ಅಧಿಕಾರದ ಮದದಿಂದ ಮಿದುಳಿಗೂ ಗೆದ್ದಲು ಹಿಡಿದಿದೆ: ಕಾಂಗ್ರೆಸ್ ವಿರುದ್ಧ ಹರಿಹಾಯ್ದ ಜೆಡಿಎಸ್
135 ಸೀಟು ಗೆದ್ದಿದ್ದೇವೆ ಎನ್ನುವ ಧಿಮಾಕಿನಲ್ಲಿ ಏನು ಹೇಳಿದರೂ ಜನ ನಂಬುತ್ತಾರೆಂಬ ಅಹಂಕಾರವೇ? ಆಗ ಎಚ್.ಡಿ. ದೇವೇಗೌಡ ಅವರ ಮನೆ ಅಂಗಳದಲ್ಲಿ ಅಂಗಿ ಮಡಚಿ ಮುಖ ಒಣಗಿಸಿಕೊಂಡು ನಿಂತ ಧೀರರು ಯಾರೆಂದು ಗೊತ್ತಿಲ್ಲವೇ? ಎಲ್ಲೋ ಇದ್ದ ಕುಮಾರಸ್ವಾಮಿ ಅವರನ್ನು ಪಾಪರಾಜ್ಜಿಗಳಂತೆ ಬೆನ್ಹತ್ತಿ, ಆಮೇಲೆ ಕಾಡಿ ಬೇಡಿ ದೇವೇಗೌಡರ ಪದತಲಕ್ಕೆ ಬಿದ್ದವರ ಪುರಾಣ ಬಿಚ್ಚಿಡಬೇಕೆ? ಎಂದು ಸವಾಲ್ ಹಾಕಿದ ಜೆಡಿಎಸ್

ಬೆಂಗಳೂರು(ಅ.11): ಮೂರ್ಖರಿಗೆ ಬುದ್ಧಿ ಮಂದ ಎನ್ನುವುದು ಮಾತು. ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಅದೇ ಆಗಿದೆ. ಅಧಿಕಾರದ ಮದದಿಂದ ಅದರ ಮಿದುಳಿಗೂ ಗೆದ್ದಲು ಹಿಡಿದಿದೆ. 4 ವರ್ಷದ ಹಿಂದೆ ಸರಕಾರ ಮಾಡಲು ಸಿದ್ದರಾಮಯ್ಯ ಅವರು ಡಿ.ಕೆ. ಶಿವಕುಮಾರ್ ಅವರ ಮನೆಗೆ ಎಚ್.ಡಿ. ಕುಮಾರಸ್ವಾಮಿ ಅವರು ಬಂದಿದ್ದರಾ? ಸುಳ್ಳು ಹೇಳುವುದಕ್ಕೆ ಸಾಸಿವೆ ಕಾಳಿನಷ್ಟಾದರೂ ಸಂಕೋಚ ಬೇಡವೇ? ಎಂದು ಕಾಂಗ್ರೆಸ್ ವಿರುದ್ಧ ಜೆಡಿಎಸ್ ಹರಿಹಾಯ್ದಿದೆ.
ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಕಾಂಗ್ರೆಸ್ ವಿರುದ್ಧ ಕಿಡಿಕಾರಿದ ಜೆಡಿಎಸ್, 135 ಸೀಟು ಗೆದ್ದಿದ್ದೇವೆ ಎನ್ನುವ ಧಿಮಾಕಿನಲ್ಲಿ ಏನು ಹೇಳಿದರೂ ಜನ ನಂಬುತ್ತಾರೆಂಬ ಅಹಂಕಾರವೇ? ಆಗ ಎಚ್.ಡಿ. ದೇವೇಗೌಡ ಅವರ ಮನೆ ಅಂಗಳದಲ್ಲಿ ಅಂಗಿ ಮಡಚಿ ಮುಖ ಒಣಗಿಸಿಕೊಂಡು ನಿಂತ ಧೀರರು ಯಾರೆಂದು ಗೊತ್ತಿಲ್ಲವೇ? ಎಲ್ಲೋ ಇದ್ದ ಕುಮಾರಸ್ವಾಮಿ ಅವರನ್ನು ಪಾಪರಾಜ್ಜಿಗಳಂತೆ ಬೆನ್ಹತ್ತಿ, ಆಮೇಲೆ ಕಾಡಿ ಬೇಡಿ ದೇವೇಗೌಡರ ಪದತಲಕ್ಕೆ ಬಿದ್ದವರ ಪುರಾಣ ಬಿಚ್ಚಿಡಬೇಕೆ? ಎಂದು ಸವಾಲ್ ಹಾಕಿದೆ.
'ಡಿಕೆಶಿ ಜೈಲಿಗೆ ಕಳಿಸೋಕೆ ಕುಮಾರಸ್ವಾಮಿ ಬಿಜೆಪಿ ಜೊತೆ ಕೈ ಜೋಡಿಸಿದ್ರಾ?'
'ಕೈ' ಅಭಯದ ಸಂಕೇತವೆಂದು ನಂಬಿದ್ದರು ಕುಮಾರಸ್ವಾಮಿ. ಆದರೆ, ಡಿ.ಕೆ.ಶಿವಕುಮಾರ್ ಅವರದ್ದು 'ಕೈ' ಎತ್ತುವುದಷ್ಟೇ ಅಲ್ಲ, 'ಕೈ' ಕೊಡುವುದರಲ್ಲೂ ಎತ್ತಿದ 'ಕೈ' ಎಂದು ಅವರಿಗೆ ಗೊತ್ತಾಗಲೇ ಇಲ್ಲ. ಅಸೆಂಬ್ಲಿಯಲ್ಲಿ 'ಕೈ' ಎತ್ತಿದರು, ಮಂಡ್ಯದಲ್ಲೂ 'ಕೈ' ಎತ್ತಿದರು. ಬೆಂಗಳೂರು ಗ್ರಾಮಾಂತರದಲ್ಲೂ 'ಕೈ' ಎತ್ತಿದರು!! ಪಾಪ.. ಕುಮಾರಸ್ವಾಮಿ ಅವರು ನಂಬಿದರು. ಬೆಂಗಳೂರು ಗ್ರಾಮಾಂತರದಲ್ಲಿ ಕುಮಾರಸ್ವಾಮಿಯವರು, ಅವರ 'ಕೈ' ಹಿಡಿದರು. ಮಂಡ್ಯದಲ್ಲಿ ಅದೇ 'ಕೈ' ಅವರನ್ನು ನಡುರಸ್ತೆಯಲ್ಲಿ ಬಿಟ್ಟು ಜಾರಿಕೊಂಡಿತು. ಇದೆಂತಾ ಕೈಚಳಕ? ಅವರ ಹಸ್ತವಾಸಿ ವಿಸ್ವಾಸಘಾತುಕಕ್ಕೇ ಹೆಸರುವಾಸಿ.. ಅಲ್ಲವೇ ಎಂದು ಪ್ರಶ್ನಿಸಿದೆ.