ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಹಾಗೂ ಸಚಿವ ಸಿಪಿ ಯೋಗೇಶ್ವರ್ ನಡುವಿನ ವಾಕ್ಸಮರ ತಾರಕಕ್ಕೇರಿದೆ.
ರಾಮನಗರ, (ಫೆ.26): ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ್ದ ಸಚಿವ ಸಿ.ಪಿ. ಯೋಗೇಶ್ವರ್‌ಗೆ ಕುಮಾರಸ್ವಾಮಿ ತಿರುಗೇಟು ಕೊಟ್ಟಿದ್ದಾರೆ.
ಇಂದು (ಶುಕ್ರವಾರ) ಚನ್ನಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ, ಯಾರೋ ಅಡವಿಟ್ಟ ಇಸ್ಪೀಟು ದುಡ್ಡಲ್ಲಿ ಅವನು ಸಚಿವ ಆಗಿದ್ದಾನೆ ಎಂದು ಏಕವಚನದಲ್ಲೇ ಸಚಿವ ಸಿ.ಪಿ.ಯೋಗೇಶ್ವರ್ ವಿರುದ್ಧ ವಾಗ್ದಾಳಿ ನಡೆಸಿದರು.
ನಾನು ಕಾಣದಿರೋ ಬಿಜೆಪಿ ಪಕ್ಷಾನಾ..? ಕರ್ನಾಟಕದಲ್ಲಿ ಬಿಜೆಪಿಗೆ ಲೈಫ್ ಕೊಟ್ಟಿದ್ದು ನಾನೇ. 2006 ರಲ್ಲಿ ಎಲ್ಲಾ ಮಂಗನ ತರಹ ಹಾರಲು ರೆಡಿಯಾಗಿದ್ದರು. ಅವತ್ತು ಬಿಜೆಪಿಯನ್ನ ಉಳಿಸಿದ್ದು ನಾನು ಎಂದು ಸ್ಫೋಟಕ ಹೇಳಿಕೆ ನೀಡಿದರು.
'ಹೆಚ್‌ಡಿಕೆ ಅವಕಾಶವಾದಿ ರಾಜಕಾರಣಿ, ನೈತಿಕತೆ, ಸಿದ್ಧಾಂತ ಯಾವುದೂ ಇಲ್ಲ'
ಯಡಿಯೂರಪ್ಪ ಅರ್ಜಿ ಹಾಕಿಕೊಂಡು ಪಾರ್ಟಿ ಬಿಟ್ಟು ಬರ್ತೇನೆ ಮಂತ್ರಿ ಸ್ಥಾನ ಕೊಡಿ ಅಂತ ಅಂದಿದ್ದರು. ನನಗೆ ಮಂತ್ರಿ ಮಾಡಿ ಬಿಜೆಪಿಗೆ ರಾಜೀನಾಮೆ ಕೊಡ್ತೀನಿ ಅಂತಾ ಬಂದಿದ್ದರು. ಹಾಗಾಗಿ ಬಿಜೆಪಿಯಿಂದ ನನ್ನನ್ನ ಏನೂ ಮಾಡಲು ಆಗಲ್ಲ ಎಂದರು.
ರಾಮನಗರ ಜಿಲ್ಲೆಯಲ್ಲಿ ನನ್ನನ್ನ ಖಾಲಿ ಮಾಡಿಸಲು ಎಲ್ಲಾ ನಿಂತಿದ್ದಾರೆ. ಆದರೆ ದೇವೇಗೌಡರ ಕುಟುಂಬದ ಕೊಡುಗೆ ಜಿಲ್ಲೆಯ ಜನರಿಗೆ ಗೊತ್ತಿದೆ. ನಾನು ಬಂಡೆ ಹೊಡೆದಿಲ್ಲ, ಜನರ ಹಣ ಲೂಟಿ ಮಾಡಿಲ್ಲ. ನನ್ನನ್ನ ಖಾಲಿ ಮಾಡಿಸಲು ಬಂದವರು ಅವರೇ ಖಾಲಿಯಾಗಿದ್ದಾರೆ ಎಂದು ಹೇಳಿದರು.
ರಾಮನಗರ- ಚನ್ನಪಟ್ಟಣಕ್ಕೆ ನಾನು ಸಿಎಂ ಆಗಿದ್ದಾಗ ಮಾಡಿರುವ ಕೆಲಸ ಜನರಿಗೆ ಗೊತ್ತಿದೆ. ಜನರಿಂದ ತಲೆ ಹೊಡೆದ ಹಣದಲ್ಲಿ ಮಂತ್ರಿಯಾಗಿದ್ದಾನೆ . ಯಡಿಯೂರಪ್ಪನ ಮೆಚ್ಚಿಸಲು, RSS ನಾಯಕರ ಮೆಚ್ಚಿಸಲು ಮಾತನಾಡ್ತಿದ್ದಾನೆ. ನನ್ನ ಬೈಕೊಂಡು ಹೊಟ್ಟೆಪಾಡು ಮಾಡ್ತಿದ್ದಾನೆ ಎಂದು ಯೋಗೇಶ್ವರ್ ವಿರುದ್ಧ ಕಿಡಿಕಾರಿದರು.
ಚನ್ನಪಟ್ಟಣದಲ್ಲಿ ನನ್ನನ್ನ ಏನೂ ಮಾಡಲು ಸಾಧ್ಯವಿಲ್ಲ. ನಾನು ಈ ಮಣ್ಣಿನ ಮಗ. ನನ್ನ ಅಂತಿಮ ಕಾಲ ರಾಮನಗರದಲ್ಲಿಯೇ. ರಾಮನಗರ ಜಿಲ್ಲೆ ಯಾರ ಸ್ವತ್ತಲ್ಲ ಎಂದು ಗುಡುಗಿದರು.
ನೀನು ನನ್ನ ಮುಂದೆ ಇನ್ನು ಬಚ್ಚಾ ಇದೀಯಾ. ನನ್ನ ಬಗ್ಗೆ ಏಕವಚನದಲ್ಲಿ ಮಾತನಾಡಬೇಡ. ನಿನಗಿಂತಲೂ ಚೆನ್ನಾಗಿ ಮಾತನಾಡಲು ನನಗೂ ಬರುತ್ತೆ. ಸಚಿವ ಆಗಿದ್ದೀಯಾ ಕೆಲಸ ಮಾಡಿಕೊಂಡು ಹೋಗು. ನನ್ನ ವಿರುದ್ಧ ಮಾತನಾಡಿ ಲೀಡರ್ ಆಗುವ ಪ್ರಯತ್ನ ಬೇಡ. ಯಾರೋ ಅಡವಿಟ್ಟ ಇಸ್ಪೀಟು ದುಡ್ಡಲ್ಲಿ ಮಂತ್ರಿಯಾಗಿದ್ದಾನೆ. ಇವನು ನನ್ನ ಬಗ್ಗೆ ಏನು ಮಾತನಾಡಲು ಸಾಧ್ಯ..? ಎಂದು ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.
Last Updated Feb 26, 2021, 4:15 PM IST