೂ ಒಂದೆಲ್ಲಾ ಒಂದು ಕಾರಣಕ್ಕೆ ಎರಡು ಪಕ್ಷಗಳ ನಾಯಕರ ನಡುವೆ ಭಿನ್ನ ಅಭಿಪ್ರಾಯಗಳು ಹೊರಹೊಮ್ಮುತ್ತಲೆ ಇವೆ.

ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ದೇವೇಗೌಡರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದರು.  ನಿಗದಿಯಂತೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ ದೇವೇಗೌಡರನ್ನು ಭೇಟಿ ಮಾಡಬೇಕಿತ್ತು. ಆದರೆ ವೇಣುಗೋಪಾಲ್ ತುರ್ತು ಕಾರ್ಯಕ್ರಮದ ನೆಪವೊಡ್ಡಿ ಕಾಂಗ್ರೆಸ್ ಕಚೇರಿಯಿಂದ ಕೊಚ್ಚಿಗೆ ತೆರಳಿದ್ದಾರೆ.

ಗೌಡರ ಮುನಿಸು: ಗುಂಡೂರಾವ್‌ಗೆ ಮನವೊಲಿಸುವ ಕನಸು!

ಹಾಲಿ ಕಾಂಗ್ರೆಸ್ ಸಂಸದರಿಗೆ ಟಿಕೆಟ್ ಸಿಗಲಿದೆ ಎಂಬ ವಿಚಾರ ಸಹಜವಾಗಿಯೇ ದೇವೇಗೌಡರ ಮುನಿಸಿಗೆ ಕಾರಣ. ಚಿಕ್ಕಬಳ್ಳಾಪುರ, ಮಂಡ್ಯ, ಕೋಲಾರದಂತಹ ಕ್ಷೇತ್ರಗಳ ಮೇಲೆ ಜೆಡಿಎಸ್ ಕಣ್ಣಿಟ್ಟಿತ್ತು. ಆದರೆ ಮಂಡ್ಯದಿಂದ ಸುಮಲತಾ ಅಂಬರೀಶ್ ಕಣಕ್ಕೆ ಇಳಿಯುವುದು ಪಕ್ಕಾ ಆಗಿದೆ. ಕಾಂಗ್ರೆಸ್ ಸುಮಲತಾ ಅವರಿಗೆ ಬಾಹ್ಯ ಬೆಂಬಲ ನೀಡುವ ಸಾಧ್ಯತೆಯೂ ಹೆಚ್ಚಾಗಿದೆ.

ಇನ್ನೊಂದು ಕಡೆ ಮಂಡ್ಯ ಜೆಡಿಎಸ್ ಭದ್ರಕೋಟೆ ಎಂಬ ಮಾತನ್ನು ಜೆಡಿಎಸ್ ನಾಯಕರು ಹೇಳಿಕೊಂಡೇ ಬಂದಿದ್ದಾರೆ. ಇದೆಲ್ಲದರ ಪರಿಣಾಮವೇ ದೇವೇಗೌಡರ ಮುನಿಸು. ದೇವೇಗೌಡರಿಗೆ ಯಾವ ಆಧಾರಗಳನ್ನು ನೀಡಿ ಮನವೊಲಿಸಬೇಕು ಎಂಬ ಸವಾಲು ಸದ್ಯ ಕಾಂಗ್ರೆಸ್ ನಾಯಕರನ್ನು ಕಾಡುತ್ತಿದೆ.