Asianet Suvarna News Asianet Suvarna News

ಚುನಾವಣೆಗೂ ಮುನ್ನವೇ ಜೆಡಿಎಸ್‌ನ ಒಂದು ವಿಕೆಟ್ ಪತನ: ಕುಮಾರಸ್ವಾಮಿಗೆ ಶಾಕ್!

ಶಿವಾಜಿನಗರ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಅಬ್ದುಲ್ ಜಾಫರ್ ಅಲಿ ಮತದಾನದ ಹಕ್ಕನ್ನು ಹೊಂದಿಲ್ಲವೆಂದು ನಾಮಪತ್ರ ತಿರಸ್ಕೃತವಾಗಿದೆ. ಚುನಾವಣೆಗೆ ಮುನ್ನ ಜೆಡಿಎಸ್‌ 1 ವಿಕೆಟ್‌ ಪತನವಾಗಿದೆ.

JDS lost one wicket before Karnataka election shock for HD Kumaraswamy sat
Author
First Published Apr 23, 2023, 1:21 PM IST

ಬೆಂಗಳೂರು (ಏ.23): ಬೆಂಗಳೂರಿನ ಶಿವಾಜಿನಗರ ವಿಧಾನಸಭಾ ಕ್ಷೇತ್ರದಲ್ಲಿ ಅಬ್ದುಲ್‌ ಜಾಫರ್‌ ಅಲಿ ಅವರನ್ನು ಕಣಕ್ಕಿಳಿಸಿತ್ತು. ಹಲವು ವರ್ಷಗಳ ಕಾಲ ವಿದೇಶದಲ್ಲಿದ್ದ ಜಾಫರ್ ಅಲಿ ಹೆಸರು ಮತದಾರರ ಪಟ್ಟಿಯಲ್ಲೇ ಇಲ್ಲದಿರುವುದರಿಂದ ನಾಮಪತ್ರವನ್ನು ತಿರಸ್ಕರಿಸಲಾಗಿದೆ.

ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ (Karnataka assembly election 2023) ಗೆದ್ದು ಅಧಿಕಾರಕ್ಕೆ ಬರಬೇಕು ಎಂಬ ದೃಷ್ಟಿಕೋನದಿಂದ ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಹೆಚ್.ಡಿ. ದೇವೇಗೌಡ ಹಾಗೂ ಹೆಚ್.ಡಿ. ಕುಮಾರಸ್ವಾಮಿ ಅವರು ರಾಜ್ಯಾದ್ಯಂತ 207 ವಿಧಾನಸಭಾ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದರು. ಇನ್ನು ಬೆಂಗಳೂರಿನ ಶಿವಾಜಿನಗರ ವಿಧಾನಸಭಾ ಕ್ಷೇತ್ರದಿಂದ ಅಬ್ದುಲ್‌ ಜಾಫರ್ ಅಲಿ ಎಂಬುವವರಿಗೆ ಬಿ-ಫಾರಂ ನೀಡಲಾಗಿತ್ತು. ಆದರೆ, ನಾಮಪತ್ರ ಸಲ್ಲಿಕೆ ಮಾಡಲು ಹೋದಾಗ ಇವರ ಹೆಸರು ರಾಜ್ಯದ ಯಾವುದೇ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ಹೆಸರೇ ಇಲ್ಲದಿರುವುದು ತಿಳಿದುಬಂದಿದೆ. ಹೀಗಾಗಿ, ಅವರ ನಾಮಪತ್ರ ತಿರಸ್ಕೃತ ಆಗುವುದು ಖಚಿತ ಆಗಿತ್ತು.

ಕಾಂಗ್ರೆಸ್- ಸಿಪಿಐ ಚುನಾವಣಾ ಪೂರ್ವ ಮೈತ್ರಿ ಘೋಷಣೆ: ಯಾವ ಕ್ಷೇತ್ರದಲ್ಲಿ ಮೈತ್ರಿ?

ವಿದೇಶದಲ್ಲಿ ವಾಸವಾಗಿದ್ದ ಜಾಫರ್ ಅಲಿ: ಇನ್ನು ಶಿವಾಜಿನಗರ ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿ ಜಾಫರ್‌ ಅಲಿ ಅವರು ಬಹಳ ವರ್ಷಗಳ ಕಾಲ ವಿದೇಶದಲ್ಲಿ ವಾಸವಾಗಿದ್ದರು. ಈ ಹಿನ್ನೆಲೆಯಲ್ಲಿ ಅವರ ಹೆಸರನ್ನು ಮತದಾರರ ಪಟ್ಟಿಯಿಂದ ಕೈ ಬಿಡಲಾಗಿತ್ತು. ಆದರೆ, ಇತ್ತೀಚೆಗೆ ಭಾರತಕ್ಕೆ ಮರಳಿ ಬಂದಿದ್ದ ಜಾಫರ್‌ ಅಲಿ ರಾಜಕೀಯಕ್ಕೆ ಬರುವ ಉದ್ದೇಶದಿಂದ ಜೆಡಿಎಸ್‌ನಿಂದ ಬಿ-ಫಾರಂ ಪಡೆದು ನಾಮಪತ್ರ ಸಲ್ಲಿಕೆ ಮಾಡಿದ್ದರು. ಆದರೆ, ಈ ನಾಮಪತ್ರ ಊರ್ಜಿತ ಆಗುವುದಿಲ್ಲ ಎಂದು ಅರಿತು ಮತ್ತೊಬ್ಬ ಅಭ್ಯರ್ಥಿಗೆ ಬಿ-ಫಾರಂ ನೀಡುವಂತೆ ಪಕ್ಷಕ್ಕೆ ತಿಳಿಸಿದ್ದರು.

ಏ.20ರಂದು ಮತದಾರರ ಪಟ್ಟಿಗೆ ಅರ್ಜಿ ಸಲ್ಲಿಕೆ: ಇನ್ನು ತಾನು ರಾಜಕೀಯಕ್ಕೆ ಬರಲೇಬೇಕು ಎಂಬ ಉದ್ದೇಶದಿಂದ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಮಾಡಲು ಇನ್ನಿಲ್ಲದ ಕಸರತ್ತನ್ನು ಮಾಡಿದ ಅಬ್ದುಲ್‌ ಜಾಫರ್‌ ಅಲಿ, ಏ.20ರಂದು (ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ) ಮತದಾರರ ಚೀಟಿ ಪಡೆಯಲು ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಆಗ, ನಾನು ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಮಾಡಲು ಅರ್ಜಿ ಸಲ್ಲಿಕೆ ಮಾಡಿದ್ದು, ತಮ್ಮ ನಾಮಪತ್ರವನ್ನು ಊರ್ಜಿತ ಮಾಡುವಂತೆಯೂ ಮನವಿ ಮಾಡಿದ್ದಾರೆ. ಆದರೆ, ಚುನಾವಣಾ ಆಯೋಗದಲ್ಲಿ ಇದಕ್ಕೆ ಅವಕಾಶ ಇಲ್ಲದ ಹಿನ್ನೆಲೆಯಲ್ಲಿ ಆತನ ನಾಮಪತ್ರವನ್ನು ತಿರಸ್ಕೃತ ಮಾಡಲಾಗಿದೆ.

ಮತ್ತೊಬ್ಬ ಅಭ್ಯರ್ಥಿ ನಾಮಪತ್ರವೂ ತಿರಸ್ಕೃತ: ಅಬ್ದುಲ್‌ ಜಾಫರ್‌ ಅಲಿ ಅವರ ನಾಮಪತ್ರ ತಿರಸ್ಕೃತ ಆಗುವ ಮಾಹಿತಿ ಲಭ್ಯ ಆಗುತ್ತಿದ್ದಂತೆಯೇ ಜೆಡಿಎಸ್‌ ವರಿಷ್ಠರಿಂದ ಆರ್. ಮಂಜುನಾಥ್‌ ಅವರಿಗೆ ಟಿಕೆಟ್‌ ನೀಡಲಾಯಿತು. ಇನ್ನು ಏ.20ರ ಮಧ್ಯಾಹ್ನದ ಬಳಿಕ ಮಂಜುನಾಥ್‌ ತರಾತುರಿಯಲ್ಲಿ ಹೋಗಿ ಜೆಡಿಎಸ್‌ನಿಂದ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಆದರೆ, ಇವರು ನಾಮಪತ್ರ ಸಲ್ಲಿಕೆ ಮಾಡುವಾಗ ಸಮಯ 3 ಗಂಟೆಯನ್ನು ಮೀರಿದೆ. ಈ ಹಿನ್ನೆಲೆಯಲ್ಲಿ ಚುನಾವಣಾ ಆಯೋಗದಿಂದ ಮಂಜುನಾಥ್‌ ಅವರ ನಾಮಪತ್ರವನ್ನೂ ಅನೂರ್ಜಿತ ಮಾಡಲಾಗಿದೆ. ಒಟ್ಟಾರೆ, ಜೆಡಿಎಸ್ ಪರ ನಾಮಪತ್ರ ಸಲ್ಲಿಸಿದ್ದ ಇಬ್ಬರ ನಾಮಪತ್ರವೂ ತಿರಸ್ಕ್ರತವಾಗಿದೆ.

ವರುಣಾದಲ್ಲಿ ಸೋಮಣ್ಣ ಪ್ರಚಾರಕ್ಕೆ ಯುವಕರಿಂದ ಅಡ್ಡಿ: ಸಿದ್ದರಾಮಯ್ಯ ಪರ ಘೋಷಣೆ

ಚುನಾವಣೆಗೂ ಮುನ್ನ ಜೆಡಿಎಸ್‌ನ ವಿಕೆಟ್‌ ಪತನ: ರಾಜ್ಯ ವಿಧಾನಸಭೆಯಲ್ಲಿ ಕನಿಷ್ಠ 130 ಕ್ಷೇತ್ರಗಳಲ್ಲಿ ಗೆದ್ದು ಸ್ವತಂತ್ರ ಅಧಿಕಾರಕ್ಕೆ ಬರಬೇಕು ಎಂದು ಮಾಜಿ ಸಿಎಂ ಕುಮಾರಸ್ವಾಮಿ ಕಸರತ್ತು ಮಾಡುತ್ತಿದ್ದಾರೆ. ಇದರಿಂದ 207 ಕ್ಷೇತ್ರದಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದು, 3 ಕ್ಷೇತ್ರದಲ್ಲಿ ಗುಲ್ಬರ್ಗಾ ಗ್ರಾಮಾಂತರ, ಬಾಗೇಪಲ್ಲಿ ಮತ್ತು ಕೆ.ಆರ್. ಪುರಂ ಕ್ಷೇತ್ರದಲ್ಲಿ ಸಿಪಿಐ(ಎಂ)ಗೆ ಬಾಹ್ಯ ಬೆಂಬಲ ಘೋಷಣೆ ಮಾಡಿದೆ. ಮತ್ತೊಂದೆಡೆ ಸಿ.ವಿ. ರಾಮನ್‌ ನಗರ, ವಿಜಯನಗರ ಹಾಗೂ ಮಹದೇವಪುರದಲ್ಲಿ ಆರ್‌ಪಿಐ ಪಕ್ಷಕ್ಕೆ ಬಾಹ್ಯ ಬೆಂಬಲ ನೀಡಿದೆ. ಜೊತೆಗೆ, ಮೈಸೂರಿನ ನಂಜನಗೂಡು ವಿಧಾನಸಭಾ ಕ್ಷೇತ್ರದ ಕಾಂಗ್ರಸ್‌ ಅಭ್ಯರ್ಥಿ ದರ್ಶನ್‌ ಧ್ರುವನಾರಾಯಣ ಅವರಿಗೆ ಬಾಹ್ಯ ಬೆಂಬಲ ನೀಡಿದೆ. ಆದರೆ, ಒಟ್ಟಾರೆ ಅಭ್ಯರ್ಥಿಗಳಲ್ಲಿ ಶಿವಾಜಿನಗರ ಕ್ಷೇತ್ರದ ಅಭ್ಯರ್ಥಿಗಳ ನಾಮಪತ್ರ ತಿರಸ್ಕೃತ ಆಗುವ ಮೂಲಕ ಚುನಾವಣೆಗೂ ಮುನ್ನವೇ ಒಂದು ವಿಕೆಟ್‌ ಪತನವಾದಂತಾಗಿದೆ.

Follow Us:
Download App:
  • android
  • ios