ಜೆಡಿ​ಎಸ್‌ ನಾಡಿನ ಎಲ್ಲಾ ವರ್ಗದ ಜನರ ಅಭಿವೃದ್ಧಿ ನಿಟ್ಟಿನಲ್ಲಿ ಪಂಚರತ್ನ ರಥಯಾತ್ರೆ ಹಮ್ಮಿಕೊಂಡಿದೆ

ರಾಮನಗರ(ಅ.30): ಕಾಂಗ್ರೆಸ್‌ ತನ್ನ ಉಳಿ​ವಿ​ಗಾಗಿ ಭಾರತ್‌ ಜೋಡೋ ಯಾತ್ರೆ ಮಾಡಿ​ದರೆ, ಬಿಜೆಪಿ ಅಧಿ​ಕಾರ ಉಳಿ​ಸಿ​ಕೊ​ಳ್ಳಲು ಸಂಕಲ್ಪ ಯಾತ್ರೆ ಮಾಡು​ತ್ತಿದೆ. ಈ ಎರಡೂ ಪಕ್ಷ​ಗ​ಳದ್ದು ಸ್ವಾರ್ಥದ ಯಾತ್ರೆ​ಗ​ಳಾ​ಗಿವೆ ಎಂದು ಶಾಸಕಿ ಅನಿತಾ ಕುಮಾರಸ್ವಾಮಿ ಟೀಕಿಸಿದರು.

ತಾಲೂಕಿನ ಹುಣಸನಹಳ್ಳಿಯಲ್ಲಿ ನಾಗೋಹಳ್ಳಿಯಿಂದ ತುಂಬೇನಹಳ್ಳಿವರೆಗಿನ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದ ಅವರು, ಕಾಂಗ್ರೆಸ್‌ ಮತ್ತು ಬಿಜೆಪಿ ಪಕ್ಷ​ಗ​ಳು ಸ್ವಾರ್ಥ​ಕ್ಕಾಗಿ ಯಾತ್ರೆ ಮಾಡಿ​ದರೆ ಜೆಡಿ​ಎಸ್‌ ನಾಡಿನ ಎಲ್ಲಾ ವರ್ಗದ ಜನರ ಅಭಿವೃದ್ಧಿ ನಿಟ್ಟಿನಲ್ಲಿ ಪಂಚರತ್ನ ರಥಯಾತ್ರೆ ಹಮ್ಮಿಕೊಂಡಿದೆ. ನ.1ರಿಂದ ಕೋಲಾರ ಜಿಲ್ಲೆ ಮುಳಬಾಗಿಲಿನ ಕುರುಡುಮಲೈ ಗಣೇಶನ ಸನ್ನಿಧಿಯಿಂದ ಯಾತ್ರೆ ಪ್ರಾರಂಭವಾಗಲಿದೆ. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ರಥಯಾತ್ರೆ ಸಂಚರಿಸಲಿದೆ. ಈ ವೇಳೆ ಪಂಚರತ್ನ ಯೋಜನೆ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಜತೆಗೆ ಎರಡೂ ರಾಷ್ಟ್ರೀಯ ಪಕ್ಷಗಳು ರಾಜ್ಯದ ಜನತೆಗೆ ಎಸಗುತ್ತಿರುವ ದ್ರೋಹದ ಬಗೆಗೂ ತಿಳಿಸಿಕೊಡಲಾಗುವುದು ಎಂದು ಹೇಳಿದರು.

ರಾಮ​ನ​ಗರ: ಈ ಬಾರಿಯೂ ಜಿಲ್ಲಾ ಕನ್ನಡ ರಾಜ್ಯೋ​ತ್ಸವ ಪ್ರಶ​ಸ್ತಿಗೆ ಬ್ರೇಕ್‌..!

ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು ರಾಜ್ಯ ಕಂಡ ಮುತ್ಸದ್ದಿ ರಾಜಕಾರಣಿ. ಅಂತೆಯೇ ಕುಮಾರಸ್ವಾಮಿ ಅವರೂ ಎರಡು ಬಾರಿ ಮುಖ್ಯಮಂತ್ರಿಯಾಗಿದ್ದಾರೆ. ಅವರಿಗೆ ಬಡವರು, ರೈತರು, ಕಾರ್ಮಿಕರು, ಮಹಿಳೆಯರು ಹೀಗೆ ಎಲ್ಲಾ ವರ್ಗದವರ ಸಮಸ್ಯೆಗಳ ಅರಿವಿದೆ. ಆ ಸಮಸ್ಯೆಗಳಿಗೆ ಪರಿಹಾರವನ್ನು ಈ ಪಂಚರತ್ನ ಯೋಜನೆ ಒಳಗೊಂಡಿದೆ. ಗ್ರಾಮೀಣ ಮಕ್ಕಳಿಗೂ ಗುಣಮಟ್ಟದ ಶಿಕ್ಷಣ ದೊರೆಯಬೇಕು. ಪ್ರತಿಯೊಬ್ಬರಿಗೂ ಉಚಿತ ಆರೋಗ್ಯ ಸೇವೆ, ವಸತಿ ಸೌಕರ್ಯ, ಯುವಕರಿಗೆ, ಮಹಿಳೆಯರಿಗೆ ಉದ್ಯೋಗಾವಕಾಶ ಹಾಗೂ ರೈತರ ಜ್ವಲಂತ ಸಮಸ್ಯೆಗಳನ್ನು ನಿವಾರಿಸಿ, ಅವರನ್ನು ಆರ್ಥಿಕವಾಗಿ ಸಬಲರನ್ನಾಗಿಸುವುದು ಈ ಪಂಚರತ್ನ ಯೋಜನೆಯ ಮುಖ್ಯ ಉದ್ದೇಶವಾಗಿದೆ ಎಂದರು.

ಎರಡು ರಾಷ್ಟ್ರೀಯ ಪಕ್ಷಗಳ ದ್ವೇಷ ರಾಜಕಾರಣಕ್ಕೆ ರಾಜ್ಯದ ಜನ ಬೇಸತ್ತಿದ್ದು, ಈ ಬಾರಿ ಜೆಡಿಎಸ್‌ ಪರ ಒಲವು ತೋರಿಸುತ್ತಿದ್ದಾರೆ. ಹಾಗಾಗಿ ಬಡಜನರ ಸೇವೆ ಮಾಡಲು ಮತ್ತೊಮ್ಮೆ ನಿಮ್ಮ ಮನೆ ಮಗನನ್ನು ಆಶೀರ್ವದಿಸಬೇಕೆಂದು ಮನವಿ ಮಾಡಿದ ಅನಿತಾ, ಶಾಸಕಿಯಾಗಿ ನಾನು ರಾಮನಗರ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಗೆ ಹಗಲಿರುಳು ಶ್ರಮಿಸುತ್ತಿದ್ದೇನೆ. 108 ದೇವಾಲಯಗಳ ಅಭಿವೃದ್ಧಿ, ಸಮುದಾಯ ಭವನ ನಿರ್ಮಾಣ, ಶಾಲಾ ಕೊಠಡಿಗಳ ನಿರ್ಮಾಣ ಹಾಗೂ ದುರಸ್ತಿ, ದಲಿತ ಕೇರಿಗಳ ಅಭಿವೃದ್ಧಿ, ಶುದ್ಧ ಕುಡಿಯುವ ನೀರಿನ ಘಟಕಗಳ ಸ್ಥಾಪನೆಗೂ ಒತ್ತು ಕೊಟ್ಟಿದ್ದೇನೆಂದರು.

ಕಳೆದ ಚುನಾವಣೆಯಲ್ಲಿ ನೀವು ನನ್ನನ್ನು 1.10 ಲಕ್ಷ ಮತಗಳ ಅಂತರದಿಂದ ಗೆಲ್ಲಿಸಿದ್ದೀರಿ. ಇದು ರಾಜ್ಯದಲ್ಲೇ ದಾಖಲೆಯಾಗಿ ಉಳಿದಿದೆ. ನೀವು ನಮ್ಮ ಕುಟುಂಬದ ಮೇಲೆ ಇಟ್ಟಿರುವ ಪ್ರೀತಿಯನ್ನು ಉಳಿಸಿಕೊಳ್ಳಲು ನಾನು ಶಕ್ತಿ ಮೀರಿ ಪ್ರಯತ್ನಿಸಿದ್ದೇನೆ. ಮುಂದೆಯೂ ನಿಮ್ಮ ಸೇವೆಗೆ ಒಂದು ಅವಕಾಶ ನೀಡಬೇಕು. ದೇವರ ಮೇಲೆ ಅಪಾರ ಭಕ್ತಿ ಹೊಂದಿರುವ ಕುಟುಂಬ ನಮ್ಮದು. ನಾವು ದೇವರನ್ನು ಪ್ರಾರ್ಥಿಸುವಾಗ ನಮಗೇನನ್ನೂ ಬೇಡುವುದಿಲ್ಲ. ಬದಲಾಗಿ ಈ ಜನ ನಮ್ಮ ಮೇಲಿಟ್ಟಿರುವ ಪ್ರೀತಿ, ವಿಶ್ವಾಸಕ್ಕೆ ಧಕ್ಕೆ ಬಾರದಂತೆ ನಡೆದುಕೊಳ್ಳುವ ಶಕ್ತಿ ಕೊಡು ಎಂದು ಬೇಡಿಕೊಳ್ಳುತ್ತೇನೆ ಎಂದು ಅನಿತಾಕುಮಾರಸ್ವಾಮಿ ಭಾವುಕರಾದರು.

Ramanagar: ಜೆಡಿಎಸ್‌ಗೆ ಒಲಿದ ಅಧ್ಯಕ್ಷ ಉಪಾ​ಧ್ಯ​ಕ್ಷ​ ಪಟ್ಟ

ಜಿಪಂ ಮಾಜಿ ಅಧ್ಯಕ್ಷ ರಾಜಣ್ಣ, ಬಿಡಿ​ಸಿಸಿ ಬ್ಯಾಂಕ್‌ ಮಾಜಿ ನಿರ್ದೇ​ಶಕ ಅಶ್ವತ್‌್ಥ, ತಾಪಂ ಮಾಜಿ ಸದಸ್ಯ ಕಾಂತ​ರಾಜು, ನಗ​ರ​ಸಭೆ ಸದಸ್ಯ ಮಂಜು​ನಾಥ್‌, ಮಾಜಿ ಸದಸ್ಯ ರವಿ, ಟಿಎ​ಪಿ​ಸಿ​ಎಂಎಸ್‌ ಮಾಜಿ ಅಧ್ಯಕ್ಷ ದೊರೆ​ಸ್ವಾಮಿ, ಜೆಡಿ​ಎಸ್‌ ತಾಲೂಕು ಅಧ್ಯಕ್ಷ ರಾಜ​ಶೇ​ಖರ್‌, ಮುಖಂಡ​ರಾದ ಉಮೇಶ್‌, ರಾಜ​ಶೇ​ಖರ್‌, ಜಯ​ಕು​ಮಾರ್‌ ಉಪ​ಸ್ಥಿ​ತ​ರಿ​ದ್ದ​ರು.

ದೇವೇ​ಗೌ​ಡರ ಕುಟುಂಬ - ಕ್ಷೇತ್ರದ ಸಂಬಂಧ ಮುಂದು​ವ​ರೆ​ಯಲಿ

ರಾಮನಗರ: ಮಾಜಿ ಪ್ರಧಾನಿ ದೇವೇ​ಗೌ​ಡರ ಕುಟುಂಬ ಮತ್ತು ರಾಮ​ನ​ಗರ ಕ್ಷೇತ್ರದೊಂದಿ​ಗಿನ ಸಂಬಂಧ ಎಂದೆಂದಿಗೂ ಹೀಗೆ ಮುಂದುವರಿಯುವಂತೆ ಬಯಸುತ್ತೇನೆ. ನನಗೂ ಆಶೀರ್ವಾದ ಮಾಡಿದ್ದೀರಿ. ನಾನೂ ಕೂಡ ನಿಮ್ಮ ನಂಬಿಕೆಗೆ ಚ್ಯುತಿ ಬರದಂತೆ ನಡೆದುಕೊಂಡಿದ್ದೇನೆ. ನಿಮ್ಮ ಪ್ರೀತಿ, ವಿಶ್ವಾಸ ನಮ್ಮ ಮೇಲೆ ಹೀಗೇ ಇರಲಿ ಎಂದು ​ಶಾ​ಸಕಿ ಅನಿತಾ ಕುಮಾ​ರ​ಸ್ವಾಮಿ ಹೇಳಿದರು.

ರಾಮ​ನಗರ ಕ್ಷೇತ್ರ​ದೊಂದಿಗೆ ತಮ್ಮ ಕುಟುಂಬ ಹೇಗೆ ಸಂಬಂಧ ಹೊಂದಿ​ತ್ತು ಎಂಬು​ದನ್ನು ಮೆಲಕು ಹಾಕಿದರು. 1994ರಿಂದ ನಮ್ಮ ಕುಟುಂಬಕ್ಕೂ ರಾಮನಗರ ಜಿಲ್ಲೆಗೂ ಬಾಂಧವ್ಯ ಶುರುವಾಯಿತು. ಅದಕ್ಕೂ ಮುನ್ನ ಅಂದರೆ 1992ರಲ್ಲೇ ಬಿಡದಿ ಬಳಿಯ ಕೇತಗಾನಹಳ್ಳಿಯಲ್ಲಿ ಕುಮಾರಸ್ವಾಮಿ ಅವರು ಬೆಂಗಳೂರಿನಲ್ಲಿ ಸಣ್ಣಪುಟ್ಟಗುತ್ತಿಗೆ ಕಾಮಗಾರಿಗಳಿಂದ ಸಂಪಾದಿಸಿದ ಹಣದಿಂದ ಜಮೀನು ಖರೀದಿಸಿ, ಕೃಷಿ ಮಾಡುತ್ತಿದ್ದರು. ಹೀಗೆ ಜನರ ಸಂಪರ್ಕ ಗಳಿಸಿದ ಕುಮಾರಸ್ವಾಮಿ ಅವರು 1994ರಲ್ಲಿ ಎಚ್‌.ಡಿ.ದೇವೇಗೌಡ ಅವರನ್ನು ರಾಮನಗರ ಕ್ಷೇತ್ರದಿಂದ ಕಣಕ್ಕಿಳಿಸಿದರು. ನಿಮ್ಮೆಲ್ಲರ ಆಶೀರ್ವಾದದಿಂದ ಗೆದ್ದು ಮುಖ್ಯಮಂತ್ರಿಯಾಗಿದ್ದ ಅವರಿಗೆ ಪ್ರಧಾನ ಮಂತ್ರಿಯಾಗುವ ಯೋಗವೂ ಹುಡುಕಿಕೊಂಡು ಬಂದಿತು.
ನಂತರ ಕುಮಾರಸ್ವಾಮಿ ಅವರು ಕನಕಪುರ ಲೋಕಸಭಾಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದಿದ್ದರು. 8 ವಿಧಾನಸಭಾ ಕ್ಷೇತ್ರಗಳನ್ನೊಳಗೊಂಡ ದೊಡ್ಡ ಕ್ಷೇತ್ರ ಆಗಿದ್ದರಿಂದ ನಾನು ಬೆಂಗಳೂರು ನಗರಕ್ಕೆ ಹೊಂದಿಕೊಂಡಿರುವ ಕ್ಷೇತ್ರಗಳಲ್ಲಿ ಪ್ರಚಾರದ ಜವಾಬ್ದಾರಿ ನಿಭಾಯಿಸಿದ್ದೆ. ಆ ಚುನಾವಣೆಯಲ್ಲಿ ಕುಮಾರಸ್ವಾಮಿ ಅವರು ಜಯಗಳಿಸಿದ್ದರು. ಆನಂತರ 2004ರ ಚುನಾವಣೆಯಲ್ಲಿ ರಾಮನಗರದಿಂದ ಸ್ಪರ್ಧಿಸಿ ಗೆದ್ದ ಅವರಿಗೆ ಮುಖ್ಯಮಂತ್ರಿ ಸ್ಥಾನಕ್ಕೇರಿದರು. ಅಂದಿನಿಂದ ಇಂದಿನವರೆಗೆ ನಿಮ್ಮ ಮನೆ ಮಗನಂತೆ ನಡೆದುಕೊಂಡಿದ್ದಾರೆ ಎಂದು ಅನಿತಾ ಕುಮಾ​ರ​ಸ್ವಾಮಿ ಹೇಳಿ​ದರು.