ಪ್ರತಿಪಕ್ಷ ಬಿಜೆಪಿ ಸದಸ್ಯರೆಲ್ಲ ಸಭಾತ್ಯಾಗ ಮಾಡಿದರೂ ಪಕ್ಷದ ಸದಸ್ಯರಾದ ಎಸ್‌.ಟಿ.ಸೋಮಶೇಖರ್‌ ಮತ್ತು ಶಿವರಾಂ ಹೆಬ್ಬಾರ್‌ ಮಾತ್ರ ಕದಲದೆ ಸದನದಲ್ಲೇ ಕೂತಿದ್ದರು. ಇನ್ನು ಸೋಮಶೇಖರ್‌ ಮತ್ತು ಜೆಡಿಎಸ್‌ ಸದಸ್ಯ ಜಿ.ಟಿ.ದೇವೇಗೌಡ ಅವರು ಸರ್ಕಾರದ ಪರ ಬ್ಯಾಟಿಂಗ್‌ ಕೂಡ ಮಾಡಿದರು. ಸರ್ಕಾರದ ನಿಲುವನ್ನು ಪರೋಕ್ಷ‍ವಾಗಿ ಸ್ವಾಗತಿಸಿದರು. 

ಸುವರ್ಣ ವಿಧಾನಸಭೆ(ಡಿ.19): ವಕ್ಫ್‌ ವಿವಾದಕ್ಕೆ ಸಂಬಂಧಿಸಿ ನಡೆದ ಚರ್ಚೆ ವೇಳೆ ಪ್ರತಿಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್‌ ತಮ್ಮದೇ ಶಾಸಕರಿಂದ ಮುಜುಗರ ಅನುಭವಿಸಿದ ಪ್ರಸಂಗ ಬುಧವಾರ ನಡೆಯಿತು.

ಪ್ರತಿಪಕ್ಷ ಬಿಜೆಪಿ ಸದಸ್ಯರೆಲ್ಲ ಸಭಾತ್ಯಾಗ ಮಾಡಿದರೂ ಪಕ್ಷದ ಸದಸ್ಯರಾದ ಎಸ್‌.ಟಿ.ಸೋಮಶೇಖರ್‌ ಮತ್ತು ಶಿವರಾಂ ಹೆಬ್ಬಾರ್‌ ಮಾತ್ರ ಕದಲದೆ ಸದನದಲ್ಲೇ ಕೂತಿದ್ದರು. ಇನ್ನು ಸೋಮಶೇಖರ್‌ ಮತ್ತು ಜೆಡಿಎಸ್‌ ಸದಸ್ಯ ಜಿ.ಟಿ.ದೇವೇಗೌಡ ಅವರು ಸರ್ಕಾರದ ಪರ ಬ್ಯಾಟಿಂಗ್‌ ಕೂಡ ಮಾಡಿದರು. ಸರ್ಕಾರದ ನಿಲುವನ್ನು ಪರೋಕ್ಷ‍ವಾಗಿ ಸ್ವಾಗತಿಸಿದರು.

ಬಿಎಸ್‌ವೈ ಸಿಎಂ ಆಗುವುದನ್ನು ತಡೆದಿದ್ದೇ ರೇವಣ್ಣ, ಡಿಸಿಎಂ ಹುದ್ದೆ ಈಡೇರಲಿಲ್ಲ ಎಂದು ಮೋಸ: ಜಿಟಿಡಿ

ಬಿಜೆಪಿ ಸದಸ್ಯರ ಸಭಾತ್ಯಾಗ ಬಳಿಕ ಕಂದಾಯ ಸಚಿವ ಕೃಷ್ಣಬೈರೇಗೌಡ ನೀಡಿದ ಉತ್ತರವನ್ನು ಸೋಮಶೇಖರ್‌ ಸ್ವಾಗತಿಸಿ ಅಭಿನಂದನೆ ಸಲ್ಲಿಸಿದರು. ವಕ್ಫ್‌ ವಿಚಾರದಲ್ಲಿ ನಾನಾ ಕಾರಣಗಳಿಂದಾಗಿ ರಾಜ್ಯದಲ್ಲಿ ಅಲ್ಲೋಲ-ಕಲ್ಲೋಲ ಸೃಷ್ಟಿಯಾಗಿತ್ತು. ಆದರೆ, ಸರ್ಕಾರ ಸಮಂಜಸ ಉತ್ತರ ನೀಡುವ ಮೂಲಕ ಜನ ನೆಮ್ಮದಿಯಿಂದ ಇರಲು ಒಳ್ಳೆಯ ಸಂದೇಶ ಹೋಗಿದೆ ಎಂದು ಹೇಳಿದರು.

ವಕ್ಫ್‌ ಮಂಡಳಿ ಮೂಲಕ ಸರ್ಕಾರ ರೈತರ, ಮಠ-ಮಾನ್ಯಗಳ, ದೇವಾಲಯ ಆಸ್ತಿಗಳನ್ನು ಕಬಳಿಸುತ್ತಿದೆ ಎಂಬ ಆತಂಕ ಸೃಷ್ಟಿಯಾಗಿತ್ತು. ಎಲ್ಲಾ ಆಸ್ತಿಗಳು ಮುಸ್ಲಿಮರಿಗೆ ಹೋಯಿತು ಎಂಬ ವಿಷಬೀಜ ಬಿತ್ತುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಸದನ ಮೂಲಕ ರಾಜ್ಯದ ಜನರಿಗೆ ಇಬ್ಬರು ಸಚಿವರು ಮನವರಿಕೆ ಮಾಡಿಕೊಟ್ಟರು. ಈ ಹಿನ್ನೆಲೆಯಲ್ಲಿ ಸಚಿವರಾದ ಜಮೀರ್ ಅಹ್ಮದ್‌ ಮತ್ತು ಕೃಷ್ಣ ಬೈರೇಗೌಡ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

ಜಿ.ಟಿ.ದೇವೇಗೌಡ ಮಾತನಾಡಿ, ಇಬ್ಬರೂ ಸಚಿವರು ಸಮರ್ಥವಾಗಿ ಉತ್ತರ ನೀಡಿದ್ದಾರೆ. ಸಾಗುವಳಿ ಚೀಟಿ ಆಗದಿರುವ ರೈತರು, ಅವರ ಹೆಸರು ಪಹಣಿಯಲ್ಲಿ ಬಾರದಿದ್ದರೆ ಅದನ್ನು ಅವರ ಹೆಸರಿಗೆ ಮಾಡಿಸಬೇಕು ಎಂದು ಸಲಹೆ ನೀಡಿದರು.