ಹುಬ್ಬಳ್ಳಿ, (ನ.19): ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ಸ್ಥಾಪನೆಗೆ ಸಿಎಂ ಬಿಎಸ್ ಯಡಿಯೂರಪ್ಪ ಆದೇಶ ಹೊರಡಿಸಿದ್ದು, ಇದು ಬಿಎಸ್‌ವೈಗೆ ತಿರುಗು ಬಾಣವಾಗುತ್ತಿದೆ.

ಹೌದು.....ವೀರಶೈವ ಲಿಂಗಾಯ ನಿಗಮ ರಚನೆಗೆ ರಾಜ್ಯದ ಸಿದ್ಧಗಂಗಾ ಶ್ರೀಗಳು ಸೇರಿದಂತೆ ಹಲವು ಸ್ವಾಮೀಜಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇನ್ನು ಕೆಲವರು ನಿಗಮ ರಚನೆಗೆ ಸ್ವಾಗತ ಇಲ್ಲ ಮೀಸಲಾತಿ ಬೇಕು ಎನ್ನುವ ಒತ್ತಡ ಹೇರುತ್ತಿದ್ದಾರೆ.

ಈ ಬಗ್ಗೆ  ಧಾನ ಪರಿಷತ್ತು ಸದಸ್ಯ ಬಸವರಾಜ ಹೊರಟ್ಟಿ ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದಲ್ಲಿ ಸುಮಾರು 1.18 ಕೋಟಿಯಷ್ಟು ಲಿಂಗಾಯತ ಜನಸಂಖ್ಯೆ ಇದ್ದು, ಸಮಾಜಕ್ಕೆ ಸೌಲಭ್ಯ ನಿಟ್ಟಿನಲ್ಲಿ ಶೇಕಡಾ16-18ರಷ್ಟು ಮೀಸಲಾತಿ ನೀಡಬೇಕು, ಸಮಾಜವನ್ನು ಇತರೆ ಹಿಂದುಳಿದ ವರ್ಗ ಕ್ಕೆ ಸೇರಿಸಬೇಕೆಂದು ವಿಧಾನ ಪರಿಷತ್ತು ಸದಸ್ಯ ಬಸವರಾಜ ಹೊರಟ್ಟಿ ಒತ್ತಾಯಿಸಿದರು.

ಜಾತಿಗೊಂದು ಅಭಿವೃದ್ಧಿ ನಿಗಮ: ಬಿಎಸ್‌ವೈ ನಡೆಗೆ ಬಿಜೆಪಿಯಲ್ಲೇ ಭುಗಿಲೆದ್ದ ಅಸಮಾಧಾನ..!

ನಿಗಮಕ್ಕೆ ವರ್ಷಕ್ಕೆ ಒಂದು ಸಾವಿರ ಕೋಟಿ ರೂಪಾಯಿಗಳು ನೀಡಿದರು, ಸಮಾಜದ ಶೇ.25 ರಷ್ಟು ಜನರಿಗೆ ತಲಾ 3575 ರೂ.ಬರುತ್ತದೆ ಇದರಿಂದ ಏನು ಅಭಿವೃದ್ಧಿ ಸಾಧ್ಯ. ಶೇ.16-18ರಷ್ಟು ಮೀಸಲಾತಿ ನೀಡಿ ಹಿಂದುಳಿದ ವರ್ಗಕ್ಕೆ ಸೇರಿಸಿದರೆ ಸಮಾಜದ ಯುವಕರಿಗೆ ಅನುಕೂಲವಾಗಲಿದೆ ಎಂದರು.

ಈ ಹಿಂದೆ ನಾವು ಲಿಂಗಾಯತ ಧರ್ಮಕ್ಕೆ ಅಲ್ಪಸಂಖ್ಯಾತ ಸ್ಥಾನದ ಹೋರಾಟ ಕೈಗೊಂಡಾಗ ಧರ್ಮ ಒಡೆಯುವ, ರಾಜಕೀಯ ಪ್ರೇರಿತ ಪಟ್ಟ ಕಟ್ಟಲಾಯಿತು. ಸೌಲಭ್ಯ ದೊರೆತಿದ್ದರೆ ಸಮಾಜದ ಎಲ್ಲರಿಗೂ ಲಾಭವಾಗುತ್ತಿತ್ತು. ಈಗಲಾದರೂ ಸಮಾಜ ಎಲ್ಲರೂ ಸೇರಿ ಶೇ.16-18ರಷ್ಟು ಮೀಸಲಾತಿ, ಹಿಂದುಳಿದ ವರ್ಗಕ್ಕೆ ಸೇರಿಸಲು ಸಂಘಟಿತ ಧ್ವನಿ ಮೊಳಗಿಸುವ ಅನಿವಾರ್ಯತೆ ಇದೆ ಎಂದು ಹೇಳಿದರು.

ಒಟ್ಟಿನಲ್ಲಿ ವೀರಶೈವ ಲಿಂಗಾಯತ ಅಭಿಮೃದ್ಧಿ ನಿಗಮ ರಚನೆಗೆ ಆದೇಶ ಮಾಡಿದ ಬೆನ್ನಲ್ಲೇ ಇದೀಗ ಮೀಸಲಾತಿ ಕೂಗು ಕೇಳಿಬರುತ್ತಿದ್ದು, ಇದು ಬಿಎಸ್‌ವೈಗೆ ಮತ್ತಷ್ಟು ಬಿಸಿ ತುಪ್ಪವಾಗಿ ಪರಿಣಮಿಸಿದೆ.