ಜೆಡಿಎಸ್ ಪಕ್ಷದ ಮತಗಳನ್ನು ಒಡೆಯಲು ಸಿದ್ದರಾಮಯ್ಯ ಕೈಯಲ್ಲಿ ಆಗಲ್ಲ: ನಿಖಿಲ್ ಕುಮಾರಸ್ವಾಮಿ
ರಾಜ್ಯಸಭಾ ಚುನಾವಣಾ ಹಿನ್ನಲೆಯಲ್ಲಿ ಜೆಡಿಎಸ್ ಪಕ್ಷದ ಶಾಸಕರು ನಮ್ಮ ಸಂಪರ್ಕದಲ್ಲಿ ಇದ್ದಾರೆ ಎಂಬ ಸಿದ್ದರಾಮಯ್ಯ ಮಾತಿಗೆ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.
ವರದಿ: ಸುರೇಶ್ ಎ ಎಲ್, ಏಷ್ಯಾನೆಟ್ ಸುವರ್ಣ ನ್ಯೂಸ್, ಬೆಂಗಳೂರು
ಬೆಂಗಳೂರು (ಜೂ.06): ರಾಜ್ಯಸಭಾ ಚುನಾವಣಾ ಹಿನ್ನಲೆಯಲ್ಲಿ ಜೆಡಿಎಸ್ ಪಕ್ಷದ ಶಾಸಕರು ನಮ್ಮ ಸಂಪರ್ಕದಲ್ಲಿ ಇದ್ದಾರೆ ಎಂಬ ಸಿದ್ದರಾಮಯ್ಯ ಮಾತಿಗೆ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ. ಭಾನುವಾರ ದಿನ ಮಾಜಿ ಸಿಎಂ ಸಿದ್ದರಾಮಯ್ಯ ಆತ್ಮಸಾಕ್ಷಿಯ ಮತಗಳ ಬಗ್ಗೆ ಮಾತನಾಡಿದ್ದಾರೆ. ನಮ್ಮ ಪಕ್ಷದಲ್ಲಿ ಇರುವ ಶಾಸಕರಿಗೂ ಆತ್ಮಸಾಕ್ಷಿ ಇದೆ. ನಮ್ಮ ಮತಗಳನ್ನು ಅಷ್ಟು ಸುಲಭವಾಗಿ ಕಾಂಗ್ರೆಸ್ ಪಕ್ಷವು ಒಡೆಯಲು ಸಾಧ್ಯವಿಲ್ಲ.
ಅಸಮಾಧಾನ ಅನ್ನೋದು ಎದ್ದು ಕಾಣುತ್ತಿರುವುದು ಕಾಂಗ್ರೆಸ್ ಪಕ್ಷದಲ್ಲಿ, ನಮ್ಮಲ್ಲಿ ಯಾವುದೇ ರೀತಿಯ ಅಸಮಾಧಾನ ಇಲ್ಲ. ಕೇವಲ ಒಬ್ಬರು ಇಬ್ಬರಲ್ಲಿ ಅಸಮಾಧಾನ ಇತ್ತು. ಆದರೆ ಅದನ್ನು ಸರಿಪಡಿಸಿದ್ದೇವೆ. ಎಲ್ಲಾ ಶಾಸಕರೂ ಈಗ ಒಗ್ಗಟ್ಟಾಗಿ ಇದ್ದಾರೆ. ಜಿಟಿ ದೇವೇಗೌಡ ಅವರೂ ಕೂಡಾ ಜೆಡಿಎಸ್ ಅಭ್ಯರ್ಥಿ ಪರವಾಗಿ ಮತ ಚಲಾಯಿಸುವುದಾಗಿ ಹೇಳಿದ್ದಾರೆ. ಎಲ್ಲಾ ಶಾಸಕರೂ ನಮ್ಮ ಪಕ್ಷದಲ್ಲೇ ಇರುತ್ತಾರೆ, ಜೂನ್ 10ರ ಚುನಾವಣೆಯಲ್ಲಿ ಇದು ಸಾಬೀತಾಗುತ್ತದೆ ಎಂದು ನಿಖಿಲ್ ಕುಮಾರಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
Rajya Sabha Election: ಕೊನೆವರೆಗೆ ಕಾದು ನೋಡುವ ತಂತ್ರಕ್ಕೆ ಜೆಡಿಎಸ್ ಶರಣು
ಕುವೆಂಪು ಅವರಿಗೆ ಅಪಮಾನ ಸಲ್ಲದು: ರಾಜ್ಯದಲ್ಲಿ ಇತ್ತೀಚಿಗೆ ಪಠ್ಯ ಕ್ರಮ ವಿಚಾರದಲ್ಲಿ ಸಾಕಷ್ಟು ವಾದ ವಿವಾದಗಳು ನಡೆಯುತ್ತಿವೆ. ಈ ವಿಚಾರದಲ್ಲಿ ರಾಷ್ಟ್ರಕವಿ ಕುವೆಂಪು ಅವರಿಗೆ ಅವಮಾನ ಮಾಡಿರುವುದನ್ನು ಖಂಡಿಸುತ್ತೇನೆ ಎಂದ ನಿಖಿಲ್, ಕುವೆಂಪು ಅವರು ಕರ್ನಾಟಕ ಮಾತ್ರವಲ್ಲದೇ ಇಡೀ ಜಗತ್ತು ಗೌರವಿಸುವಂತಹ ಮಹಾನ್ ಸಾಹಿತಿಗಳು. ಅಂತಹವರ ಬಗ್ಗೆ ಲಘುವಾಗಿ ಮಾತನಾಡಿರುವುದು ಹಾಗೂ ನಾಡಗೀತೆಗೆ ಅಗೌರವ ತೋರಿಸಿರುವುದು ಯಾರಿಗೂ ಶೋಭೆ ತರುವಂತದ್ದಲ್ಲ ಎಂದರು. ಈ ನಡುವೆ ಸಿನಿಮಾ ನಿಮ್ಮ ಮೊದಲ ಆಯ್ಕೆಯೋ ಅಥವಾ ರಾಜಕಾರಣವೋ ಎಂಬ ಪ್ರಶ್ನೆಗೆ ಉತ್ತರಿಸಿದ ನಿಖಿಲ್ ಸಿನಿಮಾದಲ್ಲಿ ಜನ ನನ್ನನ್ನು ಗುರುತಿಸಿದ್ದಾರೆ. ಆದರೆ ಪಕ್ಷವೂ ನನ್ನ ಜವಾಬ್ದಾರಿ ಆಗಿದೆ. ಹೀಗಾಗಿ ಜನರ ಸೇವೆ ಮಾಡಿಕೊಂಡೇ ಸಿನಿಮಾವನ್ನೂ ನಿಭಾಯಿಸುತ್ತೇನೆ ಎಂದರು.
ಉತ್ತರ ಕರ್ನಾಟಕದಿಂದಲೇ ರಾಜ್ಯ ಪ್ರವಾಸ ಆರಂಭ: ಇನ್ನೇನು ಚುನಾವಣೆ ಕೂಡ ಹತ್ತಿರ ಬರುತ್ತಾ ಇದೆ. ಹೀಗಾಗಿ ರಾಜ್ಯಾದ್ಯಂತ ಪ್ರವಾಸ ಮಾಡುವ ಮೂಲಕ ಪಕ್ಷವನ್ನು ಸಂಘಟನೆ ಮಾಡುತ್ತೇನೆ. ಎಲ್ಲಾ ಜಿಲ್ಲಾ ಕೇಂದ್ರಗಳಿಗೂ ಭೇಟಿ ನೀಡುವೆ. ಉತ್ತರ ಕರ್ನಾಟಕದಿಂದಲೇ ಪ್ರವಾಸ ಆರಂಭಿಸುತ್ತೇನೆ ಎಂದು ನಿಖಿಲ್ ಹೇಳಿದರು.
'ಸಿದ್ದರಾಮಯ್ಯ ಒಂದೇ ಕಲ್ಲಿನಲ್ಲಿ 2 ಹಕ್ಕಿ ಹೊಡೀತಿಲ್ಲ, ಬದಲಿಗೆ ತಮ್ಮ ಮೇಲೆ ಚಪ್ಪಡಿ ಕಲ್ಲು ಎಳೆದುಕೊಳ್ತಿದ್ದಾರೆ'
ನಿಖಿಲ್ ಎಲ್ಲಿಂದ ಸ್ಪರ್ಧೆ ಮಾಡ್ತಾರೆ?: ಪಕ್ಷ ಸಂಘಟನೆಗಾಗಿ ಪ್ರವಾಸ ಮಾಡಲಿರುವ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆ ಎಲ್ಲಿಂದ ಎಂಬ ಪ್ರಶ್ನೆ ಬಹಳ ಜನರಲ್ಲಿ ಇದೆ. ಆದರೆ ಈ ಪ್ರಶ್ನೆಗೆ ಉತ್ತರ ಕೊಡಲು ಇದು ಸಕಾಲವಲ್ಲ.ಪಕ್ಷ ನನಗೆ ನೀಡಿರುವ ಜವಾಬ್ದಾರಿ ಮುಖ್ಯ, ಮೊದಲು ಕಾರ್ಯಕರ್ತನಾಗಿ ಕೆಲಸ ಮಾಡುತ್ತೇನೆ. ನಂತರ ಸ್ಪರ್ಧೆಯ ಮಾತು ಎಂದ ನಿಖಿಲ್, ರಾಮನಗರದಿಂದ ಸ್ಪರ್ಧೆ ಮಾಡಬೇಕು ಎಂಬ ಬಗ್ಗೆಯೂ ಸದ್ಯಕ್ಕೆ ಚರ್ಚೆಯಾಗಿಲ್ಲ ಎಂದು ಸ್ಪಷ್ಟ ಪಡಿಸಿದರು. ಬಿಬಿಎಂಪಿ ಚುನಾವಣೆ ಎದುರಾಗುತ್ತಿರುವ ಹಿನ್ನಲೆಯಲ್ಲಿ ಬೆಂಗಳೂರಿನ ಜೆಪಿ ಭವನದಲ್ಲಿ ಯುವ ಘಟಕದ ಪದಾಧಿಕಾರಿಗಳ ಸಭೆ ನಡೆಸಿದ ನಿಖಿಲ್ ಕುಮಾರಸ್ವಾಮಿ, ಯುವ ಮುಖಂಡರ ಕುಂದು ಕೊರತೆಗಳನ್ನು ಆಲಿಸಿದರು. ಮುಂದಿನ ದಿನಗಳಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರಲು ಬದ್ದತೆಯಿಂದ ಕೆಲಸ ಮಾಡುವಂತೆ ಕರೆ ಕೊಟ್ಟ ನಿಖಿಲ್, ಯುವ ಘಟಕ ಮುಂದಿನ ದಿನಗಳಲ್ಲಿ ಆಕ್ಟಿವ್ ಆಗಿರಲು ಕೆಲವು ಕಾರ್ಯತಂತ್ರಗಳನ್ನು ರೂಪಿಸಿದರು.