ಬೆಂಗಳೂರು (ನ.11):  ಆರ್‌.ಆರ್‌.ನಗರ ಮತ್ತು ಶಿರಾ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಜೆಡಿಎಸ್‌ ಮುಗ್ಗರಿಸಿದ್ದು, ಚುನಾವಣಾ ಪೂರ್ವ ನಡೆದ ಸಮೀಕ್ಷೆಯಂತೆಯೇ ಎರಡು ಕ್ಷೇತ್ರದಲ್ಲಿಯೂ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. ತನ್ನ ಹಿಡಿತದಲ್ಲಿದ್ದ ಶಿರಾ ಕ್ಷೇತ್ರವನ್ನು ಕಳೆದುಕೊಂಡು ಬಿಜೆಪಿಗೆ ಬಿಟ್ಟುಕೊಟ್ಟಿದೆ.

ಶಾಸಕ ದಿವಂಗತ ಸತ್ಯ ನಾರಾಯಣ ಅಕಾಲಿಕ ನಿಧನದಿಂದಾಗಿ ಎದುರಾದ ಚುನಾವಣೆಯಲ್ಲಿ ಜೆಡಿಎಸ್‌ ವರಿಷ್ಠರು ಅನುಕಂಪದ ಆಧಾರದ ಮೇಲೆ ಗೆಲುವನ್ನು ನಿರೀಕ್ಷಿಸಿ ಸತ್ಯನಾರಾಯಣ ಪತ್ನಿ ಅಮ್ಮಾಜಮ್ಮ ಅವರಿಗೆ ಟಿಕೆಟ್‌ ನೀಡಿದ್ದರು. ಅನುಕಂಪದ ಮತಗಳು ಪಕ್ಷದ ಗೆಲುವಿಗೆ ನೆರವಾಗುತ್ತದೆ ಎಂದು ನಂಬಿದ್ದರು. ಆದರೆ, ಜೆಡಿಎಸ್‌ ನಿರೀಕ್ಷೆ ಸುಳ್ಳಾಗಿದ್ದು, ಶಿರಾದಲ್ಲಿ ತೀವ್ರ ಹಿನ್ನಡೆ ಅನುಭವಿಸುವಂತಾಯಿತು.

ಇನ್ನು ಆರ್‌.ಆರ್‌.ನಗರದಲ್ಲಿ ಒಕ್ಕಲಿಗರ ಮತಗಳೇ ನಿರ್ಣಾಯಕವಾಗಿದೆ. ಹೀಗಾಗಿ ಪಕ್ಷದ ಕಾರ್ಯಕರ್ತ ಹಾಗೂ ಒಕ್ಕಲಿಗ ಸಮುದಾಯದ ಕೃಷ್ಣಮೂರ್ತಿಗೆ ಟಿಕೆಟ್‌ ನೀಡಿತು. ಕಾಂಗ್ರೆಸ್‌ ಸಹ ಒಕ್ಕಲಿಗ ಮತಗಳ ಮೇಲೆ ಕಣ್ಣಿಟ್ಟಿದ್ದರಿಂದ ಕುಸುಮಾ ಅವರಿಗೆ ಟಿಕೆಟ್‌ ನೀಡಿತು. ಕುಸುಮಾ ಮತ್ತು ಕೃಷ್ಣಮೂರ್ತಿ ನಡುವೆ ಮತ ವಿಭಜನೆಯಾದ ಪರಿಣಾಮ ಮುನಿರತ್ನ ಗೆಲುವಿಗೆ ತುಸು ಸಹಕಾರಿಯಾಯಿತು.

ಡಿಕೆಶಿ ಹೊಸ ಸವಾಲಿಗೆ ಸಿದ್ಧತೆ : ಭವಿಷ್ಯದ ಬಗ್ಗೆ ಮಾಸ್ಟರ್ ಪ್ಲಾನ್

ಉಪಚುನಾವಣೆ ಘೋಷಣೆಯಾದ ಬಳಿಕ ಬಿಜೆಪಿ ಮತ್ತು ಕಾಂಗ್ರೆಸ್‌ ಪಕ್ಷಗಳ ಆರ್ಭಟದಲ್ಲಿ ಜೆಡಿಎಸ್‌ ಮಂಕಾಗಿ ಕಾಣಿಸಿತ್ತು. ಪ್ರಚಾರ ಕಣದಲ್ಲೂ ಹಿನ್ನಡೆ ಅನುಭವಿಸಿತು. ಶಿರಾ ಕ್ಷೇತ್ರದಲ್ಲಿ ಅಮ್ಮಾಜಮ್ಮ ಅವರಿಗೆ ಟಿಕೆಟ್‌ ಘೋಷಣೆಯಾಗುತ್ತಿದ್ದಂತೆ ಕೊರೋನಾ ಸೋಂಕಿತರಾದರು. ನಾಮಪತ್ರ ಸಲ್ಲಿಕೆಯಿಂದ ಹಿಡಿದು ಪ್ರಚಾರ ಮುಕ್ತಾಯವಾಗುವವರೆಗೆ ಅಮ್ಮಾಜಮ್ಮ ಅವರು ಹೊರಗೆ ಕಾಣಿಸಿಕೊಳ್ಳಲೇ ಇಲ್ಲ. ಸಂಸದ ಪ್ರಜ್ವಲ್‌ ರೇವಣ್ಣ, ಮಾಜಿ ಸಚಿವ ಎಚ್‌.ಡಿ.ರೇವಣ್ಣ ಕ್ಷೇತ್ರದಲ್ಲಿ ಮೊಕ್ಕಾಂ ಹೂಡಿ ಪ್ರಚಾರ ಕೈಗೊಂಡರು. ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ, ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಪ್ರಚಾರದಲ್ಲಿ ತೊಡಗಿದರು. ಆದರೂ ಅಭ್ಯರ್ಥಿಯನ್ನು ಗೆಲ್ಲಿಸುವಲ್ಲಿ ರಾಜಕೀಯ ರಣತಂತ್ರ ರೂಪಿಸಲು ವಿಫಲವಾದರು. ದೇವೇಗೌಡರ ಇಡೀ ಕುಟುಂಬ ಶಿರಾದಲ್ಲಿ ಹೆಚ್ಚಿನ ಪ್ರಚಾರ ಕೈಗೊಂಡರೂ ಮತದಾರರನ್ನು ಸೆಳೆಯಲು ಸಾಧ್ಯವಾಗಲಿಲ್ಲ.

ಇತ್ತ ಆರ್‌.ಆರ್‌.ನಗರ ಕ್ಷೇತ್ರದಲ್ಲಿ ಜೆಡಿಎಸ್‌ ಅಭ್ಯರ್ಥಿ ವಿ.ಕೃಷ್ಣಮೂರ್ತಿ ಕಣ್ಣೀರು ಹಾಕಿದರೂ ಮತದಾರರು ಮರಳಾಗಲಿಲ್ಲ. ಕಾಂಗ್ರೆಸ್‌, ಬಿಜೆಪಿ ಪ್ರಚಾರದ ಅಬ್ಬರದಲ್ಲಿ ಜೆಡಿಎಸ್‌ ಸದ್ದು ಅಡಗಿತ್ತು. ಕೃಷ್ಣಮೂರ್ತಿ ಪರ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಪ್ರಚಾರ ಕೈಗೊಂಡರು. ಪ್ರಚಾರ ಮುಕ್ತಾಯದ ಅಂತಿಮ ಹಂತದಲ್ಲಿ ಜೆಡಿಎಸ್‌ ಯುವ ಘಟಕ ಅಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ಪ್ರಚಾರದ ಕಣಕ್ಕಿಳಿದರು. ಪ್ರಚಾರದಲ್ಲಿ ಕಾಂಗ್ರೆಸ್‌, ಬಿಜೆಪಿ ವಿರುದ್ಧ ಟೀಕಾಪ್ರಕಾರ ಮಾಡಲಾಯಿತೇ ಹೊರತು ಮತದಾರರ ಮನವೊಲಿಕೆ ಮಾಡುವ ಪ್ರಯತ್ನ ಮಾಡಲಿಲ್ಲ. ಶಿರಾ ಕ್ಷೇತ್ರದಲ್ಲಿ ಗೌರವಯುತವಾಗಿ ಸೋಲನುಭವಿಸಿದರೆ, ಆರ್‌.ಆರ್‌.ನಗರದಲ್ಲಿ ಠೇವಣಿ ಕಳೆದುಕೊಂಡು ಹೀನಾಯ ಸೋಲನುಭವಿಸಿದೆ. ಎರಡೂ ಕ್ಷೇತ್ರದಲ್ಲಿ ಮೂರನೇ ಸ್ಥಾನಕ್ಕೆ ಕುಸಿದಿರುವ ಜೆಡಿಎಸ್‌ ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ ಎಂಬ ಮಾತು ಇದೀಗ ಪಕ್ಷದಲ್ಲೇ ಕೇಳಿಬರುತ್ತಿದೆ.