ಕಾಂಗ್ರೆಸ್- ಸಿಪಿಐ ಚುನಾವಣಾ ಪೂರ್ವ ಮೈತ್ರಿ ಘೋಷಣೆ: ಯಾವ ಕ್ಷೇತ್ರದಲ್ಲಿ ಮೈತ್ರಿ?
ರಾಜ್ಯ ವಿಧಾನಸಭೆ ಚುನಾವಣೆ ಪೂರ್ವವೇ ಕಾಂಗ್ರೆಸ್ ಹಾಗೂ ಕಮ್ಯೂನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಸಿಪಿಐ) ಪಕ್ಷಗಳು ಮೈತ್ರಿ ಮಾಡಿಕೊಂಡಿವೆ.
ಬೆಂಗಳೂರು (ಏ.23): ಕರ್ನಾಟಕ ವಿಧಾನಸಭಾ ಚುನಾವಣೆಯ (Karnataka Assembly Elections 2023) ಮತದಾನಕ್ಕಿಂತ ಪೂರ್ವವೇ ಕಾಂಗ್ರೆಸ್ ಹಾಗೂ ಕಮ್ಯೂನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಸಿಪಿಐ) ಪಕ್ಷಗಳು ಮೈತ್ರಿ ಮಾಡಿಕೊಂಡಿವೆ. ಒಟ್ಟು ರಾಜ್ಯದ 7 ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಸಿಪಿಐಗೆ ಬೆಂಬಲ ವ್ಯಕ್ತಪಡಿಸಲಾಗಿದೆ ಎಂದು ಕಾಂಗ್ರೆಸ್ ರಾಜ್ಯ ಚುನಾವಣಾ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ತಿಳಿಸಿದ್ದಾರೆ.
ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಭಾನುವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕರ್ನಾಟಕ ರಾಜ್ಯದ 224 ವಿಧಾನಸಭಾ ಕ್ಷೇತ್ರಗಳ ಪೈಕಿ 7 ಕ್ಷೇತ್ರಗಳಲ್ಲಿ ಸಿಪಿಐ ಸ್ಪರ್ಧೆ ಮಾಡುತ್ತದೆ. ಉಳಿದ 215 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಜೊತೆ ಸಿಪಿಐ ಕೈ ಜೋಡಿಸಲಿದೆ. ಇದೊಂದು ಐತಿಹಾಸಿಕ ದಿನವಾಗಿದೆ. ಕಮ್ಯೂನಿಸ್ಟ್ ಪಾರ್ಟಿ ಆಫ್ ಇಂಡಿಯಾ (Communist Party of India) ಕೂಡ ಹಲವು ಹೋರಾಟಗಳನ್ನ ಮಾಡಿದೆ. ಕಾರ್ಮಿಕರ ಸಮಸ್ಯೆಗಳ ಬಗ್ಗೆ ಹೋರಾಟ ಮಾಡುತ್ತಲೇ ಬರುತ್ತಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಬೆಲೆ ಏರಿಕೆ, ಭ್ರಷ್ಟಾಚಾರ ಸೇರಿದಂತೆ ಅನೇಕ ವಿಚಾರಗಳಿಗೆ ಸಿಪಿಐ ಹೋರಾಟ ಮಾಡಿದೆ. ಎರಡೂ ಪಕ್ಷಗಳ ಉದ್ದೇಶ ಒಂದೇ ಇದೆ. ಹೀಗಾಗಿ ಸಿಪಿಐ ಪಕ್ಷದ ಮುಖಂಡರ ಜೊತೆ ಮಾತುಕತೆ ನಡೆಸಿದ್ದೇವೆ ಎಂದು ಮಾಹಿತಿ ನೀಡಿದರು.
ವರುಣಾದಲ್ಲಿ ಸೋಮಣ್ಣ ಪ್ರಚಾರಕ್ಕೆ ಯುವಕರಿಂದ ಅಡ್ಡಿ: ಸಿದ್ದರಾಮಯ್ಯ ಪರ ಘೋಷಣೆ
ಭ್ರಷ್ಟಾಚಾರ ಸರ್ಕಾರ ತೊಲಗಿಸಲು ಹೋರಾಟ: ದೇಶದಲ್ಲಿ ಸಿಪಿಐಗೆ ಬಹುದೊಡ್ಡ ಇತಿಹಾಸ ಇದೆ. ಕಾರ್ಮಿಕ, ಬಡವರು ಪರ ಹೋರಾಟ ಮಾಡಿದ್ದಾರೆ. ನಮ್ಮ ಗುರಿ ಒಂದೇ ಆಗಿದೆ. ಬಸವರಾಜ ಬೊಮ್ಮಾಯಿ (Basavaraj Bommai) ಶೇ.40 ಪರ್ಸೆಂಟ್ ಸರ್ಕಾರ ವಿರುದ್ದ ಹೋರಾಟ ಮಾಡಿದ್ದೇವೆ. 80 ಲಕ್ಷ ಹಣ ನೀಡಿ ಸಬ್ ಇನ್ಸ್ಪೆಕ್ಟರ್ ಹುದ್ದೆ ಖರೀದಿಸಲು ಅಲ್ಲ. ಭ್ರಷ್ಟಾಚಾರ, ಲೂಟಿ ಹೊಡೆಯುತ್ತಿರುವ ಬಿಜೆಪಿ ವಿರುದ್ಧ ಹೋರಾಟ. ಸಂವಿಧಾನದ ರಕ್ಷಣೆ ,ಸಮಾನತೆ, ಸಾಮಾಜಿಕ ನ್ಯಾಯ ಕೊಡಿಸಲು ಹೋರಾಟ ಮಾಡಿದ್ದೇವೆ. ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆ ವಿರುದ್ಧ ಮಾಡಿದ್ದೇವೆ. ನಮ್ಮ ಸಿದ್ದಾಂತದಲ್ಲಿ ಸ್ವಲ್ಪ ವ್ಯತ್ಯಾಸ ಇರಬಹುದು. ಆದರೆ, ನಮ್ಮ ಗುರಿ ಮಾತ್ರ ಬಡವರ ಪರ ನ್ಯಾಯ ನೀಡುವುದು ಎಂದು ಹೇಳಿದರು.
215 ಕ್ಷೇತ್ರಗಳಲ್ಲಿ ಮಾತ್ರ ಕಾಂಗ್ರೆಸ್ ಸ್ಪರ್ಧೆ: ರಾಜ್ಯದಲ್ಲಿ ಸಿಪಿಐ ವತಿಯಿಂದ ಏಳು ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಉಳಿದ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಹಾಕಲ್ಲ. ಯಾವುದೇ ಷರತ್ತು ಇಲ್ಲದೆ 215 ಕ್ಷೇತ್ರದಲ್ಲಿ ಕಾಂಗ್ರೆಸ್ ಗೆ ಬೆಂಬಲ ನೀಡುತ್ತಿದೆ. ರಾಜ್ಯದಲ್ಲಿ ಎಲ್ಲ ವಿಧಾನಸಭಾ ಕ್ಷೇತ್ರಗಳ ಬೆಂಬಲ. ಇದು ಕಾಂಗ್ರೆಸ್‌ಗೆ ತುಂಬಾ ಸಹಾಯ ಆಗುತ್ತದೆ. ಸಿಪಿಐ ಹಾಗೂ ಕಾಂಗ್ರೆಸ್ ಒಟ್ಟಿಗೆ ತೀರ್ಮಾನಿಸಿ ಈ ಒಪ್ಪಂದಕ್ಕೆ ಬಂದಿದ್ದು, ರಾಜ್ಯದಲ್ಲಿ ಬಿಜೆಪಿ ವಿರುದ್ಧ ಹೋರಾಟ ಮಾಡುತ್ತೇವೆ ಎಂದು ಹೇಳಿದರು.
ಮೇಲುಕೋಟೆಯಲ್ಲಿ ದರ್ಶನ್ ಪುಟ್ಟಣ್ಣಯ್ಯಗೆ ಸಿಪಿಐ ಬೆಂಬಲ: ಸಿಪಿಐ ರಾಜ್ಯ ಕಾರ್ಯದರ್ಶಿ ಸಾತಿ ಸುಂದರೇಶ್ ಮಾತನಾಡಿ, ಬೆಲೆ ಏರಿಕೆಯಿಂದ ಜನ ತತ್ತರಿಸಿದ್ದಾರೆ. ಅಭಿವೃದ್ಧಿ ಹೆಸರಿನಲ್ಲಿ 40% ಕಮಿಷನ್ ಆರೋಪ ಗುತ್ತಿಗೆದಾರರೇ ಮಾಡಿದ್ದಾರೆ. ಕೋಮು ಗಲಭೆಯಲ್ಲಿ ಸಾವು ಆದರೆ ನೀಡುವ ಅನುದಾನದಲ್ಲಿ ತಾರತಮ್ಯ ಮಾಡಿದ್ದಾರೆ. ಧರ್ಮದ ಹೆಸರಿನಲ್ಲಿ ಸಿಎಂ ತಾರತಮ್ಯ ಮಾಡಿದ್ದಾರೆ. ಗೋ ಹತ್ಯೆ, ಮತಾಂತರ ನಿಷೇಧ ಕಾಯ್ದೆ ಜಾರಿ ಮಾಡುವ ಮೂಲಕ ಮತೀಯವಾದ ಹೆಚ್ಚಿಸಿದ್ದಾರೆ. ಜನ ವಿರೋಧಿ ಬಿಜೆಪಿಯನ್ನ ಸೋಲಿಸುವುದು ನಮ್ಮ ಗುರಿ. ಜೊತೆಗೆ ಅತಂತ್ರ ವಿಧಾನಸಭೆ ತಡೆಯಲು ಸಿಪಿಐ ಕಾಂಗ್ರೆಸ್ ಗೆ ಬೆಂಬಲ ನೀಡಿದೆ. ನಾವು 7 ಕಡೆ ಸ್ಪರ್ಧೆ ಮಾಡಿದ್ದೇವೆ. ಮೇಲುಕೋಟೆಯಲ್ಲಿ ದರ್ಶನ್ ಪುಟ್ಟಣ್ಣಯ್ಯ ಗೆ ಸಿಪಿಐ ಬೆಂಬಲ ನೀಡಿದೆ. ಬಾಗೇಪಲ್ಲಿಯಲ್ಲಿ ಸಿಪಿಐ(ಎಂ) ಅಭ್ಯರ್ಥಿ ಅನಿಲ್ ಕುಮಾರ್ ಅವರಿಗೆ ಬೆಂಬಲ ಕೊಡಲಾಗಿದೆ ಎಂದು ತಿಳಿಸಿದರು.
ಶೋಭಕ್ಕ, ನಿಮ್ಮ ಪಕ್ಷದವರಂತೆ ನಾವು 40% ಪಡೆದಿಲ್ಲ: ಡಿ.ಕೆ.ಶಿವಕುಮಾರ್
ಸಿಪಿಐನ 7 ಕ್ಷೇತ್ರದ ಅಭ್ಯರ್ಥಿಗಳಿಗೆ ಕಾಂಗ್ರೆಸ್ ಬೆಂಬಲ
- 1. ಆಳಂದಾ
- 2. ಜೇವರ್ಗಿ
- 3. ಸಿರಾ
- 4. ಕೂಡ್ಲಿಗಿ
- 5. ಕೆಜಿಎಫ್
- 6. ಮಡಿಕೇರಿ
- 7. ಮೂಡಿಗೆರೆ