ಪ್ರಭುಸ್ವಾಮಿ ನಟೇಕರ್‌

ಬೆಂಗಳೂರು[ಡಿ.18]: ಇತ್ತೀಚಿನ ಉಪಚುನಾವಣೆಯಲ್ಲಿ ತಮ್ಮ ಪ್ರಾಬಲ್ಯವಿದ್ದ ಸೀಮೆಯಲ್ಲಿಯೇ ಹೀನಾಯ ಸೋಲು ಕಂಡ ದಳಪತಿಗಳಿಗೆ ಮತ್ತೊಂದು ಸಂಕಷ್ಟಎದುರಾಗಿದ್ದು, ಪಕ್ಷದ ಹಿರಿಯ ನಾಯಕರೇ ಗುಂಪಾಗಿ ಪಕ್ಷ ತೊರೆದು ಕೈ-ಕಮಲ ಹಿಡಿಯಲು ಸಜ್ಜಾಗುತ್ತಿದ್ದಾರೆ.

ಫಲಿತಾಂಶದ ಬೆನ್ನಲ್ಲೇ ಜೆಡಿಎಸ್‌ನ ಶಾಸಕರಲ್ಲಿ ಅತಂತ್ರ ಭಾವನೆ ತೀವ್ರಗೊಂಡಿದ್ದು, ಪಕ್ಷ ಇಬ್ಭಾಗದತ್ತ ಹೆಜ್ಜೆ ಹಾಕತೊಡಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಮೈತ್ರಿ ಸರ್ಕಾರದ ಅವಧಿಯಲ್ಲಿ ಪಕ್ಷದ ನಾಯಕರನ್ನು, ಕಾರ್ಯಕರ್ತರನ್ನು ನಿರ್ಲಕ್ಷ್ಯ ಮಾಡಿರುವುದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರಿಗೆ ಈಗ ಬಿಸಿ ಮುಟ್ಟಿಸತೊಡಗಿದೆ. ಉಪಚುನಾವಣೆ ವೇಳೆಯಲ್ಲಿಯೂ ಪಕ್ಷದ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದಿರುವುದು ಪಕ್ಷದಿಂದ ಹೊರಗೆ ಹೋಗುವವರ ನಿರ್ಧಾರ ಮತ್ತಷ್ಟುಗಟ್ಟಿಯಾಗುವಂತೆ ಮಾಡಿದೆ. ಮಾನಸಿಕವಾಗಿ ಪಕ್ಷದಿಂದ ದೂರವಾಗಿರುವ ಮುಖಂಡರೆಲ್ಲರೂ ಮುಂದಿನ ದಿನಗಳಲ್ಲಿ ಪಕ್ಷ ತೊರೆದು ಬಿಜೆಪಿ ಅಥವಾ ಕಾಂಗ್ರೆಸ್‌ ತೆಕ್ಕೆಗೆ ಸೇರಲು ತುದಿಗಾಲಲ್ಲಿ ನಿಂತಿದ್ದಾರೆ. ಇದಕ್ಕಾಗಿ ತೆರೆಮರೆಯ ಸಿದ್ಧತೆ ಆರಂಭಗೊಂಡಿದೆ ಎನ್ನಲಾಗಿದೆ.

ಮತ್ತೆ ಯಡಿಯೂರಪ್ಪ ಜೊತೆ ಜೆಡಿಎಸ್‌ನ ಹೊರಟ್ಟಿ ಭೇಟಿ ಸಸ್ಪೆನ್ಸ್‌!

ಕುಮಾರಸ್ವಾಮಿ ಅವರ ನಡೆ ಬಗ್ಗೆ ವಿಧಾನಪರಿಷತ್‌ ಸದಸ್ಯರು ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದರು. ನಂತರ ವರಿಷ್ಠ ಎಚ್‌.ಡಿ.ದೇವೇಗೌಡ ಅವರ ಮಧ್ಯಸ್ಥಿಕೆಯಲ್ಲಿ ಅಸಮಾಧಾನ ಶಮನ ಮಾಡುವ ಪ್ರಯತ್ನ ಸಫಲವಾಗಿತ್ತು. ಆದರೆ, ಇದೀಗ ಮತ್ತೆ ಅಸಮಾಧಾನ ಭುಗಿಲೇಳುವ ಲಕ್ಷಣಗಳು ಕಂಡುಬರುತ್ತಿವೆ. ಕುಮಾರಸ್ವಾಮಿ ಅವರ ಏಕಚಕ್ರಾಧಿಪತ್ಯ ಧೋರಣೆಯಿಂದ ಸಾಕಷ್ಟುವಿಧಾನಸಭೆ ಸದಸ್ಯರು, ವಿಧಾನಪರಿಷತ್‌ ಸದಸ್ಯರು ಮತ್ತು ಪಕ್ಷದ ಮುಖಂಡರು ಬೇಸರಗೊಂಡಿದ್ದಾರೆ. ಪಕ್ಷಕ್ಕಾಗಿ ದುಡಿದರೂ ಯಾವುದೇ ಪ್ರತಿಫಲ ಸಿಗದಿರುವುದು ಅಸಮಾಧಾನಕ್ಕೆ ಬಲವಾದ ಕಾರಣವಾಗಿದೆ ಎಂಬ ಮಾತುಗಳು ಕೇಳಿಬಂದಿದೆ.

ಜೆಡಿಎಸ್‌ನ ಮುಖಂಡರಾದ ಮಧು ಬಂಗಾರಪ್ಪ, ರಮೇಶ್‌ ಬಾಬು ಸೇರಿದಂತೆ ಇತರರು ಹಾಗೂ ವಿಧಾನಪರಿಷತ್‌ನ ಹಿರಿಯ ಸದಸ್ಯ ಬಸವರಾಜ್‌ ಹೊರಟ್ಟಿನೇತೃತ್ವದಲ್ಲಿ ಕೆಲವು ವಿಧಾನಪರಿಷತ್‌ ಸದಸ್ಯರು, ಮಾಜಿ ಸಚಿವ ಜಿ.ಟಿ.ದೇವೇಗೌಡ ಈಗಾಗಲೇ ಮಾನಸಿಕವಾಗಿ ಹೊರಗೆ ಹೆಜ್ಜೆ ಇಟ್ಟಿದ್ದಾರೆ. ಇವರ ಹಾದಿಯಲ್ಲಿಯೇ ಇತರೆ ವಿಧಾನಸಭೆಯ ಸದಸ್ಯರು ಪಕ್ಷ ಬಿಡುವ ಆಲೋಚನೆಯಲ್ಲಿದ್ದಾರೆ. ಯಾವ ಪಕ್ಷಕ್ಕೆ ಸೇರ್ಪಡೆಯಾಗಬೇಕು ಎಂಬುದರ ಬಗ್ಗೆ ನಾಯಕರು ಯಾವುದೇ ತೀರ್ಮಾನ ಕೈಗೊಂಡಿಲ್ಲ. ಆದರೆ, ಜೆಡಿಎಸ್‌ ವರಿಷ್ಠರ ನಡೆಯಿಂದ ಬೇಸತ್ತು ಹೊರಹೋಗುವ ಯೋಚನೆ ಮಾತ್ರ ಬಲವಾಗಿ ಮಾಡಿದ್ದಾರೆ. ಕಾಂಗ್ರೆಸ್‌ ಮತ್ತು ಬಿಜೆಪಿಗೆ ಕೆಲವರು ವಲಸೆ ಹೋಗುವ ಬಗ್ಗೆ ಚಿಂತನೆಯಲ್ಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್‌-ಬಿಜೆಪಿಗೆ ಎದಿರೇಟು ನೀಡಲು ಪ್ರಾದೇಶಿಕ ಪಕ್ಷ ಅಗತ್ಯವಾಗಿದ್ದು, ಅದು ಜೆಡಿಎಸ್‌ನಿಂದ ಮಾತ್ರ ಸಾಧ್ಯ ಎಂಬ ಅಭಿಪ್ರಾಯವನ್ನು ಪಕ್ಷದ ನಾಯಕರು ನಂಬಿದ್ದರು. ಪಾದೇಶಿಕ ಪಕ್ಷದ ಅಗತ್ಯ ಇದೆ ಎಂಬ ಪರಿಕಲ್ಪನೆಯಲ್ಲಿದ್ದ ನಾಯಕರ ನಂಬಿಕೆಗೆ ಪಕ್ಷದ ವರಿಷ್ಠರು ತಣ್ಣೀರೆರಚಿದ್ದಾರೆ. ಪಕ್ಷದ ನಾಯಕರ ಮತ್ತು ಕಾರ್ಯಕರ್ತರ ವಿಶ್ವಾಸಕ್ಕೆ ತಕ್ಕಂತೆ ನಡೆದುಕೊಳ್ಳುವಲ್ಲಿ ಎಡವಿದ್ದಾರೆ. ವಿಧಾನಪರಿಷತ್‌ಗೆ ಆಯ್ಕೆ, ವಿಧಾನಸಭೆಗೆ ಟಿಕೆಟ್‌ ನೀಡುವ ವೇಳೆ ಯಾರ ಅಭಿಪ್ರಾಯಕ್ಕೂ ಮನ್ನಣೆ ನೀಡದಿರುವುದು ಅಸಮಾಧಾನ ಇಮ್ಮಡಿಗೊಳ್ಳಲು ಕಾರಣವಾಗಿದೆ ಎನ್ನಲಾಗಿದೆ.

'ಅಪ್ಪ-ಮಕ್ಕಳಿಂದ ಉತ್ತರ ಕರ್ನಾಟಕ ನಿರ್ಲಕ್ಷ್ಯ ಎಂದ ಜೆಡಿಎಸ್ ನಾಯಕ'

ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಸರ್ಕಾರದ ಅವಧಿಯಲ್ಲಿ ನಿಗಮ-ಮಂಡಳಿ ಸ್ಥಾನ ಜೆಡಿಎಸ್‌ ನಾಯಕರಿಗೆ ಸಿಗಲಿಲ್ಲ. ಅವಕಾಶ ಇದ್ದಾಗಲೂ ಕುಮಾರಸ್ವಾಮಿ ಮುಖಂಡರನ್ನು ಕಡೆಗಣಿಸಿದ್ದರು. ಮಾತ್ರವಲ್ಲದೇ, ಅವರು ಪಕ್ಷದ ಮುಖಂಡರ ಮತ್ತು ಸ್ಥಳೀಯ ನಾಯಕರ ಕುರಿತು ನೀಡಿರುವ ಹೇಳಿಕೆಯು ಮನಸ್ಸಿಗೆ ಘಾಸಿಯನ್ನುಂಟು ಮಾಡಿದೆ. ಮಾಜಿ ಸಚಿವ ಎಚ್‌.ಡಿ.ರೇವಣ್ಣ ಸಹ ನಾಯಕರಿಗೆ ಗೌರವ ನೀಡಲಿಲ್ಲ. ಉಪಚುನಾವಣೆ ವೇಳೆಯಲ್ಲಿ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವ ನಿರೀಕ್ಷೆ ಇತ್ತು. ಆದರೆ, ಹಿರಿಯ ನಾಯಕರನ್ನು ಯಾವುದೇ ರೀತಿಯಿಂದಲೂ ವಿಶ್ವಾಸಕ್ಕೆ ತೆಗೆದುಕೊಳ್ಳುವ ಪ್ರಯತ್ನ ನಡೆಸಲಿಲ್ಲ. ತಮಗೆ ಮನಬಂದಂತೆ ನಡೆದುಕೊಂಡಿದ್ದಾರೆ. ಯಾವುದೇ ಗೌರವ ಸಿಗದ ಪಕ್ಷದಲ್ಲಿ ಇದ್ದರೂ ಇಲ್ಲದಿದ್ದರೂ ಯಾವುದೇ ವ್ಯತ್ಯಾಸ ಇಲ್ಲದಿರುವ ಕಾರಣ ಪಕ್ಷವನ್ನು ತೊರೆಯುವುದೇ ಉತ್ತಮ. ಹೀಗಾಗಿ ಮಾನಸಿಕವಾಗಿ ಒಂದು ಹೆಜ್ಜೆ ಪಕ್ಷದಿಂದ ಹೊರಗಿಟ್ಟಿದ್ದಾರೆ ಎಂದು ಪಕ್ಷದ ಹಿರಿಯ ನಾಯಕರೊಬ್ಬರು ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದರು.

ಸಿಎಂ ಭೇಟಿ ಮಾಡಿದ ಹೊರಟ್ಟಿ: ರಹಸ್ಯ ಮಾತುಕತೆ!