ನಮಗೆ ಆರಡಿ ಬೇಡ, ಅವರಿಗೆ ಮೂರಡಿ ಜಾಸ್ತಿ ಇರಲಿ: ಡಿಕೆಶಿಗೆ ತಿರುಗೇಟು ಕೊಟ್ಟ ಎಚ್.ಡಿ.ರೇವಣ್ಣ
ಎಷ್ಟೇ ಅಧಿಕಾರ ಅಂತಸ್ತಿದ್ದರೂ ಕೊನೆಗೆ ಆರಡಿ-ಮೂರಡಿ ಅಡಿಯೇ ನೆಮ್ಮದಿಯ ನಿದ್ರೆ ನೀಡುವ ಜಾಗ ಎಂಬ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿಕೆಗೆ ಮಾಜಿ ಸಚಿವ ಎಚ್.ಡಿ.ರೇವಣ್ಣ ತೀವ್ರ ಕಿಡಿಕಾರಿದ್ದಾರೆ.
ಹಾಸನ (ಮಾ.03): ಎಷ್ಟೇ ಅಧಿಕಾರ ಅಂತಸ್ತಿದ್ದರೂ ಕೊನೆಗೆ ಆರಡಿ-ಮೂರಡಿ ಅಡಿಯೇ ನೆಮ್ಮದಿಯ ನಿದ್ರೆ ನೀಡುವ ಜಾಗ ಎಂಬ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿಕೆಗೆ ಮಾಜಿ ಸಚಿವ ಎಚ್.ಡಿ.ರೇವಣ್ಣ ತೀವ್ರ ಕಿಡಿಕಾರಿದ್ದಾರೆ. ನಮಗೆ ಆರಡಿ ಬೇಡ, ಇನ್ನೂ ಒಂದು ಅಡಿ ಕಡಿಮೆಯೇ ಇರಲಿ. ಅವರಿಗೆ ಮೂರಡಿ ಜಾಸ್ತಿ ಕೊಡಲಿ ಎಂದು ತಿರುಗೇಟು ನೀಡಿದರು. ಗುರುವಾರ ಸುದ್ದಿಗಾರರ ಜತೆಗೆ ಮಾತನಾಡಿ, ನನಗೆ ಯೋಚನೆಗಳಿಲ್ಲ. ಮಲಗಿದ ಕೂಡಲೇ ನಿದ್ದೆ ಬರುತ್ತದೆ. ಕಾರಿನಲ್ಲೂ ನಿದ್ರೆ ಮಾಡುತ್ತೇನೆ. ಅವರು ದಪ್ಪ ಇದ್ದಾರೆ ಅವರಿಗೆ ಇನ್ನೊಂದು ಮೂರಡಿ ಜಾಸ್ತಿಯೇ ಇರಲಿ ಎಂದರು.
ಜೆಡಿಎಸ್ ಅನ್ನು ಬಿಜೆಪಿ, ಕಾಂಗ್ರೆಸ್ ಬಿ ಟೀಎಂ ಎನ್ನುವ ಡಿ.ಕೆ.ಶಿ ಸೋದರರು ಈ ಹಿಂದೆ ಎಚ್.ಡಿ.ದೇವೇಗೌಡರೇ, ಕುಮಾರಣ್ಣ ನಿಮ್ಮ ಪಾದಕ್ಕೆ ಐದು ವರ್ಷ ಇಟ್ಟಿದ್ದೇವೆ ಅಂದಿದ್ದರು. ಅದನ್ನೀಗ ಮರೆತಿದ್ದೀರಾ ಎಂದು ಪ್ರಶ್ನಿಸಿದರು. ಇದೇ ವೇಳೆ ಟಿಕೆಟ್ ಹಂಚಿಕೆ ವಿಚಾರವಾಗಿ ನಾನು ಮತ್ತು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೊಡೆದಾಡಿಕೊಳ್ಳುತ್ತಾರೆ ಎಂದು ಭಾವಿಸಿಕೊಂಡಿದ್ದರೆ ಅದು ಎರಡೂ ರಾಷ್ಟ್ರೀಯ ಪಕ್ಷಗಳ ಭ್ರಮೆ.
ರೇವಣ್ಣ, ಎಚ್ಡಿಕೆ ನಡುವೆ ಭಿನ್ನಾಭಿಪ್ರಾಯ ಇಲ್ಲ: ಸಿ.ಎಂ.ಇಬ್ರಾಹಿಂ
ಶಾಸಕರಾದ ಎ.ಟಿ.ರಾಮಸ್ವಾಮಿ ಮತ್ತು ಕೆ.ಎಂ.ಶಿವಲಿಂಗೇಗೌಡ ಇಬ್ಬರೂ ಕಳೆದೆರಡು ವರ್ಷಗಳಿಂದಲೂ ಕಾಂಗ್ರೆಸ್ ಪಕ್ಷದ ಮನೆ ಬಾಗಿಲು ತಟ್ಟುತ್ತಿರುವುದು ಇಡೀ ರಾಜ್ಯಕ್ಕೆ ತಿಳಿದಿರುವ ವಿಚಾರ ಎಂದು ರೇವಣ್ಣ ಹೇಳಿದರು. ಹಾಸನ ಕ್ಷೇತ್ರದಲ್ಲಿ ಟಿಕೆಟ್‌ಗಾಗಿ ಈವರೆಗೂ ಯಾವುದೇ ಶಕ್ತಿ ಪ್ರದರ್ಶನ ಮಾಡಿಲ್ಲ. ಹಾಸನ ಜಿಲ್ಲೆಯಲ್ಲೇ ನಾನು ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸುವ ಕುರಿತು ಯಾವುದೇ ಪ್ರಸ್ತಾವನೆ ಇಲ್ಲ. ಹಾಸನ ಜಿಲ್ಲೆಯ ಎಲ್ಲಾ ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆಯನ್ನು ಜೆಡಿಎಸ್ ವರಿಷ್ಠರಾದ, ದೇವೇಗೌಡ ಹಾಗೂ ಕುಮಾರಸ್ವಾಮಿ ಅವರೇ ಜಿಲ್ಲೆಗೆ ಆಗಮಿಸಿ ಕಾರ್ಯಕರ್ತರ ಸಭೆ ಕರೆದು ತೀರ್ಮಾನ ಕೈಗೊಳ್ಳಲಿದ್ದಾರೆ ಎಂದರು.
ಕಾಂಗ್ರೆಸ್ ಕೊಟ್ಟಿದ್ದು ಕಾಲು ಮುರುಕ ಕುದುರೆ: ಮುಖ್ಯಮಂತ್ರಿಯಾಗಿ ನಾನು ಏನೂ ಕೆಲಸ ಮಾಡಲಿಲ್ಲ, ಕೊಟ್ಟಕುದುರೆ ಏರದವ ವೀರನೂ ಅಲ್ಲ, ಶೂರನೂ ಅಲ್ಲ ಎಂದು ಹೇಳುತ್ತಾರೆ. ಆದರೆ ನೀವು ನೀಡಿದ್ದು ಕಾಲು ಮುರುಕ ಕುದುರೆ. ಅದನ್ನು ಏರು ಎನ್ನುವವನನ್ನು ಮನೆ ಮುರುಕ ಅಂತಾರೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ. ಜಿಲ್ಲಾ ಪತ್ರಕರ್ತರ ಭವನದಲ್ಲಿ ಗುರುವಾರ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿ, ರಾಜ್ಯದ ರೈತರ 25 ಸಾವಿರ ಕೋಟಿ ಸಾಲ ಮನ್ನಾ ಮಾಡಿದ ತೃಪ್ತಿ ನನಗಿದೆ. ನನ್ನ ಇಮೇಜ್ ಈಗಲೂ ಹಾಳಾಗಿಲ್ಲ. ಕಾಂಗ್ರೆಸ್ ಜತೆಗಿನ ಹೊಂದಾಣಿಕೆಯಿಂದ ತೊಂದರೆಯಾಗಿದೆ ನಿಜ. ಕಾಂಗ್ರೆಸ್ ಜೊತೆಗಿನ ಹೊಂದಾಣಿಕೆಯಿಂದ ತಪ್ಪಾಯಿತು.
ನಾವು ರಾಜಕೀಯವಾಗಿ ಟ್ರ್ಯಾಪ್ ಆಗಿದ್ದೇವೆ. ಕಾಂಗ್ರೆಸ್‌ಗೆ ನಮ್ಮಿಂದ ಅನುಕೂಲವಾಗಿದೆಯೇ ಹೊರತು, ನಮಗೆ ಅನುಕೂಲವಾಗಿಲ್ಲ. ನಾನು ಸಿಎಂ ಆದ ಮೇಲೆ ತುಂಬಾ ಹಿಂಸೆ ಆಯಿತು. ತಾಜ್ ಹೋಟೆಲ್‌ನಲ್ಲಿದ್ದರೂ ಶಕ್ತಿಭವನದಲ್ಲಿ ಬೆಳಗ್ಗೆ 8 ರಿಂದಲೇ ಸಭೆ ನಡೆಸುತ್ತಿದ್ದೆ. ನನ್ನ ಗುರಿ ರೈತರ ಸಾಲ ಮನ್ನಾ ಮಾಡುವುದಾಗಿತ್ತು. ಬಳಿಕ ಸಚಿವ ಸ್ಥಾನದ ಸಂಖ್ಯೆಬಲದಲ್ಲಿ ಗೊಂದಲ, ಶಿಷ್ಟಾಚಾರ ಬಿಟ್ಟು ಅಧಿಕಾರಿಗಳ ವರ್ಗಾವಣೆ ಆಯಿತು. ಶಾಸಕಾಂಗ ಪಕ್ಷದ ಸಭೆ ಎಂದು ಕೆ.ಜೆ.ಜಾಜ್‌ರ್ ಅವರ ಹೋಟೆಲ್‌ಗೆ ಕರೆದರು, ಆದರೆ ಒಳಗೆ ಬಾ ಎನ್ನಲಿಲ್ಲ. ಸಿಎಂ ಆದವನು ಸುಮಾರು 15 ರಿಂದ 20 ನಿಮಿಷ ಹೊರಗೆ ಅಬ್ಬೇಪಾರಿಯಂತೆ ನಿಂತಿದ್ದೆ. ನೀವು ಹೇಗೆ ನಡೆಸಿಕೊಂಡಿದ್ದೀರಿ ಎಂಬುದು ಗೊತ್ತಿಲ್ಲವೇ ಎಂದು ಕುಮಾರಸ್ವಾಮಿ ಕಿಡಿಕಾರಿದರು.