ಮೈಸೂರು, (ಡಿ.20): ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ನಡುವಿನ ಮೈತ್ರಿ ಸರ್ಕಾರ ಪತನ ಆಗಲು ಮಾಜಿ ಸಿಎಂಗಳಾದ ಸಿದ್ದರಾಮಯ್ಯ ಹಾಗೂ ಎಚ್.ಡಿ. ಕುಮಾರಸ್ವಾಮಿ ಇಬ್ಬರೂ ಕಾರಣ ಎಂದು ಜೆಡಿಎಸ್​ ಶಾಸಕ, ಮಾಜಿ ಸಚಿವ ಜಿಟಿ ದೇವೇಗೌಡ ಹೇಳಿದ್ದಾರೆ.

ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಅವರ ಸೋಲಿನ ಕುರಿತು ಪ್ರತಿಕ್ರಿಯೆ ನೀಡಿದ ಜಿಟಿಡಿ, ಸಿದ್ದರಾಮಯ್ಯ ಅವರು ಮನಸ್ಸಿನ ನೋವನ್ನು ಹೇಳಿಕೊಂಡಿದ್ದಾರೆ. ಮೊದಲು ವರುಣ, ಚಾಮುಂಡೇಶ್ವರಿ ಒಂದೇ ಕ್ಷೇತ್ರವಾಗಿತ್ತು. ತಾಲೂಕು ಬೋರ್ಡ್ ಸದಸ್ಯರಿಂದ ಉಪ ಮುಖ್ಯಮಂತ್ರಿ ಆಗುವವರೆಗೂ ಚಾಮುಂಡೇಶ್ವರಿ ಕ್ಷೇತ್ರದಲ್ಲೇ ಇದ್ದರು. ವರುಣ ಕ್ಷೇತ್ರವಾದ ನಂತರ ಅಲ್ಲಿಗೆ ಹೋಗಿ ಗೆದ್ದು ಮುಖ್ಯಮಂತ್ರಿಯಾದರು. ಆದರೂ ಚಾಮುಂಡೇಶ್ವರಿ ಕ್ಷೇತ್ರದ ಅಭಿವೃದ್ಧಿಯಾಗಬೇಕೆಂದು ಬಯಸಿದ್ದರು. ಆದರೆ ಜನ ಅವರನ್ನು ಕೈಹಿಡಿಯಲಿಲ್ಲ. ನೀವೇ ನನ್ನನ್ನು ಕೈ ಬಿಟ್ಟಿರಿ ಎಂದು ಕಾರ್ಯಕರ್ತರ ಬಳಿ ನೋವನ್ನು ಹೇಳಿಕೊಂಡಿದ್ದಾರೆ ಅಷ್ಟೇ ಎಂದರು.

ಚಾಮುಂಡೇಶ್ವರಿಯಲ್ಲಿ ಸೋಲಿಸಿದ್ಯಾರು? ಕೊನೆಗೂ ಬಹಿರಂಗಪಡಿಸಿದ ಸಿದ್ದರಾಮಯ್ಯ

ಸಿದ್ದರಾಮಯ್ಯ, ಕುಮಾರಸ್ವಾಮಿ ನಡುವಿನ ವಾಗ್ವಾದ ವಿಚಾರವಾಗಿ ತಾಲೂಕಿನ ಸಿದ್ದಲಿಂಗಪುರದಲ್ಲಿ ಪ್ರತಿಕ್ರಿಯೆ ನೀಡಿದ ಜಿಟಿಡಿ, ಮೈತ್ರಿ ಸರ್ಕಾರ ಬೀಳುತ್ತೆ ಅಂತ ಗೊತ್ತಿತ್ತು. ಗೊತ್ತಿದ್ದರೂ ಕುಮಾರಸ್ವಾಮಿ ಅಮೆರಿಕಾಗೆ ಹೋಗಿ ಕುಳಿತುಕೊಂಡರು. ಶಾಸಕರು ಬಿಟ್ಟು ಹೋಗ್ತಾರೆ ಅಂತ ಸಿದ್ದರಾಮಯ್ಯ ಅವರಿಗೂ ಗೊತ್ತಿತ್ತು. ಮನಸ್ಸು ಮಾಡಿದ್ದರೆ ತಡೆಯಬಹುದಿತ್ತು. ಆದರೆ ತಡೆಯುವ ಪ್ರಯತ್ನ ಮಾಡಲಿಲ್ಲ. ಆದ್ದರಿಂದ ಮೈತ್ರಿ ಸರ್ಕಾರ ಬೀಳುವುದಕ್ಕೆ ಇಬ್ಬರೂ ಕಾರಣಕರ್ತರು‌ ಎಂದು ಹೇಳಿದರು.

ಜೆಡಿಎಸ್-ಬಿಜೆಪಿ ಒಳಒಪ್ಪಂದ ಮಾಡಿಕೊಂಡಿವೇ ಎಂಬ ಹೇಳಿಕೆಗೆ ಪರೋಕ್ಷವಾಗಿ ಟಾಂಗ್ ಕೊಟ್ಟ ಜಿಟಿಡಿ, ಬಿಜೆಪಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ 2013ರ ಚುನಾವಣೆಯಲ್ಲಿ 8,000 ಮತ ಪಡೆದಿತ್ತು. ಆಗ ಹೇಮಂತ್ ಕುಮಾರ್ ಗೌಡ ಅಭ್ಯರ್ಥಿಯಾಗಿದ್ದರು. 2018ರ ಚುನಾವಣೆಯಲ್ಲಿ ಗೋಪಾಲ್ ರಾವ್ ಅಭ್ಯರ್ಥಿಯಾಗಿದ್ದರು. ಆಗ 15,000 ಮತ ಪಡೆಯಿತು. ನಾನು ಸ್ಪರ್ಧಿಸಿದ್ದ ಚುನಾವಣೆಯಲ್ಲಿ ಬಿಜೆಪಿ ಡಬಲ್ ವೋಟ್ ಪಡೆದುಕೊಂಡಿದೆ ಎಂದು ಜೆಡಿಎಸ್-ಬಿಜೆಪಿ ಒಳ ಒಪ್ಪಂದ ಆರೋಪವನ್ನು ಅಲ್ಲಗಳೆದರು.