Ramanagar: ಜೆಡಿಎಸ್‌ಗೆ ಒಲಿದ ಅಧ್ಯಕ್ಷ ಉಪಾಧ್ಯಕ್ಷ ಪಟ್ಟ
ತಾಲೂಕಿನ ಕೈಲಾಂಚ ಹೋಬಳಿಯ ಅಂಕನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಜಿ.ಶಿವಕುಮಾರ್ ಹಾಗೂ ಉಪಾಧ್ಯಕ್ಷರಾಗಿ ರಂಜಿತ ಅವಿರೋಧವಾಗಿ ಆಯ್ಕೆಯಾದರು.
ರಾಮನಗರ (ಅ.29): ತಾಲೂಕಿನ ಕೈಲಾಂಚ ಹೋಬಳಿಯ ಅಂಕನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಜಿ.ಶಿವಕುಮಾರ್ ಹಾಗೂ ಉಪಾಧ್ಯಕ್ಷರಾಗಿ ರಂಜಿತ ಅವಿರೋಧವಾಗಿ ಆಯ್ಕೆಯಾದರು.
ಒಟ್ಟು 12 ಸ್ಥಾನಗಳ ಪೈಕಿ 11 ಜೆಡಿಎಸ್ (JDS) ಬೆಂಬಲಿತ ನಿರ್ದೇಶಕರು ಆಯ್ಕೆಯಾಗಿದ್ದರೆ, 1 ಸ್ಥಾನದಲ್ಲಿ ಮಾತ್ರ ಕಾಂಗ್ರೆಸ್ ಬೆಂಬಲಿತ ಗೆದ್ದಿದ್ದರು. ಅಧ್ಯಕ್ಷ ಸ್ಥಾನಕ್ಕೆ ಜಿ.ಶಿವಕುಮಾರ್ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ರಂಜಿತಾ ಅವರನ್ನು ಹೊರತು ಬೇರೆ ಯಾರೂ ನಾಮಪತ್ರ ಸಲ್ಲಿಸದ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿ ಮದಕರಿ ನಾಯಕ್ ಅವಿರೋಧ ಆಯ್ಕೆ ಘೋಷಿಸಿದರು.
ನೂತನ ಅಧ್ಯಕ್ಷ (President) - ಉಪಾಧ್ಯಕ್ಷರನ್ನು ಅಭಿನಂದಿಸಿ ಮಾತನಾಡಿದ ಬಿಡಿಸಿಸಿ ಬ್ಯಾಂಕ್ ಮಾಜಿ ನಿರ್ದೇಶಕ ಪಿ.ಅಶ್ವಥ್, ಯಾವ ಸಹಕಾರ ಸಂಘಗಳು ರೈತಸ್ನೇಹಿಯಾಗಿ ಕೆಲಸ ಮಾಡುತ್ವೆಯೋ ಅಂತಹ ಸಂಘಗಳು ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತವೆ. ಸಹಕಾರ ಸಂಘಗಳನ್ನು ರೈತರು ಉತ್ತಮ ರೀತಿಯಲ್ಲಿ ಬಳಕೆ ಮಾಡಿಕೊಂಡಾಗ ಬೆಳೆ ಸಾಲ ಸೇರಿದಂತೆ ಹಲವು ಸೌಲಭ್ಯ ಪಡೆಯಬಹುದು. ರೈತರು ಸಕಾಲದಲ್ಲಿ ಸಾಲ ಮರುಪಾವತಿಸಿದರೆ ಮುಂದೆ ಇನ್ನೂ ಹೆಚ್ಚಿನ ಸಾಲ ಸೌಲಭ್ಯ ದೊರೆಯುತ್ತದೆ. ನೂತನ ಆಡಳಿತ ಮಂಡಳಿ ರೈತರಿಗೆ ಸರಿಯಾದ ಸಮಯಕ್ಕೆ ರಸಗೊಬ್ಬರ ಪೂರೈಕೆ ಸೇರಿದಂತೆ ಸ್ತ್ರೀಶಕ್ತಿ ಸ್ವಹಾಯ ಸಂಘಗಳ ಸಾಲ, ಹೈನುಗಾರಿಕೆ ಸಾಲ ನೀಡಿ ಸಂಘವನ್ನು ಇನ್ನಷ್ಟುರೈತಸ್ನೇಹಿಯಾಗಿ ಮಾಡಬೇಕು ಎಂದು ಕರೆ ನೀಡಿದರು.
ನೂತನ ಅಧ್ಯಕ್ಷ ಜಿ. ಶಿವಕುಮಾರ್ ಮಾತನಾಡಿ, ಸಂಘದ ಶ್ರೇಯೋಭಿವೃದ್ಧಿಗೆ ಅವಿರತವಾಗಿ ಶ್ರಮಿಸಲಾಗುತ್ತದೆ ಎಂದರು.
ನೂತನ ಅಧ್ಯಕ್ಷ ಜಿ.ಶಿವಕುಮಾರ್ ಮತ್ತು ಉಪಾಧ್ಯಕ್ಷೆ ರಂಜಿತಾ ಸೇರಿದಂತೆ ನಿರ್ದೇಶಕರಾದ ಕೆ. ಶಿವರಾಜು, ಪವಿತ್ರ ಎಸ್.ಮಹೇಶ್, ವರದರಾಜು, ಮಹದೇವಯ್ಯ, ದೇವರಾಜು, ಪಿ. ರಾಮಚಂದ್ರ, ಡಿ. ನಾಗರಾಜು, ಮರಿಸ್ವಾಮಿ, ಚಲುವರಾಜು ಅವರನ್ನು ಸಂಘದ ಆವರಣದಲ್ಲಿ ಜೆಡಿಎಸ್ ಮುಖಂಡರು ಅಭಿನಂದಿಸಿದರು.
ಜೆಡಿಎಸ್ ಮುಖಂಡ ಕವಣಾಪುರ ಕೆ.ಶಿವಲಿಂಗಯ್ಯ, ಗಿರೀಶ್, ಚನ್ನಂಕೇಗೌಡ, ಗ್ರಾಪಂ ಮಾಜಿ ಅಧ್ಯಕ್ಷ ಎಸ್.ಮಹೇಶ್, ಉಪಾಧ್ಯಕ್ಷ ವಡ್ಡರಹಳ್ಳಿ ವೆಂಕಟೇಶ್, ತಮ್ಮಯ್ಯ, ಕರಿಯಪ್ಪ, ಆರ್.ನಾಗೇಶ್, ಬಸವರಾಜು, ಎ.ತಮ್ಮಣ್ಣ, ಗೌಡಯ್ಯ, ಕೃಷ್ಣಪ್ಪ, ಎ.ಎನ್.ಕೃಷ್ಣಶೆಟ್ಟಿ, ಎ.ಶಿವಣ್ಣ, ಚಂದ್ರಶೇಖರ್, ಆನಂದಗಿರಿ, ಎಸ್.ಸಿದ್ದರಾಮಯ್ಯ, ಕೆ.ಎಸ್. ಗುರುಲಿಂಗಯ್ಯ, ಸದಾಶಿವಯ್ಯ, ಬಿ.ಚಂದ್ರಶೇಖರ್, ಸಂಘದ ಸಿಇಒ ಕಾಂತರಾಜು, ಡೇರಿ ಕಾರ್ಯದರ್ಶಿ ಯೋಗಾನಂದ ಹಾಜರಿದ್ದರು.
ಒಬ್ಬ ಶಾಸಕ ಇರಬೇಕು
ಕಾಶ್ಮೀರದಿಂದ ಕನ್ಯಾಕುಮಾರಿವರೆಗೂ ನಮ್ಮ ಕಾರ್ಯಕರ್ತರು ಇದ್ದಾರೆ. ಪ್ರತಿ ರಾಜ್ಯದಲ್ಲಿಯೂ ನಮ್ಮ ಪಕ್ಷದ ಶಾಸಕರು ಇರಬೇಕು ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಹೇಳಿದ್ದಾರೆ. ಶುಕ್ರವಾರ ಪಕ್ಷದ ಕಚೇರಿ ಜೆ.ಪಿ.ಭವನದಲ್ಲಿ ನಡೆದ ಪಕ್ಷದ ರಾಷ್ಟ್ರೀಯ ಪರಿಷತ್ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೆ ಬಂದೇ ಬರುತ್ತದೆ. ಇದನ್ನು ಯಾರೂ ತಪ್ಪಿಸಲು ಸಾಧ್ಯವಿಲ್ಲ. ಪ್ರತಿ ರಾಜ್ಯದ ಒಂದು ಕ್ಷೇತ್ರದಲ್ಲಿ ಒಬ್ಬರಾದರೂ ನಮ್ಮ ಶಾಸಕರು ಇರಬೇಕು. ಈ ನಿಟ್ಟಿನಲ್ಲಿ ಎಲ್ಲರೂ ಕೆಲಸ ಮಾಡಬೇಕು. ನಮ್ಮ ಕೆಲಸ ನಾವು ಪ್ರಾಮಾಣಿಕವಾಗಿ ಮಾಡಬೇಕು.
ನನ್ನನ್ನು ರಾಷ್ಟ್ರೀಯ ಅಧ್ಯಕ್ಷರಾಗಿ ಮರು ಆಯ್ಕೆ ಮಾಡಿದ್ದಕ್ಕೆ ಕಾರ್ಯಕಾರಿಣಿ ಸಮಿತಿಗೆ ಧನ್ಯವಾದಗಳು ಎಂದರು. ಮಹಾ ಅಧಿವೇಶನದಲ್ಲಿ ಮೂರು ನಿರ್ಣಯ ಅಂಗೀಕಾರವಾಗಿವೆ. ಇದೊಂದು ಅತ್ಯುತ್ತಮ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ. ಲಕ್ಷಾಂತರ ಕಾರ್ಯಕರ್ತರು ಈ ಪಕ್ಷದ ಬೆನ್ನಲುಬು ಆಗಿದ್ದಾರೆ. ಕಾಂಗ್ರೆಸ್-ಬಿಜೆಪಿ ಬಗ್ಗೆ ಚರ್ಚೆ ಬೇಡ. ನಮ್ಮ ಕೆಲಸ ನಾವು ಪ್ರಾಮಾಣಿಕವಾಗಿ ಮಾಡಬೇಕು. ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಜನತಾ ಜಲಧಾರೆ ಮಾಡಿದರು. ಈಗ ಪಂಚರತ್ನ ರಥಯಾತ್ರೆ ಮಾಡುತ್ತಿದ್ದಾರೆ. ಇವೆಲ್ಲವೂ ಜನರ ಅಭಿವೃದ್ಧಿ ಕಾರ್ಯಕ್ರಮಗಳು ಎಂದು ತಿಳಿಸಿದರು.
ಮೀಸಲಾತಿ ಬಗ್ಗೆ ಬಿಜೆಪಿ, ಕಾಂಗ್ರೆಸ್ ಬಹಿರಂಗ ಚರ್ಚೆಗೆ ಬರಲಿ: ದೇವೇಗೌಡ
ಪಂಚರತ್ನ ಯಾತ್ರೆಗೆ ಸಾಂಕೇತಿಕ ಚಾಲನೆ: ‘ಕಾಂಗ್ರೆಸ್‌ನವರು ಯಾವ ಜೋಡೋ ಆದರೂ ಮಾಡಿಕೊಳ್ಳಲಿ. ಬಿಜೆಪಿಯವರು ಯಾವ ಸಂಕಲ್ಪ ಯಾತ್ರೆಯನ್ನಾದರೂ ಮಾಡಿಕೊಳ್ಳಲಿ. ಮುಂಬರುವ 2023ಕ್ಕೆ ಜೆಡಿಎಸ್ ಅಧಿಕಾರಕ್ಕೆ ಬರುವುದು ನಿಶ್ಚಿತ’ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಬಸವನಗುಡಿಯಲ್ಲಿ ಪಂಚರತ್ನ ರಥಯಾತ್ರೆಗೆ ಸಾಂಕೇತಿಕವಾಗಿ ಚಾಲನೆ ನೀಡಿದ ಬಳಿಕ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್-ಬಿಜೆಪಿಯವರು ಜನರಿಂದ ಲೂಟಿ ಮಾಡಿದ ಹಣವನ್ನು ಹಂಚಲು ಬರುತ್ತಾರೆ. ಒಂದು ಮತಕ್ಕೆ ಎರಡು ಸಾವಿರ ರು. ಮತ್ತು ಕುಕ್ಕರ್ ಎಂದು ಬರುತ್ತಾರೆ. ಇದೆಲ್ಲಾ ಹಣ ರಾಜ್ಯದ ಜನರಿಂದ ಲೂಟಿ ಮಾಡಿರುವ ಹಣ. ಆದರೆ ನಾವು ಯಾರೂ ದುಡ್ಡು ಲೂಟಿ ಹೊಡೆದಿಲ್ಲ. ಭಾರತ್ ಜೋಡೋದಿಂದ ಜನರ ಸಮಸ್ಯೆಗಳು ಅರ್ಥವಾಗುವುದಿಲ್ಲ. ಇವಾಗ ಏನೋ ಕಾಂಗ್ರೆಸ್ ನಾಯಕರು ಪಟ್ಟಿಮಾಡುತ್ತಾರಂತೆ. ಅವರಿಂದ ಜನರ ಸಮಸ್ಯೆ ನಿವಾರಣೆಯಾಗುವುದಿಲ್ಲ ಎಂದು ಟೀಕಿಸಿದರು.