ಹಾಸನ, (ಮೇ.11): ಸರ್ಕಾರಕ್ಕೆ ಅರ್ಚಕರ ಶಾಪ ತಟ್ಟಿದೆ. ಅರ್ಚಕರ ಶಾಪದಿಂದಲೇ ಈ ಸರ್ಕಾರಕ್ಕೆ ಒಂದಲ್ಲ ಒಂದು ಕಂಟಕಗಳು ಎದುರಾಗುತ್ತಿವೆ ಎಂದು ಜೆಡಿಎಸ್ ಮುಖಂಡ ಎಚ್ ಡಿ ರೇವಣ್ಣ ಹೇಳಿದ್ದಾರೆ.

ಇಂದು (ಸೋಮವಾರ) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ 2ನೇ ಪ್ಯಾಕೇಜ್ ನಲ್ಲಿಯಾದರೂ ಹೊಟೇಲ್ ಕೆಲಸಗಾರರು, ಲಾರಿ ಕ್ಲೀನರ್‌ಗಳು, ಅರ್ಚಕರಿಗೂ ಸಹಾಯಧನ ಘೋಷಿಸಬೇಕು. ಬಹುಶಃ ಈ ಸರ್ಕಾರಕ್ಕೆ ಅರ್ಚಕರ ಶಾಪ ತಟ್ಟಿರಬಹುದು. ಅವರ ಶಾಪ ದಿಂದಲೇ ಈ ಸರ್ಕಾರಕ್ಕೆ ಒಂದೊಂದು ಕಂಟಕ ಕಾಡುತ್ತಿದೆ. ಇನ್ನು ಮುಂದಾದರೂ ಅರ್ಚಕರ ಬಗ್ಗೆ ನಿಗಾ ವಹಿಸಲಿ ಎಂದರು.

ರೇಪ್ ಕತೆ ಹಿಂದೆ ಹುಡ್ಗಿಯ ಕರಾಮತ್ತು, ಒಗ್ಗಟ್ಟಿಗಾಗಿ ಕಾಂಗ್ರೆಸ್ ಕಸರತ್ತು; ಮೇ.11ರ ಟಾಪ್ 10 ಸುದ್ದಿ!

 ಕೊರೋನಾ ವಿಶೇಷ ಪ್ಯಾಕೇಜ್‌ನಂತೆ ಸರ್ಕಾರ ಚುನಾವಣೆಯಲ್ಲಿ ಮತದಾನ ಮಾಡಿರುವ ಸ್ತ್ರೀಶಕ್ತಿ ಸಂಘಗಳ ಸಾಲವನ್ನೂ ಮನ್ನಾ ಮಾಡಬೇಕೆಂದು ಸರ್ಕಾರವನ್ನು ಆಗ್ರಹಿಸಿದರು.

ರಾಜ್ಯದ ಜನರಿಗೆ ಪ್ಯಾಕೇಜ್ ಘೋಷಣೆ ಮಾಡಲು ಯಡಿಯೂರಪ್ಪ 45 ದಿನ ತೆಗೆದುಕೊಂಡಿದ್ದಾರೆ. ಅದೂ ಸಹ ವಿರೋಧ ಪಕ್ಷಗಳ ಒತ್ತಾಯಕ್ಕೆ 1610 ಕೋಟಿ ಪ್ಯಾಕೇಜ್ ಘೋಷಿಸಿದ್ದಾರೆ. ಅದನ್ನು ಪಡೆಯುವಷ್ಟರಲ್ಲಿ ಜನರು ಪಡೆದುಕೊಳ್ಳುವ ಹೊತ್ತಿಗೆ ಹೆಣ ಬಿದ್ದು ಹೋದಂತಾಗುತ್ತದೆ ಎಂದು ತಿವಿದರು.

ರಾಜ್ಯದಲ್ಲಿ ಬಹಳಷ್ಟು ಸಮುದಾಯದ ಜನರು ಸಂಕಷ್ಟದಲ್ಲಿದ್ದಾರೆ. ಎಲ್ಲಾ ಸಮುದಾಯಕ್ಕೂ ಪ್ಯಾಕೇಜ್ ನೀಡಬೇಕು. ಚುನಾವಣೆಯಲ್ಲಿ ಮತದಾನ ಮಾಡಿದ ಸ್ತ್ರೀಶಕ್ತಿ ಸಂಘಗಳ ಸಾಲ ಮನ್ನಾ ಮಾಡಬೇಕೆಂದು ಆಗ್ರಹಿಸಿದರು.

ಹಾಸನವನ್ನು‌ ರಾಜ್ಯ ಸರ್ಕಾರ ಕಡೆಗಣಿಸುತ್ತಿದೆ. ಬಿಜೆಪಿಗರು ವಿಪಕ್ಷಗಳ ಮೇಲೆ ಬೇಕಿದ್ದಲ್ಲಿ ದ್ವೇಷ ಮಾಡಲಿ. ಆದರೆ ರೈತರ ಮೇಲೆ ಬೇಡ. ಸರ್ಕಾರ ದ್ವೇಷದ ರಾಜಕಾರಣ ಮಾಡಬಾರದು. ದ್ವೇಷದ ರಾಜಕಾರಣ ಬಿಜೆಪಿಗರಿಗೆ ತಿರುಗುಬಾಣವಾಗಲಿದೆ ಎಂದು ರೇವಣ್ಣ ಎಚ್ಚರಿಸಿದರು. 

ಕೊನೆಗೆ ಕೊರೋನಾ ಮುಗಿದ ಬಳಿಕ ಈ ಸರ್ಕಾರದ 12 ತಿಂಗಳಲ್ಲಿ ಏನೇನಾಗಿದೆ ಎಂಬುದನ್ನು ಎಳೆ ಎಳೆಯಾಗಿ ಬಿಚ್ಚಿಡುವುದಾಗಿ ರೇವಣ್ಣ ಬಾಂಬ್ ಸಿಡಿಸಿದರು.