*   ಎಡಪಂಥೀಯ ವಿಚಾರಧಾರೆ ನಂಬಿಕೊಂಡು ಬಂದ ಹೊರಟ್ಟಿ*   ಇನ್ನೊಂದು ಅವಧಿ ಗೆಲ್ಲುವ ಸಾಮರ್ಥ್ಯವಿದ್ದರೂ ಬಿಜೆಪಿ ಮಡಿಲಿಗೆ*   ಲಿಂಬಿಕಾಯಿ ನಡೆಯೇನು? 

ಹುಬ್ಬಳ್ಳಿ(ಮೇ.04): ವಿಧಾನ ಪರಿಷತ್‌ ಸಭಾಪತಿ, ಜೆಡಿಎಸ್‌ನ(JDS) ಹಿರಿಯ ಮುಖಂಡ ಬಸವರಾಜ ಹೊರಟ್ಟಿ(Basavaraj Horatti) ಕೊನೆಗೂ ಎಲ್ಲ ಊಹಾಪೋಹಗಳಿಗೆ ತೆರೆ ಎಳೆದು ಬಿಜೆಪಿಯ(BJP) ಕಮಲ ಮುಡಿದಿದ್ದಾರೆ. ಪುತ್ರನ ರಾಜಕೀಯ ಭವಿಷ್ಯಕ್ಕಾಗಿ ತಾವು ನೆಚ್ಚಿಕೊಂಡು ಬಂದ ಸಿದ್ಧಾಂತಕ್ಕೆ ವಿರುದ್ಧವಾಗಿ ಒಲ್ಲದ ಮನಸ್ಸಿನಿಂದಲೇ ಹೊಸ ಹೆಜ್ಜೆ ಇಟ್ಟಿದ್ದಾರೆ.

ಕಳೆದ ಒಂದು ವರ್ಷದಿಂದ ಹೊರಟ್ಟಿ ಬಿಜೆಪಿ ಸೇರ್ಪಡೆ ವಿಷಯ ಆಗಾಗ ಚರ್ಚೆಗೆ ಬರುತ್ತಲೇ ಇತ್ತು. ಈ ಮಧ್ಯೆ ತಾವೇ ಮುಂದಾಗಿ ಶಿಕ್ಷಕರ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿಯಾಗುವುದಾಗಿ ಮಾಧ್ಯಮಗಳಿಗೆ ಹೇಳಿಕೆ ನೀಡಿ ಮುಜುಗರವನ್ನೂ ಅನುಭವಿಸಿದರು. ಇದೀಗ ತಮ್ಮ ನಾಲ್ಕು ದಶಕಗಳ ಜನತಾ ಪರಿವಾರದ ಸಂಬಂಧ ಕಡಿದುಕೊಂಡಿದ್ದಾರೆ.

JDS ತೊರೆದು BJP ಸೇರಿದ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ

ದೈಹಿಕ ಶಿಕ್ಷಕರಾಗಿದ್ದ ಹೊರಟ್ಟಿ, ಶಿಕ್ಷಕರ ಸಮಸ್ಯೆಗಳ ಪರಿಹಾರಕ್ಕಾಗಿ ‘ಕರ್ನಾಟಕ ರಾಜ್ಯ ಮಾಧ್ಯಮಿಕ ಶಾಲಾ ನೌಕರರ ಸಂಘ’ ಎಂಬ ಸಂಘಟನೆಯನ್ನು ಹುಟ್ಟುಹಾಕಿ 1975ರಲ್ಲಿ ಹೋರಾಟಕ್ಕಿಳಿದವರು. 1980ರಲ್ಲಿ ಪಶ್ಚಿಮ ಶಿಕ್ಷಕರ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದು ಗೆಲುವು ಕಂಡರು. ಮುಂದೆ ಜನತಾ ಪರಿವಾರದಲ್ಲಿ ಗುರುತಿಸಿಕೊಂಡು ಇಂದಿನವರೆಗೂ ಜೆಡಿಎಸ್‌ನಲ್ಲೇ ಇದ್ದವರು. ವಿಧಾನಪರಿಷತ್‌ಗೆ(Vidhan Parishat) ಏಳು ಬಾರಿ ಆಯ್ಕೆಯಾಗುವ ಮೂಲಕ ದಾಖಲೆಯನ್ನೂ ಬರೆದವರು.

ಉತ್ತರ ಕರ್ನಾಟಕದಲ್ಲಿ(North Karnataka) ಜೆಡಿಎಸ್‌ಗೆ ಗಟ್ಟಿನೆಲೆ ಇಲ್ಲದಿದ್ದರೂ ಹೊರಟ್ಟಿಪ್ರತಿನಿಧಿಸುವ ಈ ಕ್ಷೇತ್ರಕ್ಕೆ ಪಕ್ಷ ಮುಖ್ಯವಲ್ಲ, ಅಭ್ಯರ್ಥಿಯ ವರ್ಚಸ್ಸೇ ಮುಖ್ಯ ಎಂಬುದನ್ನು ಏಳು ಬಾರಿ ಆಯ್ಕೆಯಾಗುವ ಮೂಲಕ ಸಾಬೀತುಪಡಿಸಿದ್ದಾರೆ.

ವಸಂತ ಹೊರಟ್ಟಿ ಉತ್ತರಾಧಿಕಾರಿ:

ಈ ಎಂಟನೇ ಚುನಾವಣೆಯೂ(Election) ಇವರಿಗೆ ಸಲೀಸು. ಆದಾಗ್ಯೂ ಹೊರಟ್ಟಿ ಬಿಜೆಪಿ ಅಭ್ಯರ್ಥಿಯಾಗಲು ಹೊರಟಿರುವುದಕ್ಕೆ ಪುತ್ರವ್ಯಾಮೋಹ ಕಾರಣ ಎನ್ನುವ ಮಾತು ಕೇಳಿಬರುತ್ತಿದೆ. ಕುಟುಂಬ ರಾಜಕಾರಣ(Family Politics) ಬೇಡ ಎನ್ನುವ ಕಾರಣ ಒಂದೆಡೆಯಾದರೆ, ಮುನ್ನುಗ್ಗುವ ಸ್ವಭಾವ ಇಲ್ಲದ ಹಿರಿಯ ಪುತ್ರ ವಸಂತ ಹೊರಟ್ಟಿರಾಜಕೀಯವಾಗಿ ಅಷ್ಟೊಂದು ಬೆಳೆಯಲಿಲ್ಲ ಎನ್ನುವುದು ಅಷ್ಟೇ ಸತ್ಯ.

ಸುದೀರ್ಘ ಅವಧಿ ಎಡಪಂಥೀಯ ವಿಚಾರಧಾರೆಗೆ ಅಂಟಿಕೊಂಡು ರಾಜಕಾರಣ ಮಾಡುತ್ತ ಬಂದ ಹೊರಟ್ಟಿ, ಇದೀಗ ಪುತ್ರ ವಸಂತ ಹೊರಟ್ಟಿಗೆ ರಾಜಕೀಯ ಭವಿಷ್ಯ (ಪಶ್ಚಿಮ ಶಿಕ್ಷಕರ ಕ್ಷೇತ್ರದ ಉತ್ತರಾಧಿಕಾರಿ) ಕಲ್ಪಿಸಲು ಬಲಪಂಥೀಯ ವಿಚಾರಧಾರೆಯ ಬಿಜೆಪಿಯನ್ನು ಅನಿವಾರ್ಯವಾಗಿ ಅಪ್ಪಿಕೊಂಡಿದ್ದಾರೆ.

76ರ ಹೊಸ್ತಿಲಲ್ಲಿ ತಮಗೆ ಬಿಜೆಪಿಯಲ್ಲಿ ಭವಿಷ್ಯವಿಲ್ಲ ಎನ್ನುವ ಸತ್ಯ ಅವರಿಗೂ ಗೊತ್ತು. ಆದಾಗ್ಯೂ ತಮಗಿಂತ ಪುತ್ರನ ರಾಜಕೀಯ ಭವಿಷ್ಯ ಮುಖ್ಯ ಎನಿಸಿದ್ದರಿಂದ ಈ ಕಠಿಣ ನಿರ್ಧಾರ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.
ಇದೇ ಚುನಾವಣೆಯಲ್ಲೇ ಪುತ್ರ ವಸಂತ ಹೊರಟ್ಟಿಅವರನ್ನು ಈ ಕ್ಷೇತ್ರದ ಉತ್ತರಾಧಿಕಾರಿ ಮಾಡಲಿದ್ದಾರೆ ಎನ್ನುವ ಮಾತುಗಳೂ ಕೇಳಿಬರುತ್ತಿವೆ.

Chitradurga: ಮಾನವೀಯತೆ‌ ಮೆರೆದ ವಿಧಾನಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ

ಲಿಂಬಿಕಾಯಿ ನಡೆಯೇನು?

ಈ ನಡುವೆ ಬಿಜೆಪಿಯಿಂದ ಶಿಕ್ಷಕರ ಕ್ಷೇತ್ರಕ್ಕೆ ವಿಧಾನಪರಿಷತ್‌ ಮಾಜಿ ಸದಸ್ಯ ಮೋಹನ ಲಿಂಬಿಕಾಯಿ ಹೆಸರು ಮಾತ್ರ ಕೇಂದ್ರ ಸಮಿತಿಗೆ ಹೋಗಿತ್ತು. ಈ ಹಿನ್ನೆಲೆಯಲ್ಲಿ ಲಿಂಬಿಕಾಯಿ ತಾವೇ ಅಭ್ಯರ್ಥಿ ಎಂದು ಹೇಳುತ್ತಾ ಪ್ರಚಾರವನ್ನೂ ಶುರುಮಾಡಿದ್ದರು. ಮತದಾರರ ನೋಂದಣಿಯನ್ನು ಮಾಡಿಸಿದ್ದುಂಟು. ಇದೀಗ ಹೊರಟ್ಟಿಬಿಜೆಪಿಗೆ ಬರುವುದು ಖಚಿತವಾಗುತ್ತಿದ್ದಂತೆ ಮೋಹನ ಲಿಂಬಿಕಾಯಿ ಮುಂದಿನ ನಡೆಯೇನು? ಪಕ್ಷದ ವರಿಷ್ಟರ ನಿರ್ಧಾರಕ್ಕೆ ತಲೆಬಾಗಿ ಹೊರಟ್ಟಿಪರ ಪ್ರಚಾರ ಮಾಡುತ್ತಾರೋ ಅಥವಾ ಪಕ್ಷದ ನಡೆಗೆ ಬಂಡಾಯ ಎದ್ದು ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಾರೆ ಎಂಬುದನ್ನು ಕಾಯ್ದು ನೋಡಬೇಕಿದೆ.

ಮೋಹನ ಲಿಂಬಿಕಾಯಿ ಅವರಿಗೆ ಬಿಜೆಪಿ ಟಿಕೆಟ್‌ ಪಡೆದುಕೊಂಡು ಬಂದರೆ ಅವರ ಸಮುದಾಯದ ಕಾಂಗ್ರೆಸ್‌ನ ಒಂದಿಬ್ಬರು ಮಹಿಳಾ ನಾಯಕಿಯರು ಬೆಂಬಲ ನೀಡುವುದಾಗಿ ಹೇಳಿದ್ದರಂತೆ. ಮುಂದೆ ಇದು ಬಿಜೆಪಿಗೂ ಮುಳುವಾಗುವ ಸಾಧ್ಯತೆ ಇದೆ ಎನ್ನುವ ವಾಸನೆ ಅರಿತ ಬಿಜೆಪಿ ಮುಖಂಡರು, ಹೊರಟ್ಟಿ ಅವರನ್ನೆ ಸೆಳೆಯುವ ಮೂಲಕ ಅವರ ಪ್ರಯತ್ನವನ್ನು ಪ್ರಾರಂಭದಲ್ಲೇ ಚಿವುಟಿ ಹಾಕಿದ್ದಾರೆ.