Asianet Suvarna News Asianet Suvarna News

ಪ್ರತಾಪ್‌ ಸಿಂಹ ಏನು ದೊಡ್ಡ ಎಂಜಿನಿಯರ್ರಾ?: ಎಚ್‌ಡಿಕೆ

ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ ಅವೈಜಾನಿಕ ಕಾಮಗಾರಿಯಿಂದಲೇ ರಾಮನಗರ ಜಿಲ್ಲೆಯಲ್ಲಿ ಪ್ರವಾಹ ಉಂಟಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಆರೋಪಿಸಿದರು. 

jds leader hd kumaraswamy slams to mp pratap simha gvd
Author
First Published Sep 2, 2022, 5:08 AM IST

ಚನ್ನಪಟ್ಟಣ (ಸೆ.02): ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ ಅವೈಜಾನಿಕ ಕಾಮಗಾರಿಯಿಂದಲೇ ರಾಮನಗರ ಜಿಲ್ಲೆಯಲ್ಲಿ ಪ್ರವಾಹ ಉಂಟಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಆರೋಪಿಸಿದರು. ಮಾರ್ಚನಹಳ್ಳಿ ಕೆರೆಗೆ ಬಾಗಿನ ಅರ್ಪಿಸಿ ಮಾತನಾಡಿದ ಅವರು, ಮೊದಲು ಒತ್ತುವರಿಯಾದ ನಾಲೆ, ಕಾಲುವೆ ತೆರವು ಮಾಡಲಿ ಎಂಬ ಪ್ರತಾಪ್‌ ಸಿಂಹ ಟ್ವೀಟ್‌ ಬಗ್ಗೆ ಖಾರವಾಗಿ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ಮುಖ್ಯಮಂತ್ರಿ ಅವರು ಕೂಡ ಬೆಂಗಳೂರು ನಗರದ ವಿವಿಧ ಕಡೆ ಭೇಟಿ ನೀಡಿದ್ದಾರೆ. 

ಅಲ್ಲಿಯೂ ಮನೆಗಳಲ್ಲಿ ನೀರು ನಿಂತಿದೆ. ಯಾಕೆ ಎನ್ನುವುದನ್ನು ಪ್ರತಾಪ್‌ ಸಿಂಹ ಅರ್ಥ ಮಾಡಿಕೊಳ್ಳಬೇಕು. ಇದು ಈಗ ಆಗಿರುವ ತೊಂದರೆ ಅಲ್ಲ. ರಾಜಕೀಯ ಸ್ವೇಚ್ಛಾಚಾರದಿಂದ ಆಗಿರುವ ಅನಾಹುತಗಳಿವು. ಈ ಹಿಂದಿನ ಸರ್ಕಾರಗಳಲ್ಲಿ ಆಗಿರುವ ತಪ್ಪು ತೀರ್ಮಾನಗಳಿವು. ಕುಮಾರಸ್ವಾಮಿ ಮಾಡಿರುವ ನಿರ್ಧಾರಗಳಲ್ಲ ಇವು ಎಂದು ಟೀಕಾ ಪ್ರಹಾರ ನಡೆಸಿದರು.

Ramanagara: ಮಳೆಹಾನಿ ಪ್ರದೇಶಗಳಿಗೆ ಮಾಜಿ ಸಿಎಂ ಕುಮಾರಸ್ವಾಮಿ ಭೇಟಿ

ಅವರೇನು ಎಂಜಿನಿಯರ್ರಾ!: ರಸ್ತೆಗಳಲ್ಲಿ ನೀರು ನಿಂತಿದೆಯಲ್ಲ, ಅದಕ್ಕೆ ಕಾರಣ ಯಾರು? ಅಕ್ರಮವಾಗಿ ನಿರ್ಮಾಣ ಆಗಿರುವುದನ್ನು ನಾವು ತೆರವು ಮಾಡಿಸುತ್ತೇವೆ. ಆದರೆ, ಎಕ್ಸ್‌ ಪ್ರೆಸ್‌ ಹೈವೇ ಕಾಮಗಾರಿ ಪ್ರಾರಂಭ ಆದಮೇಲೆ ಈ ಸಮಸ್ಯೆ ಸೃಷ್ಟಿಯಾಗಿದೆ. ಪ್ರತಾಪ್‌ ಸಿಂಹ ಏನು ದೊಡ್ಡ ಎಂಜಿನಿಯರ್‌ ಏನ್ರೀ? ಎಂದು ಅವರು ಖಾರವಾಗಿ ಪ್ರತಿಕ್ರಿಯಿಸಿದರು. ಅದೆಲ್ಲೋ ಬರವಣಿಗೆ ಮಾಡಿಕೊಂಡು ಇದ್ದ ಪ್ರತಾಪ್‌ ಸಿಂಹ, ಈಗ ನರೇಂದ್ರ ಮೋದಿ ಹೆಸರಿನಲ್ಲಿ ರಾಜಕೀಯ ಮಾಡುತ್ತಿದ್ದಾರೆ. 

ಅವರಿಂದ ನಾನು ಕಲಿಯಬೇಕಾ? ಅವರು ಸುಖಾಸುಮ್ಮನೆ ನನ್ನನ್ನು ಕೆರಳಿಸುವುದು ಬೇಡ. ಹೆದ್ದಾರಿಯಲ್ಲಿ ನೀರು ನಿಂತದ್ದು ಒತ್ತುವರಿಯಿಂದಾನಾ? ಅದು ಆಗಿರುವುದು ಕಳಪೆ ಕಾಮಗಾರಿಯಿಂದ ಎಂದು ಮಾಜಿ ಮುಖ್ಯಮಂತ್ರಿಗಳು ಕಿಡಿಕಾರಿದರು. ಸಂಸದ ಪ್ರತಾಪ್‌ ಸಿಂಹ ಎಷ್ಟುಕಡೆ ಹೋಗಿದ್ದಾರೆ. ಫೋಟೋ ತೆಗೆಸಿಕೊಳ್ಳಲು ಬಂದಿದ್ದರಲ್ಲ ಈಗ ಎಷ್ಟುಕಡೆ ಬಂದಿದ್ದಾರೆ? ಇವರ ಹತ್ತಿರ ನಾನು ರಾಜಕೀಯ ಕಲಿಯಬೇಕಿಲ್ಲ. ಜನರ ಬದುಕೇನು ಎಂದು ಈತನಿಂದ ಕಲಿಯಬೇಕಿಲ್ಲ. ಜನರ ಕಷ್ಟಸುಖ ನೋಡಿ ರಾಜಕೀಯ ಮಾಡಿದ್ದರೆ ವಸ್ತುಸ್ಥಿತಿ ಏನೆಂದು ಗೊತ್ತಾಗುತ್ತಿತ್ತು. 

ಕೇವಲ ಬಿಜೆಪಿ, ಮೋದಿ ಹೆಸರಿನಲ್ಲಿ ರಾಜಕೀಯ ಮಾಡಿ ಎಂಪಿ ಆಗಿದ್ದಾರೆ. ಕಷ್ಟಪಟ್ಟು ಎಂಪಿ ಸ್ಥಾನ ಪಡೆದಿಲ್ಲ ಎಂದು ವಾಗ್ದಾಳಿ ನಡೆಸಿದರು. ಕುಮಾರಸ್ವಾಮಿ ಯಾರಿಗಾದರೂ ದೂರು ನೀಡಲಿ ಎಂಬ ಸಿಎಂ ಬೊಮ್ಮಾಯಿ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಎಚ್‌ಡಿಕೆ, ನಾನು ಸಿಎಂಗಲ್ಲದೇ ಯಾರಿಗೆ ಹೇಳಲಿ? ನಾನು ಗಡ್ಕರಿಯವರ ಸಮಯ ಕೇಳಿದ್ದೇನೆ. ಎಕ್ಸ್‌ ಪ್ರೆಸ್‌ ಹೈವೆ ಎಲ್ಲಾ ವಿಡಿಯೋ ಮಾಡಿಸಿದ್ದೇನೆ. ಅದೆಲ್ಲವನ್ನು ಅವರಿಗೆ ತಲುಪಿಸುತ್ತೇನೆ. ಅವರು ತೀರ್ಮಾನ ಮಾಡಲಿ. ಇಲ್ಲದಿದ್ದರೆ ಮುಂದೆ ಜನ ರಸ್ತೆಗೆ ಬಂದು ದೊಣ್ಣೆ ಹಿಡಿದು ಕುಳಿತುಕೊಳ್ತಾರೆ ಎಂದರು.

ಸರ್ಕಾರಿ ಟೆಂಡರ್‌ ಬಾಯ್ಕಟ್‌ ಮಾಡಿ: ಗುತ್ತಿಗೆದಾರರಿಗೆ ಎಚ್ಡಿಕೆ ಕರೆ

ಮೋದಿ ಏತಕ್ಕೆ ಬರುತ್ತಾರೆ: ಮಂಗಳೂರಿಗೆ ಪ್ರಧಾನಿ ನರೇಂದ್ರ ಮೋದಿ ಯಾಕೆ ಬರುತ್ತಾರೆ? ಯಾವ ಅನುದಾನ ಕೊಡುತ್ತಾರೆ? 2019ರಿಂದ ಕರ್ನಾಟಕದಲ್ಲಿ 35 - 40 ಸಾವಿರ ಕೋಟಿ ರೂ. ನಷ್ಟವಾಗಿದೆ. ಆದರೆ, ಎನ್‌ಡಿಆರ್‌ಎಫ್‌ನಿಂದ ಕೇವಲ 3 ಸಾವಿರ ಕೋಟಿ ಕೊಟ್ಟಿದ್ದಾರೆ. ಯಾವ ಪುರುಷಾರ್ಥಕ್ಕೆ ಅವರು ಬರುತ್ತಿದ್ದಾರೆ? ಎಂದು ಪ್ರಶ್ನಿಸಿದರು. ಈಗ ಚುನಾವಣೆ ದೃಷ್ಟಿಯಿಂದ ರಾಜ್ಯಕ್ಕೆ ಬರುತ್ತಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಸರಕಾರವನ್ನು ತೆಗೆಯದಿದ್ದರೆ ಈ ಸಮಸ್ಯೆ ಪ್ರತಿವರ್ಷ ಬರುತ್ತದೆ. ಎರಡು ರಾಷ್ಟ್ರೀಯ ಪಕ್ಷಗಳು ರಾಜ್ಯಕ್ಕೆ ಅಪಾಯಕಾರಿ ಎಂದು ಕುಮಾರಸ್ವಾಮಿ ಅವರು ಹೇಳಿದರು.

Follow Us:
Download App:
  • android
  • ios