ಮಂಡ್ಯ, (ನ.08): ಜೆಡಿಎಸ್ ಯುವನಾಯಕ ನಿಖಿಲ್ ಕುಮಾರಸ್ವಾಮಿ ಅವರು ತಮ್ಮ ಮುಂದಿನ ರಾಜಕೀಯ ಕ್ಷೇತ್ರವನ್ನ ಆಯ್ಕೆ ಮಾಡಿಕೊಂಡಿದ್ದು,  ಮಂಡ್ಯ ರಾಜಕೀಯಕ್ಕೆ ಪ್ರವೇಶ ಕೊಡುವುದಾಗಿ ಸೂಕ್ಷ್ಮವಾಗಿ ಹೇಳಿದ್ದಾರೆ.

ಇಂದು (ಭಾನುವಾರ) ಮಂಡ್ಯ  ಕೆಆರ್ ಪೇಟೆ ತಾಲೂಕಿನ ಚೌಡೇನಹಳ್ಳಿ ಗ್ರಾಮದಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತನ ಮನೆಗೆ ಭೇಟಿ ನೀಡಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಮನಗರ ಕ್ಷೇತ್ರ ತಂದೆ ಹೆಚ್.ಡಿ.ಕುಮಾರಸ್ವಾಮಿಗೆ ರಾಜಕೀಯ ಪುನರ್ಜನ್ಮ ನೀಡಿ ಬೆಳೆಸಿದೆ. ರಾಮನಗರದಲ್ಲಿ ನಿಖಿಲ್ ಕೂಡ ಬರಲಿ ಎಂಬುದು ಅಲ್ಲಿನ ಕಾರ್ಯಕರ್ತರ ಆಸೆಯಾಗಿದ್ದರೂ ತಮ್ಮ ಅಭಿಮಾನಿಗಳು ರಾಜ್ಯಾದ್ಯಂತ ಇರುವುದರಿಂದ ಕರ್ಮಭೂಮಿಯಾಗಿರುವ ಮಂಡ್ಯವನ್ನು  ಆಯ್ಕೆ ಮಾಡಿಕೊಳ್ಳುವುದಾಗಿ ಸ್ಪಷ್ಟಪಡಿಸಿದರು.

ಕುಮಾರಸ್ವಾಮಿ ನಿವಾಸಕ್ಕೆ ಶ್ರೀಗಳ ದಿಢೀರ್ ಭೇಟಿ, ನಿಖಿಲ್ ಹೇಳಿದ್ದು ಹೀಗೆ..!

 ಜೆಡಿಎಸ್ ಪಕ್ಷಕ್ಕೆ ತಾವು ಮೊದಲ ಆದ್ಯತೆ ನೀಡುತ್ತಿದ್ದು, ನಂತರದ ಆಯ್ಕೆ ಸಿನಿಮಾ ಕ್ಷೇತ್ರ. ಸೋಲು ಗೆಲುವು ರಾಜಕಾರಣದಲ್ಲಿ ಸಹಜ. ಹಾಗಂದ ಮಾತ್ರಕ್ಕೆ ಯಾವ ರಾಜಕಾರಣಿಯೂ ಮನೆಯಲ್ಲಿ ಕೂರುವುದಿಲ್ಲ. ಜನರೊಂದಿಗೆ ನಾವಿರುತ್ತೇವೆ, ಜನ ತಮ್ಮನ್ನು ಒಪ್ಪಿಕೊಳ್ಳುತ್ತಾರೆ ಎಂಬ ವಿಶ್ವಾಸವಿದೆ ಎನ್ನುವ ಮೂಲಕ ಮತ್ತೆ ಮಂಡ್ಯ ರಾಜಕೀಯಕ್ಕೆ ಬರುವುದಾಗಿ ತಿಳಿಸಿದರು.

ಈ ಹಿಂದೆ ನಿಖಿಲ್ ಕುಮಾರಸ್ವಾಮಿ ಅವರು ತಮ್ಮ ತಾಯಿ ಕ್ಷೇತ್ರವಾದ ರಾಮನಗರಕ್ಕೆ ಜಂಪ್ ಆಗುತ್ತಾರೆ ಎನ್ನುವುದು ರಾಜ್ಯ ರಾಜಕಾರಣದಲ್ಲಿ ಚರ್ಚೆಗಳು ನಡೆದಿದ್ದವು. ಆದ್ರೆ, ಇದೀಗ ಸ್ವತಃ ನಿಖಿಲ್ ಕುಮಾರಸ್ವಾಮಿ ಮಂಡ್ಯನೇ ನನ್ನ ಕರ್ಮಭೂಮಿ ಎಂದು ಹೇಳುವ ಮೂಲಕ ಎಲ್ಲಾ ಗೊಂದಲಗಳಿಗೆ ತೆರೆ ಎಳೆದಿದ್ದಾರೆ.