Karnataka Politics: ಉತ್ತರ ಕರ್ನಾಟಕದಲ್ಲಿ ಜೆಡಿಎಸ್ ಇನ್ನಷ್ಟು ಕ್ಷೀಣ
ಜಾತ್ಯಾತೀತ ಜನತಾದಳ (ಜೆಡಿಎಸ್)ದ ಹಿರಿಯ ನಾಯಕ ಎನಿಸಿರುವ ಬಸವರಾಜ ಹೊರಟ್ಟಿ ಅವರು ಬಿಜೆಪಿಯ ಕಮಲ ಮುಡಿಯಲು ಮುಂದಾಗಿದ್ದು, ಉತ್ತರ ಕರ್ನಾಟಕದಲ್ಲಿ ಜೆಡಿಎಸ್‌ಗೆ ಮತ್ತಷ್ಟು ಹೊಡೆತ ಬಿದ್ದಿದೆ.
ಹುಬ್ಬಳ್ಳಿ (ಏ.03): ಜಾತ್ಯಾತೀತ ಜನತಾದಳ (ಜೆಡಿಎಸ್)ದ (JDS) ಹಿರಿಯ ನಾಯಕ ಎನಿಸಿರುವ ಬಸವರಾಜ ಹೊರಟ್ಟಿ (Basavaraj Horatti) ಅವರು ಬಿಜೆಪಿಯ (BJP) ಕಮಲ ಮುಡಿಯಲು ಮುಂದಾಗಿದ್ದು, ಉತ್ತರ ಕರ್ನಾಟಕದಲ್ಲಿ ಜೆಡಿಎಸ್‌ಗೆ ಮತ್ತಷ್ಟು ಹೊಡೆತ ಬಿದ್ದಿದೆ. ಸದ್ಯ ಸಭಾಪತಿಯಾಗಿರುವ ಹೊರಟ್ಟಿಇಷ್ಟರಲ್ಲೇ ಎದುರಾಗಲಿರುವ ವಿಧಾನಪರಿಷತ್ತಿನ ಪಶ್ಚಿಮ ಶಿಕ್ಷಕರ ಕ್ಷೇತ್ರದ ಚುನಾವಣೆಗೆ ತಾವು ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಭಾನುವಾರ ಮಾಧ್ಯಮಗಳ ಎದುರು ಘೋಷಿಸಿದ್ದು, ಬಿಜೆಪಿ ಕೂಡ ಅವರನ್ನು ಸ್ವಾಗತಿಸಲು ಸಿದ್ಧತೆ ನಡೆಸಿದೆ.
ಈ ಭಾಗದಲ್ಲಿ ತುಸು ಕ್ರಿಯಾಶೀಲ ದಳಪತಿಗಳು ಎನಿಸಿದ್ದ ಸಿಂದಗಿಯ ಎಂ.ಸಿ.ಮನಗೂಳಿ ಆಕಸ್ಮಿಕ ನಿಧನರಾದರು. ಗೋಕಾಕದ ಅಶೋಕ ಪೂಜಾರಿ ಬೆನ್ನಲ್ಲೇ ನವಲಗುಂದ ಕ್ಷೇತ್ರದ ಮಾಜಿ ಶಾಸಕ ಎನ್.ಎಚ್.ಕೋನರಡ್ಡಿ ಕೂಡ ಕಾಂಗ್ರೆಸ್ ಕೈಹಿಡಿದರು. ಕಾರವಾರದ ಆನಂದ ಅಸ್ನೋಟಿಕರ್ ಕೂಡ ಬಹುದಿನಗಳಿಂದ ಕಾಂಗ್ರೆಸ್ ಬಾಗಿಲು ತಟ್ಟುತ್ತಿದ್ದು ಮುಂದಿನ ಚುನಾವಣೆ ವೇಳೆಗೆ ಅವರು ಜೆಡಿಎಸ್ ತೊರೆಯುವುದು ಖಚಿತವಾಗಿದೆ. ಈಗ ಹೊರಟ್ಟಿಬಿಜೆಪಿಗೆ ಹೋಗುವುದಾಗಿ ಸ್ವತಃ ಘೋಷಿಸಿರುವುದು ನಿಜಕ್ಕೂ ಜೆಡಿಎಸ್‌ಗೆ ದೊಡ್ಡ ಹೊಡೆತ.
ಹುಬ್ಬಳ್ಳಿಯಲ್ಲಿ ಎಚ್‌ಡಿಕೆ ಮನೆ: ಎಚ್.ಡಿ.ಕುಮಾರಸ್ವಾಮಿ (HD Kumaraswamy) ಉತ್ತರ ಕರ್ನಾಟಕದಲ್ಲಿ ಜೆಡಿಎಸ್ ಸಂಘಟಿಸುವ ಮತ್ತು ಬೆಳೆಸುವ ಹಂಬಲದಿಂದ ಕಳೆದ ಚುನಾವಣೆ ಸಂದರ್ಭದಲ್ಲಿ ಹುಬ್ಬಳ್ಳಿಯಲ್ಲಿ ಮನೆ ಮಾಡಿದ್ದರು. ಅಲ್ಲಿ ದಿನವೂ ಸಾವಿರಾರು ಜನ ಸೇರುತ್ತಿದ್ದರು. ಆದರೆ ಅದಾವುದೂ ಮತವಾಗಿ ಪರಿವರ್ತನೆಯಾಗದೆ ಚುನಾವಣೆಯಲ್ಲಿ ಯಾರೊಬ್ಬರೂ ಗೆಲ್ಲಲಿಲ್ಲ. ಭಾರಿ ಭರವಸೆ ಹೊಂದಿದ್ದ ಕೋನರಡ್ಡಿ ಕೂಡ ಸೋತರು. ಆಗ ಶುರುವಾದ ದಳಪತಿಗಳ ನಿರ್ಗಮನ ಪಥಸಂಚಲನ ಇನ್ನೂ ನಿಂತಿಲ್ಲ. ಸಾಲು ಸಾಲು ದಳಪತಿಗಳು ಕಾಂಗ್ರೆಸ್, ಬಿಜೆಪಿಗೆ ಹೋದರು.
ಹೊರಟ್ಟಿ ಬೆನ್ನಲ್ಲೇ ಜೆಡಿಎಸ್‌ನ ಬಹಳಷ್ಟು ನಾಯಕರು ಬಿಜೆಪಿ ಕಡೆ ಒಲವು, ಮಾಜಿ ಸಿಎಂ ಸ್ಫೋಟಕ ಸುಳಿವು
ತಮ್ಮೊಂದಿಗೆ ಕಾರ್ಯಕರ್ತರನ್ನೂ ಕರೆದೊಯ್ದರು. ಉಳಿದೊಬ್ಬ ಹೊರಟ್ಟಿಯೂ ಕಮಲ ಹಿಡಿಯುತ್ತಿರುವುದರಿಂದ ಎಚ್‌ಡಿಕೆ ಮನೆ ಮಾಡಿದ ನೆಲದಲ್ಲಿ ತೆನೆ ಹೊರಲು ಮತ್ತೊಬ್ಬ ನಾಯಕ ಇಲ್ಲದಂತಹ ಪರಿಸ್ಥಿತಿ ಜೆಡಿಎಸ್‌ಗೆ ಎದುರಾಗಿದೆ. ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಪ್ರತಿನಿಧಿಸುವ ಬಾಗಲಕೋಟೆ ಜಿಲ್ಲೆ ಬಾದಾಮಿ ಕ್ಷೇತ್ರದಲ್ಲಿ ಜೆಡಿಎಸ್ ನಿಧಾನವಾಗಿ ಗಟ್ಟಿಗೊಳ್ಳುತ್ತಿದೆ. ಆದರೆ, ಪಕ್ಷದಿಂದ ಹೇಳಿಕೊಳ್ಳುವಷ್ಟುಬೆಂಬಲ ಸಿಗದೇ ಅಲ್ಲಿನ ಹನುಮಂತ ಮಾವಿನಮರದ ಹೆಣಗಾಡುತ್ತಿದ್ದಾರೆ ಎನ್ನುವ ಮಾತಿದೆ.
ಹಲವು ಕೊಡುಗೆ ನೀಡಿಯೂ...: ಕೃಷ್ಣಾ ಮೇಲ್ದಂಡೆ ಯೋಜನೆಗೆ ಎಚ್.ಡಿ.ದೇವೇಗೌಡರಿಂದ ಅತಿ ಹೆಚ್ಚು ಅನುದಾನ, ಬೆಳಗಾವಿಯಲ್ಲಿ ಮೊದಲ ಬಾರಿಗೆ ವಿಧಾನಸಭೆಯ ಅಧಿವೇಶನ ನಡೆಸಿದ ಎಚ್.ಡಿ.ಕುಮಾರಸ್ವಾಮಿ, ಜನತಾದಳ ಸರ್ಕಾರವಿದ್ದಾಗಲೇ ಉತ್ತರ ಕರ್ನಾಟಕದಲ್ಲಿ ಅತಿ ಹೆಚ್ಚು ಸರ್ಕಾರಿ ಶಾಲಾ-ಕಾಲೇಜುಗಳ ಆರಂಭ... ಇತ್ಯಾದಿ ಹತ್ತು ಹಲವು ಕೊಡುಗೆ ನೀಡಿಯೂ ಜೆಡಿಎಸ್‌ಗೆ ಇಂದು ಈ ಪರಿಸ್ಥಿತಿ ಎದುರಾಗಿರುವುದಕ್ಕೆ ಕಾರಣ ಏನು ಎನ್ನುವುದು ಶೇಷಪ್ರಶ್ನೆಯಾಗಿದೆ. ರಾಯಚೂರು, ಬೀದರ್ ಜಿಲ್ಲೆಗಳಲ್ಲಿ ತುಸು ಉಸಿರಾಟ ಇದೆಯಾದರೂ ಬಿಜೆಪಿ-ಕಾಂಗ್ರೆಸ್ ಅಬ್ಬರಗಳ ಮಧ್ಯೆ ಏಗಲಾರದೇ ಅಲ್ಲಿನ ನಾಯಕರು ಕುತ್ತುಸಿರು ಬಿಡುತ್ತಿದ್ದಾರೆ.
ಹಲಾಲ್ ಹಾಲಾಹಲದ ನಡುವೆಯೇ ಬರಸಿಡಿಲಿನಂತೆ ಅಪ್ಪಳಿಸಿದ ಸುದ್ದಿ. ಎಚ್‌ಡಿಕೆ ಕೆಂಡಾಮಂಡಲ
ಸತತ ಏಳು ಬಾರಿ ಗೆಲುವು ಸಾಧಿಸುವ ಮೂಲಕ ಮೇಲ್ಮನೆ ಇತಿಹಾಸದಲ್ಲಿ ಹೊಸ ದಾಖಲೆ ಬರೆದಿರುವ ಬಸವರಾಜ ಹೊರಟ್ಟಿಅವರನ್ನು ಕುಮಾರಸ್ವಾಮಿ ನೇತೃತ್ವದ ಜೆಡಿಎಸ್-ಕಾಂಗ್ರೆಸ್ ಸರ್ಕಾರದಲ್ಲಿ ಸಂಪುಟಕ್ಕೆ ಸೇರಿಸಿಕೊಳ್ಳಲಿಲ್ಲ. ಅಲ್ಲದೆ ‘ಸಭಾಪತಿ’ ಸ್ಥಾನದಲ್ಲಿ ಕುಳ್ಳಿರಿಸಲೂ ಮೀನಮೇಷ ಎಣಿಸಿದ್ದು, ಪಕ್ಷದಲ್ಲೂ ಉನ್ನತ ಸ್ಥಾನ ನೀಡಲಿಲ್ಲ... ಇತ್ಯಾದಿ ಆರೋಪಗಳು ಇಂದು ಹೆಚ್ಚು ಮುನ್ನೆಲೆಗೆ ಬಂದಿವೆ.