ಬೆಂಗಳೂರು, (ಅ.11) : ಬಿಜೆಪಿ ಸರ್ಕಾರದ ವಿರುದ್ಧ ಅವಿಶ್ವಾಸ ಮಂಡನೆ ಸಂಬಂಧ ಜೆಡಿಎಸ್ ಜೊತೆ ಚರ್ಚೆ ನಡೆಸಿದ್ದೆವು. ಆದರೆ ಮಣ್ಣಿನ ಮಕ್ಕಳು ಎಂದು ಹೇಳಿಕೊಳ್ಳುವವರಿಂದ ಬೆಂಬಲ ಸಿಗಲಿಲ್ಲ ಎಂದು ಹಸಿಸುಳ್ಳು ಹೇಳುವ ಮೂಲಕ ಈ 'ಶತಮಾನದ ಮಹಾ ಸುಳ್ಳುಗಾರ' ಎಂದು ಸಿದ್ದರಾಮಯ್ಯ ಸ್ವಯಂ ಘೋಷಿಸಿಕೊಂಡಿದ್ದಾರೆ ಎಂದು ಮಾಜಿ ಸಿಎಂ ಎಚ್. ಡಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.

 ಸರಣಿ ಟ್ವೀಟ್ ಮೂಲಕ ಆಕ್ರೋಶ ವ್ಯಕ್ತಪಡಿಸಿರುವ ಎಚ್‌ಡಿಕೆ,, ಕಳೆದ ಶತಮಾನದಲ್ಲಿ ಕಾಂಗ್ರೆಸ್ ಮಾಜಿ ಮುಖ್ಯಮಂತ್ರಿ ಒಬ್ಬರಿಗೆ ಅಂಟಿದ್ದ 'ಮಹಾನ್ ಸುಳ್ಳುಗಾರ' ಎಂಬ ಕಳಂಕವನ್ನು ತಾನಾಗಿಯೇ ಕಸಿದುಕೊಂಡಿರುವ ಸಿದ್ದರಾಮಯ್ಯ ಈ ಶತಮಾನದ ಮಹಾನ್ ಸುಳ್ಳುಗಾರರಾಗಿ ಹೊರಹೊಮ್ಮಿದ್ದಾರೆ ಎಂದು ಕಿಡಿಕಾರಿದ್ದಾರೆ.

"

'ಒಂದು ಜಾತಿಯಿಂದ ಯಾರೂ ಕರ್ನಾಟಕದಲ್ಲಿ ಗೆಲ್ಲೋದಕ್ಕೆ ಆಗೋದಿಲ್ಲ'

ಮಂಡ್ಯದ ಮೂಲಕ ಇಂಡಿಯಾ ಹಿಡಿಯುವ ಹಗಲು ಕನಸು ಕಾಣುತ್ತಿರುವ ಕಾಂಗ್ರೆಸಿಗರು ಅನ್ನದಾತನ ಅಸ್ತ್ರ ಬಳಸಿದರೆ ಮಂಡ್ಯದ ಮಣ್ಣಿನ ಮಕ್ಕಳು ತಕ್ಕ ಪಾಠ ಕಲಿಸಲಿದ್ದಾರೆ. ಅನ್ನದಾತರ ಬಗೆಗಿನ ಬದ್ಧತೆ ಬಗ್ಗೆ ನಿಮ್ಮೆಲ್ಲರಿಗಿಂತ ಹೆಚ್ಚಿನ ಕರುಳಬಳ್ಳಿಯ ಸಂಬಂಧ ಜೆಡಿಎಸ್ ಗಿದೆ ಎಂದಿದ್ದಾರೆ.

ಜೆಡಿಎಸ್ ನೊಂದಿಗೆ ಯಾವುದೇ ಮಾತುಕತೆ ನಡೆಸದೆ ಸಿದ್ದರಾಮಯ್ಯ ಹಸಿ ಸುಳ್ಳು ಹೇಳುವ ಮೂಲಕ ಕೇಡುಗಾಲಕ್ಕೆ ನಾಯಿ ಮೊಟ್ಟೆ ಇಟ್ಟಂತೆ ಎಲುಬಿಲ್ಲದ ನಾಲಿಗೆಯನ್ನು ಹರಿಯಬಿಟ್ಟು ನಗೆಪಾಟಲಿಗೆ ಈಡಾಗಿದ್ದಾರೆ. ಬಾಯಿ ಚಪಲಕ್ಕೆ ಸುಳ್ಳುಗಳನ್ನು ಹೇಳುವ ಚಾಳಿಯನ್ನು ಸಿದ್ದರಾಮಯ್ಯ ಇನ್ನಾದರೂ ಬಿಡಬೇಕು ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.

ರೈತರ ಪರ ಕಾಳಜಿ, ಬದ್ಧತೆಯನ್ನು ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ನಾಯಕರಿಂದ ಜೆಡಿಎಸ್ ಕಲಿಯಬೇಕಾದದ್ದು ಏನೂ ಇಲ್ಲ. ಸಂತೆ ಭಾಷಣ ಮಾಡುವ ಸಿದ್ದರಾಮಯ್ಯ ವಿದೂಷಕನಂತೆ ಜೆಡಿಎಸ್ ವಿರುದ್ಧ ಹರಿಹಾಯುತ್ತಿರುವುದು ಪ್ರತಿ ಪಕ್ಷದ ನಾಯಕನಿಗೆ ಭೂಷಣವಲ್ಲ ಎಂದು ಹೇಳಿದ್ದಾರೆ.

ಸಿದ್ದರಾಮಯ್ಯ ಅವರ ಕಾಲದಲ್ಲಿ ಮಾಡಿದ ಸಾಲ ಮನ್ನಾ ದಲ್ಲಿ ಲೋಪದೋಷಗಳು ಇದ್ದವು. ಪತ್ರಕರ್ತರ ಪ್ರಶ್ನೆಗೆ ನಾನು ಪ್ರತಿಕ್ರಿಯಿಸಿದ್ದೆ. ನಾನು ಮಾಡಿದ 25 ಸಾವಿರ ಕೋಟಿ ರೂಪಾಯಿಗಳ ಸಾಲಮನ್ನಾದಲ್ಲಿ ಇಂತಹ ಅನ್ಯಾಯಗಳನ್ನು ಸರಿಪಡಿಸಿದ್ದೆ. ಇದರಲ್ಲಿ ಹುಳುಕು ಹುಡುಕುವ ಕಾಂಗ್ರೆಸ್ ನಾಯಕರು ಅನ್ನದಾತನಿಗೆ ಮಂಕು ಬೂದಿ ಎರಚಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.