ನಾಯಕತ್ವದ ಕೊರತೆ?: ಭಿನ್ನಾಭಿಪ್ರಾಯ ಶಮನಕ್ಕೆ ಶೀಘ್ರ ಜೆಡಿಎಸ್ ಸಭೆ
ಆಡಳಿತರೂಢ ಕಾಂಗ್ರೆಸ್ ಪಕ್ಷ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನ ಗೆಲ್ಲಲು ಸಾಧ್ಯವಾಗದಂತೆ ರಾಜಕೀಯ ತಂತ್ರಗಾರಿಕೆ ರೂಪಿಸಬೇಕಾಗಿದೆ. ಉಪಚುನಾವಣೆ ಸೋಲಿನ ಬಳಿಕ ಎಚ್ಚೆತ್ತ ಜೆಡಿಎಸ್ ಮುಖಂಡರು ತಪ್ಪುಗಳನ್ನು ಸರಿಮಾಡಿಕೊಂಡು ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಮುಂದುವರಿಯದಂತೆ ಕ್ರಮ ಕೈಗೊಳ್ಳಲು ಈ ಸಭೆ ಮಹತ್ವದ್ದಾಗಿದೆ ಎಂದು ಹೇಳಲಾಗಿದೆ.
ಬೆಂಗಳೂರು(ಜ.02): ತಳಮಟ್ಟದಿಂದ ಮತ್ತೊಮ್ಮೆ ಪಕ್ಷ ಸಂಘಟಿಸಲು ಸಜ್ಜಾಗಿರುವ ಜೆಡಿಎಸ್ ಇದೇ ತಿಂಗಳಲ್ಲಿ ಸಭೆಯೊಂದನ್ನು ಕರೆದು ಸಣ್ಣಪುಟ್ಟ ಭಿನ್ನಾಭಿಪ್ರಾಯಗಳನ್ನು ದೂರಮಾಡಿ ಒಗ್ಗಟ್ಟಿನೊಂದಿಗೆ ರಾಜ್ಯ ಸರ್ಕಾರದ ವಿರುದ್ಧ ಹೋರಾಟ ನಡೆಸುವ ಸಂಬಂಧ ರಾಜಕೀಯ ತಂತ್ರಗಾರಿಕೆ ರೂಪಿಸುವ ಸಂಬಂಧ ಚರ್ಚೆ ನಡೆಸಲು ಮುಂದಾಗಿದೆ.
ಪ್ರಬಲ ಪ್ರತಿಪಕ್ಷ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡರೂ ಸರ್ಕಾರ ವಿರುದ್ಧ ಹೋರಾಟದ ವಿಷಯದಲ್ಲಿ ಅಂತರ ಕಾಯ್ದುಕೊಂಡಿದೆ. ಯಾವುದೇ ಹೋರಾಟಗಳಲ್ಲಿ ಭಾಗಿಯಾಗದಿರುವುದು ಮೈತ್ರಿ ಧರ್ಮ ಪಾಲನೆಯಾಗುತ್ತಿಲ್ಲ ಎಂಬ ಅನುಮಾನಗಳು ಮೂಡಿವೆ. ಇದು ರಾಜ್ಯದಲ್ಲಿ ನಾಯಕತ್ವದ ಪ್ರಶ್ನೆ ತಲೆದೋರುವಂತೆ ಮಾಡಿದೆ. ಈ ಹಿನ್ನೆಲೆಯಲ್ಲಿ ಸಭೆ ನಡೆಸಿ ಮಹತ್ವದ ವಿಷಯಗಳ ಕುರಿತು ಚರ್ಚೆ ನಡೆಸುವ ಸಾಧ್ಯತೆ ಇದೆ. ಪಕ್ಷದ ನಾಯಕರಲ್ಲಿ ಭಿನ್ನಾಭಿಪ್ರಾಯಗಳಿದ್ದರೆ ಅವುಗಳನ್ನು ದೂರ ಮಾಡುವ ಪ್ರಯತ್ನ ಮಾಡಲು ಪಕ್ಷದ ವರಿಷ್ಠರು ಮುಂದಾಗಿದ್ದಾರೆ ಎಂದು ಹೇಳಲಾಗಿದೆ.
ಸಂಕ್ರಾಂತಿ ಬಳಿಕ ನಿಖಿಲ್ ಕುಮಾರಸ್ವಾಮಿ ಜೆಡಿಎಸ್ ರಾಜ್ಯಾಧ್ಯಕ್ಷ?
ಬೆಳಗಾವಿ ಅಧಿವೇಶನದಲ್ಲೂ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ಕಾರ್ಯದಲ್ಲಿ ಜೆಡಿಎಸ್ ವಿಫಲವಾಯಿತು. ಅಲ್ಲದೆ, ಬಿಜೆಪಿ ನಡೆಸಿದ ಹೋರಾಟದಲ್ಲೂ ಕೈ ಜೋಡಿಸುವಲ್ಲೂ ಹಿಂದೇಟು ಹಾಕಿತು. ಇದಕ್ಕೆ ರಾಜ್ಯದಲ್ಲಿ ನಾಯಕತ್ವದ ಕೊರತೆ ಎಂಬ ಮಾತುಗಳು ಜೆಡಿಎಸ್ ವಲಯದಲ್ಲಿ ಕೇಳಿಬಂದಿವೆ. ಕೇಂದ್ರ ಉಕ್ಕು ಸಚಿವ ಎಚ್.ಡಿ.ಕುಮಾರಸ್ವಾಮಿ ಲೋಕಸಭೆ ಚುನಾವಣೆ ಗೆಲುವು ಸಾಧಿಸಿ ದೆಹಲಿಗೆ ತೆರಳಿದ ಬಳಿಕ ರಾಜ್ಯದಲ್ಲಿ ಪಕ್ಷ ಸಂಘಟನೆಗೆ ಹಿಂದೇಟಾಗಿದೆ. ಇದನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಈ ಹಿನ್ನೆಲೆಯಲ್ಲಿ ಜನವರಿ ತಿಂಗಳ ಎರಡನೇ ಅಥವಾ ಮೂರನೇ ವಾರ ಸಭೆ ನಡೆಸುವ ಕುರಿತು ಚರ್ಚೆ ನಡೆದಿದೆ ಎನ್ನಲಾಗಿದೆ.
ಬಾಂಬ್ ಹಾಕೋದು, ರಕ್ತಕ್ರಾಂತಿ ಮಾಡೋದು ಜನರಿಗೆ ಬೇಕಾಗಿಲ್ಲ: ಸಂತೋಷ್
ಈ ನಡುವೆ, ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ಬಿಬಿಎಂಪಿ, ಜಿಲ್ಲಾ ಮತ್ತು ತಾಪಂ ಚುನಾವಣೆಗಳು ನಡೆಯುವ ನಿರೀಕ್ಷೆ ಇದೆ. ಇದಕ್ಕೆ ತಯಾರಿ ನಡೆಸಲು ನಾಯಕತ್ವದ ಅತ್ಯಗತ್ಯ ಇದೆ. ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಅಧಿಕ ಸ್ಥಾನಗಳನ್ನು ಗೆಲ್ಲಿಸಲು ಪಕ್ಷ ಸಿದ್ಧತೆ ಕೈಗೊಂಡಿದೆ. ಬಿಜೆಪಿಯೊಂದಿಗಿನ ಮೈತ್ರಿಯೊಂದಿಗೆ ಚುನಾವಣಾ ಅಖಾಡಕ್ಕಿಳಿಯುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಜೆಡಿಎಸ್ ಎಷ್ಟು ಸ್ಥಾನಗಳಲ್ಲಿ ಸ್ಪರ್ಧಿಸಬೇಕು ಎಂಬುದರ ಕುರಿತು ಸ್ಪಷ್ಟನೆ ಇರಬೇಕು. ಈ ಸಂಬಂಧ ಸಭೆಯಲ್ಲಿ ಚರ್ಚೆ ನಡೆಯಲಿದೆ.
ಆಡಳಿತರೂಢ ಕಾಂಗ್ರೆಸ್ ಪಕ್ಷ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನ ಗೆಲ್ಲಲು ಸಾಧ್ಯವಾಗದಂತೆ ರಾಜಕೀಯ ತಂತ್ರಗಾರಿಕೆ ರೂಪಿಸಬೇಕಾಗಿದೆ. ಉಪಚುನಾವಣೆ ಸೋಲಿನ ಬಳಿಕ ಎಚ್ಚೆತ್ತ ಜೆಡಿಎಸ್ ಮುಖಂಡರು ತಪ್ಪುಗಳನ್ನು ಸರಿಮಾಡಿಕೊಂಡು ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಮುಂದುವರಿಯದಂತೆ ಕ್ರಮ ಕೈಗೊಳ್ಳಲು ಈ ಸಭೆ ಮಹತ್ವದ್ದಾಗಿದೆ ಎಂದು ಹೇಳಲಾಗಿದೆ.