ಕಾಂಗ್ರೆಸ್ ಅಭ್ಯರ್ಥಿಗೆ ಬೆಂಬಲ, ಬಹಿರಂಗವಾಗಿ ಘೋಷಿಸಿದ ಜೆಡಿಎಸ್ MLC
* ಕರ್ನಾಟಕ ವಿಧಾನಪರಿಷತ್ ಚುನಾವಣೆ
* ಕಾಂಗ್ರೆಸ್ ಅಭ್ಯರ್ಥಿಗೆ ಬೆಂಬಲ ಘೋಷಿಸಿದ ಜೆಡಿಎಸ್ ಶಾಸಕ
* ಆರಂಭದಲ್ಲಿ ದಳಪತಿಗಳಿಗೆ ಬಿಗ್ ಶಾಕ್
ಮಂಡ್ಯ, (ಜೂನ್.05): ವಿಧಾನ ಪರಿಷತ್, ದಕ್ಷಿಣ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮಧು ಜಿ ಮಾದೇಗೌಡ ಅವರಿಗೆ ಬೆಂಬಲ ನೀಡುವುದಾಗಿ ಜೆಡಿಎಸ್ ವಿಧಾನಪರಿಷತ್ ಸದಸ್ಯ ಅಧಿಕೃತವಾಗಿ ಘೋಷಿಸಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿ ಮಧು ಜಿ ಮಾದೇಗೌಡ ಅವರಿಗೆ ಬೆಂಬಲ ನೀಡುವುದಾಗಿ ಜೆಡಿಎಸ್ ವಿಧಾನಪರಿಷತ್ ಸದಸ್ಯ ಮರಿತಿಬ್ಬೇಗೌಡ ಬಹಿರಂಗವಾಗಿಯೇ ಹೇಳಿದ್ದು, ಜೆಡಿಎಸ್ ಅಭ್ಯರ್ಥಿಗೆ ಬಿಗ್ ಶಾಕ್ ಕೊಟ್ಟಿದ್ದಾರೆ.
ರಾಜ್ಯಸಭಾ ಚುನಾವಣೆ: ದೇವೇಗೌಡರ ‘ಖರ್ಗೆ ಅಸ್ತ್ರ’ ವಿಫಲಗೊಳಿಸಿದ್ಹೇಗೆ ಸಿದ್ದು-ಡಿಕೆಶಿ.?
ಆಪ್ತ ಕೀಲಾರ ಜಯರಾಮು ಅವರಿಗೆ ಜೆಡಿಎಸ್ ವರಿಷ್ಠರು ಟಿಕೆಟ್ ನಿಕಾಕರಿಸಿದ ಕಾರಣ ಮರಿತಿಬ್ಬೇಗೌಡ ಪಕ್ಷದ ಚಟುವಟಿಕೆಗಳಿಂದ ದೂರ ಉಳಿದಿದ್ದರು. ಜೆಡಿಎಸ್ ಅಭ್ಯರ್ಥಿ ಎಚ್.ಕೆ.ರಾಮು ಅವರ ಪರ ಪ್ರಚಾರ ಮಾಡುವುದಿಲ್ಲ, ಯಾರಿಗೆ ಬೆಂಬಲ ನೀಡಬೇಕು ಎಂಬುದನ್ನು ಶೀಘ್ರವೇ ಪ್ರಕಟಿಸಲಾಗುವುದು ಎಂದು ಈಚೆಗೆ ತಿಳಿಸಿದ್ದರು.
ಮರಿತಿಬ್ಬೇಗೌಡ ಸ್ನೇಹ ಬಳಗ'ದ ಸಭೆಯಲ್ಲಿ ಮಾತನಾಡಿದ ಅವರು 'ಜೆಡಿಎಸ್‌ನ ಸಾಮಾನ್ಯ ಕಾರ್ಯಕರ್ತನಿಗೆ ಟಿಕೆಟ್ ನೀಡಿದ್ದರೂ ನಾನು ಅವರ ಪರವಾಗಿ ಕೆಲಸ ಮಾಡುತ್ತಿದ್ದೆ. ಪಕ್ಷಕ್ಕೆ ಸಂಬಂಧವೇ ಇಲ್ಲದ ವ್ಯಕ್ತಿಗೆ ಟಿಕೆಟ್ ನೀಡಲಾಗಿದೆ. ಆ ಮೂಲಕ ದಕ್ಷಿಣ ಪದವೀಧರರ ಕ್ಷೇತ್ರದಲ್ಲೂ ಹಣ ಉಳ್ಳವರಿಗೆ ಮಣೆ ಹಾಕಲಾಗಿದೆ' ಎಂದು ಆಕ್ರೋಶ ವ್ಯಕ್ತಪಡಿಸಿದರು.
'ನಾಲ್ಕೂ ಜಿಲ್ಲೆಗಳಲ್ಲಿರುವ ನನ್ನ ಹಿತೈಷಿಗಳ ಸಲಹೆಯಂತೆ ನಾನು ಕಾಂಗ್ರೆಸ್ ಅಭ್ಯರ್ಥಿಗೆ ಬೆಂಬಲ ನೀಡಲು ನಿರ್ಧರಿಸಿದ್ದೇನೆ. ಜಿ.ಮಾದೇಗೌಡರು ಶಿಕ್ಷಣ ಸಂಸ್ಥೆಗಳನ್ನು ಕಟ್ಟಿ ಸಾವಿರಾರು ಜನರಿಗೆ ವಿದ್ಯಾದಾನ ಮಾಡಿದ್ದಾರೆ. ಆ ಸಂಸ್ಥೆಗಳ ಅಧ್ಯಕ್ಷರಾಗಿರುವ ಮಧು ಮಾದೇಗೌಡರಿಗೆ ಬೆಂಬಲಿಸುವಂತೆ ನನ್ನ ಬೆಂಬಲಿಗರು ಸಲಹೆ ನೀಡಿದ್ದು ಅದರಂತೆ ನಡೆದುಕೊಳ್ಳುತ್ತೇನೆ' ಎಂದರು.
2024ರ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ನನಗೆ ಟಿಕೆಟ್ ನೀಡುವುದಿಲ್ಲ ಜೆಡಿಎಸ್ ಮುಖಂಡರು ತಿಳಿಸಿದ್ದಾರೆ. ಕೀಲಾರ ಜಯರಾಮು ಅವರಿಗೆ ಟಿಕೆಟ್ ಕೊಟ್ಟು ನನ್ನ ವಿರುದ್ಧವೇ ಎತ್ತಿ ಕಟ್ಟುವ ಕೆಲಸ ಮಾಡುತ್ತಿದ್ದಾರೆ. ಈ ಎಲ್ಲಾ ಬೆಳವಣಿಗೆಗಳಿಂದ ಬೇಸರವಾಗಿ ಕಾಂಗ್ರೆಸ್ ಬೆಂಬಲಿಸುವ ತೀರ್ಮಾನ ಕೈಗೊಂಡಿದ್ದೇನೆ. ಮುಂದಿನ ವಿಧಾನಸಭೆ, ಲೋಕಸಭೆ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಕಾಂಗ್ರೆಸ್ ಬೆಂಬಲಿಸುವ ತೀರ್ಮಾನ ಕೈಗೊಂಡಿದ್ದೇನೆ ಎಂದು ಹೇಳಿದರು.