ಹಲಾಲ್ ಹಾಲಾಹಲದ ನಡುವೆಯೇ ಬರಸಿಡಿಲಿನಂತೆ ಅಪ್ಪಳಿಸಿದ ಸುದ್ದಿ. ಎಚ್‌ಡಿಕೆ ಕೆಂಡಾಮಂಡಲ

* ಹಲಾಲ್ ಹಾಲಾಹಲದ ನಡುವೆಯೇ ಬರಸಿಡಿಲಿನಂತೆ ಅಪ್ಪಳಿಸಿದ ಸುದ್ದಿ
* ಬಿಜೆಪಿ ಸರ್ಕಾರದ ವಿರುದ್ಧ ಮಾಜಿ ಸಿಎಂ ಕೆಂಡಾಮಂಡಲ
*  ಸಾಮಾಜಿಕ ಜಾಲತಾಣಗಳಲ್ಲಿ ಬಿಜೆಪಿ ವಿರುದ್ಧ ಎಚ್‌ಡಿಕೆ ಆಕ್ರೋಶ 

HD kumaraswamy Hits Out at BJP government For petrol diesel price hike rbj

ಬೆಂಗಳೂರು, (ಏ.03): ಹಲಾಲ್ ಹಾಲಾಹಲದ ನಡುವೆಯೇ ಇಂದು ಬೆಳಗ್ಗೆ ಬರಸಿಡಿಲಿನಂತೆ ಅಪ್ಪಳಿಸಿದ ಸುದ್ದಿ. ಪೆಟ್ರೋಲ್, ಡೀಸೆಲ್ ದರ ಮತ್ತೆ ಏರಿಕೆ; 13 ದಿನಗಳಲ್ಲಿ 8 ರೂ. ಜಿಗಿತ! ಇದಪ್ಪಾ ʼಬಹುಜನ ಹಿತಾಯ, ಬಹುಜನ ಸುಖಾಯʼ ಎಂದು ಭಾಷಣ ಬಿಗಿಯುವ ಬಿಜೆಪಿ ಆಡಳಿತದಲ್ಲಿ ಇಂಡಿಯಾ ಶೈನಿಂಗ್! ಎಂದು ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ.

ದಿನೇ-ದಿನೇ ತೈಲ ಬೆಲೆ ಏರಿಕೆ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಡಿಸಿರುವ ಕುಮಾರಸ್ವಾಮಿ, 13 ದಿನದಿಂದ ಬೆಲೆ ಏರಿಕೆ ನಿರಂತರ. ಎರಡೂ ತೈಲಗಳ ಬೆಲೆ 8 ರೂ. ಹೆಚ್ಚಳ. ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ ಲೀಟರಿಗೆ 108.99 ರೂ., (ಇಂದಿನ ಹೆಚ್ಚಳ:88 ಪೈಸೆ) ಡೀಸೆಲ್ ಬೆಲೆ ಲೀಟರಿಗೆ 92.83 ರೂ.(ಇಂದಿನ ಹೆಚ್ಚಳ:78 ಪೈಸೆ) ಜಿಗಿದಿದೆ. ಖಜಾನೆ ಭರ್ತಿಗೆ ಷೇರು ಸೂಚ್ಯಂಕವನ್ನು ಕುಣಿಸಿದಂತೆ, ಬೆಲೆ ಸೂಚ್ಯಂಕದ ಕರಡಿ ಕುಣಿತವೂ ಭರ್ಜರಿ ಎಂದಿದ್ದಾರೆ.

ಇವರ ಸೋಗಲಾಡಿತನಕ್ಕೆ ಇತಿಶ್ರೀ ಹಾಡೋಣ, ಹಿಂದೂ ಸಂಘಟನೆಗಳ ವಿರುದ್ಧ ವಾಗ್ದಾಳಿ ಮುಂದುವರಿಸಿದ ಎಚ್‌ಡಿಕೆ

2018ರಲ್ಲಿ ನಾನು ಸಿಎಂ ಆಗಿದ್ದಾಗ ಸಾಲ ಮನ್ನಾಕ್ಕಾಗಿ ಪೆಟ್ರೋಲ್ ಲೀಟರಿಗೆ 1.12 ಪೈಸೆ, & ಡೀಸೆಲ್ ಬೆಲೆಯಲ್ಲಿ ಲೀಟರಿಗೆ 1.14 ಪೈಸೆ ಹೆಚ್ಚಳ ಮಾಡಿದ್ದಕ್ಕೆ ಬಿಜೆಪಿ ನಾಯಕರು ಕೂಗಾಡಿ ಗಲಾಟೆ ಎಬ್ಬಿಸಿದ್ದರು. ಬೆಲೆ ಹೆಚ್ಚಳದ ಈ ಹಣ ರೈತರಿಗೆ ಹೋಗಿಬಿಡುತ್ತದಲ್ಲ ಎಂದು ಅವರ ಹೊಟ್ಟೆ ಉರಿದುಹೋಯಿತು. ಹಾದಿಬೀದಿಯಲ್ಲಿ ಖಾಲಿ ಸಿಲಿಂಡರುಗಳನ್ನು ಹೊತ್ತ ಬಿಜೆಪಿಗರು ಈಗೇಕೆ ಮೌನಕ್ಕೆ ಶರಣಗಾಗಿದ್ದಾರೆ? ಬೆಲೆ ಏರಿಕೆಯಿಂದ ಬಡವರ ಹೊಟ್ಟೆ ಉರಿದರೆ ನಿಮಗೆ ಖುಷಿಯಾ? ಎಂದು ಪ್ರಶ್ನಿಸಿದ್ದಾರೆ.

ಬನ್ನಿ, ಬೀದಿಗೆ ಬಂದು ಪ್ರತಿಭಟನೆ ಮಾಡಿ, ಕೇಂದ್ರ ಸರಕಾರದ ವಿರುದ್ಧ ಧಿಕ್ಕಾರ ಕೂಗಿ. ಸಿಮೆಂಟ್, ಕಬ್ಬಿಣ, ಆಹಾರ ಪದಾರ್ಥ ಸೇರಿ ಸಾಮಾನ್ಯ ವ್ಯಕ್ತಿ ಬಳಸುವ ಪ್ರತಿ ವಸ್ತುವಿನ ಬೆಲೆ ನಿತ್ಯವೂ ಜಿಗಿಯುತ್ತಿದೆ. ಶ್ರೀಸಾಮಾನ್ಯನು ಮನೆ ಕಟ್ಟುವ ಕನಸು ಇನ್ನು ಬರೀ ಕನಸೇ. ಅವನ ಜೇಬು ಖಾಲಿಯಾಗುತ್ತಿದೆ, ಕೆಲವರ ಜೇಬು ತುಂಬುತ್ತಿದೆ!! ಬಿಜೆಪಿ ಭಾರತದಲ್ಲಿ ಉದ್ಯಮಿಗಳು ಜಗತ್ತಿನ ಟಾಪ್ ಶ್ರೀಮಂತರಾಗುತ್ತಿದ್ದಾರೆ!!
ಹಿಜಾಬ್, ಕೇಸರಿ ಶಾಲು, ಟಿಪ್ಪು ಪಠ್ಯ, ಮುಸ್ಲಿಂ ವರ್ತಕರಿಗೆ ನಿಷೇಧ, ಹಲಾಲ್ ಕಟ್ ಬಗ್ಗೆ ಅಬ್ಬರಿಸಿ ಬೊಬ್ಬಿರಿಯುವ ʼಶ್ರೀಮಂತರ ಪಕ್ಷ ಬಿಜೆಪಿʼಯು ಬೆಲೆ ಏರಿಕೆ ಬಗ್ಗೆ ಮಾತ್ರ ಮೌನವಾಗಿದೆ! ಎಂದು ವಾಗ್ದಾಳಿ ನಡೆಸಿದ್ದಾರೆ.

ರಾಜ್ಯ ಸರಕಾರವೂ ಮೌನ!!
ಮುಖ್ಯಮಂತ್ರಿಗಳೂ ಮೌನ!!!
ಮೌನಂ ಶರಣಂ ಗಚ್ಛಾಮಿ.
ಮೌನಿ ಪಕ್ಷ!
ಮೌನಿ ಸರಕಾರ!!
ಮೌನಿ ಮುಖ್ಯಮಂತ್ರಿ!!!

ಡಾ.ಮನಮೋಹನ್ ಸಿಂಗ್ ಅವರನ್ನು ʼಮೌನಿ ಪ್ರಧಾನಿʼ ಎಂದ ಇವರ ಅಬ್ಬರ ಎಲ್ಲಿ ಉಡುಗಿ ಹೋಗಿದೆ? ದನಿಯೆತ್ತಿ ಬೆಲೆ ಏರಿಕೆ ವಿರುದ್ಧ. ಇದು ನನ್ನ ಆಗ್ರಹ. ಬೆಲೆ ಏರಿಕೆ ಬಗ್ಗೆ ಜನರ ಆಕ್ರೋಶ ಎಲ್ಲಿ ಆಸ್ಫೋಟಗೊಂಡು ಬಿಜೆಪಿ ಬುಡಕ್ಕೆಲ್ಲಿ ಬೆಂಕಿ ಬೀಳುತ್ತದೋ ಎಂಬ ಭಯದಿಂದ ಆ ಮುಗ್ಧಜನರ ಮನಸ್ಸನ್ನು ಸೂಕ್ಷ್ಮ ವಿಷಯಗಳ ಕಡೆ ಹೊರಳುವಂತೆ ಮಾಡಲಾಗಿದೆ. ʼ150 ಸೀಟಿನ ರೋಡ್ ಮ್ಯಾಪ್ ಎಲ್ಲಿ ಮಣ್ಣುಪಾಲಾಗುತ್ತದೋʼ ಎಂದು ಹಿಂದುತ್ವದ ವಿನಾಶಕ್ಕೆ ಹಿಂಸಾಚಾರದ ಶಂಖ ಊದಲಾಗಿದೆ ಎಂದು ಕಿಡಿಕಾರಿದರು.

ಘನವೇತ್ತ ಮಾಜಿ ಸಿಎಮ್ಮು, ಮಾಜಿ ಕೇಂದ್ರಮಂತ್ರಿಗಳೂ ಡಿ.ವಿ.ಸದಾನಂದಗೌಡರು, ಬೆಲೆ ಏರಿಕೆಗೆ ಹಿಂದಿನ ಯುಪಿಎ ಸರಕಾರ ಕಾರಣ ಎಂದಿದ್ದಾರೆ. 8 ವರ್ಷವಾದರೂ ಯುಪಿಎ ಮಾಡಿದ ತಪ್ಪು ಸರಿ ಮಾಡಲಿಲ್ಲ, ಏಕೆ? ಅಡುಗೆ ಮನೆಗಳಲ್ಲಿ ತಾಯಂದಿರು, ʼಬೆಲೆ ಏರಿಕೆ ಬೆಂಕಿʼಯಲ್ಲಿ ಬೇಯುತ್ತಿದ್ದರೆ ನಿಮಗೆ ರಾಜಕೀಯ ಮುಖ್ಯವಾಗಿದೆ. ನಾಚಿಕೆಯಾಗಬೇಕು. ಬಿಜೆಪಿ ಎಂದರೆ ಭಾರತೀಯ ಜನತಾ ಪಕ್ಷವಲ್ಲ, ಬಡವರ ರಕ್ತಹೀರಿ ಸಿರಿವಂತರ ಖಜಾನೆ ಭರ್ತಿ ಮಾಡುವ ʼಬಲ್ಲಿದ ಜನರ ಪಕ್ಷʼ. ಬೆಲೆ ಶೂಲದಿಂದ ಬಡಜನರನ್ನು ಬರ್ಬಾದ್ ಮಾಡುತ್ತಿರುವ ಪಕ್ಷ ಎಂದು ಆಕ್ರೋಶ ವ್ಯಕ್ತಪಡಿಸಿದರು.

Latest Videos
Follow Us:
Download App:
  • android
  • ios