ಸಾವಿನ ವೇಳೆ ಸರ್ಕಾರಕ್ಕೆ ಸಂಭ್ರಮ ಬೇಕಾ: ಎಚ್.ಡಿ.ಕುಮಾರಸ್ವಾಮಿ
‘ರಾಜ್ಯವು ಸಾವಿನ ಮನೆಯಾಗಿದೆ. ಇಂತಹ ಸಂದರ್ಭದಲ್ಲಿ ಸರ್ಕಾರಕ್ಕೆ ಸಂಭ್ರಮ ಯಾಕೆ? ಯಾರಿಗೆ ಬೇಕಿದೆ ಇವರ ಸಂಭ್ರಮ’ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕಿಡಿಕಾರಿದ್ದಾರೆ.
ಬೆಂಗಳೂರು (ಜು.28): ‘ರಾಜ್ಯವು ಸಾವಿನ ಮನೆಯಾಗಿದೆ. ಇಂತಹ ಸಂದರ್ಭದಲ್ಲಿ ಸರ್ಕಾರಕ್ಕೆ ಸಂಭ್ರಮ ಯಾಕೆ? ಯಾರಿಗೆ ಬೇಕಿದೆ ಇವರ ಸಂಭ್ರಮ’ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕಿಡಿಕಾರಿದ್ದಾರೆ. ಬುಧವಾರ ಪಕ್ಷದ ಕಚೇರಿಯಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಸಂಭ್ರಮಾಚರಣೆ ಮಾಡಲು ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ನೆಲೆಸಿರಬೇಕಲ್ಲವೇ? ಮುಕ್ತ ಮತ್ತು ಸುರಕ್ಷತೆ ವಾತಾವರಣ ಇಲ್ಲದೇ ಹೋದರೆ ಯಾವ ಗ್ಯಾರಂಟಿ ಮೇಲೆ ಜನರು ಮನೆಯಿಂದ ಆಚೆ ಬರುತ್ತಾರೆ. ಹತ್ಯಾಕಾಂಡಕ್ಕೆ ಕೊನೆಯೇ ಇಲ್ಲವೇ?
ಕೊಲೆ ಆದ ಮೇಲೆ ನಡೆಯುವ ಹೇಳಿಕೆಗಳ ಭರಾಟೆ, ಕೂಗಾಟದಿಂದ ಪ್ರಯೋಜನ ಏನು? ಪ್ರತಿ ಕೊಲೆಯಾದ ಮೇಲೆಯೂ ಮೈ ಕೊಡವಿಕೊಂಡು ಎದ್ದೇಳುವ ಬಿಜೆಪಿ ಸರ್ಕಾರ, ಕೊಲೆಯೇ ಆಗದಂತೆ ತಡೆಯುವ ಪ್ರಯತ್ನ ಮಾಡುತ್ತಿಲ್ಲ, ಏಕೆ? ಕೊಲೆಗಳೆಂದರೆ ಕೆಲವರಿಗೇಕೆ ಇಷ್ಟೊಂದು ಇಷ್ಟ? ಚುನಾವಣೆ ಸಮೀಪವಾದಂತೆಲ್ಲಾ ನೆತ್ತರ ಓಕುಳಿ ಹರಿಯುತ್ತಿದೆ! ಈ ನೆತ್ತರ ಮೇಲೆ ರಾಜಕೀಯ ಆಟ ವಿಜೃಂಭಿಸುತ್ತಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹಲವರಿಗೆ ಸಿಎಂ ಆಗುವ ಆಸೆ, ಆದರೆ ಚಾಮುಂಡಿ ಇಚ್ಛೆಯೇ ಬೇರೆ: ಎಚ್‌ಡಿಕೆ
‘ಪುತ್ತೂರು ತಾಲೂಕಿನಲ್ಲಿ ಯುವಕನ ಹತ್ಯೆಯಾಗಿದ್ದು, ಅತ್ಯಂತ ಖಂಡನೀಯ. ಯಾಕೆ ಇಂತಹ ಘಟನೆಗಳಾಗುತ್ತಿವೆ ಎಂಬುದರ ಬಗ್ಗೆ ಎಲ್ಲಾ ಪಕ್ಷಗಳು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ಮಗನನ್ನು ಕಳೆದುಕೊಂಡ ಆ ತಾಯಿಯ ದುಃಖವನ್ನು ಗಮನಿಸಿ. ನಾವು ಆ ಕುಟುಂಬದ ಭಾವನೆ ಅರ್ಥ ಮಾಡಿಕೊಳ್ಳಬೇಕು. ಜೀವ ಹೋದ ಮೇಲೆ ಕೇವಲ ‘ಕೃತಕ’ ಸಂತಾಪ ಅಥವಾ ‘ಕೃತಕ’ ಸಾಂತ್ವನ ಹೇಳುವುದರಿಂದ ಉಪಯೋಗವಿಲ್ಲ’ ಎಂದರು.
‘ಈ ಮೊದಲು ಕೊಲೆಯಾಗಿದ್ದ ಮಸೂದ್ ಸಹ ಬಡವನಾಗಿದ್ದು, ಈಗ ಕೊಲೆಯಾದ ಪ್ರವೀಣ್ ನೆಟ್ಟಾರು ಕೂಡ ಬಡ ಕುಟುಂಬದವರೇ. ಶ್ರಮಜೀವಿಗಳ ಕುಟುಂಬದ ಮಕ್ಕಳೇ ಸಾವಿಗೆ ತುತ್ತಾಗುತ್ತಿದ್ದಾರೆ. ರಾಜಕಾರಣಿಗಳು, ಸಂಘಟನೆಗಳ ಮುಖಂಡರ ಮಕ್ಕಳು ಇಂತಹ ಗಲಾಟೆಗಳಲ್ಲಿ ಕಾಣುವುದೇ ಇಲ್ಲ. ರಾಜ್ಯದಲ್ಲಿ ಕೆಲ ಸಂಘಟನೆಗಳು ಬಡ ಯುವಕರನ್ನು ದಾರಿ ತಪ್ಪಿಸಿ ಸ್ವಾರ್ಥ ಸಾಧನೆಗಾಗಿ ಸಾವಿನ ದವಡೆಗೆ ದೂಡುತ್ತಿವೆ’ ಎಂದು ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದರು.
ನಾಡಿನ ಅಭಿವೃದ್ಧಿಗೆ ಜೆಡಿಎಸ್ ಅಧಿಕಾರಕ್ಕೆ: ರಾಜ್ಯದಲ್ಲಿ ಮತ್ತೆ ಜೆಡಿಎಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಹೋರಾಟ ಮಾಡುತ್ತಿರುವುದು ನನ್ನ ಸ್ವಾರ್ಥಕ್ಕಾಗಿ ಅಲ್ಲ. ನಾಡಿನ ಅಭಿವೃದ್ಧಿಗಾಗಿ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು. ಶ್ರೀವೆಂಕಟೇಶ್ವರ ದೇವಾಲಯದ 48ನೇ ದಿನದ ಮಂಡಲ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ನಾನು ಎರಡು ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿ ನಾಡಿನ ಅಭಿವೃದ್ಧಿಗೆ ಶ್ರಮಿಸಿದ್ದೇನೆ. ನನ್ನ ಅಧಿಕಾರ ಅವಧಿಯಲ್ಲಿ ಯಾವುದೇ ದುರುಪಯೋಗವಾಗದೆ ಜನರ ಸೇವೆ ಮಾಡಿದ್ದೇನೆ ಎಂದರು.
ಜೆಡಿಎಸ್ ಸಂಘಟನೆಗಾಗಿ ಮುಂದಿನ ದಿನಗಳಲ್ಲಿ 100 ದಿನ ಗ್ರಾಮವಾಸ್ತವ್ಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ರಾಜ್ಯದ ತಾಲೂಕಿನಲ್ಲಿ ಒಂದು ದಿನಕ್ಕೆ ಎಷ್ಟುಗ್ರಾಮಗಳನ್ನು ಭೇಟಿ ಮಾಡಬಹುದೋ ಅಷ್ಟುಗ್ರಾಮಗಳಿಗೆ ತೆರಳಿ ಜನರ ಸಮಸ್ಯೆ ಆಲಿಸುವ ಜೊತೆಗೆ ಗ್ರಾಮ ವಾಸ್ತವ್ಯ ಮಾಡುತ್ತೇನೆ ಎಂದರು.
40 % ಕಮಿಷನ್ ಮಾಡಿಲ್ಲ: ನಮ್ಮ ಆಡಳಿತದ ಅವಧಿಯಲ್ಲಿ ಬಿಜೆಪಿ ಸರ್ಕಾರದಂತೆ 40% ಕಮಿಷನ್ ರಾಜಕಾರಣವನ್ನು ನಾನು ಮಾಡಿಲ್ಲ. ಮುಂದೆಯೂ ಮಾಡುವುದಿಲ್ಲ. ಜೆಡಿಎಸ್ ಪಕ್ಷಕ್ಕೆ 5 ವರ್ಷಗಳವರೆಗೆ ಅಧಿಕಾರ ನೀಡಿದರೆ ಉತ್ತಮ ಯೋಜನೆ ಜಾರಿಗೆ ತಂದು ರೈತರು, ಬಡವರಿಗೆ ಅನುಕೂಲ ಕಲ್ಪಿಸುತ್ತೇನೆ ಎಂದು ಭರವಸೆ ನೀಡಿದರು. ನಾನು ರಾಜಕೀಯಕ್ಕೆ ಬಂದಾಗ ಮನಸ್ಸು ಮಾಡಿದರೆ ಸಾಕಷ್ಟುಹಣ ಮಾಡಬಹುದಿತ್ತು. ಬೇರೆ ರಾಜಕಾರಣಿಗಳಂತೆ ದೊಡ್ಡ ದೊಡ್ಡ ಕಟ್ಟಡಗಳನ್ನು ಕಟ್ಟಿಶಿಕ್ಷಣ ಸಂಸ್ಥೆ ತೆರೆದು ಹಣ ಸಂಪಾದನೆ ಮಾಡಬಹುದಿತ್ತು.
ದೇವೇಗೌಡರ ಛಲದ ಪ್ರತೀಕ ಜೆಡಿಎಸ್‌ಗೆ ತುಂಬಿತು 23 ವರ್ಷ.. ಎರಡು ದಶಕಗಳಲ್ಲಿ ಮೂರು ಬಾರಿ ಅಧಿಕಾರ...!
ಆದರೆ, ನನಗೆ ಹಣಕ್ಕಿಂತ ರಾಜ್ಯದ ಜನರ ಅಭಿವೃದ್ಧಿಯೇ ಮುಖ್ಯವಾಗಿದೆ ಎಂದರು. ರಾಜಕಾರಣಕ್ಕೆ ಬರುವ ಮುನ್ನವೇ ಸಿನಿಮಾ ಹಂಚಿಕೆ ಮಾಡುತ್ತಿದ್ದಾಗ ಬಿಡದಿಯ ಬಳಿ 45 ಎಕರೆ ಜಮೀನು ತೆಗೆದಿದ್ದೆ. ಇದನ್ನು ಹೊರತುಪಡಿಸಿ ನಾನು ಬೇರೆ ಯಾವ ಆಸ್ತಿಯನ್ನು ಮಾಡಿಲ್ಲ. ನಾವು ಎಷ್ಟೇ ಎತ್ತರಕ್ಕೆ ಹೋದರು ದೇವರ ಮುಂದೆ ನಾವು ತಲೆಬಾಗಲೇಬೇಕು. ಹಾಗಾಗಿ ಈ ದೇವಾಲಯಕ್ಕೆ ಬಂದು ಪೂಜೆ ಸಲ್ಲಿಸುತ್ತಿದ್ದೇನೆ. ಟ್ರಸ್ಟ್ ನವರು ಉತ್ತಮ ದೇವಾಲಯ ನಿರ್ಮಾಣ ಮಾಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.