ವಿಧಾನಸಭೆ (ಸೆ.23): ‘ಶಾಸಕಾಂಗದ ಒಪ್ಪಿಗೆ ಪಡೆಯದೆ ನ್ಯಾಯಾಂಗ ಅಧಿಕಾರಿಗಳು ತಮ್ಮ ವೇತನ ತಾವೇ ಹೆಚ್ಚಿಸಿಕೊಂಡಿದ್ದಾರೆ. ನಂತರ ಸರ್ಕಾರ ಇದಕ್ಕೆ ಒಪ್ಪಿಗೆ ನೀಡಿದೆ. ಅಧಿಕಾರಿಗಳಿಗೆ ಅಂತಹ ಅಧಿಕಾರ ಕೊಟ್ಟವರಾರ‍ಯರು? ಸರ್ಕಾರ ಅಷ್ಟುಬಲಹೀನವಾಯಿತಾ?’ ಎಂದು ಜೆಡಿಎಸ್‌ ಸದಸ್ಯ ಎ.ಟಿ. ರಾಮಸ್ವಾಮಿ ಅವರು ಸರ್ಕಾರವನ್ನು ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡ ಘಟನೆ ವಿಧಾನಸಭೆಯಲ್ಲಿ ಮಂಗಳವಾರ ನಡೆಯಿತು.

ಕೋವಿಡ್‌ ಹಿನ್ನೆಲೆಯಲ್ಲಿ ಜಾರಿಗೊಳಿಸಲಾಗಿರುವ ‘ಕರ್ನಾಟಕ ವಿಧಾನ ಮಂಡಲದ ಸಂಬಳಗಳು, ನಿವೃತ್ತಿವೇತನಗಳು ಮತ್ತು ಭತ್ಯೆಗಳು ಹಾಗೂ ಕೆಲವು ಇತರೆ ಕಾನೂನು (ತಿದ್ದುಪಡಿ) ವಿಧೇಯಕ 2020’ರ ಮೇಲಿನ ಚರ್ಚೆ ವೇಳೆ ಈವಿಷಯ ಪ್ರಸ್ತಾಪಿಸಿದ ಎ.ಟಿ.ರಾಮಸ್ವಾಮಿ ಅವರು, ‘ಕೋವಿಡ್‌ ಹಿನ್ನೆಲೆಯಲ್ಲಿ ಚುನಾಯಿತ ಪ್ರತಿನಿಧಿಗಳ ವೇತನ, ಭತ್ಯೆ ಕಡಿತಕ್ಕೆ ನಮ್ಮ ಯಾವುದೇ ವಿರೋಧ ಇಲ್ಲ. ಆದರೆ, ನ್ಯಾಯಾಂಗ ಅಧಿಕಾರಿಗಳು ಇಂತಹ ಸಂಕಷ್ಟದ ಸಂದರ್ಭದಲ್ಲಿ ಶಾಸನ ಸಭೆಯ ಒಪ್ಪಿಗೆಯನ್ನೂ ಪಡೆಯದೆ ತಮ್ಮ ವೇತನವನ್ನು ತಾವೇ ಹೆಚ್ಚಿಸಿಕೊಂಡಿದ್ದಾರೆ. ಆ ಬಳಿಕ ಸರ್ಕಾರ ಒಪ್ಪಿಗೆ ನೀಡಿದೆ. ಸರ್ಕಾರದ ಅಷ್ಟುಬಲ ಹೀನವಾಗಿದೆಯಾ ಎಂದು ಪ್ರಶ್ನಿಸಿದರು.

ಅತಿಥಿ ಉಪನ್ಯಾಸಕರಿಗೆ ಸಿಹಿ ಸುದ್ದಿ ಕೊಟ್ಟ ಸಿಎಂ ಯಡಿಯೂರಪ್ಪ ...

ಇದಕ್ಕೆ ಉತ್ತರಿಸಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ಅವರು, ‘ಅಧಿಕಾರಿಗಳ ವೇತನ ಹೆಚ್ಚಳದ ಬಗ್ಗೆ ಸದ್ಯಕ್ಕೆ ಉತ್ತರ ಕೊಡುವ ಸ್ಥಿತಿಯಲ್ಲಿಲ್ಲ. ಈ ಬಗ್ಗೆ ಪೂರ್ಣ ಮಾಹಿತಿ ತರಿಸಿಕೊಂಡು ಸಭೆಗೆ ಉತ್ತರ ನೀಡಲಾಗುವುದು ಎಂದರು.
 
ಜನಪ್ರತಿನಿಧಿಗಳ ವೇತನ, ಭತ್ಯೆ ಕಡಿತದಿಂದ ಸರ್ಕಾರಕ್ಕೆ ಕೋವಿಡ್‌ ನಿರ್ವಹಣೆಗೆ 16ರಿಂದ 18 ಕೋಟಿ ರು.ನಷ್ಟುಹಣ ಉಳಿತಾಯವಾಗಬಹುದೆಂದು ಅಂದಾಜಿಸಲಾಗಿದೆ. ನ್ಯಾಯಾಂಗಕ್ಕೆ ಸಂಬಂಧಿಸಿದ ವೇತನಾನುದಾನ ಹಂಚಿಕೆ, ಬಳಕೆಯ ನಿಯಂತ್ರಣ ಅಧಿಕಾರ ಪೂರ್ಣ ನಮ್ಮ ಕೈಯಲ್ಲಿಲ್ಲ’ ಎಂದರು.