ಬೆಂಗಳೂರು, [ಫೆ.29]: ಜೆಡಿಎಸ್ ಶಾಸಕ ಜಿ.ಟಿ.ದೇವೆಗೌಡ ಅವರು ಪಕ್ಷದಿಂದ ದೂರು ಉಳಿದು ಬಿಜೆಪಿ ಬಾಗಿಲಿಗೆ ಬಂದು ನಿಂತಿದ್ದು, ಅಂದುಕೊಂಡಿದ್ದಕ್ಕಿಂತ ಮುನ್ನವೇ ಬಿಜೆಪಿ ಸೇರ್ತಾರಾ ಎನ್ನುವ ಅನುಮಾನಗಳು ವ್ಯಕ್ತವಾಗಿವೆ.

ಇದಕ್ಕೆ ಪೂರಕವೆಂಬಂತೆ ಇಷ್ಟು ದಿನ ಕೇವಲ ರಾಜ್ಯ ಬಿಜೆಪಿ ಪ್ರಮುಖ ನಾಯಕರನ್ನು ಭೇಟಿಯಾಗುತ್ತಿದ್ದ ಜಿ.ಟಿ.ದೇವೆಗೌಡ, ಇದೀಗ ನೇರವಾಗಿ  ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಭೇಟಿ ಮಾಡಿದ್ದಾರೆ.

 ಜಿ.ಟಿ.ದೇವೆಗೌಡ ಅವರು ಏಕಾಂಗಿಯಾಗಿ ಬಂದು ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಪಕ್ಷದ ಮುಖಂಡರೊಬ್ಬರ ನಿವಾಸದಲ್ಲಿ ಬಿಎಸ್ವೈ ಹುಟ್ಟುಹಬ್ಬದ ದಿನವೇ ಸಂತೋಷ್ ಅವರನ್ನ ಜಿಟಿಡಿ ಭೇಟಿ ಮಾಡಿದ್ದು, ಮಹತ್ವದ ಮಾತುಕತೆ ನಡೆಸಿದ್ದಾರೆ ಎಂದು ತಿಳಿದುಬಂದಿವೆ.

ಮತ್ತೊಂದೆಜ್ಜೆ ಮುಂದಿಟ್ಟ ದೇವೇಗೌಡ: ಅಚ್ಚರಿ ಮೂಡಿಸಿದ ಜಿಟಿಡಿ ನಡೆ

ಬಿಜೆಪಿ ಸೇರ್ಪಡೆ ಕುರಿತು ಜಿಟಿಡಿ ಗಂಭೀರ ಚರ್ಚೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಹಾಗಿದ್ರೆ ಜಿಟಿ ದೇವೇಗೌಡ ಅವರು ನಿರೀಕ್ಷೆಗಿಂತ ಮುನ್ನವೇ ಬಿಜೆಪಿ ಸೇರಲು ಸಿದ್ಧವಾದ್ರಾ ಎನ್ನುವ ಪ್ರಶ್ನೆಗಳು ಉದ್ಭವಿಸಿವೆ.

ಈ ಮೂಲಕ ಹಳೆ ಮೈಸೂರು ಭಾಗದಲ್ಲಿ ಜಿಟಿಡಿ ಮತ್ತೊಂದು ರಾಜಕೀಯ ಕ್ರಾಂತಿಗೆ ಕಾರಣವಾಗಿದ್ದು,  ಉಭಯ ನಾಯಕರ ಭೇಟಿ ಕೇಸರಿ ಪಡಶಾಲೆಯಲ್ಲಿ ಚರ್ಚೆಗೆ ಗ್ರಾಸವಾಗಿದೆ. ಮತ್ತೊಂದೆಡೆ ಕ್ಷೀಪ್ರ ರಾಜಕೀಯ ಬೆಳವಣಿಗೆಯಿಂದ ಜೆಡಿಎಸ್ ವರಿಷ್ಠರಲ್ಲಿ ಆತಂಕ ಶುರುವಾಗಿದೆ.